ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ಬೆಳಕಿಗೆ ಮೈಯೊಡ್ಡಿ...

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹೊಳಪಿನ ಮೈಬಣ್ಣವನ್ನು ಬೆಳಕಿನಲ್ಲಿ ತೆರೆದಿಡಲು ಇಷ್ಟಪಡುವ ಲವ್ಲೀನ್ ಮುಚ್ಚಿಡುವ ಮಡಿವಂತಿಕೆಯ ಹುಡುಗಿಯಲ್ಲ. ಬಿಚ್ಚುಮನಸ್ಸಿನ ಮಾತಿನಂತೆಯೇ ಅವಳ ವ್ಯಕ್ತಿತ್ವ. ತುಂಡು ಉಡುಗೆ ತೊಟ್ಟರೂ ತಾನು ಕೆಟ್ಟದಾಗಿ ಕಾಣಿಸುವುದಿಲ್ಲ ಎನ್ನುವ ವಿಶ್ವಾಸವೂ ಇದೆ.

32-26-34 ಎಂದು ತನ್ನ ಮೈಮಾಟದ ಮುನ್ನುಡಿಗೆ ಕಿಲಕಿಲ ನಗೆಯ ಸಿಹಿ ಲೇಪ ಕೊಡುವ ಬೆಳದಿಂಗಳ ಬಾಲೆ ಇವಳು. ಐದಡಿ ಆರು ಅಂಗುಲ ಎತ್ತರ ಇರುವ ಕಾರಣ ರ‌್ಯಾಂಪ್‌ನಲ್ಲಿ ಕಟ್ಟಿದ್ದಾಳೆ ಯಶಸ್ಸಿನ ತೋರಣ. `ಬೋಲ್ಡ್ ಆ್ಯಂಡ್ ಬ್ಯೂಟಿಫುಲ್~ ಎಂದು ತನ್ನ ಬೆನ್ನು ತಾನೆ ತಟ್ಟಿಕೊಳ್ಳುವ ಲವ್ಲೀನ್ ಮಾತುಗಳಲ್ಲಿ ಅಲ್ಪವಿರಾಮ-ಪೂರ್ಣ ವಿರಾಮ ಹುಡುಕುವುದೇ ಕಷ್ಟ. `ನಿಮ್ಮ ಬಗ್ಗೆ ಹೇಳಿ~ ಎಂದು ಕೇಳಿದರೆ ಸಾಕು ದೇಹದ ಏರಿಳಿತದ ಅಳತೆಯಿಂದ ಆರಂಭಿಸಿ, ಅನುಭವಗಳ ಮಾತಿನ ಸುರುಳಿಯನ್ನೇ ಉರುಳಿಸುತ್ತಾಳೆ.

ಅರಳು ಹುರಿದಂತೆ ಮಾತನಾಡುವುದು ಹೇಗೆಂದು ಇವಳನ್ನು ನೋಡಿದರೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಗ್ಲಾಮರ್ ಲೋಕದಲ್ಲಿ ತನ್ನ ಜೊತೆ ಎಲ್ಲೆ ಮೀರಿ ನಡೆದುಕೊಳ್ಳುವ ಜನರು ಇನ್ನೊಮ್ಮೆ ಕೆಣಕುವುದೇ ಬೇಡವೆಂದು ನಿರ್ಧರಿಸುವಂತೆ ಮಾಡುವ ಗಟ್ಟಿಗಾತಿ. ಮುಗ್ಧ ಮುಖ ನೋಡಿ; ಏನೂ ಅರಿಯದ ಹುಡುಗಿ ಎಂದುಕೊಂಡು ಕೀಟಲೆ ಮಾಡಿದರೆ ಮುಗಿಯಿತು ಕಥೆ!

ಸ್ವಲ್ಪ ಚಂಚಲ ಮನಸ್ಸು. ಇನ್ನೂ ಏನು ಮಾಡಬೇಕೆಂದು ನಿರ್ಧಾರ ಮಾಡಿಲ್ಲ. ಆದರೆ ಕಷ್ಟಪಟ್ಟು ಯೋಚಿಸಿ `ಸೀರಿಯಲ್ ಇಲ್ಲವೆ ಸಿನಿಮಾ ಓಕೆ~ ಎಂದು ಹೇಳುವಾಗಲೂ ಮನದ ಗೂಡಿನೊಳಗೆ ಗೊಂದಲ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಮಾಡೆಲಿಂಗ್ ಕ್ಷೇತ್ರದಲ್ಲಿನ ಆಯ್ಕೆಗಳ ಪಟ್ಟಿ ಮಾಡುವಾಗ ಗಟ್ಟಿಧ್ವನಿಯಲ್ಲಿ `ಗ್ಲಾಮರ್, ರ‌್ಯಾಂಪ್ ಶೋ, ಜಾಹೀರಾತು~ ಎನ್ನುತ್ತಾಳೆ.

ಸಂಗೀತ ಕಲಿತಿರುವ ಕಾರಣ ಬ್ರೆಟ್ನಿ ಸ್ಪಿಯರ್ ರೀತಿಯಲ್ಲಿ ತನ್ನದೇ ಸಂಗೀತದ ಆಲ್ಬಂ ಮಾಡುವ ಕನಸು. ಬಿಡುವು ಸಿಕ್ಕರೆ ಐಪಾಡ್ ಹಿಡಿದು ಕಿವಿಗೆ ನಳಿಕೆ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ, ಗುನುಗುವುದು ಹವ್ಯಾಸ. ಕಂಗ್ಲೀಷ್, ಇಂಗ್ಲೀಷ್, ತಂಗ್ಲೀಷ್ ಹಾಡುಗಳು ಜನಪ್ರಿಯ ಆಗುತ್ತಿರುವ ಈ ಕಾಲದಲ್ಲಿ ಅಂಥ ಹಾಡುಗಳು ತನ್ನ ಕಂಠದಿಂದಲೂ ಹೊಮ್ಮಬೇಕು ಎನ್ನುವ ಯೋಚನೆ.

ಪ್ರಯೋಗಾರ್ಥವಾಗಿ ನಾಲ್ಕಾರು ಮಿಶ್ರಭಾಷಾ ಗೀತೆಗಳ ಗಾಯಕಿಯೂ ಆಗಿರುವ ಲವ್ಲೀನ್ ಭವಿಷ್ಯವನ್ನು ಸಂಗೀತದಲ್ಲಿ ಅರಸುತ್ತಿರುವುದು ಸ್ಪಷ್ಟ. ವಯಸ್ಸು ಇರುವವರೆಗೆ ಮಾತ್ರ ರ‌್ಯಾಂಪ್ ಕೈಬೀಸಿ ಕರೆಯುತ್ತದೆ, ಆನಂತರ ಕೊಡವಿ ಬದಿಗೆ ಬೀಸಾಡುತ್ತದೆ ಎನ್ನುವ ಕಟುಸತ್ಯವನ್ನು ಈಗಲೇ ಅರ್ಥಮಾಡಿಕೊಂಡಿದ್ದಾಳೆ. ಆದ್ದರಿಂದ ಗ್ಲಾಮರ್ ಜಗತ್ತಿನಲ್ಲಿ ಹೊಳೆಯುವ ಪ್ರಾಯ ಇರುವಾಗಲೇ ಇನ್ನೊಂದು ಗಟ್ಟಿ ನೆಲವನ್ನು ಹುಡುಕಿಟ್ಟುಕೊಳ್ಳಬೇಕೆಂದು ಮಹಾ ಚಿಂತಕಿಯಂತೆ ಹೇಳಿ ಅಚ್ಚರಿ ಮೂಡಿಸುತ್ತಾಳೆ ಬಳ್ಳಿಯಂತೆ ಬಳಕುವ ಮೈಮಾಟದ ಬೆಡಗಿ.

`ಸ್ವಲ್ಪ ಕನ್ಫೂಸ್ಡ್~ ಎಂದು ತನ್ನ ವ್ಯಕ್ತಿತ್ವವನ್ನು ವಿವರಿಸುವ ಇಪ್ಪತ್ತರಂಚಿನ ಬಾಲೆಗೆ ನಾಲ್ಕು ಗುರಿ. ಒಳ್ಳೆಯ ಕೆಲಸಕ್ಕೆ ಸೇರಬೇಕು, ಗಾಯಕಿ ಆಗಬೇಕು, ಕಿರುತೆರೆ-ಸಿನಿಮಾ ನಟಿಯಾಗಬೇಕು, ರೂಪದರ್ಶಿಯಾಗಿಯೇ ಮುಂದುವರಿಯಬೇಕು! ಹೀಗೆ ಕವಲು ದಾರಿಗಳ ಎದುರು ನಿಂತಿದ್ದಾಳೆ. ಬೇಗ ಸ್ಪಷ್ಟವಾದ ಒಂದು ಮಾರ್ಗ ಹಿಡಿದು ನಡೆಯುವ ವಿಶ್ವಾಸಕ್ಕಂತೂ ಕೊರತೆ ಇಲ್ಲ. ತಾನು ಅಂದಗಾತಿ ಎಂದು ಅಹಂ ಬೆಳೆಸಿಕೊಳ್ಳದ ಲವ್ಲೀನ್‌ಗೆ ಒಳ್ಳೆಯ ತನದಿಂದ ಹತ್ತಿರ ಬರುವ ಜನರನ್ನು ಗೌರವಿಸುವುದೂ ಗೊತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT