ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ಲೋಕದಲಿ ಗೆಲುವಿನ ನಿರೀಕ್ಷೆ

Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ರಂಗಭೂಮಿ ಕಲಾವಿದರನ್ನೇ ಬಳಸಿಕೊಂಡು ರಾಮರಾವ್ ಪುಟಾಣೆ ನಿರ್ದೇಶಿಸಿರುವ `ಈ ಬಣ್ಣ ಲೋಕದಲಿ' ಈ ವಾರ ತೆರೆಕಾಣುತ್ತಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಮೇಶ್ ಭಟ್ ಪ್ರಕಾರ ಇದು ಮಾನವೀಯ ಗುಣಗಳನ್ನು ಎತ್ತಿಹಿಡಿಯುವ ಭಾವಗಳ ಮಿಶ್ರಣದ ಚಿತ್ರ. ನಾಟಕಗಳಲ್ಲಿ ಅಭಿನಯಿಸುವ ಕಲಾವಿದರು ಪ್ರೇಕ್ಷಕನನ್ನು ರಂಜಿಸುತ್ತಾರೆ.

ಆದರೆ ಬಣ್ಣ ಕಳಚಿದ ಬಳಿಕದ ಅವರ ಬದುಕಿನ ಅವಸ್ಥೆ ಹೇಗಿರುತ್ತದೆ ಎನ್ನುವುದು ಹೊರ ಲೋಕಕ್ಕೆ ತಿಳಿಯದ ಸಂಗತಿ. ಅದನ್ನು ನವಿರು ಹಾಸ್ಯದ ಮೂಲಕ ತೆರೆದಿಡುವುದು ಈ ಸಿನಿಮಾ ಪ್ರಯತ್ನ ಎನ್ನುವುದು ಚಿತ್ರತಂಡದ ಹೇಳಿಕೆ.

ತಾರಾ ಕಲಾವಿದರಿಲ್ಲದಿರಬಹುದು, ಸಿನಿಮಾಕ್ಕೆ ನ್ಯಾಯ ಒದಗಿಸಬಲ್ಲ ಅಭಿನಯ ಸಾಮರ್ಥ್ಯವುಳ್ಳ ನಟರಿದ್ದಾರೆ ಎಂಬ ಸಂತಸ ರಮೇಶ್ ಭಟ್ ಅವರದು. ಚಿತ್ರದಲ್ಲಿ ಅವರು ನಾಟಕದ ಮೇಷ್ಟ್ರು.

ನಗಿಸುತ್ತಲೇ ಕಲಾವಿದರ ನೋವಿನ ಬದುಕನ್ನು ಚಿತ್ರಿಸುವುದು ನಿರ್ದೇಶಕ ರಾಮ್‌ರಾವ್ ಪುಟಾಣೆ ಅವರ ಉದ್ದೇಶ. ಮೂಲತಃ ರಂಗಭೂಮಿಯಿಂದ ಬಂದಿದ್ದರಿಂದ ಅವರಿಗೆ ಅದರ ಒಳನೋಟಗಳ ಅರಿವಿದೆ.

ಹಿರಿಯ ನಟರ ಜೊತೆ ರಂಗಭೂಮಿಯ ಅನೇಕ ಹೊಸ ಕಲಾವಿದರೂ ಈ ಚಿತ್ರದ ಮೂಲಕ ಬೆಳ್ಳಿತೆರೆಯನ್ನು ಪ್ರವೇಶಿಸಿದ್ದಾರೆ. ಖಚಿತ್‌ವಂಶಿ ಅವರಲ್ಲೊಬ್ಬರು. ಅವರು ನಟಿ ರೇಖಾದಾಸ್ ಕೆನ್ನೆಗೆ ಮುತ್ತಿಡುವ ದೃಶ್ಯವೊಂದು ಚಿತ್ರದಲ್ಲಿದೆ. ರೇಖಾದಾಸ್ ಎದುರು ನಿಂತಾಗ ಖಚಿತ್‌ವಂಶಿ ತುಂಬಾ ಭಯಪಟ್ಟಿದ್ದರಂತೆ.

ಅದರ ಪರಿಣಾಮವೇ ಒಂದು  ಬಾರಿ ಮುತ್ತಿಡುವ ದೃಶ್ಯಕ್ಕೆ ಎಂಟು ಸಲ ರೀಟೇಕ್ ತೆಗೆದುಕೊಂಡದ್ದು! 300ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿರುವ ವಂಶಿ ಪಾತ್ರಕ್ಕೆ ಎರಡು ಛಾಯೆಗಳಿವೆ. ಪೆದ್ದ ಹುಡುಗನಾಗಿ ಕಾಣಿಸಿಕೊಳ್ಳುವ ಅವರು, ನಂತರ ನಾಟಕದಲ್ಲಿ ರಾಮನ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಾರಂತೆ.

ನಟ ರಮೇಶ್ ಪಂಡಿತ್ ನೆಗೆಟಿವ್ ಛಾಯೆಯ ಪಾತ್ರದಲ್ಲಿ ನಟಿಸಿದ್ದಾರೆ. ಕಥಾವಸ್ತುವೇ ಚಿತ್ರದ ಪ್ರಮುಖ ಆಕರ್ಷಣೆ ಎನ್ನುವುದು ಅವರ ಅಭಿಪ್ರಾಯ.

ಈ ಚಿತ್ರದಿಂದ ಗಳಿಸುವ ಎಲ್ಲಾ ಲಾಭವನ್ನೂ ಅಶಕ್ತ ಕಲಾವಿದರ ನೆರವಿಗೆ ಬಳಸುವುದಾಗಿ ನಿರ್ಮಾಪಕ ನರಸಿಂಹ ಮೂರ್ತಿ ಘೋಷಿಸಿದರು. ನಟಿ ಉದಯಶ್ರೀ, ನಟರಾದ ರಾಜೇಶ್ ಕಶ್ಯಪ್, ರಾಜಶೇಖರಮೂರ್ತಿ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT