ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತದ ಗದ್ದೆಗೆ ನುಗ್ಗಿದ ನೀರು, ಮನೆಗಳಿಗೂ ಹಾನಿ

Last Updated 11 ಅಕ್ಟೋಬರ್ 2011, 6:10 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಗೊಬ್ಬರಗಾಲ ಹಾಗೂ ವಡಿಯಾಂಡ ಹಳ್ಳಿ ಸುತ್ತಮುತ್ತ ಭಾನುವಾರ ತಡರಾತ್ರಿ ಭಾರಿ ಮಳೆ ಸುರಿದ ಪರಿಣಾಮ ಗ್ರಾಮದ ಪಕ್ಕದ ಕೆರೆಯ ಕೋಡಿಯಿಂದ ಅಪಾರ ಪ್ರಮಾಣದ ನೀರು ಬತ್ತದ ಗದ್ದೆಗೆಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ.

ವಡಿಯಾಂಡಹಳ್ಳಿ ಗ್ರಾಮದ ಸಮೀಪ ಹರಿಯುವ ಸಿಡಿಎಸ್ ನಾಲೆಯ ನೀರಿನ ಮಟ್ಟ ದಿಢೀರ್ ಹೆಚ್ಚಿ ಹಳೇ ಗ್ರಾಮಕ್ಕೆ ನೀರು ನುಗ್ಗಿದ ಪರಿಣಾಮ 15ಕ್ಕೂ ಹೆಚ್ಚಿನ ಮನೆಗಳು ಜಖಂಗೊಂಡಿವೆ. ಅತಿಯಾದ ತೇವಾಂಶದಿಂದ ಮಣ್ಣಿನ ಗೋಡೆಯ ಮನೆಗಳು ಶಿಥಿಗೊಂಡಿವೆ. ಮನೆಯ ಒಳಗೆ ಮಂಡಿಯುದ್ದ ನೀರು ತುಂಬಿದ್ದರಿಂದ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮದ ಪುಟ್ಟಸ್ವಾಮಿ, ವೈರಮುಡಿಗೌಡ, ಸಣ್ಣೇಗೌಡ, ಉದಯಕುಮಾರ್, ಗೋವಿಂದ ಇತರರ ಮನೆಗಳು ಭಾಗಶಃ ಹಾನಿಗೀಡಾಗಿವೆ.
ಕೆರೆಯ ನೀರು ಕೋಡಿಯ ಮೂಲಕ ಅಪಾರ ಪ್ರಮಾಣದಲ್ಲಿ ಹರಿದಿದ್ದು, ಕೆರೆಯ ಕೋಡಿಗೂ ಹಾನಿಯಾಗಿದೆ.

ಜಮೀನಿಗೆ ನೀರು ನುಗ್ಗಿದ ಪರಿಣಾಮ ಬತ್ತದ ಗದ್ದೆಯ ಬದುಗಳು ಒಡೆದಿವೆ. ಅಲ್ಲಲ್ಲಿ ಬತ್ತದ ಪೈರು ಮುಚ್ಚಿಹೋಗಿದೆ. ಕೆರೆಯ ತಗ್ಗಿನಲ್ಲಿರುವ ಕೈಗಾಲುವೆ ಕೂಡ ಒಡೆದಿದೆ. ಸೋಮವಾರ ಬೆಳಿಗ್ಗೆ ಶಾಸಕ ರಮೇಶ ಬಂಡಿಸಿದ್ದೇಗೌಡ, ಉಪ ವಿಭಾಗಾಧಿಕಾರಿ ಜಿ.ಪ್ರಭು, ತಹಶೀಲ್ದಾರ್ ಅರುಳ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅತಿವೃಷ್ಟಿಯಿಂದ ಆಗಿರುವ ಬೆಳೆ ನಷ್ಟದ ಅಂದಾಜು ತಯಾರಿಸಿ ರೈತರಿಗೆ ಪರಿಹಾರ ಕೊಡಿಸಲು ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ವಸ್ತುನಿಷ್ಠ ವರದಿ ನೀಡುವಂತೆ ಕಂದಾಯ ಸಿಬ್ಬಂದಿಗೆ ಸೂಚಿಸಲಾಗಿದೆ. ಶೀಘ್ರ ಪರಿಹಾರ ದೊರಕಿಸಲು ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ. ಹಾನಿಗೀಡಾಗಿ ರುವ ಮನೆಗಳ ಮಾಲೀಕರಿಗೆ ಪರಿಹಾರ ಕೊಡಿಸಲಾಗುವುದು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದ್ದು, ಕಾವೇರಿ ನೀರಾವರಿ ನಿಗಮ ಒಡೆದಿರುವ ಕೆರೆ ಕೋಡಿ ದುರಸ್ತಿ ಕಾರ್ಯವನ್ನು ಮಂಗಳವಾರದಿಂದ ಆರಂಭಿಸಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT