ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿ ದರ ಏರಿಕೆ ಸಾಧ್ಯತೆ

ಆರ್‌ಬಿಐ ಹಣಕಾಸು ನೀತಿ
Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಡಿ.18ರಂದು ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ ಪ್ರಕಟಿಸಲಿದೆ.

ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ದರ (ಡಬ್ಲ್ಯುಪಿಐ) ನವೆಂಬರ್‌ನಲ್ಲಿ 14 ತಿಂಗಳ ಗರಿಷ್ಠ ಮಟ್ಟಕ್ಕೆ (ಶೇ7.52)  ಏರಿಕೆ ಕಂಡಿರು­ವುದರಿಂದ ಈ ಬಾರಿಯೂ ಬಡ್ಡಿ ದರ ಕಡಿತ ಸಾಧ್ಯತೆ ಕ್ಷೀಣಿಸಿದೆ. ಹಣದುಬ್ಬರ ನಿಗ್ರಹಿಸಲು ‘ಆರ್‌ಬಿಐ’ ಮತ್ತೆ ಅಲ್ಪಾವಧಿ ಬಡ್ಡಿ ದರವಾದ ‘ರೆಪೊ’ ದರವನ್ನು ಶೇ 0.25ರಷ್ಟು ಹೆಚ್ಚಿಸಬ­ಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

‘ಆಹಾರೇತರ ಸರಕುಗಳ ಹಣದು­ಬ್ಬರ ದರ ನವೆಂಬರ್‌ನಲ್ಲಿ ದಾಖಲೆ ಏರಿಕೆ ಕಂಡಿದೆ. ಇದರಿಂದ ‘ಆರ್‌ಬಿಐ’ ಡಿ.18ರ ಹಣಕಾಸು ನೀತಿಯಲ್ಲಿ ಖಂಡಿತ  ಬಡ್ಡಿ ದರವನ್ನು ಶೇ 0.25­ರಷ್ಟು ಹೆಚ್ಚಿಸಲಿದೆ. ಇದರಿಂದ ರೆಪೊ ದರ ಶೇ 8ಕ್ಕೆ ಜಿಗಿಯಲಿದೆ’ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ ‘ಕ್ರಿಸಿಲ್‌’ ಹೇಳಿದೆ.

‘ಆರ್‌ಬಿಐ ಈ ಬಾರಿ ಬಡ್ಡಿ ದರವನ್ನು ಶೇ  0.25ರಷ್ಟು ಹೆಚ್ಚಿಸುವುದು ನಿರೀ­ಕ್ಷಿತ. ಆದರೆ, ಶೇ  0.50ರಷ್ಟು ಏರಿಕೆ ಮಾಡುವ ಸಾಧ್ಯತೆ ಕಡಿಮೆ’ ಎಂದು ಆಕ್ಸಿಸ್‌ ಬ್ಯಾಂಕಿನ ಮುಖ್ಯ ಅರ್ಥ­ಶಾಸ್ತ್ರಜ್ಞ ಸುಗತಾ ಭಟ್ಟಾ­ಚಾರ್ಯ ಅಭಿಪ್ರಾಯ­ಪಟ್ಟಿದ್ದಾರೆ.

‘ಉತ್ತಮ ಮುಂಗಾರು ಲಭಿಸಿರುವು­ದರಿಂದ ಮತ್ತು ಆಹಾರ ಧಾನ್ಯಗಳ ಉತ್ಪಾ­ದನೆ ಹೆಚ್ಚಿರುವುದರಿಂದ ಮುಂಬ­ರುವ ತಿಂಗಳಲ್ಲಿ ಹಣದುಬ್ಬರ ಕುಸಿ­ಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ‘ಆರ್‌ಬಿಐ’ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊ­ಳ್ಳುವುದು ಉತ್ತಮ’ ಎಂದು ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕಿನ ಅಧ್ಯಕ್ಷ ಎಂ ನರೇಂದ್ರ ಅಭಿಪ್ರಾಯ­ಪಟ್ಟಿದ್ದಾರೆ.

‘ಆಹಾರ ಪೂರೈಕೆ ಭಾಗದ­ಲ್ಲಿನ ಲೋಪಗಳನ್ನು ಸರಿಪಡಿ­ಸದ ಹೊರತು ಹಣದುಬ್ಬರ ತಗ್ಗುವು­ದಿಲ್ಲ. ಹಣದು­ಬ್ಬರ ಹೆಚ್ಚಳವು ಆರ್ಥಿಕ ಆರೋಗ್ಯವನ್ನು ಹದಗೆಡಿಸುತ್ತದೆ. ಸರ್ಕಾರ ಇದರೆಡೆಗೆ ಹೆಚ್ಚಿನ ಗಮನ ಹರಿಸಬೇಕು’ ಎಂದು  ‘ಎಚ್‌ಎಸ್‌ಬಿಸಿ’ ಬ್ಯಾಂಕಿನ ಮುಖ್ಯ ಅರ್ಥಶಾಸ್ತ್ರಜ್ಞ ಲಿಫ್‌ ಲೈಬೇಕರ್‌ ಹೇಳಿದ್ದಾರೆ.

‘ಈ ಬಾರಿ ಶೇ 0.25ರಷ್ಟು ಬಡ್ಡಿ ದರ ಏರಿಕೆ ನಿರೀಕ್ಷಿತ. ಇದರ ಜತೆಗೆ ಮಾರ್ಜಿನಲ್‌ ಸ್ಟ್ಯಾಂಡಿಂಗ್‌ ಫೆಸಿಲಿಟಿ (ಎಂಎಸ್‌ಎಫ್‌) ದರದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದು’ ಎಂದು  ಬ್ಯಾಂಕ್‌ ಆಫ್‌ ಅಮೆರಿಕ ಮೆರಿಲ್‌­ಲಿಂಚ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT