ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದಲ್ಲಿ ಮಿಂದೆದ್ದ ಜನತೆ

Last Updated 21 ಮಾರ್ಚ್ 2011, 8:35 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಾದ್ಯಂತ ಭಾನುವಾರ ಸಂಭ್ರಮ- ಸಡಗರದಿಂದ ಸಾರ್ವಜನಿಕರು ಹೋಳಿ ಆಚರಿಸಿದರು. ಪ್ರಾಚೀನ ಸಂಪ್ರದಾಯದಂತೆ ಶನಿವಾರ ರಾತ್ರಿ ಕಾಮನನ್ನು ದಹಿಸಿ ಭಾನುವಾರ ಬಣ್ಣದಾಟ ಆಡಿ ನಂತರ ಸಾವಿರಾರು ಜನರು ನಗರದ ಟ್ಯಾಗೋರ ಕಡಲತೀರದಲ್ಲಿ ಸಮುದ್ರ ಸ್ನಾನ ಮಾಡಿದರು. ಓಕುಳಿ ಆಟದಂಗವಾಗಿ ಬೆಳಿಗ್ಗೆಯಿಂದಲೇ ಜನರು ಬಣ್ಣ ಪ್ಯಾಕೆಟು, ಪಿಚಕಾರಿ ಹಿಡಿದುಕೊಂಡು ಬೀದಿಗಳಲ್ಲಿ ಸಂಚರಿಸಿ ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಶುಭಾಶಯ ವಿನಿಮಯ ಮಾಡಿಕೊಂಡರು.
 
ಕೆಲವರು ಗುಂಪು ಕಟ್ಟಿಕೊಂಡು ಕೇಕೇ ಹಾಕುತ್ತ ಸಾಗುತ್ತಿದ್ದರೆ, ಮತ್ತೆ ಕೆಲವರು ಚೂರುತ್ತ ವೇಗವಾಗಿ ವಾಹನಗಳನ್ನು ಓಡಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಒಂದೊಂದು ಬೈಕ್‌ನಲ್ಲಿ ಮೂವರು ಸವಾರರು ಹೋಗುತ್ತಿದ್ದರೂ ಪೊಲೀಸರು ಯಾವುದೇ ರೀತಿಯ ತೊಂದರೆ ಕೊಡಲಿಲ್ಲ. ಗ್ರೀನ್ ಸ್ಟ್ರೀಟ್, ಕಾರವಾರ -ಕೋಡಿಬಾಗ್ ಮುಖ್ಯ ರಸ್ತೆ, ಹಬ್ಬುವಾರ ರಸ್ತೆಯಿಂದ ಗುಂಪುಕಟ್ಟಿಕೊಂಡು ಬಣ್ಣದಾಟ ಆಡುತ್ತ ಬಂದ ಯುವಕರ ದಂಡು ನಗರವನ್ನೆಲ್ಲ ಸುತ್ತಿ ಕಡಲದಂಡೆಯತ್ತ ಪಯಣ ಬೆಳೆಸಿದರು. ರಸ್ತೆಯ ಬದಿಯಲ್ಲಿ ಮನೆಯವರು ಬಕೆಟ್‌ಗಳಲ್ಲಿ ಬಣ್ಣದ ನೀರು ತುಂಬಿ ರಸ್ತೆಯ ಮೇಲೆ ಹೋಗುತ್ತಿದ್ದವರ ಮೇಲೆ ಎಸೆಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಬಣ್ಣವನ್ನು ಎರಚುತ್ತ ಹಿಂಡುಹಿಂಡಾಗಿ ಬಂದ ಬಂದ ಜನರ ಗುಂಪು ಮಧ್ಯಾಹ್ನದ ಹೊತ್ತಿಗೆ ಟ್ಯಾಗೋರ ಕಡಲತೀರದಲ್ಲಿ ಸೇರಿದ್ದರಿಂದ ಅಲ್ಲಿ ಜಾತ್ರೆಯ ವಾತಾವರಣವೇ ನಿರ್ಮಾಣವಾಗಿತ್ತು. ಮಕ್ಕಳು-ವೃದ್ಧರು ಎನ್ನದೇ ಎಲ್ಲರೂ ಸಮುದ್ರ ಸ್ನಾನ ಮಾಡಿದರು. ನೀರಿನಾಟದಲ್ಲಿ ತೊಡಗಿದ್ದ ಯುವಕರ ಉತ್ಸಾಹ ಎಷ್ಟಿತ್ತೆಂದರೆ ನೀರಿನಲ್ಲಿ ಪಿರಾಮಿಡ್‌ಗಳನ್ನು ಮಾಡಿ ಆನಂದಪಟ್ಟರು.

ಸೂಪರ್ ಮೂನ್‌ನಿಂದ ಸಮುದ್ರದ ನೀರು ಏರುತ್ತದೆ. ಸುನಾಮಿ ಬರುವ ಸಾಧ್ಯತೆ ಇರುತ್ತದೆ ಎಂದು ಜ್ಯೋತಿಷಿಗಳು ಹೇಳಿದ ಭವಿಷ್ಯ ಸುಳ್ಳಾಯಿತು. ಜನ ಇದ್ಯಾವುದನ್ನೂ ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ಕಡಲತೀರದಲ್ಲಿ ಸೇರಿ ಸ್ನಾನ ಮಾಡಿ ಮನೆಗೆ ಮರಳಿದರು. ಹೋಳಿ ಹಬ್ಬದ ನಿಮಿತ್ತ ವ್ಯಾಪಾರಸ್ಥರು ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರಿಂದ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಹೋಳಿ ಆಚರಣೆ ಭಾನುವಾರ ಬಂದಿದ್ದರಿಂದ ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿಯವ ಸಂಭ್ರಮದಲ್ಲಿ ಪಾಲ್ಗೊಂಡರು.

ಕಾರವಾರದಿಂದ ಹೊರ ರಾಜ್ಯ, ಜಿಲ್ಲೆ ಹಾಗೂ ಗ್ರಾಮಾಂತರ ಪ್ರದೇಶಕ್ಕೆ ಸಂಚರಿಸುವ ಬಸ್‌ಗಳು ನಿರಾಂತಕವಾಗಿ ಸಾಗಿದವು. ಮಾರುಕಟ್ಟೆಯಲ್ಲಿ ಗ್ರಾಹಕರೇ ಇಲ್ಲದಿರುವುದರಿಂದ ಹಳ್ಳಿಗಳಿಂದ ತರಕಾರಿ ಮಾರಲು ಬಂದವರು ವ್ಯಾಪಾರದಲ್ಲಿ ನಷ್ಟ ಅನುಭವಿಸಬೇಕಾಯಿತು. ಗೊತ್ತಿಲ್ಲದೆ ಬಂದರು: ಭಾನುವಾರ ಓಕುಳಿ ಆಚರಣೆ ಇರುವ ಹಿನ್ನೆಲೆಯಲ್ಲಿ ಶನಿವಾರವೇ ವಾರದ ಸಂತೆ ನಡೆದಿತ್ತು. ಆದರೆ ಕೆಲವು ವ್ಯಾಪಾರಸ್ಥರಿಗೆ ಇದು ಗೊತ್ತಿರದೆ ಲೋಡ್‌ಗಟ್ಟೆಲೆ ಟೊಮೆಟೊ, ಈರುಳ್ಳಿ ಹಾಗೂ ತರಕಾರಿಗಳನ್ನು ತಂದು ತಲೆಮೇಲೆ ಕೈಯಿಟ್ಟು ಕುಳಿತುಕೊಂಡಿದ್ದರು.

ಸಂತೆ ಇಲ್ಲದೇ ಇರುವ ವಿಷಯ ತಿಳಿದು ಬೇಸರಗೊಂಡ ವ್ಯಾಪಾರಸ್ಥರು ಬಣ್ಣದಾಟದ ಆಚರಣೆ ಮುಗಿದ ನಂತರವಾದರೂ ಅಲ್ಪಸ್ವಲ್ಪ ತರಕಾರಿಗಳನ್ನು ಮಾರಾಟ ಮಾಡಿ ಸೋಮವಾರ ಅವರ್ಸಾ ಸಂತೆಗೆ ಹೋದರಾಯಿತು ಎಂದು ಸಮಾಧಾನಪಟ್ಟುಕೊಂಡರು. 8 ಟೊಮೆಟೊ ಒಂದು ಲೋಡ್ ಈರುಳ್ಳಿ ಮಾರಾಟವಾಗದೆ ಉಳಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT