ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ, ಭಾವನೆಗಳ ಬದುಕು

Last Updated 29 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬದುಕು ನಿರಂತರ. ಜೀವಸೆಲೆ ಶಾಶ್ವತ. ವ್ಯಕ್ತಿಗಳು ಅಳಿದರೂ ಅವರ ವಿಚಾರಗಳು ಮತ್ಯಾವುದೋ ರೂಪದಲ್ಲಿ ಪ್ರಕಟವಾಗುತ್ತಿರುತ್ತವೆ.

ನಗರದಲ್ಲಿ ನಡೆಯುತ್ತಿರುವ `ಎಟರ್ನಿಟಿ: ದಿ ಇನ್‌ಫಿನಿಟಿ~ ಸಮೂಹ ಕಲಾ ಪ್ರದರ್ಶನದಲ್ಲಿ ನಾಲ್ಕು ಕಲಾವಿದರು ರಚಿಸಿರುವ `ಬದುಕು, ಪ್ರಕೃತಿ, ನಿರಂತರವಾಗಿ ಹರಿಯುತ್ತಿರುವ ಜೀವಸೆಲೆ~ ಕುರಿತ ಕಲಾಕೃತಿಗಳು ಪ್ರದರ್ಶನಗೊಂಡಿವೆ. ವಿವಿಧ ಹಿನ್ನೆಲೆಯ, ವಿವಿಧ ರಾಜ್ಯಗಳಿಗೆ ಸೇರಿದ ದೀಪಾ ವೇದಪಾಠಕ್, ಶ್ರದ್ಧಾ ಡಿ.ಡಿ, ಶಮಾ ರಾಣೆ ಮತ್ತು ಶಿವಾಜಿ ಚವಾಣ್ ಇಲ್ಲಿ ತಮ್ಮ ಅನುಭವ, ಭಾವನೆಗಳಿಗೆ ಚಿತ್ರ ರೂಪ ನೀಡಿದ್ದಾರೆ.

ಚಿತ್ರಕಲೆ ಅಂದರೆ ಜೀವನವನ್ನು ಅನುಭವಿಸುವುದು ಮತ್ತು ಒಳಧ್ವನಿಯನ್ನು ಅಭಿವ್ಯಕ್ತಿಗೊಳಿಸುವುದು ಎಂದು ಶ್ರದ್ಧಾ ಹೇಳುತ್ತಾರೆ. ಮನಸ್ಸಿನ ಭಾವ, ಪ್ರೀತಿ, ಸ್ಪರ್ಶ, ಸಂಭ್ರಮ, ಕನಸು ಎಲ್ಲವೂ ಅವರ ಕಲೆಯ ಭಾಗವಾಗಿವೆ. ಕಲೆ ಎಂಬುದು ಸಂಗೀತದಂತೆ. ಸಂಗೀತದ ರಾಗ, ಲಯ, ಸಂಯೋಜನೆ ಶ್ರೋತೃಗಳಲ್ಲಿ ರಸಾನುಭೂತಿ ಉಂಟು ಮಾಡುವಂತೆ ಸುಂದರ ಕಲಾಕೃತಿಯೂ ವೀಕ್ಷಕನ ಹೃದಯ ಮುಟ್ಟುತ್ತದೆ ಎಂಬುದು ಅವರ ಪ್ರತಿಪಾದನೆ.

ಆಂತರ್ಯದ ಭಾವಗಳ ಅಭಿವ್ಯಕ್ತಿಯೇ ಚಿತ್ರಕಲೆ ಎಂದು ದೀಪಾ ನಂಬುತ್ತಾರೆ. ಬಾಲ್ಯದಿಂದಲೇ ಚಿತ್ರಕಲೆಯತ್ತ ಆಕರ್ಷಿತರಾದ ಅವರು ಪುಣೆಯ ಅಭಿನವ ಮಹಾವಿದ್ಯಾಲಯದಿಂದ ಚಿತ್ರಕಲೆಯಲ್ಲಿ ಔಪಚಾರಿಕ ಶಿಕ್ಷಣ ಪಡೆದಿದ್ದಾರೆ. ಸಂಗೀತದ ಮೇಲೆ ಅವರಿಗಿರುವ ಅಸೀಮ ಪ್ರೀತಿ ಅವರ ಕಲೆಯಲ್ಲಿ ವ್ಯಕ್ತವಾಗುತ್ತದೆ. ಲೌಕಿಕ ಜಗತ್ತಿನ ಜಂಜಾಟದಿಂದ ತಪ್ಪಿಸಿಕೊಳ್ಳಲು ಪ್ರೀತಿಸುವ ಗಂಡು, ಹೆಣ್ಣು ಸಂಗೀತದ ನಾದದಲ್ಲಿ ಮೈಮರೆಯುವ ದೃಶ್ಯಗಳು ಅವರ ಕುಂಚದಲ್ಲಿ ಮೂಡಿಬಂದಿವೆ. ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಕಲಾ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಅವರ ಚಿತ್ರಗಳಲ್ಲಿ ಗಾಯತೊಂಡೆ, ಆದಿಮೂಲಂ, ರಾಮ್‌ಕುಮಾರ್ ಮುಂತಾದ ಹಿರಿಯ ಕಲಾವಿದರ ಪ್ರಭಾವ ಕಾಣುತ್ತದೆ.

 ಶಮಾ ರಾಣೆ ಅವರ ಚಿತ್ರಗಳಲ್ಲಿ ಮಾನವ ಸಂಬಂಧಗಳಿಗೆ ಆದ್ಯತೆ. ಸೂಕ್ಷ್ಮ  ಸಂವೇದನೆಯ ಈ ಕಲಾವಿದೆಯ ಚಿತ್ರಗಳನ್ನು ನೋಡಿದಾಗ ನಿಮಗೆ ಚಿತ್ರದಲ್ಲಿನ ದೃಶ್ಯಗಳನ್ನು ಅನುಭವಿಸಿದ ಭಾವ ಉಂಟಾಗುತ್ತದೆ. ನಿತ್ಯ ಜೀವನದ ಅನುಭವ, ಘಟನೆಗಳನ್ನು ಹೃದಯದಾಳಕ್ಕೆ ಮುಟ್ಟುವಂತೆ ಚಿತ್ರಿಸುವ ಕಲೆ ಅವರಿಗೆ ಸಿದ್ಧಿಸಿದೆ.

ಮದರ್‌ಹುಡ್ ಚಿತ್ರದಲ್ಲಿ ತಾಯ್ತನದ ಸುಖ ಅನುಭವಿಸುತ್ತಿರುವ ತಾಯಿಯನ್ನು ಚಿತ್ರಿಸಿದ್ದಾರೆ. ಗರ್ಭಿಣಿ ಸ್ತ್ರೀ ಹೊಟ್ಟೆಯಲ್ಲಿರುವ ಮಗುವಿಗಾಗಿ ಸಂಗೀತ ನುಡಿಸುವ ದೃಶ್ಯವೂ ಅವರ ಕುಂಚದಲ್ಲಿ ಮೂಡಿಬಂದಿದೆ.

ಶಿವಾಜಿ ಚವಾಣ್ ಅವರ ಕಲಾಕೃತಿಗಳಲ್ಲಿ ಮಾನವ, ನಿಸರ್ಗದ ನಡುವಿನ ಜಟಿಲ ಸಂಬಂಧವನ್ನು ಚಿತ್ರಿಸಲಾಗಿದೆ. ಮನುಷ್ಯನ ಮನಸ್ಸು ಮಾನವಕುಲ ಮತ್ತು ನಿಸರ್ಗದ ನಡುವಿನ ಮಧ್ಯಸ್ಥಿಕೆದಾರನಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಅವರು ಬಿಂಬಿಸಿದ್ದಾರೆ.
ಸ್ಥಳ: ರಿನೈಸನ್ಸ್ ಗ್ಯಾಲರಿ, ನಂ 104, ವೆಸ್ಟ್‌ಮಿನಿಸ್ಟರ್, 13, ಕನ್ನಿಂಗ್‌ಹ್ಯಾಮ್ ರಸ್ತೆ. ಪ್ರದರ್ಶನ ಶುಕ್ರವಾರ ಮುಕ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT