ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬಡ್ಡಿ ದರ ಕಡಿತ ಸಾಧ್ಯತೆ ಕಡಿಮೆ'

ಎಫ್‌ಡಿಐ ಮಿತಿ ಹೆಚ್ಚಳ; `ಫಿಕ್ಕಿ' ಸ್ವಾಗತಪ್ರಜಾವಾಣಿ ವಾರ್ತೆ
Last Updated 22 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ದೂರಸಂಪರ್ಕ, ವಿಮೆ ಸೇರಿದಂತೆ 13 ವಲಯಗಳಲ್ಲಿ `ವಿದೇಶಿ ನೇರ ಬಂಡವಾಳ ಹೂಡಿಕೆ'(ಎಫ್‌ಡಿಐ) ಮಿತಿ ಹೆಚ್ಚಿಸಿರುವುದರಿಂದ ದೇಶಕ್ಕೆ ಹೆಚ್ಚಿನ ವಿದೇಶಿ ವಿನಿಮಯ ಹರಿದುಬರಲಿದೆ. ಇದರಿಂದ `ಚಾಲ್ತಿ ಖಾತೆ ಕೊರತೆ' (ಸಿಎಡಿ) ಗಣನೀಯವಾಗಿ ತಗ್ಗಲಿದೆ ಎಂದು `ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ'(ಫಿಕ್ಕಿ) ಹೇಳಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ `ಫಿಕ್ಕಿ' ಅಧ್ಯಕ್ಷೆ ನೈನಾ ಲಾಲ್ ಕಿದ್ವಾಯಿ, ಸಾಕಷ್ಟು ವಲಯಗಳಲ್ಲಿ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ(ಎಫ್‌ಐಪಿಬಿ) ಬದಲಿಗೆ ಸ್ವಯಂಚಾಲಿತ ಮಾರ್ಗದಲ್ಲಿ `ಎಫ್‌ಡಿಐ'ಗೆ ಅವಕಾಶ ನೀಡಲಾಗಿದೆ.

ಇದರಿಂದ ಗರಿಷ್ಠ ಮಟ್ಟದಲ್ಲಿ ಹೂಡಿಕೆ ಹರಿದುಬರಲಿದೆ. ದೂರಸಂಪರ್ಕ ವಲಯಲ್ಲಿ ಶೇ 100ರಷ್ಟು `ಎಫ್‌ಡಿಐ'ಗೆ ಅವಕಾಶ ನೀಡಿರುವುದರಿಂದ  ಮುಂಬರುವ ದಿನಗಳಲ್ಲಿ ಈ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಯ ಪ್ರವಾಹವನ್ನೇ  ನಿರೀಕ್ಷಿಸಬಹುದು ಎಂದರು.

ವಿದೇಶಿ ತಂತ್ರಜ್ಞಾನ ಮತ್ತು ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ  ರಕ್ಷಣಾ ವಲಯದಲ್ಲೂ `ಎಫ್‌ಡಿಐ' ಮಿತಿ ಹೆಚ್ಚಿಸಬೇಕಿತ್ತು. ಸದ್ಯ ಜಾರಿಯಲ್ಲಿರುವ ಶೇ 26ರಷ್ಟು `ಎಫ್‌ಡಿಐ' ಮಿತಿ ಹೆಚ್ಚಿಸಲು ರಕ್ಷಣೆಗೆ ಸಂಬಂಧಿಸಿದ ಸಂಪುಟ ಸಮಿತಿ  (ಸಿಸಿಎಸ್) ಶಿಫಾರಸು ಮಾಡಬೇಕು ಎಂದರು.

ಬಡ್ಡಿ ದರ ಕಡಿತ ಇಲ್ಲ
ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತ ತಡೆಯಲು `ಆರ್‌ಬಿಐ' ಬ್ಯಾಂಕುಗಳಿಗೆ ನೀಡುವ ಸಾಲದ (ರೆಪೊ) ಬಡ್ಡಿ ದರ ಹೆಚ್ಚಿಸಿದೆ. ಇದರಿಂದ ಮಾರುಕಟ್ಟೆಯಲ್ಲಿ ನಗದು ಲಭ್ಯತೆ ಕಡಿಮೆಯಾಗಿದೆ. ಉದ್ಯಮ ವಲಯ ಮತ್ತು ಆರ್ಥಿಕ ಪ್ರಗತಿಗೆ ಬ್ಯಾಂಕುಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಲಭಿಸಬೇಕು. ಆದರೆ, ಹಣದುಬ್ಬರ ಹೆಚ್ಚಿರುವುದರಿಂದ `ಆರ್‌ಬಿಐ' ಜುಲೈ 30ರಂದು ಪ್ರಕಟಿಸಲಿರುವ ತ್ರೈಮಾಸಿಕ ಹಣಕಾಸು ನೀತಿಯಲ್ಲಿ `ರೆಪೊ' ದರ ತಗ್ಗಿಸುವ ಸಾಧ್ಯತೆ ತುಂಬಾ ಕಡಿಮೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಸದ್ಯದ ಸವಾಲಿನ ಆರ್ಥಿಕ ಪರಿಸ್ಥಿತಿಯಲ್ಲಿ ರಫ್ತಿಗೆ ಉತ್ತೇಜನ ನೀಡುವ ಮೂಲಕ ಹೆಚ್ಚಿನ ವಿದೇಶಿ ವಿನಿಮಯ ಆಕರ್ಷಿಸಬೇಕು. ಆಮದು ಹೊರೆ ತಗ್ಗಿಸಿ `ಸಿಎಡಿ' ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಸೂದೆಗೆ ವಿರೋಧ
ಪಡಿತರ ವಿತರಣಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸದೆ ಸರ್ಕಾರ ಆಹಾರ ಭದ್ರತಾ ಮಸೂದೆ ಜಾರಿಗೊಳಿಸುತ್ತಿರುವುದನ್ನು `ಫಿಕ್ಕಿ' ವಿರೋಧಿಸುತ್ತದೆ ಎಂದು ಕಿದ್ವಾಯಿ ಹೇಳಿದರು.

ಕೇಂದ್ರ ಯೋಜನಾ ಆಯೋಗ ದೇಶದ ಶೇ 27ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಹೇಳಿದೆ. ಆದರೆ, ಸರ್ಕಾರ ದೇಶದ ಶೇ 67ರಷ್ಟು ಜನತೆಗೆ  ವಾರ್ಷಿಕ ರೂ.1.25 ಲಕ್ಷ ಕೋಟಿ ವೆಚ್ಚದಲ್ಲಿ 620 ಲಕ್ಷ ಟನ್‌ಗಳಷ್ಟು ಆಹಾರ ಧಾನ್ಯ ವಿತರಿಸುವ ಯೋಜನೆ ಕೈಗೆತ್ತಿಕೊಂಡಿದೆ. ಇದರಿಂದ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದ್ದು ವಿತ್ತೀಯ ಕೊರತೆಯು `ಜಿಡಿಪಿ'ಯ ಶೇ 5ರಷ್ಟು ಹೆಚ್ಚಲಿದೆ ಎಂದರು.

ಜಿಎಸ್‌ಟಿ ಜಾರಿ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಯಾವುದೇ ಉದ್ಯಮ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿಲ್ಲ. ವಿರೋಧ ವ್ಯಕ್ತವಾಗಿರುವುದು ರಾಜಕೀಯ  ಪಕ್ಷಗಳಿಂದ. `ಜಿಎಸ್‌ಟಿ' ಜಾರಿಯಾದರೆ ಸೋರಿಕೆ ಕಡಿಮೆಯಾಗಲಿದ್ದು ಒಟ್ಟಾರೆ ತೆರಿಗೆ ವರಮಾನ ಹೆಚ್ಚಲಿದೆ ಎಂದು ಅವರು ಹೇಳಿದರು.

`ಅರ್ನೆಸ್ಟ್ ಅಂಡ್ ಯಂಗ್' ಸಂಸ್ಥೆ ಸಹಭಾಗಿತ್ವದಲ್ಲಿ ಫಿಕ್ಕಿ' ನಡೆಸಿದ `ಲಂಚ ಮತ್ತು ಭ್ರಷ್ಟಾಚಾರ-ಭಾರತದ ವಾಸ್ತವ ಚಿತ್ರಣ' ಸಮೀಕ್ಷಾ ವರದಿಯನ್ನು ಕಿದ್ವಾಯಿ ಇದೇ ವೇಳೆ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT