ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತ ಕೊಯ್ಲಿಗೆ ಕೊಂಚ ಬಿಡುವು ನೀಡಿದ ವರುಣ

Last Updated 13 ಜೂನ್ 2011, 8:20 IST
ಅಕ್ಷರ ಗಾತ್ರ

ತುಮರಿ: ಹತ್ತು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕರೂರು ಮತ್ತು ಬಾರಂಗಿ ಅವಳಿ ಹೋಬಳಿಯಲ್ಲಿ ಬತ್ತ ಬೆಳೆದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಭಾನುವಾರ ಕೊಂಚ ಮಳೆ ಬಿಡುವು ನೀಡಿದ್ದರಿಂದ ಗದ್ದೆ ಕೊಯ್ಲಿನ ಪ್ರಕ್ರಿಯೆಯಲ್ಲಿ ನಿರತರಾಗಿದ್ದರು.

ಅವಳಿ ಹೋಬಳಿಗಳಲ್ಲಿ ಬಹುತೇಕ ಗದ್ದೆಗಳು ಜೂನ್ ತಿಂಗಳ ಮೊದಲ ವಾರದಲ್ಲಿ ಕೊಯ್ಲಿಗೆ ಬರಬಹುದು ಎಂದು ನಂಬಿದ್ದ ರೈತರು ವರ್ಷದಂತೆ ಮಳೆಗಾಲ ತಡವಾಗಿ ಆರಂಭವಾಗಬಹುದು ಎಂದು ನಿರೀಕ್ಷೆಯಲ್ಲಿದ್ದರು.

ಆದರೆ, ಜೂನ್ ಮೊದಲ ವಾರದಲ್ಲೇ ಆರಂಭವಾದ ಮಳೆ  ಕೊಂಚವೂ ಬಿಡುವು ನೀಡದಿರುವುದು ರೈತರನ್ನು ನ್ದ್ದಿದೆ ಕೆಡಿಸಿದೆ. ಏಕಾಏಕಿ ಸುರಿದ ಮಳೆ ಕಡಿಮೆಯಾಗುವ ಲಕ್ಷಣ ಗೋಚರಿಸುತ್ತಿಲ್ಲವಾದ್ದರಿಂದ ಬೆಳೆದ ಬೆಳೆಯನ್ನು ಕೊಯ್ಲು ಮಾಡುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡಿದೆ. ಬಹುತೇಕ ರೈತರದು ಇದೆ ಕತೆಯಾದ್ದರಿಂದ ಕೆಲಸದ ಆಳುಗಳ ಕೊರತೆಯೂ ಸೃಷ್ಟಿಯಾಗಿದೆ.

ಕೊಯ್ಲು ಮಾಡಿದ ಬತ್ತದ ಬೆಳೆಯನ್ನು ಒಕ್ಕಲು ಮಾಡುವುದು, ವಿಂಗಡಿಸುವುದು, ಒಣಗಿಸುವುದು, ಸಂಗ್ರಹಿಸುವುದು ಹೇಗೆ ಎಂಬುದು ರೈತರನ್ನು ಚಿಂತೆಗೆ ತಳ್ಳಿದೆ. ಕೆಲವು ರೈತರು ಬತ್ತದ ಗದ್ದೆಗಳಲ್ಲೇ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಿಕೊಂಡು ಒಕ್ಕಲು ಪ್ರಕ್ರಿಯೆ ಆರಂಭಿಸಿದ್ದರೂ ಒಂದಕ್ಕೆ ದುಪ್ಪಟ್ಟು ಶ್ರಮ ಅನಿವಾರ್ಯವೇ ಆಗಿದೆ.

ಈ ನಡುವೆ ಅವಳಿ ಹೋಬಳಿಗಳಲ್ಲಿ ಹೆಚ್ಚಿನ ಜನ ರೈತರು ಲಿಂಗನಮಕ್ಕಿ ಜಲಾಶಯದ ಹಿನ್ನೀರು ಬೇಸಿಗೆಯಲ್ಲಿ ಇಳಿಯುತ್ತಿದ್ದಂತೆ ಆ ಗದ್ದೆಗಳಲ್ಲಿ ಎರಡನೆಯ ಬೆಳೆ ಬೆಳೆದಿದ್ದಾರೆ. `ಕಾರುಗದ್ದೆ~ `ಮುಳುಗಡೆ ಗದ್ದೆ~ ಎಂದು ಕರೆಯುವ ಈ ಗದ್ದೆಗಳಲ್ಲಿ ಬತ್ತ ಬೆಳೆದ ರೈತರದ್ದು ಇನ್ನೊಂದು ಕತೆ. ಇದೇ ರೀತಿ ಮಳೆ ಸುರಿದರೆ ಜಲಾಶಯದ ನೀರಿನಮಟ್ಟ ಹೆಚ್ಚಿ ವಾರದೊಳಗೆ ಇಡೀ ಬೆಳೆಯೇ ಮುಳುಗಿ ಹೋಗುತ್ತದೆ ಎಂಬ ಆತಂಕ ಅವರನ್ನು ಕಂಗಾಲಾಗಿಸಿದೆ.

ಭಾನುವಾರ ಮಳೆ ಕಡಿಮೆಯಾಗಿ ಬಿಸಿಲು ಮೂಡಿದ್ದರಿಂದ ಹೋಬಳಿಯ ಬಹುತೇಕ ಗದ್ದೆಗಳಲ್ಲಿ ಕೊಯ್ಲಿನ ಪ್ರಕ್ರಿಯೆ ಬಿರುಸಾಗೇ ಸಾಗಿತ್ತು. ಆದರೆ, ವಾರದ ಗಡುವಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಸಂಜೆ ಮತ್ತೆ ಭಾರಿ ಮಳೆ ಸುರಿದ್ದದ್ದು ನಿರಾಶೆ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT