ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣಕ್ಕೊಂದು ಬೆರಗು ಬೆರೆತು...

Last Updated 29 ಮೇ 2012, 19:30 IST
ಅಕ್ಷರ ಗಾತ್ರ

ಕುಂಚವಿಲ್ಲ, ಬಣ್ಣವಿಲ್ಲ, ಕಾಗದವೂ ಇಲ್ಲ.... ಆದರೂ ಕಲಾಕೃತಿಯೊಂದು ಮೂಡುತ್ತದೆ!
ಎಲ್ಲೋ ಇರುವ ಮೊನಾಲಿಸಾಳ ಭಾವಚಿತ್ರ ಡೆಸ್ಕ್‌ಟಾಪ್‌ನಲ್ಲಿ ಕಣ್ಣು ಮಿಟುಕಿಸುತ್ತಿದೆ.
ಛಾಯಾಗ್ರಹಣ, ವಿಡಿಯೊ, ಅಷ್ಟೇಕೆ ಕೇವಲ ಸದ್ದುಗಳನ್ನು ಬಳಸಿಯೂ ಕಲಾಕೃತಿ ಸೃಷ್ಟಿಯಾಗುತ್ತಿದೆ. ಮಾಸಿ ಹಳತಾದ ಯಾವುದೋ ಕಾಲದ ಚಿತ್ರ ಕೂಡತಾಜಾ ಹೂವಿನಂತೆ ಕಂಗೊಳಿಸುತ್ತಿದೆ. ಹೀಗೆ ಅಸಾಧ್ಯವನ್ನೂ ಸಾಧ್ಯವಾಗಿಸಿದ್ದು ಡಿಜಿಟಲ್ ತಂತ್ರಜ್ಞಾನ.

14ನೇ ಶತಮಾನದಲ್ಲಿ ಯೂರೋಪ್ ಪುನರುಜ್ಜೀವನಕ್ಕೆ ತೆರೆದುಕೊಂಡಿತು. ಆಗ ಅರಳಿದ ಸಾಂಸ್ಕೃತಿಕ ಕುಸುಮಗಳಲ್ಲಿ ಚಿತ್ರಕಲೆಯೂ ಒಂದು. ಆಗ ಹುಟ್ಟಿದ ಕಲಾವಿದರು ಪ್ರತಿಷ್ಠಿತರ ಸಾಲಿಗೆ ಸೇರಿದರು. ಪುನರುಜ್ಜೀವನದ ಪ್ರಭಾವವಿದ್ದ 17ನೇ ಶತಮಾನದವರೆಗೂ... ಅಷ್ಟೇಕೆ ನಂತರದ ಬಹುವರ್ಷಗಳವರೆಗೂ ಕಲೆ ಕೇವಲ ಕ್ಯಾನ್ವಾಸ್ ಹಾಗೂ ಬಣ್ಣವನ್ನೇ  ಅವಲಂಬಿಸಿತ್ತು.
 
ಹೆಚ್ಚೆಂದರೆ ಕಾಗದ ಅಥವಾ ಗೋಡೆಗಳ ಮೇಲೆ ಮಾತ್ರ ಚಿತ್ರ ಮೂಡುತ್ತಿತ್ತು. ಯಂತ್ರಕ್ರಾಂತಿ ಆರಂಭವಾಗುವವರೆಗೂ ಕಲೆ ಕೇವಲ ಕೆಲವರ ಸ್ವತ್ತಾಗಿ ಉಳಿದಿತ್ತು ಎನ್ನುವುದನ್ನು ಕಲಾ ಇತಿಹಾಸಕಾರರು ಗುರುತಿಸುತ್ತಾರೆ.

ಆದರೆ ಯಂತ್ರಗಳ ಆವಿಷ್ಕಾರ ಕಲೆಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಮುತುವರ್ಜಿ ವಹಿಸಿತು. ಛಾಯಾಗ್ರಹಣದಿಂದಾಗಿ ಸುಲಭವಾಗಿ ಮೂಲಕೃತಿಗಳನ್ನು ಮರುಸೃಷ್ಟಿ ಮಾಡುವುದು ಸಾಧ್ಯವಾಯಿತು. ಇದಕ್ಕಿಂತಲೂಒಂದು ಹೆಜ್ಜೆ ಮುಂದೆ ಹೋದದ್ದು ಡಿಜಿಟಲ್ ಕ್ರಾಂತಿ. ಕಲಾವಿದರಿಗೆ, ಕಲಾಕೃತಿಗಳಿಗೆ ಅನೇಕಾನೇಕ ಕೊಡುಗೆಗಳನ್ನು ನೀಡುತ್ತಲೇ ಕಲೆಯ ಸ್ವರೂಪವನ್ನು, ಅದರ ಪರಿಕಲ್ಪನೆಯನ್ನು ಡಿಜಿಟಲ್ ಯುಗ ಬದಲಿಸಿಬಿಟ್ಟಿತು.

ಉದಾಹರಣೆಗೆ ಡಿಜಿಟಲ್ ಕಲೆ ಎಂಬ ಪ್ರತ್ಯೇಕ ಪ್ರಕಾರವೇ ಈಗ ಹುಟ್ಟಿಕೊಂಡಿದೆ. ಕ್ಯಾನ್‌ವಾಸ್ ಆಚೆಗೂ ಕಲೆ ಮೂಡುತ್ತಿದೆ. ವಿಡಿಯೊ ಕಲೆ, ಆಡಿಯೋ ಕಲೆಗಳೂ ಸೃಷ್ಟಿಯಾಗುತ್ತಿವೆ. ಪುಟ್ಟ ಕ್ಯಾಮೆರಾ, ಸಣ್ಣ ಮೈಕ್ರೋಫೋನ್‌ಗಳು ಸದ್ದಿಲ್ಲದೆ ಕಲಾಸೃಷ್ಟಿಯಲ್ಲಿ ತಲ್ಲೆ ನವಾಗಿವೆ. ಈ ಕಲಾಕೃತಿಗಳನ್ನು ಕಲೆ ಎನ್ನಬಹುದೇ ಎನ್ನುವ ಅನುಮಾನದೊಂದಿಗೆ ಅನೇಕ ಕಲಾ ವಿಮರ್ಶಕರು ತಂತ್ರಜ್ಞಾನದ ಆಟವನ್ನು ಗಮನಿಸುತ್ತಿದ್ದಾರೆ.

ಹಿರಿಯ ಕಲಾವಿದ ಎನ್.ಮರಿಶಾಮಾಚಾರ್ ಅವರಿಗೆ ಡಿಜಿಟಲ್ ಯುಗದಕೊಡುಗೆ ಒಂದು ವಿಸ್ಮಯವಾಗಿ ತೋರುತ್ತಿದೆ. `ಚಾರ್‌ಕೋಲ್~ನಿಂದ ಬರೆಯುವಕಲೆಯೇ ಗ್ರಾಫಿಕ್ ತಂತ್ರಜ್ಞಾನ ಎಂದು ನಾವು ಚಿಕ್ಕವರಿದ್ದಾಗ ಭಾವಿಸಿದ್ದೆವು. ಅಂಥ ಕಲಾವಿದರನ್ನು ನಿಬ್ಬೆರಗಾಗಿ ನೋಡುತ್ತಿದ್ದೆವು. ಆದರೆ ಡಿಜಿಟಲ್ ಕ್ರಾಂತಿ ಎಂಬುದು ಗ್ರಾಫಿಕ್‌ನ ಸಾಧ್ಯತೆಗಳನ್ನು ಇನ್ನೂ ಆಳವಾಗಿ ತೋರಿಸಿಕೊಟ್ಟಿತು.
 
ನಮ್ಮ ಕಣ್ಣ ಮುಂದೆಯೇ ಎಂಥಅದ್ಭುತ ನಡೆದುಹೋಯಿತು ಎನ್ನುವುದನ್ನು ನಂಬಲಿಕ್ಕೇ ಸಾಧ್ಯವಿಲ್ಲ~ ಎನ್ನುತ್ತಾರೆ.ಇಲ್ಲಿ ಮರುಸೃಷ್ಟಿ ಮಾತ್ರವಲ್ಲದೆ ಬೇರೆ ಬೇರೆ ಇಡೀ ಕಲಾಕೃತಿಯನ್ನೇ ಬೇಕಾದಂತೆ ಬಳಸಿಕೊಳ್ಳಲು ಅವಕಾಶವಾಯಿತು.

ಉದಾಹರಣೆಗೆ ಮೊನಾಲಿಸಾಳ ಮುಖವನ್ನು ಬೇರ್ಪಡಿಸಿ ಬೇರೊಬ್ಬರ ಮುಖವನ್ನು ಅಳವಡಿಸುವುದು ಆ ಮೂಲಕ ಹೊಸತೊಂದನ್ನು ಸೃಷ್ಟಿಸುವುದು ಸಾಧ್ಯವಾಯಿತು. ಅಲ್ಲದೆ ಸುಮಾರು 2/2.5 ಅಡಿ ಸುತ್ತಳತೆಯ ಅದೇ ಕಲಾಕೃತಿಯನ್ನು 50 ಅಡಿಗಳಷ್ಟು ದೊಡ್ಡದಾಗಿ ಮರುಸೃಷ್ಟಿಸುವುದು ಹಾಗೂ ಕೇವಲ 5 ಇಂಚಿಗೇ ಇಳಿಸಿ ನೋಡುವ ಅವಕಾಶವೂ ದೊರೆಯಿತು.

ಈಗ ಕಲೆಗೆ ಸಂಬಂಧಿಸಿದಂತೆಯೇ ಅನೇಕ ಸಾಫ್ಟ್‌ವೇರ್‌ಗಳು ಸೃಷ್ಟಿಯಾಗಿವೆ. ಅವುಗಳಲ್ಲಿ `ಫೋಟೊಷಾಪ್~ ಹಾಗೂ `ಕೋರಲ್ ಡ್ರಾ~ ಹೆಚ್ಚು ಜನಪ್ರಿಯ. ಛಾಯಾಗ್ರಹಣ ಕಲೆಯಲ್ಲಿ ಕ್ರಾಂತಿಉಂಟು ಮಾಡಿದಂತೆ ಚಿತ್ರಕಲೆಗೂ ತನ್ನವೇ ಆದ ಕೊಡುಗೆ ನೀಡಿದವು ಈ ತಂತ್ರಾಂಶಗಳು.

ಮೊದಲು ಹೇಳಿದಂತೆ ಕುಂಚವಿಲ್ಲದೆ, ಬಣ್ಣವಿಲ್ಲದೆ ಕಲಾಕೃತಿಗಳು ಮೂಡಿಬಂದವು. `ಅಕಾಡೆಮಿಕ್ ಆಗಿ ಕಲಿತವರಿಗಷ್ಟೇ ಕಲೆ~ ಎಂಬ ಸಿದ್ಧಮಾದರಿಯನ್ನು ಸ್ಪಷ್ಟವಾಗಿ ತಂತ್ರಾಂಶಗಳು ಒಡೆದು ಹಾಕಿದವು. ಆ ಮೂಲಕ ಕಲೆ ಜನಸಾಮಾನ್ಯರ ಸ್ವತ್ತಾಗಲು ಆರಂಭಿಸಿತು(ಇಂಥ ತಂತ್ರಾಂಶ ಸೃಷ್ಟಿಯಲ್ಲಿ ಭಾರತೀಯ ತಂತ್ರಜ್ಞರೂ ಭಾಗಿಯಾಗಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರ).

ಡಿಜಿಟಲ್ ಕ್ರಾಂತಿಯಿಂದಾಗಿ ಕಲಾಕೃತಿಗಳ ಸಂಗ್ರಹ ಹಾಗೂ ರವಾನೆ ಸುಲಭವಾಯಿತು. ಒಂದು ಪುಟ್ಟ ಹಾರ್ಡ್‌ಡಿಸ್ಕ್‌ನಲ್ಲಿ ಕಲಾವಿದರ ಅಸಂಖ್ಯ ಕಲಾಕೃತಿಗಳನ್ನು ಸಂಗ್ರಹಿಸಿ ಇಡಬಹುದು. ಮೊದಲೆಲ್ಲಾ ದೂರದೇಶದ ಕಲಾ ಸಂಗ್ರಹಕಾರರಿಗೆ ಹಾಗೂ ಮ್ಯೂಸಿಯಂಗಳಿಗೆ ಕಲಾಕೃತಿಗಳನ್ನು ಸಾಗಿಸುವುದು ಹರಸಾಹಸದ ಕೆಲಸವಾಗಿತ್ತು.
 
ಆ ಸಾಗಾಟದಲ್ಲಿ ಕಲಾಕೃತಿಗಳು ಹಾಳಾಗುವ, ಕಳವಾಗುವ ಭೀತಿಯೂ ಇತ್ತು. ಆದರೆ ಈಗ ಮೂಲಕಲಾಕೃತಿಯನ್ನು ಕಲಾವಿದ ತಮ್ಮ ಬಳಿಯೇ ಇಟ್ಟುಕೊಂಡು ಅದರ ಪ್ರತಿಕೃತಿಯನ್ನಷ್ಟೇ ರವಾನಿಸಬಹುದಾಗಿದೆ. ಮೂಲ ಕಲಾಕೃತಿಯ ಯಾವ ಅಂಶಗಳನ್ನೂ ಕೈಬಿಡದೆ ಮರುಸೃಷ್ಟಿಸುವ ಅತ್ಯಾಧುನಿಕ ಸ್ಕ್ಯಾನರ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಮೂಲ ಕಲಾಕೃತಿಯ ಉಬ್ಬತಗ್ಗುಗಳನ್ನು ಯಾವುದೇ ಲೋಪವಿಲ್ಲದೆ ಮತ್ತೆ ದಾಖಲಿಸುವ ಸಾಮರ್ಥ್ಯವನ್ನು ಅವು ಹೊಂದಿವೆ.

ಬೆರಳ ತುದಿಯಲ್ಲೇ ಎಷ್ಟೇ ಬೃಹತ್ ಕಲಾಕೃತಿಗಳನ್ನು ರವಾನಿಸುವ ಜಾಲತಾಣಗಳು ಸೃಷ್ಟಿಯಾಗಿವೆ. `ಯು ಸೆಂಡ್‌ಇಟ್~, `ಸೆಂಡ್‌ಸ್ಪೇಸ್~ ಹಾಗೂ `ಡ್ರಾಪ್‌ಬಾಕ್ಸ್~... ಇಂಥ ಕೆಲವು ಪ್ರಮುಖ ಜಾಲ ತಾಣಗಳು.

ಯುವ ಕಲಾವಿದ `ಮಂಸೋರೆ~ ಹೇಳುವಂತೆ `ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಆವಿಷ್ಕಾರ ಹಾಗೂ ಅದರಿಂದಾಗುತ್ತಿರುವ ಲಾಭಗಳಿಗೆ ಮಿತಿಯೇಇಲ್ಲ. ತಂತ್ರಜ್ಞಾನ ಎಲ್ಲವನ್ನೂ ಸುಲಭವಾಗಿಸಿದೆ. ಕಲಾವಿದರು ಅರ್ಧ ಶ್ರಮ ಹಾಕಿದರೆ ಸಾಕು ಉಳಿದದ್ದರ ಹೊಣೆ ಕಂಪ್ಯೂಟರ್‌ಗೆ ಸೇರಿದ್ದು ಎನ್ನುವಂತಾಗಿದೆ~.

ಇಷ್ಟಾದರೂ ಕಲೆಯ ಹೂರಣದಲ್ಲಿ ಏನಾದರೂ ಬದಲಾವಣೆ ತರಲು ತಂತ್ರಜ್ಞಾನದಿಂದ ಸಾಧ್ಯವಾಯಿತೆ?
ಈ ಪ್ರಶ್ನೆಗೆ ಉತ್ತರವಾಗಿ `ಇಲ್ಲ~ ಎಂದೇ ಹೇಳಬಹುದು. ಏಕೆಂದರೆ ಕಲೆ ಹುಟ್ಟುವುದು ಕಲಾವಿದನ ಮನಸ್ಸಿನ ಕುಲುಮೆಯಲ್ಲಿ. `ಕಂಪ್ಯೂಟರ್ ಕೇವಲ ಮೆದುಳು, ಅದೇ ಹೃದಯವಲ್ಲ~ ಎನ್ನುವುದು ಕಲಾವಿದರೊಬ್ಬರ ಮಾತು.ಎಂಥ ಅರ್ಥಪೂರ್ಣ ಹೇಳಿಕೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT