ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತದಿರಲಿ ಅಮೃತದ ಒರತೆ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಮ್ಮಲ್ಲೆಗ ಗರ್ಭಕಂಠದ ಕ್ಯಾನ್ಸರ್‌ನ್ನೂ ಮೀರಿ ಬೆಳೆಯುತ್ತಿದೆ ಸ್ತನದ ಕ್ಯಾನ್ಸರ್! ಸ್ತನ ಕ್ಯಾನ್ಸರ್ ಪಿಡುಗಿಗೆ ತುತ್ತಾಗಿ ಅದು ಬೇರೂರಿ ನಿಂತಾಗ, ಸುದೀರ್ಘ ಚಿಕಿತ್ಸೆಗೆ ಒಳಪಡುವುದಕ್ಕಿಂತ ಅದನ್ನು ಮೊದಲೇ ಮಾರು ದೂರ ನಿಲ್ಲಿಸಿ ಬಿಡುವುದು ಜಾಣತನ ಅಲ್ಲವೇ? ಹಾಗೆ ಮಾಡಲು ನಾವು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಇಲ್ಲಿವೆ:

* ಸರಿಯಾದ ವಯಸ್ಸಿನಲ್ಲಿ ಮದುವೆ ಮಾಡಿಕೊಂಡು, ಸರಿಯಾದ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯಿರಿ. ತಡವಾಗಿ ಮದುವೆಯಾಗಿ ತಡವಾಗಿ ಮಕ್ಕಳನ್ನು ಪಡೆಯುವವರಲ್ಲಿ ಸ್ತನ ಕ್ಯಾನ್ಸರ್‌ನ ಅಪಾಯ ಹೆಚ್ಚು.

* ಮಕ್ಕಳಿಗೆ ಎದೆ ಹಾಲು ಕೊಡದೆ ಬೆಳೆಸುವ ತಾಯಂದಿರಲ್ಲಿ ಈ ಕ್ಯಾನ್ಸರ್ ಬರುವ ಸಂಭವ ಅಧಿಕ.

* ಕೀಟನಾಶಕಗಳ ಸಂಪರ್ಕ ಇರುವವರು ಅವುಗಳಿಂದ ದೂರ ಇರುವುದು ಆರೋಗ್ಯಕರ.

* ಆಹಾರದಲ್ಲಿ ಕೊಬ್ಬಿನಂಶ ಹೆಚ್ಚಾಗಿರುವ ಹಾಗೂ ವ್ಯಾಯಾಮವಿಲ್ಲದ, ಮದ್ಯಪಾನ, ತಂಬಾಕುಗಳ ಚಟವಿರುವ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಿ. ದಿನನಿತ್ಯದ ಊಟದಲ್ಲಿ ವಿಟಮಿನ್ಸ್ ಮುಂತಾದ ಕಿರು ಪೋಷಕಾಂಶಗಳಿರುವಂತೆ ನೋಡಿಕೊಳ್ಳಿ.

* ಸ್ತ್ರೀ ರಸದೂತಗಳ ಅನಿರ್ದಿಷ್ಟ ಸೇವನೆ ಅಪಾಯಕರ.

* ಭಾರತೀಯ ಸ್ತ್ರೀಯರು ಈ ಪಿಡುಗಿಗೆ ಬೇಗ ಬಲಿಯಾಗುತ್ತಾರೆ. ಅದರಲ್ಲೂ ಅವರ ನಿಕಟ ಕುಟುಂಬದಲ್ಲಿ ಯಾರಿಗಾದರೂ ಸ್ತನದ ಕ್ಯಾನ್ಸರ್ ಬಂದಿದ್ದರೆ, ಅವರು ತೀವ್ರ ಎಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ತಜ್ಞರಿಂದ ವಾರ್ಷಿಕ ತಪಾಸಣೆ ಮಾಡಿಸಿಕೊಳ್ಳುವುದನ್ನು ತಪ್ಪಿಸಲೇಬಾರದು.

*ಎಲ್ಲಕ್ಕಿಂತ ಮುಖ್ಯವಾಗಿ ಸ್ತನಗಳ ಸ್ವ-ಪರೀಕ್ಷೆ ಅಭ್ಯಾಸ ಮಾಡಿಕೊಳ್ಳಬೇಕು.
ಹೀಗೆ ಕ್ರಮಬದ್ಧವಾಗಿ ಪರೀಕ್ಷೆ ಮಾಡಿಕೊಳ್ಳುವಾಗ ಅಸಹಜತೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ. ಅವರು ಸೂಚಿಸಿದರೆ ಮಾತ್ರ ಮ್ಯಾಮೋಗ್ರಫಿ  ಮಾಡಿಸಿ.
ನೆನಪಿಡಿ, ಇದು ಅಕ್ಟೋಬರ್ ಅಲ್ಲ, ಪಿಂಕ್ಟೋಬರ್!

ಸ್ವಪರೀಕ್ಷೆಗೆ ಮುನ್ನ...

1. ಮುಟ್ಟಾದ ನಂತರ ಒಂದು ವಾರದೊಳಗೆ ಪರೀಕ್ಷೆ ಮಾಡಿಕೊಳ್ಳಬೇಕು. ಮುಟ್ಟಿಗೆ ಮುಂಚೆ ಮಾಡಿಕೊಂಡರೆ, ಸ್ತನಗಳು ಸ್ವಾಭಾವಿಕವಾಗಿಯೇ ಸ್ವಲ್ಪ ಗಂಟುಗಂಟಾಗಿದ್ದು, ವಿನಾಕಾರಣ ಕ್ಯಾನ್ಸರ್‌ನ ಭಯ ಮೂಡಿಸಬಹುದು.

2. ಸ್ನಾನ ಮಾಡುವಾಗ ಸೋಪು ತೊಳೆದು ಹೋಗುವ ಮುನ್ನ ಸ್ತನಗಳ ಸ್ವ-ಪರೀಕ್ಷೆ ಮಾಡಿಕೊಂಡರೆ, ಕೈ ಸಲೀಸಾಗಿ ಜಾರುತ್ತಾ ಪರೀಕ್ಷೆ ಸುಲಭವೂ ಖಚಿತವೂ ಆಗುತ್ತದೆ.

3. ಮೊಲೆ ತೊಟ್ಟುಗಳನ್ನು ಹಿಸುಕಬೇಡಿ. ಗರ್ಭಿಣಿಯಾಗಿದ್ದರೆ, ಮಗುವಿಗೆ ಮೊಲೆ ಹಾಲನ್ನು ಊಡಿಸುತ್ತಿದ್ದರೆ ಸ್ರಾವ ಸ್ವಾಭಾವಿಕ.


ಇದೆ ಬಗೆಬಗೆ ಪರೀಕ್ಷೆ

ಸ್ತನ ಕ್ಯಾನ್ಸರ್ ಕಂಡು ಹಿಡಿಯಲು, ಅದು ಬಂದಿದ್ದರೆ ಚಿಕಿತ್ಸೆ ನಿರ್ಧರಿಸಲು ಹಲವಾರು ತಪಾಸಣೆಗಳು ಮತ್ತು ಪರೀಕ್ಷೆಗಳಿವೆ

* ಸ್ತನದ `ಮ್ಯಾಮೋಗ್ರಾಫ್~ ತೆಗೆದರೆ ಸ್ತನದಲ್ಲಿ ಆಗಿರುವ ವ್ಯತ್ಯಾಸ ಅಥವಾ  ಕ್ಯಾನ್ಸರ್ ಗೊತ್ತಾಗುತ್ತದೆ. 

* ಸ್ತನದಲ್ಲಿ ವಿಶಿಷ್ಟವಾಗಿ ಕಾಣುವ ಗಂಟು ಅಥವಾ ವ್ಯತ್ಯಾಸವನ್ನು ಮತ್ತಷ್ಟು ಸ್ಪಷ್ಟಪಡಿಸಿಕೊಳ್ಳಲು ಸ್ತನಕ್ಕೆ `ಎಂಆರ್‌ಐ~ ಮಾಡಬಹುದು.

* ಸ್ತನದ ಗಂಟು ಗಟ್ಟಿಯಾಗಿದೆಯೇ ದ್ರವ ತುಂಬಿದೆಯೇ ಎಂಬುದನ್ನು ತಿಳಿದುಕೊಳ್ಳಲು ಸ್ತನದ ಅಲ್ಟ್ರಾ ಸೌಂಡ್ ಪರೀಕ್ಷೆ ನಡೆಸಬಹುದು.

* ಸ್ತನದ ಬಯಾಪ್ಸಿ ಕೂಡ ಆಗಬಹುದು.

* ಸ್ತನ ಕ್ಯಾನ್ಸರ್ ಎಷ್ಟು ಹರಡಿದೆ ಎಂಬುದನ್ನು ತಿಳಿಯಲು ಸಿ.ಟಿ ಸ್ಕ್ಯಾನ್ ಮಾಡಬಹುದು.

* ~ಪೆಟ್~ ಸ್ಕ್ಯಾನ್ ಎಂಬ ಪರೀಕ್ಷೆ ಕೂಡ ಆಗಬಹುದು.


ಏನಿದು ಪಿಂಕ್ ರಿಬ್ಬನ್?

ಇದು ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಇರುವ ಅಂತರ ರಾಷ್ಟ್ರೀಯ ಸಂಕೇತ.
1991ರಲ್ಲಿ ಸ್ತನ ಕ್ಯಾನ್ಸರ್‌ನಿಂದ ಬದುಕಿ ಉಳಿದವರಿಗಾಗಿ ನ್ಯೂಯಾರ್ಕ್‌ನ ಸೂಸನ್ ಜಿ. ಕೊವೆುನ್ ಪ್ರತಿಷ್ಠಾನ ರ‌್ಯಾಲಿಯೊಂದನ್ನು ಆಯೋಜಿಸಿತ್ತು. ಆ ವೇಳೆ ರ‌್ಯಾಲಿಯಲ್ಲಿ ಪಾಲ್ಗೊಂಡವರೆಲ್ಲರಿಗೂ ಗುಲಾಬಿ ವರ್ಣದ ಟೇಪನ್ನು ವಿತರಿಸಲಾಯಿತು.

ಇದೇ ವೇಳೆ, ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಚಾರ್ಲೆಟ್ ಹ್ಯಾಲಿ ಎಂಬ ಮಹಿಳೆ ಬಣ್ಣದ ಟೇಪುಗಳನ್ನು ಒಳಗೊಂಡ ಕಾರ್ಡೊಂದನ್ನು ತಯಾರಿಸಿ ಮಾರಾಟ ಮಾಡಿದ್ದರು. ಅದರಲ್ಲಿ `ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ವಾರ್ಷಿಕ ಬಜೆಟ್ 1.8 ಶತಕೋಟಿ ಡಾಲರ್.

ಆದರೆ ಇದರಲ್ಲಿ ಕೇವಲ ಶೇ 5ರಷ್ಟು ಹಣ ಮಾತ್ರ ಕ್ಯಾನ್ಸರ್ ತಡೆಗಟ್ಟುವ ಕಾರ್ಯಕ್ಕೆ ಹೋಗುತ್ತಿದೆ. ಈ ಟೇಪು ಧರಿಸುವ ಮೂಲಕ, ನಮ್ಮ ಶಾಸಕರು ಮತ್ತು ಇಡೀ ಅಮೆರಿಕವನ್ನು ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಗೊಳಿಸಿ~ ಎಂದು ಮನವಿ ಮಾಡಿದ್ದರು. ಅಲ್ಲಿಂದೀಚೆಗೆ ಸ್ತನ ಕ್ಯಾನ್ಸರ್ ಬಗೆಗಿನ ಜಾಗೃತಿಯ ದ್ಯೋತಕವಾಗಿ ಗುಲಾಬಿ ವರ್ಣದ ಟೇಪು ಜಾರಿಗೆ ಬಂತು.

ಸ್ತನ ಕ್ಯಾನ್ಸರ್ ಅಪಾಯ ಪುರುಷರಲ್ಲಿ ಶೇ 1 ರಷ್ಟು ಮಾತ್ರ. ಆದರೆ 8 ಮಹಿಳೆಯರಲ್ಲಿ ಒಬ್ಬ ಮಹಿಳೆ ಈ ಪಿಡುಗಿಗೆ ಗುರಿಯಾಗುವ ಸಾಧ್ಯತೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT