ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಮನೆ: ಪ್ರಸ್ತಾವ ನೆನೆಗುದಿಗೆ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿರುವ ಬಡ ಜನರಿಗೆ ಕೈಗೆಟಕುವ ದರದಲ್ಲಿ ಮನೆಗಳನ್ನು ನಿರ್ಮಿಸಿಕೊಡಲು `ಹುಡ್ಕೊ~ 750 ಕೋಟಿ ರೂಪಾಯಿ ನೆರವು ನೀಡಲು ಮುಂದಾಗಿದ್ದರೂ ಸರ್ಕಾರ ಅದನ್ನು ಬಳಸಿಕೊಳ್ಳಲು ಒಲವು ತೋರಿದಂತಿಲ್ಲ. ಈ ಪ್ರಸ್ತಾವಕ್ಕೆ ರಾಜ್ಯ ಹಣಕಾಸು ಇಲಾಖೆ ಅನುಮೋದನೆ ನೀಡದ ಕಾರಣ ಮಹತ್ವದ ಪ್ರಸ್ತಾವ ನೆನೆಗುದಿಗೆ ಬಿದ್ದಿದೆ.

ಬಿಡಿಎ ಕೂಡ `ಹುಡ್ಕೊ~ ನೆರವಿನಿಂದ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಕೈಗೆಟಕುವ ದರದಲ್ಲಿ ವಸತಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕುತ್ತಿದೆ. `ಹುಡ್ಕೊ~ ಬಡ್ಡಿ ದರ ಅತಿ ಹೆಚ್ಚು. ಹೀಗಾಗಿ, ಅಧಿಕ ಬಡ್ಡಿ ದರದಲ್ಲಿ ಸಾಲ ಪಡೆದು ಕಡಿಮೆ ವೆಚ್ಚದಲ್ಲಿ ಬಡ ವರ್ಗದವರಿಗೆ ಮನೆಗಳನ್ನು ನಿರ್ಮಿಸಿಕೊಡುವುದು ಕಷ್ಟ ಎನ್ನುತ್ತಾರೆ ಬಿಡಿಎ ಅಧಿಕಾರಿಯೊಬ್ಬರು.

ಎರಡು ತಿಂಗಳ ಹಿಂದೆಯಷ್ಟೇ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ `ಹುಡ್ಕೊ~ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿ.ಪಿ. ಬಳಿಗಾರ್, ಹಣಕಾಸು ಇಲಾಖೆ ಯೋಜನೆಗೆ ಒಪ್ಪಿಗೆ ನೀಡಿದಲ್ಲಿ ಯಾವುದೇ ಸಮಯದಲ್ಲಿ ಬಿಡಿಎಗೆ ಹಣ ಬಿಡುಗಡೆ ಮಾಡಲು ಸಿದ್ಧ ಎಂದು ಪ್ರಕಟಿಸಿದ್ದರು. ಸಚಿವ ವಿ. ಸೋಮಣ್ಣ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರ ಸಮ್ಮುಖದಲ್ಲಿ ಈ ಹೇಳಿಕೆ ನೀಡಿದ್ದು ಗಮನಾರ್ಹ.

ಆದರೆ, ಇದುವರೆಗೂ ಹಣಕಾಸು ಇಲಾಖೆ ಯೋಜನೆಗೆ ಅನುಮೋದನೆ ನೀಡಿಲ್ಲ. ಇದಕ್ಕೆ ಅನುಮೋದನೆ ನೀಡಲು `ಹುಡ್ಕೊ~ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಜತೆಗೂ ಚರ್ಚೆ ನಡೆಸಿದೆ. ಮುಖ್ಯಮಂತ್ರಿಗಳು ಪರಿಶೀಲಿಸುವ ಭರವಸೆ ನೀಡಿದ್ದಾರೆ.

ಈ ಮಧ್ಯೆ, ಡಿನೋಟಿಫಿಕೇಷನ್ ಪ್ರಕರಣದಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಿರುವ ಹಿನ್ನೆಲೆಯಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಕೂಡ ಎಚ್ಚರಿಕೆಯಿಂದ ಹೆಜ್ಜೆಯನ್ನಿಡುತ್ತಿದೆ. ಅಗತ್ಯ ಭೂಮಿ ಸ್ವಾಧೀನಪಡಿಸಿಕೊಳ್ಳುವುದು, ಅದಕ್ಕೆ ಸರ್ಕಾರದ ಅನುಮೋದನೆ ಪಡೆಯುವುದು ಇವೆಲ್ಲಾ ದೀರ್ಘಾವಧಿ ಪ್ರಕ್ರಿಯೆ. ಹೀಗಾಗಿ, ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಅವರು ಸಮಜಾಯಿಷಿ ನೀಡುತ್ತಾರೆ.

ಸರ್ಕಾರದ ಮನವೊಲಿಕೆ: `ವಸತಿ ಯೋಜನೆಗೆ 750 ಕೋಟಿ ರೂಪಾಯಿ ನೆರವು ನೀಡಲು ಈಗಾಗಲೇ ಮಂಜೂರಾತಿ ನೀಡಲಾಗಿದೆ. ಹಣಕಾಸು ಇಲಾಖೆಯ ಒಪ್ಪಿಗೆ ನೀಡುವ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ~ ಎಂದು `ಹುಡ್ಕೊ~ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿ.ಪಿ. ಬಳಿಗಾರ್ `ಪ್ರಜಾವಾಣಿ~ಗೆ ತಿಳಿಸಿದರು.

`ಹುಡ್ಕೊ~ ಸಾಲದ ಬಡ್ಡಿ ದರ ದುಬಾರಿ ಎನ್ನುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಆರ್ಥಿಕವಾಗಿ ಹಿಂದುಳಿದ ಬಡ ವರ್ಗದವರಿಗೆ ಮನೆ ನಿರ್ಮಿಸಿಕೊಡಲು ಸಂಸ್ಥೆಯು ಶೇ 8.5ರಿಂದ 8.75ರ ಬಡ್ಡಿ ದರದಲ್ಲಿ ಸಾಲ ಒದಗಿಸುತ್ತಿದೆ. ಇಡೀ ದೇಶಕ್ಕೆ ಅನ್ವಯವಾಗುವ ರೀತಿ ಏಕರೂಪದಲ್ಲಿ ನಾವು ವಸತಿ ಯೋಜನೆಗೆ ಬಡ್ಡಿ ದರ ವಿಧಿಸುತ್ತೇವೆ. ಬಹುಶಃ ಬೇರೆ ಯಾವುದೇ ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್‌ಗಳು ಇಷ್ಟೊಂದು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿಲ್ಲ~ ಎಂದು ಸ್ಪಷ್ಟನೆ ನೀಡಿದರು.

ಬಿಬಿಎಂಪಿಗೆ 700 ಕೋಟಿ ನೆರವು
ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಅಂಡರ್‌ಪಾಸ್ ಹಾಗೂ ಮೇಲು ಸೇತುವೆ ನಿರ್ಮಾಣ ಸೇರಿದಂತೆ ವಿವಿಧ ಮೂಲ ಸೌಕರ‌್ಯ ಕಲ್ಪಿಸುವ ಯೋಜನೆಗಳನ್ನು ಜಾರಿಗೊಳಿಸಲು ಬಿಬಿಎಂಪಿಗೆ 700 ಕೋಟಿ ರೂಪಾಯಿ ನೆರವು ನೀಡಲು `ಹುಡ್ಕೊ~ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಬಳಿಗಾರ್ ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT