ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡಾವಣೆಯಲೊಂದು ಕಲಾಯಾನ...

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸದಭಿರುಚಿಯ ಪ್ರೇಕ್ಷಕನಿಗೆ ಅಚ್ಚುಕಟ್ಟಾದ ಸಾಂಸ್ಕೃತಿಕ ರಸದೂಟ ಉಣಬಡಿಸುವ ಕೈಂಕರ್ಯ ನಗರದ ಕೆಲವು ಬಡಾವಣೆಗಳಲ್ಲಿ ನಡೆಯುತ್ತಿದೆ. ಆಯಾ ಬಡಾವಣೆಯ ಸಾಂಸ್ಕೃತಿಕ ಆಸಕ್ತರು ಒಗ್ಗೂಡಿ ಸದಭಿರುಚಿಯ ಸಮುದಾಯವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಈ ಬಡಾವಣೆಯ ಕಲಾ ಚಟುವಟಿಕೆಗೆ ಮತ್ತೊಂದು ಹೊಸ ಸೇರ್ಪಡೆ ‘ಮಾಸದ ಸಿನಿಮಾ’ ಚಿತ್ರೋತ್ಸವ.

ಇದೇ 14ರಿಂದ ಚಿತ್ರೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ಸಿಗಲಿದ್ದು, ವಿಜಯನಗರ–ಹಂಪಿನಗರವನ್ನು (ಆರ್‌ಪಿಸಿ ಬಡಾವಣೆ) ಕೇಂದ್ರೀಕರಿಸಿ ಚಿತ್ರೋತ್ಸವ ನಡೆಯಲಿದೆ. ಕಲಾವೇದಿಕೆ ಟ್ರಸ್ಟ್‌ ಕಾರ್ಯಕ್ರಮದ ರೂವಾರಿ. ಈ ಎರಡು ಬಡಾವಣೆಗಳಲ್ಲಿ ಸದಭಿರುಚಿಯ ಸಿನಿಮಾ ಪ್ರೀತಿಸುವ ಸಮುದಾಯ ಕಟ್ಟುವುದು ಸಿನಿಮೋತ್ಸವದ ಮುಖ್ಯ ಉದ್ದೇಶ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಚಿತ್ರ ಹಬ್ಬ ನಡೆಯಲಿದ್ದು, ಪ್ರವೇಶ ಉಚಿತ. ‘ಮಾಸದ ಸಿನಿಮಾ’ ಶೀರ್ಷಿಕೆಯೇ ಎಂದೂ ಮರೆಯದ ಸಿನಿಮಾ ಎನ್ನುವುದನ್ನು ನೆನಪು ಮಾಡುತ್ತದೆ. 

ಕಲಾತ್ಮಕ ಚಿತ್ರಗಳನ್ನು ಜನರಿಗೆ ಮುಟ್ಟಿಸುವುದು ಮತ್ತು ಸಹೃದಯಿ ಪ್ರೇಕ್ಷಕ ಸ್ಪಂದಿಸುವಂತೆ ಮಾಡುವುದು ಬಹುದೊಡ್ಡ ಸವಾಲು. ಈಗಾಗಲೇ ಬಂದಿರುವ ಹಲವು ಕಲಾತ್ಮಕ ಚಿತ್ರಗಳು ಪ್ರೇಕ್ಷಕರಿಗೆ ನೋಡಲು ಸಿಕ್ಕಿಲ್ಲ. ಈ ಚಿತ್ರಗಳನ್ನು ಜನರಿಗೆ ಮುಟ್ಟಿಸುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಇಂತಹ ಪ್ರಯತ್ನಕ್ಕೆ ‘ಮಾಸದ ಸಿನಿಮಾ’ ಬಲ ತುಂಬಲಿದೆ. ಕಾರ್ಯಕ್ರಮಕ್ಕೆ ಮೂಲ ಬೆನ್ನೆಲುಬು ಕೆ.ವಿ. ಸುಬ್ಬಣ್ಣ ಆಪ್ತರಂಗ ಮಂದಿರ. ಕಲಾವೇದಿಕೆ ಟ್ರಸ್ಟ್‌ ಕಾರ್ಯದರ್ಶಿ, ಕಿರುತೆರೆ ನಟ ಶ್ರೀನಾಥ್ ವಸಿಷ್ಠ ಈ ಸಮಾನ ಅಭಿರುಚಿಯುಳ್ಳವರ ತಂಡ ಕಟ್ಟಲು ಅಡಿಯಿಟ್ಟಿರುವ ಮುಂದಾಳು. ಅವರು ಹಂಪಿನಗರದ ನಿವಾಸಿ. ಶ್ರೀನಾಥ್‌ ಅವರ ಮನೆಯೇ ಸಿನಿಮೋತ್ಸವದ ಕಾರ್ಯಚಟುವಟಿಕೆಯ ಸ್ಥಳ. ಅವರು ತಮ್ಮ ಮನೆಯ ಮಹಡಿಯ ಜಾಗವನ್ನು ಥಿಯೇಟರ್ ಆಗಿ ರೂಪಿಸಿದ್ದಾರೆ. ಇಲ್ಲಿ 125 ಜನರು ಕೂರುವಷ್ಟು ಸ್ಥಳವಿದೆ. ಪ್ರತಿ ಸಿನಿಮಾ ಪ್ರದರ್ಶನಕ್ಕೆ ಅಂದಾಜು 1,500ರಿಂದ 2ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಈ ವ್ಯಾಪ್ತಿಯ ಪ್ರೇಕ್ಷಕರನ್ನು ಮುಖ್ಯವಾಗಿಸಿದ್ದರೂ ನಗರದ ಯಾವುದೇ ಭಾಗದ ಸದಭಿರುಚಿಯ ಚಿತ್ರ ಆಸಕ್ತರೂ ಪಾಲ್ಗೊಳ್ಳಬಹುದು. 

‘ಸಂಗೀತ, ಕಲೆ, ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲೂ ಟ್ರಸ್ಟ್ ತೊಡಗಿದೆ. ಕೆ.ವಿ. ಸುಬ್ಬಣ್ಣ ಆಪ್ತರಂಗ ಮಂದಿರದ  (ಕೆವಿಆರ್‌) ಕಾರ್ಯಚಟುವಟಿಕೆಯಿಂದ ಪ್ರೇರಿತವಾಗಿ ಟ್ರಸ್ಟ್‌ ಈ ಚಟುವಟಿಕೆ ರೂಪಿಸಿದೆ. ರಂಗಮಂದಿರದ ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತದೆ. ಕೆ.ವಿ.ಆರ್‌.ನಲ್ಲಿ ಮೊದಲನೇ ಭಾನುವಾರ ಪ್ರದರ್ಶಿತವಾದ ಚಿತ್ರ ಎರಡನೇ ಶನಿವಾರ ಕಲಾವೇದಿಕೆಯಲ್ಲಿ ಪ್ರದರ್ಶಿತವಾಗಲಿದೆ. ಎರಡನೇ ಭಾನುವಾರ ಅಲ್ಲಿ ಪ್ರದರ್ಶನ ಕಂಡ ಚಿತ್ರ ನಾಲ್ಕನೇ ಶನಿವಾರ ಇಲ್ಲಿ ನೋಡಲು ಲಭ್ಯ.

ನಮ್ಮ ಮನೆಯ ಮಹಡಿ ಮೇಲೆ ಸಿನಿಮಾಗಳನ್ನು ಪ್ರದರ್ಶಿಸಲಾಗುವುದು. ಪ್ರೊಜೆಕ್ಟರ್, ಸೌಂಡ್‌ಸಿಸ್ಟಂ, ಪರದೆಯ ವ್ಯವಸ್ಥೆ ಇದೆ. ನಮ್ಮ ಬಡಾವಣೆಯ ಜನರನ್ನು ಕಲಾತ್ಮಕ ಚಿತ್ರಗಳತ್ತ ಸೆಳೆಯುವುದು ಚಿತ್ರೋತ್ಸವದ ಉದ್ದೇಶ. ಬಡಾವಣೆಯ ಜನರನ್ನು ಸಾಂಸ್ಕೃತಿಕವಾಗಿ ತೊಡಗಿಸುವ ಆಲೋಚನೆ ಇದು. ತಿಂಗಳಲ್ಲಿ ಒಂದು ಕಲಾತ್ಮಕ ಸಿನಿಮಾವನ್ನು ಪ್ರದರ್ಶಿಸಬೇಕು ಅಂದುಕೊಂಡಿದ್ದೆವು. ಒಂದು ಚಿತ್ರದಿಂದ ಸಮರ್ಥವಾಗಿ ಸಿನಿಮಾ ಸಮುದಾಯ ಕಟ್ಟಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ತಿಂಗಳಲ್ಲಿ ಎರಡು ಸಿನಿಮಾಗಳನ್ನು ಪ್ರದರ್ಶಿಸಲು ಮುಂದಾದೆವು. ಕನ್ನಡ ಸಿನಿಮಾಗಳನ್ನು ಮೊದಲಿಗೆ ಪರಿಚಯಿಸಿ ಮೂರ್ನಾಲ್ಕು ತಿಂಗಳ ನಂತರ ಪರಭಾಷೆಯ ಕಲಾತ್ಮಕ ಚಿತ್ರಗಳ ಪ್ರದರ್ಶನಕ್ಕೂ ಚಿಂತಿಸಲಾಗಿದೆ. ಪ್ರದರ್ಶನದ ನಂತರ ಆ ಚಿತ್ರದ ನಿರ್ದೇಶಕರು ಪ್ರೇಕ್ಷಕರ ಜೊತೆ ಸಂವಾದ  ನಡೆಸಲಿದ್ದಾರೆ. ಜನರಿಂದ ಸೂಕ್ತ ಸ್ಪಂದನ ಸಿಗಬೇಕು ಅಷ್ಟೇ’ ಎಂದು ಸಿನಿಮೋತ್ಸವದ ರೂಪರೇಷೆಗಳನ್ನು ಮುಕ್ತವಾಗಿಡುತ್ತಾರೆ ಶ್ರೀನಾಥ್ ವಸಿಷ್ಠ. 

ಸಂಗೀತ, ಸಾಹಿತ್ಯ ಕಾರ್ಯಕ್ರಮಕ್ಕೆ ಮೀಸಲಾಗಿದ್ದ ಟ್ರಸ್ಟ್‌, ಸಿನಿಮಾ ಆಸಕ್ತಿಗೆ ಹೊರಳಿದ್ದಕ್ಕೆ ಕಾರಣವೂ ಅವರಲ್ಲಿ ಇದೆ. ‘ಕಳೆದ ನವರಾತ್ರಿಯ ವೇಳೆ ನಮ್ಮ ಮನೆಯಲ್ಲಿ 9 ದಿನಗಳ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಮೊದಲ ದಿನ ಸಂಗೀತಗಾರರ ಕಡೆಯವರೂ ಸೇರಿ 10 ಜನ ಬಂದಿದ್ದರು. ಎರಡನೇ ದಿನ ಜನರಿಲ್ಲ. ಮೂರನೇ ದಿನ ಕಾರ್ಯಕ್ರಮವನ್ನೇ ನಿಲ್ಲಿಸಿದೆವು. ಸಿನಿಮಾ ಅಂದರೆ ಜನ  ಸೇರುತ್ತಾರೆ. ನಿರ್ದೇಶಕರು– ನಟರ ಜೊತೆ ಮಾತುಕತೆಗಾಗಿಯೂ ಬರುತ್ತಾರೆ. ಕಲಾತ್ಮಕ ಚಿತ್ರಕ್ಕೆ ಅದರದ್ದೇ ಆದ ವರ್ಗವಿದೆ’ ಎಂದು ಸಿನಿಮೋತ್ಸವಕ್ಕೆ ಕಾರಣವಾದ ಮೂಲಗಳಿಗೆಗಳನ್ನು ನೆನಪಿಸಿಕೊಳ್ಳುತ್ತಾರೆ.

‘ಕಲಾತ್ಮಕ ಚಿತ್ರಗಳನ್ನು ಹೆಚ್ಚಿನ ಜನರಿಗೆ ತಲುಪಿಸುವ ಉದ್ದೇಶ ನಮ್ಮದು. ಆ ಚಿತ್ರಗಳು ನಿರ್ದೇಶಕನ ಕನಸು. ಆ ಪ್ರಯತ್ನ ಜನರನ್ನು ತಲುಪಬೇಕು. ತಲುಪದಿದ್ದರೆ ನಿರ್ದೇಶಕನ ಕನಸು ಸೋಲುತ್ತದೆ. ಕಲಾವಿದನಾಗಿ ನಾನೂ ಚಲನಚಿತ್ರರಂಗಕ್ಕೆ ಏನಾದರೂ ಮಾಡಬೇಕೆಂಬ ತುಡಿತವೂ ಈ ಉತ್ಸವದ ಹಿಂದೆ ಇದೆ. ಮುಂದಿನ ವಾರ (ಡಿ.21) ಹಿರಿಯ ಸಾಹಿತಿ ಅನಂತಮೂರ್ತಿ ಅವರ ಹುಟ್ಟುಹಬ್ಬ. ಆ ಸಂದರ್ಭದಲ್ಲಿ ‘ಮೌನಿ’ ಚಿತ್ರವನ್ನು ಪ್ರದರ್ಶಿಸಲಾಗುವುದು. ಗಿರೀಶ್ ಕಾಸರವಳ್ಳಿ, ಕಾರ್ನಾಡರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಚಿತ್ರ ವೀಕ್ಷಣೆಗೆ ಯಾವುದೇ ಟಿಕೆಟ್ ಇಲ್ಲ. ‘ಚೋಮನ ದುಡಿ’ ಚಿತ್ರದ ಬಗ್ಗೆ ಮಾತನಾಡಲು ಗಿರೀಶ್ ಕಾಸರವಳ್ಳಿ ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ನಿರ್ದೇಶಕರ ಕಲಾತ್ಮಕ ಸಿನಿಮಾಗಳನ್ನು ತೋರಿಸಲಾಗುವುದು. ‘ಸಿನಿಮಾ ಕ್ಲಬ್’ ಸಂಘಟಿಸುವ ಮತ್ತು ಏಪ್ರಿಲ್‌ನಲ್ಲಿ ಬಡಾವಣೆಯ ಮಕ್ಕಳ ಚಲನಚಿತ್ರೋತ್ಸವ ರೂಪಿಸುವ ಆಸೆಯನ್ನು ಹೊರಹಾಕುತ್ತಾರೆ.

ವಿಳಾಸ: ಕಲಾದೇಗುಲ, ಶ್ರೀ ಕೃಷ್ಣ ನಿಲಯ, ನಂ. 880 ಪೂರ್ವ, 3ನೇ  ‘ಬಿ’ ಮುಖ್ಯರಸ್ತೆ, 2ನೇ ಹಂತ, ವಿಜಯನಗರ (ಆರ್‌ಪಿಸಿ. ಬಡಾವಣೆ, ಕಾಫಿ ಡೇ ಹತ್ತಿರ), 98451 85070.
z

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT