ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ

Last Updated 18 ಜೂನ್ 2011, 6:20 IST
ಅಕ್ಷರ ಗಾತ್ರ

ಕಂಪ್ಲಿ: ಬಳ್ಳಾರಿ ಜಿಲ್ಲೆ ವಿವಿಧೆಡೆ ಬತ್ತ ಬೆಂಬಲ ಬೆಲೆ ಖರೀದಿ ಕೇಂದ್ರ ಶೀಘ್ರ ಆರಂಭಿಸಬೇಕು ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಉಪಾಧ್ಯಕ್ಷ ಚಲ್ಲಾ ವೆಂಕಟನಾಯ್ಡು ಆಗ್ರಹಿಸಿದರು.

 ತುಂಗಭದ್ರಾ ಬಲದಂಡೆ ಕೆಳಮಟ್ಟ, ತುಂಗಭದ್ರಾ ನದಿ ಮತ್ತು ವಿಜಯನಗರ ಕಾಲುವೆ ವ್ಯಾಪ್ತಿಯ ಸುಮಾರು 1.5 ಲಕ್ಷ ಎಕರೆ ಪ್ರದೇಶದಲ್ಲಿ ಬೇಸಿಗೆ ಹಂಗಾಮಿನಲ್ಲಿ ಬೆಳೆದ ಬತ್ತಕ್ಕೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಿ ಜಿಲ್ಲೆಯಲ್ಲಿ ಶೀಘ್ರ ಬತ್ತ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ನಾಲ್ಕು ಬಾರಿ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕಡೆಗಣಿಸಲಾಗಿದೆ ಎಂದು ಶುಕ್ರವಾರ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದೂರಿದರು.

ಬತ್ತ ಖರೀದಿ ಕೇಂದ್ರ ನಿರೀಕ್ಷೆಯಲ್ಲಿದ್ದ ಸಾವಿರಾರು ರೈತರಲ್ಲಿ ಈಗಾಗಲೇ ಶೇ.60ರಷ್ಟು ರೈತರು ದಲಾಲರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಿದ್ದಾರೆ. ಇನ್ನು ಶೇ.40ರಷ್ಟು ರೈತರು ಮಾರುಕಟ್ಟೆಯಲ್ಲಿ ಸೂಕ್ತ ದರ ಲಭಿಸದೆ ದಾಸ್ತಾನು ಮಾಡಿದ್ದಾರೆ. ಈ ಮಧ್ಯೆ ವಿಜಯನಗರ ಕಾಲುವೆ ವ್ಯಾಪ್ತಿಯಲ್ಲಿ ಹಿಂಗಾರು ಬತ್ತ ಕಟಾವು ಭರದಿಂದ ನಡೆದಿದೆ. ಅಧಿಕಾರಿಗಳು ಈ ಬಗ್ಗೆ ಕೂಲಂಕಷವಾಗಿ ಆವಲೋಕಿಸಿ ಬತ್ತ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿದರು.

ಈಗಾಗಲೇ ರಾಯಚೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಬತ್ತ ಖರೀದಿ ಕೇಂದ್ರ ಆರಂಭಿಸಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಆರಂಭಿಸದೆ ಮಲತಾಯಿ ಧೋರಣೆ ಅನುಸರಿಸಲಾಗಿದೆ. ಕೂಡಲೇ ಎಚ್ಚೆತ್ತು ಖರೀದಿ ಕೇಂದ್ರ ಆರಂಭಿಸದಿದ್ದಲ್ಲಿ ತಮ್ಮ ಸಂಘ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು.

50ಕೆ.ಜಿ ಡಿಎಪಿ ರಸಗೊಬ್ಬರ ಬೆಲೆ ಜನವರಿಯಲ್ಲಿ ರೂ. 564 ಇದ್ದರೆ, ಮೇನಲ್ಲಿ ಏಕಾಏಕಿ 630ಕ್ಕೆ ಹೆಚ್ಚಿದೆ. ಅದೇ ರೀತಿ ಕಾಂಪ್ಲೆಕ್ಸ್ (10-26) ರೂ. 466 ಇದ್ದ ಬೆಲೆ ಇದೀಗ ರೂ. 567 ಆಗಿದೆ. ಕಾಂಪ್ಲೆಕ್ಸ್(20-20) ರೂ. 377 ಇದ್ದ ಬೆಲೆ ಇದೀಗ ರೂ. 525, ಪೊಟ್ಯಾಶ್ ರೂ. 232 ಇದ್ದ ಬೆಲೆ ಇದೀಗ ರೂ. 330, ಯೂರಿಯಾ ರೂ. 278 ಇದ್ದ ಬೆಲೆ ಹಾಲಿ ರೂ. 282, ಕಾಂಪ್ಲೆಕ್ಸ್(12-32-16) ರೂ. 445 ಇದ್ದ ಬೆಲೆ ಈಗ ರೂ. 588ಕ್ಕೆ ಮಾರಾಟವಾಗುತ್ತಿದೆ. ಈ ಎಲ್ಲ ರಸಗೊಬ್ಬರ ದರ ಜನವರಿ, ಮೇ ಮಧ್ಯೆ ಸರ್ಕಾರ ಹೆಚ್ಚಿಸಿದೆ.

ಕೇವಲ ಐದು ತಿಂಗಳಲ್ಲಿ ರಸಗೊಬ್ಬರ ಬೆಲೆ ಹೆಚ್ಚಿಸುವ ಸರ್ಕಾರ ಬತ್ತಕ್ಕೆ ವೈಜ್ಞಾನಿಕ ಬೆಲೆ ನಿಗದಿ ಪಡಿಸುವಲ್ಲಿ ವಿಫಲವಾಗಿದೆ. 2004ರಲ್ಲಿ ಮೊದಲ ದರ್ಜೆ ಬತ್ತ ಕ್ವಿಂಟಲ್‌ಗೆ ರೂ. 1030 ಮತ್ತು ಎರಡನೇ ದರ್ಜೆ ಬತ್ತಕ್ಕೆ ರೂ. 1000 ಸರ್ಕಾರ ನಿಗದಿ ಪಡಿಸಿತ್ತು.

ಅಲ್ಲಿಂದ ಇಲ್ಲಿಯವರೆಗೆ ದರ ಪರಿಷ್ಕರಣೆ ಮಾಡದೆ ಹಳೇ ದರವನ್ನೇ ಬತ್ತ ಖರೀದಿ ಕೇಂದ್ರಗಳಲ್ಲಿ ಮುಂದುವರಿಸಿದ್ದು, ರೈತರು ತುಂಬ ನಷ್ಟ ಅನಭವಿಸುತ್ತಿದ್ದಾರೆ. ನಾಲ್ಕೈದು ತಿಂಗಳಿಗೊಮ್ಮೆ ರಸಗೊಬ್ಬರ ಹೆಚ್ಚಿಸುವ ಸರ್ಕಾರ 2004ರಿಂದ ಬತ್ತ ಬೆಂಬಲ ಬೆಲೆ ಏಕೆ ಹೆಚ್ಚಿಸಲಿಲ್ಲ ಎಂದು ವೆಂಕಟನಾಯ್ಡು ಪ್ರಶ್ನಿಸಿದರು.

ಈಗಾಗಲೇ ಮುಂಗಾರು ಆರಂಭವಾಗಿದ್ದು, ಗೊಬ್ಬರ ದಾಸ್ತಾನು ಮಾಡಿರುವ ಕೆಲವರು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಕ್ರಮ ಜರುಗಿಸಲಿ ಎಂದು ಒತ್ತಾಯಿಸಿದರು. 
ಆಳುವ ಸರ್ಕಾರಗಳು ನಾವು ರೈತರ ಮಕ್ಕಳು ಎಂದು ಬಿಟ್ಟಿ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಕನಿಷ್ಠ ರೈತರ ಬಗ್ಗೆ ಕಾಳಜಿಯೂ ಇಲ್ಲ ಎಂದು ಆರೋಪಿಸಿದರು.

ಕಳೆದ ಮೂರು ವರ್ಷಗಳಿಂದ ಆಡಳಿತಾರೂಢ ರಾಜ್ಯ ಸರ್ಕಾರ ರೈತರ ಬಗ್ಗೆ ಕಿಂಚಿತ್ತು ಚಿಂತನೆ ನಡೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಂಪ್ಲಿ ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘ ಮಾಜಿ ಅಧ್ಯಕ್ಷ ಕೆ. ರಂಗಸ್ವಾಮಿ, ರೈತ ಸಂಘ ಪ್ರತಿನಿಧಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT