ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿಗೆ ಯುಪಿಎಸ್‌ಸಿ ಪರೀಕ್ಷೆ ಕಡ್ಡಾಯ

Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಜ್ಯ ಸೇವಾ ಅಧಿಕಾರಿಗಳು ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ಗೆ ಬಡ್ತಿ ಹೊಂದ­ಬೇಕಾದರೆ ಇನ್ನು ಮುಂದೆ ಯುಪಿಎಸ್‌ಸಿ (ಕೇಂದ್ರೀಯ ನಾಗರಿಕ ಸೇವಾ ಆಯೋಗ) ನಡೆಸುವ ಪರೀಕ್ಷೆ  ಹಾಗೂ ಸಂದರ್ಶನವನ್ನು ಎದುರಿಸಲೇ ಬೇಕು. ಇದುವರೆಗೆ ರಾಜ್ಯ ಸೇವೆಗಳ ಅಧಿಕಾರಿಗಳು, ಹಿರಿತನ ಮತ್ತು ವಾರ್ಷಿಕ ಗೋಪ್ಯ ವರದಿಗಳ (ಎಸಿಆರ್‌) ಆಧಾರದಲ್ಲಿ  ಮೂರು ಅಖಿಲ ಭಾರತ ಸೇವೆಗಳಿಗೆ (ಐಎಎಸ್‌, ಐಪಿಎಸ್‌, ಐಎಫ್‌ಎಸ್‌) ಆಯ್ಕೆಯಾಗುತ್ತಿದ್ದರು.

ಆದರೆ, ಇತ್ತೀಚೆಗಷ್ಟೇ ಸಿಬ್ಬಂದಿ ಸಚಿವಾಲಯ ನಿಯಮಗಳನ್ನು ಬದಲಾಯಿಸಿದೆ. ತಮಿಳುನಾಡು ಸೇರಿದಂತೆ ಇತರ ಕೆಲವು ರಾಜ್ಯಗಳು ಇದನ್ನು ವಿರೋಧಿಸಿವೆ. ಹೊಸ ನಿಮಮಗಳ ಅನ್ವಯ, ರಾಜ್ಯ ಸೇವೆಗಳ ಅಧಿಕಾರಿಗಳ ಬಡ್ತಿಗಾಗಿ 1000 ಅಂಕಗಳ ನಾಲ್ಕು ಹಂತಗಳ ಆಯ್ಕೆ ಪ್ರಕ್ರಿಯೆಯನ್ನು (ಲಿಖಿತ ಪರೀಕ್ಷೆ,  ಸೇವೆ ಸಲ್ಲಿಸಿರುವ ಅವಧಿ, ವಾರ್ಷಿಕ ಗೋಪ್ಯ ವರದಿ ವಿಶ್ಲೇಷಣೆ ಮತ್ತು ಸಂದರ್ಶನ) ಜಾರಿಗೆ ತರಲಾಗಿದೆ.

ಆಯ್ಕೆ ಪ್ರಕ್ರಿಯೆಯಲ್ಲಿ  ಪೇಪರ್‌–1 (ಯೋಗ್ಯತಾ ಪರೀಕ್ಷೆ) ಮತ್ತು ಪೇಪರ್‌–2 (ಸಾಮಾನ್ಯ ಅಧ್ಯಯನ ಮತ್ತು ರಾಜ್ಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು) ಎಂಬ ಎರಡು ರೀತಿಯ ಲಿಖಿತ ಪರೀಕ್ಷೆಗಳು ಇರಲಿವೆ. ಇದಕ್ಕೆ ಹೆಚ್ಚುವರಿಯಾಗಿ ಸಂದರ್ಶನ ಹಾಗೂ ರಾಜ್ಯ ಸೇವಾ ಅಧಿಕಾರಿಗಳ ಕುರಿತಾಗಿ ನೀಡಿರುವ ವಾರ್ಷಿಕ ಗೋಪ್ಯ ವರದಿಗಳ ಪರಿಶೀಲನೆಯೂ ನಡೆಯಲಿದೆ.

ನಾಲ್ಕು ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ  ಅಭ್ಯರ್ಥಿ ಪಡೆದಿರುವ ಒಟ್ಟು ಅಂಕ­ಗಳನ್ನು ಪರಿಗಣಿಸಿ ಅಭ್ಯರ್ಥಿಗಳ ಅಂತಿಮ ಅರ್ಹತಾ ಪಟ್ಟಿಯನ್ನು ಯುಪಿಎಸ್‌ಸಿ ಪ್ರಕಟಿಸಲಿದೆ. ರಾಜ್ಯಯೇತರ ಸೇವಾ ಅಧಿಕಾರಿಗಳು ಬಡ್ತಿ ಹೊಂದಬೇಕಾದರೆ, ಎರಡು ಪರೀಕ್ಷೆಗೆ ಹೆಚ್ಚುವರಿಯಾಗಿ ಮತ್ತೊಂದು ಲಿಖಿತ ಪರೀಕ್ಷೆ (ಪೇಪರ್–3 (ಪ್ರಬಂಧ, ಗ್ರಹಣಶಕ್ತಿಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಸಂಕ್ಷಿಪ್ತ ಉತ್ತರ) ಬರೆಯ­ಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT