ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣಗಟ್ಟಿದ ದ್ವಿಚಕ್ರ ವಾಹನ ಲೋಕ

2012- ಹಿನ್ನೋಟ
Last Updated 19 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

2012 ಭಾರತದ ದ್ವಿಚಕ್ರವಾಹನ ಲೋಕಕ್ಕೆ ಹೊಸ ರಂಗನ್ನು ನೀಡಿದ ವರ್ಷ. ಹೊಸ ಹೊಸ ಸ್ಕೂಟರ್ ಹಾಗೂ ಮೊಟಾರ್ ಸೈಕಲ್‌ಗಳು ಹಿಂದಿನ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಯಾದವು. ಮಾರಾಟದಲ್ಲಿನ ಏರಿಳತಗಳು ಪ್ರತಿವರ್ಷವೂ ಇದ್ದೇ ಇರುತ್ತವೆ. ಆದರೆ ಹೊಸ ಹೊಸ ಪ್ರಯೋಗಗಳು ಮಾತ್ರ ಎಲ್ಲ ವರ್ಷವೂ ಇರುತ್ತದೆ ಎಂದು ಹೇಳಲಾಗದು. ಪ್ರಯೋಗದ ದೃಷ್ಟಿಯಿಂದಲೂ ಅನೇಕ ಮೈಲುಗಲ್ಲುಗಳು ಸಷ್ಟಿಯಾದುದು 2012ರ ವಿಶೇಷ.

ಭಾರತದ ದ್ವಿಚಕ್ರ ವಾಹನಲೋಕವನ್ನು ಪರಾವಲಂಬಿ ಕ್ಷೇತ್ರ ಎಂದೇ ಕರೆಯಬಹುದು. ಅಂದರೆ ಯಾವುದೇ ರೀತಿಯ ದೇಶೀ ಸಂಶೋಧನೆಗಳು ಈ ಕ್ಷೇತ್ರದಲ್ಲಿ ಇಲ್ಲ. ಪಶ್ಚಿಮದ ದೇಶಗಳ, ಇತ್ತೀಚಿನ ದಿನಗಳಲ್ಲಿ ಕೆಲವು ಪೂರ್ವದ ದೇಶಗಳ ತಂತ್ರಜ್ಞಾನವನ್ನು ಕೊಂಡು ಅದನ್ನು ಭಾರತದಲ್ಲಿ ಅಳವಡಿಸಿಕೊಂಡಿದ್ದೇ ಹೆಚ್ಚು. 2012ರಲ್ಲೂ ಇದೇ ಪರಿಸ್ಥಿತಿ ಮುಂದುವರಿಯಿತು. ಜೊತೆಗೆ ಪರಾವಲಂಬಿ ಸ್ಥಿತಿಯ ಅನಿವಾರ್ಯತೆಯನ್ನು ಭಾರತವೇ ಮತ್ತೊಮ್ಮೆ ತೋರಿಸಿಕೊಂಡಿತು.

ವೆಸ್ಪಾ ಪುನರಾಗಮನ
ಇಟಲಿಯ ಪ್ರಸಿದ್ಧ ಪಿಯಾಜಿಯೊ ಸಂಸ್ಥೆ ಭಾರತದಲ್ಲಿ ಸುಮಾರು 3 ದಶಕಗಳ ಕಾಲ ತನ್ನ ವೆಸ್ಪಾ ಸ್ಕೂಟರ್‌ಗಳ ಮೂಲಕ ಭಾರತದಲ್ಲಿ ನೆಲೆಯನ್ನು ಗಟ್ಟಿಗೊಳಿಸಿಕೊಂಡಿತ್ತು. 60-70ರ ದಶಕದಲ್ಲಿ ವೆಸ್ಪಾ ಸ್ಕೂಟರ್‌ಗಳನ್ನು ಹೊಂದುವುದು ಎಂದರೇ ಪ್ರತಿಷ್ಠೆಯ ವಿಚಾರ. ಅವರ ತಂತ್ರಜ್ಞಾನವನ್ನು ಕೊಂಡುಕೊಂಡು ಬಜಾಜ್ ಅದೇ ಮಾದರಿಯ ಸ್ಕೂಟರ್‌ಗಳನ್ನು ಇತ್ತೀಚಿನವರೆಗೂ ಉತ್ಪಾದಿಸುತ್ತಿತ್ತು. ಈಗಲೂ ಈ ಸ್ಕೂಟರ್‌ಗಳ ಪಳೆಯುಳಿಕೆಗಳು ರಸ್ತೆ ಮೇಲೆ ಸಂಚರಿಸುತ್ತಿವೆ! ಸ್ಕೂಟರ್ ಮೇಲಿನ ಭಾರತೀಯರ ಪ್ರೀತಿ, ಹುಚ್ಚನ್ನು ಅರಿತುಕೊಂಡ ಪಿಯಾಜಿಯೋ 2012 ರಲ್ಲಿ ಮತ್ತೆ ತನ್ನ ಸ್ಕೂಟರ್‌ಗಳನ್ನು ಭಾರತದಲ್ಲಿ ಹೊರಬಿಟ್ಟಿದ್ದೊಂದು ವಿಶೇಷ.

125 ಸಿಸಿಯ ಗಿಯರ್‌ಲೆಸ್ ಸ್ಕೂಟರ್ ಹೊರಬಂದಿತು. ವೆಸ್ಪಾ ಎಂಬ ಹೆಸರಿನ ಹಳೆಯ ಶೈಲಿಯ ಮಾನೋಗ್ರಾಂ, ಹಳೆಯ ಸ್ಕೂಟರ್ ಮಾದರಿಯ ಗಟ್ಟಿಮುಟ್ಟಾದ ಉಕ್ಕಿನ ದೇಹ ಹೊಂದಿರುವುದು ವಿಶೇಷ. ಜತೆಗೆ ತನ್ನದೇ ಶೈಲಿಯ ಮಾನೋಕಾಕ್ (ಏಕದೇಹ) ಚಾಸಿಸ್ (ಅಡಿಕಟ್ಟು) ಇರುವುದು ಈ ಸ್ಕೂಟರ್‌ನ್ನು ಬೇರೆಲ್ಲಾ ಸ್ಕೂಟರ್‌ಗಳಿಗೂ ವಿಶಿಷ್ಟವಾಗುವಂತೆ ಮಾಡಿದೆ.ಆದರೆ ಸ್ಕೂಟರ್‌ನ ಯಶಸ್ಸು ಯಾವಾಗಲೂ ಅದರ ಬೆಲೆಯ ಮೇಲೇ ನಿಂತಿದೆ. ವೆಸ್ಪಾ ಸ್ಕೂಟರ್‌ಗೆ 85 ಸಾವಿರ ರೂಪಾಯಿಗಳು. ಇಷ್ಟೊಂದು ಹಣ ಕೊಟ್ಟು ಸ್ಕೂಟರ್ ಕೊಳ್ಳುವ ಅಗತ್ಯ ನಿಜಕ್ಕೂ ಭಾರತೀಯರಿಗೆ ಇದೆಯೇ ಎಂಬ ಮುಖ್ಯ ಪ್ರಶ್ನೆ ಎದುರಾಗುತ್ತದೆ. ಅದೂ ಇದೇ ಗುಣಮಟ್ಟದ ಹೋಂಡಾ ಆಕ್ಟಿವಾ 55 ಸಾವಿರ ರೂಪಾಯಿ ಸಿಗುವಾಗ?

ಸ್ಕೂಟರ್ ಲೋಕಕ್ಕೆ ಯಮಹಾ
2012 ರ ಬಹುಮುಖ್ಯ ವಿಶೇಷ ಸ್ಕೂಟರ್ ಲೋಕಕ್ಕೆ ಯಮಹಾ ಪ್ರವೇಶ ಮಾಡಿದ್ದು. ವಿದೇಶಗಳಲ್ಲಿ ಯಮಹಾದ ಸ್ಕೂಟರ್‌ಗಳು ಇದೆಯಾದರೂ ಭಾರತದಲ್ಲಿ ಈ ಸಾಹಸವನ್ನು ಯಮಹಾ ಮಾಡಿರಲಿಲ್ಲ. ಯಮಹಾ ಸಹ 124 ಸಿಸಿಯ ರೇ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇಲ್ಲೂ ಸಹ ಹೆಸರಿನ ಕಾರ್ಡ್ ಪ್ಲೇ ಆಗುತ್ತದೆ ಎಂಬ ನಿರೀಕ್ಷೆಯೇ ಹೆಚ್ಚು. ಏಕೆಂದರೆ ಯಮಹಾ ಎಂಬ ಹೆಸರು ಮತ್ತು ಅದರ ಲೋಗೊವನ್ನು ಪ್ರೀತಿಸುವವರು ಭಾರತದಲ್ಲಿ ಸಾಕಷ್ಟಿದ್ದಾರೆ. ಜತೆಗೆ ಯಮಹಾ ಎಂದರೆ ಶಕ್ತಿ ಎನ್ನುವ ಅಭಿಪ್ರಾಯವೂ ನಮ್ಮಲ್ಲಿದೆ. ಬೆಲೆಯೂ ಪರವಾಗಿಲ್ಲ. 55 ಸಾವಿರ ರೂಪಾಯಿಗೆ ಕೈಗೆ ಸಿಗುತ್ತದೆ. ಆದರೆ ಗುಣಮಟ್ಟದ ಬಗ್ಗೆ ಆಗಲೇ ಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ. ಇದರ ವಿನ್ಯಾಸ ಹಳೆಯದೇ. ಆಗಲೇ ಬೇರೆಡೆ ಇದ್ದ ವಿನ್ಯಾಸವನ್ನೇ ಭಾರತದಲ್ಲಿ ಪರಿಚಯಿಸಲಾಗಿದೆ. ಶಕ್ತಿ ಮತ್ತು ಗುಣಮಟ್ಟ ಹೋಂಡಾ ಸ್ಕೂಟರ್‌ಗಳಿಗೆ ಹೋಲಿಸಿದಲ್ಲಿ ಅಷ್ಟೇನೂ ಉತ್ತಮ ಅಲ್ಲ.

ಹೀರೊ ಕಸರತ್ತು
ಸ್ಕೂಟರ್ ಲೋಕದಲ್ಲಿ ಅಷ್ಟಾಗಿ ಪ್ರಸಿದ್ಧವಲ್ಲದ ಹೀರೊ ತನ್ನ ಕಸರತ್ತನ್ನು ಮುಂದುವರೆಸಿದೆ. ಪ್ಲೆಷರ್ ಸ್ಕೂಟರ್ ಅಷ್ಟೇನೂ ಯಶಸ್ಸು ಪಡೆಯಲಿಲ್ಲ. ಹೀರೋ ಮಾರುಕಟ್ಟೆಯಲ್ಲಿ ನೆಲೆಯೂರಲು 2012ರಲ್ಲಿ ಮೇಸ್ಟ್ರೊ ಪರಿಚಯಿಸಿದೆ. ಗುಣಮಟ್ಟದ ದೃಷ್ಟಿಯಿಂದ ಮೇಸ್ಟ್ರೊ ಉತ್ತಮ ಸ್ಕೂಟರ್ ಎನ್ನಬಹುದು. ವಿನ್ಯಾಸವೂ ಚೆನ್ನಾಗಿದೆ. 110 ಸಿಸಿಯ ಉತ್ತಮ ಎಂಜಿನ್ ಇದೆ. ಹೋಂಡಾದ ಆ್ಯಕ್ಟಿವಾ ಹಾಗೂ ಏವಿಯೇಟರ್ ಸ್ಕೂಟರ್‌ನ ನಕಲು ಎನ್ನುವಷ್ಟರ ಮಟ್ಟಕ್ಕಿದೆ. ಇದು ಹೀರೋನ ಸ್ಕೂಟರ್ ಎನ್ನಬಹುದಾದ ವಿಶೇಷತೆಗಳೇನೂ ಈ ಸ್ಕೂಟರ್‌ನಲ್ಲಿ ಇರದೇ ಇರುವುದು ಹೀರೋ ಮತ್ತಷ್ಟು ಕಸರತ್ತು ನಡೆಸುವಂತೆ ಮಾಡಿದೆ.

ಹೊಸ ಡಿಯೊ
ಸ್ಕೂಟರ್ ಎಂದರೆ ಹೋಂಡಾ ಎನ್ನುವ ಮಾತು ಸದ್ಯಕ್ಕೆ ಭಾರತದಲ್ಲಿದೆ. ಈ ಮಾತು ಆಗಾಗ ಬದಲಾಗುತ್ತಿರುತ್ತದೆ. ಈ ಪಟ್ಟ ಮೊದಲು ವೆಸ್ಪಾಕ್ಕಿತ್ತು. ನಂತರ ಬಜಾಜ್‌ಗೆ ಹೋಗಿ, ಈಗ ಹೋಂಡಾಕ್ಕೆ ಬಂದು ನಿಂತಿದೆ. ಹೋಂಡಾ 2012 ರಲ್ಲಿ ಯಾವುದೇ ಹೊಸ ಸ್ಕೂಟರ್ ಹೊರಬಿಟ್ಟಿಲ್ಲ. ಬದಲಿಗೆ ಇರುವ ಸ್ಕೂಟರ್ ಅನ್ನೇ ಮೇಲ್ದರ್ಜೆಗೆ ಏರಿಸಿದೆ. ಡಿಯೊ ಕೊಂಚ ಮೆಕಾನಿಕಲ್ ಹಾಗೂ ಕೊಂಚ ಕಾಸ್ಮೆಟಿಕ್ ಬದಲಾವಣೆಗಳನ್ನು ಕಂಡಿದೆ. 110 ಸಿಸಿಯ ಉತ್ತಮ ಎಂಜಿನ್ ಇದೆ. ಶೇ. 15 ಮೈಲೇಜ್ ಹೆಚ್ಚಿಸಲಾಗಿದೆ ಎಂದು ಹೋಂಡಾ ಹೇಳಿದೆ. ಅದರಲ್ಲಿ ಹೆಚ್ಚುಗಾರಿಕೆ ಏನೇನೂ ಇರದು. ಏಕೆಂದರೆ ಡಿಯೋ ಫೈಬರ್ ದೇಹದ ಸ್ಕೂಟರ್. ಆ್ಯಕ್ಟಿವಾದಂತೆ ಉಕ್ಕಿನ ದೇಹ ಇಲ್ಲ.ಇವುಗಳ ಜತೆಗೆ ಸುಜುಕಿಯ ಸ್ವಿಷ್ ಹಾಗೂ ಮಹಿಂದ್ರಾದ ಡ್ಯೂರೊ ಸಹ ಗಮನ ಸೆಳೆದಿವೆ. ಮಹಿಂದ್ರಾ ಡ್ಯೂರೊ ಎಂಜಿನ್ ಸಾಮರ್ಥ್ಯವನ್ನು 125 ಸಿಸಿಗೆ ಏರಿಸಿಕೊಂಡಿದೆ. ಮಾರಾಟದ ದೃಷ್ಟಿಯಿಂದಲೂ ಉತ್ತಮ ಪ್ರಗತಿ ಕಂಡಿದೆ.

ಬೈಕ್‌ಲೋಕವೂ ಉತ್ತಮ
ಮೋಟಾರ್ ಸೈಕಲ್ ಕ್ಷೇತ್ರ ಪ್ರಗತಿ ಕಾಣದೇ ಇದ್ದರೂ ಅನೇಕ ಹೊಸ ಬೈಕ್‌ಗಳು ಬಿಡುಗಡೆ ಆದವು. ಬಜಾಜ್, ಕೆಟಿಎಂ, ಟಿವಿಎಸ್, ಹೀರೋ ಹೊಸ ಬೈಕ್ ಬಿಟ್ಟವು.

ಬಜಾಜ್ ಪ್ರಯತ್ನ
ಬಜಾಜ್‌ನ ಹೊಸ ಪಲ್ಸರ್ 200 ಎನ್‌ಎಸ್ ಬಿಡುಗಡೆ ಆದದ್ದು 2012 ರಲ್ಲೇ. ಕೆಟಿಎಂನ ಡ್ಯೂಕ್ ಅನ್ನು ಭಾರತದಲ್ಲಿ ಬಜಾಜ್ ಪರಿಚಯಿಸಿದ ಮೇಲೆ ಪ್ರಭಾವಿತಗೊಂಡು ಪಲ್ಸರ್ 200 ಎನ್‌ಎಸ್ ಬಿಡುಗಡೆ ಮಾಡಿದೆ. ಬಹುತೇಕ ಡ್ಯೂಕ್‌ನ ವಿನ್ಯಾಸ ಅಳವಡಿಕೆ ಇದೆ. ಟ್ರಿಪಲ್ ಸ್ಪಾರ್ಕ್ ಪ್ಲಗ್ ಪರಿಚಯ ಮೊದಲು ಎಂದು ಹೇಳಿಕೊಂಡಿದೆ. ಇದರಿಂದ ಮೈಲೇಜ್ ಹಾಗೂ ಶಕ್ತಿ ಹೆಚ್ಚಳ ಆಗಲಿದೆ ಎಂಬುವುದು ವಾದ. ಆದರೆ ಸ್ಪೋರ್ಟ್ಸ್ ಬೈಕ್ ಕೊಳ್ಳುವವರಿಗೆ ಮೈಲೇಜ್ ಸಮಸ್ಯೆ ಅಲ್ಲ. 1 ಲಕ್ಷ ರೂಪಾಯಿಗೆ ಈ ಬೈಕ್ ಸಿಗುತ್ತದೆ. ಅದೇ ಇದರ ವಿಶೇಷ. ಉತ್ತಮ ಆಯ್ಕೆ ಎಂದು ಇದನ್ನು ಕರೆಯಬಹುದು.

ಕೆಟಿಎಂ ಡ್ಯೂಕ್
2012 ರ ಜನವರಿಯಲ್ಲೇ ಕೆಟಿಎಂನ ಡ್ಯೂಕ್ ಬಿಡುಗಡೆ ಆಗಿದ್ದು, ಭಾರತದ ಮೈಲುಗಲ್ಲು ಎನ್ನಬಹುದು. ಏಕೆಂದರೆ ಇದು ಪರಿಪೂರ್ಣ ಆಫ್ ರೋಡ್ ಸ್ಪೋರ್ಟ್ಸ್ ಬೈಕ್. ಎತ್ತರದ ನಿಲುವು, 200 ಸಿಸಿಯ ಶಕ್ತಿಯ ಸಮ್ಮಿಶ್ರಣ ಇದು. ಬೆಲೆ 1.30 ಲಕ್ಷ ರೂಪಾಯಿಗಳು. ರೂಪ, ವಿನ್ಯಾಸಗಳೂ ಅನನ್ಯವಾಗೇ ಇವೆ. ಮೊದಲ ನೋಟಕ್ಕೆ ಪ್ರೀತಿಯಾಗುವ ಚರಿಷ್ಮಾ ಇದೆ.

ಹಯಾತೆ ಮತ್ತು ಫೀನಿಕ್ಸ್
ಸುಜುಕಿಯ ಹಯಾತೆ ಹಾಗೂ ಟಿವಿಎಸ್‌ನ ಫೀನಿಕ್ಸ್ ಸಾಧಾರಣ ಗುಣಮಟ್ಟದ ಬೈಕ್‌ಗಳು. ಎಕಾನಮಿ ಅಥವಾ ಎಕ್ಸಿಕ್ಯುಟಿವ್ ಕ್ಷೇತ್ರಕ್ಕೆ ಸೇರುವ ಈ ಬೈಕ್‌ಗಳನ್ನು ಈ ಕ್ಷೇತ್ರಗಳ ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದಲೇ ತಯಾರಿಸಲಾಗಿದೆ. ಆದರೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಸಾಬೀತಾದ ಬೈಕ್‌ಗಳನ್ನು ಬಿಟ್ಟು ಭಾರತೀಯ ಗ್ರಾಹಕ ಹೊಸ ಬೈಕ್ ಪ್ರಯೋಗಿಸುವುದರ ಬಗ್ಗೆ ಅನುಮಾನಗಳಿವೆ. ಅಂತೆಯೇ ಹೋಂಡಾದ ಡ್ರೀಮ್ ಯುಗ ಸಹ. ಟಿವಿಎಸ್‌ನ ಅಪಾಚೆ ಆರ್‌ಟಿಆರ್‌ನ ಹೊಸ ಅವತರಣಿಕೆಯೂ ಯಾವುದೇ ಸಂಚಲನವನ್ನು ಬೈಕ್ ಕ್ಷೇತ್ರದಲ್ಲಿ ಮೂಡಿಸಿಲ್ಲ. ಬದಲಿಗೆ ಗ್ರಾಹಕನಿಗೆ ಹೊಸ ಆಯ್ಕೆಗಳು ಸಿಕ್ಕಿವೆ ಎನ್ನಬಹುದಷ್ಟೇ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT