ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತದ ಒಕ್ಕಣೆಗೆ ಯಂತ್ರ; ಕಾರ್ಮಿಕರಿಗೆ ಕೂಲಿ ಹೊಡೆತ

Last Updated 25 ಡಿಸೆಂಬರ್ 2012, 5:52 IST
ಅಕ್ಷರ ಗಾತ್ರ

ಕುರುಗೋಡು:  ತುಂಗಭದ್ರಾ ಕಾಲುವೆ ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ಬೆಳೆ ಒಕ್ಕಣೆಗೆ ಹೆಚ್ಚಾಗಿ ಯಂತ್ರಗಳ ಬಳಕೆ ಮಾಡುತ್ತಿದ್ದಾರೆ. ಇಂದರಿಂದ ಕಾರ್ಮಿಕರು ನಿರುದ್ಯೋಗಿ ಗಳಾಗುವುದು ಒಂದು ಕಡೆಯಾದರೆ ರೈತರ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುತ್ತಿರುವುದು ಮತ್ತೊಂದು ಸಮಸ್ಯೆಯಾಗಿ ಕಾಡತೊಡಗಿದೆ.

ಯಂತ್ರದ ಸಹಾಯದಿಂದ ಒಕ್ಕಣೆ ಮಾಡಿಸಿದರೆ ಸಮಯ ಮತ್ತು ಹಣ ಉಳಿತಾಯವಾಗುತ್ತದೆ ಎಂದು ಕೃಷಿ ಕಾರ್ಮಿಕರ ಉದ್ಯೋಗಕ್ಕೆ ಕೊಡಲಿ ಪೆಟ್ಟು ನೀಡಿದೆ. ಜೊತೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಎದುರಿಸುತ್ತಿರುವ ರೈತರು ತಮ್ಮ ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡಲು ಮುಂದಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೂಲಿ ಕೆಲಸವನ್ನೇ ತಮ್ಮ ಜೀವನದ ಮೂಲ ಕಸುಬಾಗಿಸಿ ಕೊಂಡ ಕೃಷಿಕಾರ್ಮಿಕರಿಗೆ ಉದ್ಯೋಗವಿಲ್ಲದೆ ಕುಟುಂಬದ ತುತ್ತಿನ ಚೀಲ ತುಂಬಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಒಂದು ಗಂಟೆಗೆ  ರೂ 2200 ಯಂತ್ರಕ್ಕೆ ಬಾಡಿಗೆ ನಿಗದಿಗೊಳಿಸಲಾಗಿದೆ. ಯಂತ್ರ ಗಂಟೆಗೆ  ಒಂದು ಎಕರೆ ಭತ್ತವನ್ನು ಕಟಾವು ಮಾಡಿ ಒಕ್ಕಣೆ ಮಾಡುತ್ತದೆ.    ಕೃಷಿ ಕಾರ್ಮಿಕರು ಅನಿವಾರ್ಯವಾಗಿ ಒಕ್ಕಣೆ ಯಂತ್ರದೊಂದಿಗೆ ಬೆಲೆಯ ಪೈಪೋಟಿ ನಡೆಸದ ಪರಿಸ್ಥಿತಿ ಇದೆ.
ಒಂದು ಎಕರೆ ಭತ್ತ ಕಟಾವು ಮಾಡಿ ಒಕ್ಕಣೆ ಮಾಡಲು ಕೇವಲ  ರೂ 3600 ಪಡೆಯುತ್ತಿದ್ದಾರೆ. (ಯಂತ್ರದಿಂದ ಒಂದು ಎಕರೆಗೆ ಒಕ್ಕಣೆಗೆ  ರೂ 2200  ಆಗುತ್ತದೆ) 

ಕೃಷಿ ಕಾರ್ಮಿಕರಿಂದ ಒಕ್ಕಣೆ ಮಾಡಿಸಿದರೆ ರೈತರಿಗೆ ಬತ್ತದ ಹುಲ್ಲು ಸುಸ್ಥಿತಿಯಲ್ಲಿ ದೊರೆತು ರೈತರ ದನಕರುಗಳಿಗೆ ಆಹಾರವಾಗುತ್ತದೆ. ಆದರೆ ಯಂತ್ರದ ಸಹಾಯದಿಂದ ಒಕ್ಕಣೆ ಮಾಡಿಸಿದರೆ ಬೈಹುಲ್ಲು ಸುಸ್ಥಿತಿಯಲ್ಲಿ ದೊರೆಯುವುದಿಲ್ಲ. ರೈತರಿಗೆ ಇದರಿಂದ ನಷ್ಟವಾಗುತ್ತದೆ ಎಂದು ಕೃಷಿ ಕಾರ್ಮಿಕರು ಅಭಿಪ್ರಾಯಪಡುತ್ತಾರೆ.

ಎಲ್ಲ ರೈತರು ಏಕಕಾಲಕ್ಕೆ ಒಕ್ಕಣೆ ಕಾರ್ಯ ಕೈಗೊಳ್ಳುವುದರಿಂದ ಕೃಷಿ ಕಾರ್ಮಿಕರ ಸಮಸ್ಯೆ ತಲೆದೂರುತ್ತದೆ. ಕೂಲಿ ಹೆಚ್ಚಾಗಿರುವುದು ಒಂದಾದರೆ, ಅಕಾಲಿಕ ಮಳೆಯಿಂದ ತಪ್ಪಿಸಿಕೊಳ್ಳಲು ಹೆಚ್ಚಾಗಿ ಒಕ್ಕಣೆ ಯಂತ್ರಕ್ಕೆ ಮೊರೆ ಹೋಗುವುದು ಅನಿವಾರ್ಯವಾಗಿದೆ ಎಂದು ಭತ್ತದ ಬೆಳೆಗಾರ ಹುಲುಗಪ್ಪನ ಅಭಿಪ್ರಾಯ.

ಕೃಷಿಯಲ್ಲಿ ಯಂತ್ರಗಳ ಬಳಕೆಯಿಂದ ಕೃಷಿ ಕಾರ್ಮಿಕರು ನಿರುದ್ಯೋಗಿಗಳಾಗುತ್ತಾರೆ. ಕೃಷಿಯಲ್ಲಿ ಹೆಚ್ಚಾಗಿ ಯಂತ್ರಗಳ ಬಳಕೆ ಮಾಡಬಾರದು ಎಂದು ಕೆಲವು ಕೃಷಿ ಕಾರ್ಮಿಕ ಸಂಘಟನೆಗಳು ಹಲವಾರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಾ ಬಂದಿದ್ದರೂ, ಕೃಷಿಯಲ್ಲಿ ಯಂತ್ರಗಳ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಭೀಕರ ಬರಗಾಲ ದಿಂದ ತತ್ತರಿಸಿರುವ ರೈತರ ಹಿತ ಕಾಯಲು ಮತ್ತು ಯಂತ್ರಗಳ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ ಕೃಷಿ ಕೂಲಿಕಾರರನ್ನು ರಕ್ಷಿಸಲು ಸರ್ಕಾರ ಮುಂದಾಗಬೇಗಿದೆ.

ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆ ಮತ್ತು ಹಳ್ಳಿಗಾಡಿನ ಜನರಿಗೆ  ಸ್ಥಳೀಯವಾಗಿ ಉದ್ಯೋಗ ಸೃಸ್ಟಿಸುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು  ಈ ಭಾಗದಲ್ಲಿ ಸಮರ್ಪಕವಾಗಿ ಜಾರಿಗೊಳಿಸಬೇಕು. ಜಾನುವಾರುಗಳಿಗೆ ಆಹಾರ ಪೂರೈಸಲು ಮೇವು ಬ್ಯಾಂಕ್ ಸ್ಥಾಪಿಸಲು ಜಿಲ್ಲಾಡಳಿತ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ರೈತ ಮತ್ತು ಕೃಷಿ ಕಾರ್ಮಿಕ ಪರ ಸಂಘಟನೆಗಳು ಆಗ್ರಹಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT