ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಲಾಗುತ್ತಿರುವ ನೇಕಾರರ ಬದುಕು

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅದು ಉತ್ತರ ಕರ್ನಾಟಕದ ಒಂದು ಹಳ್ಳಿ. ಹತ್ತಾರು ಮಗ್ಗಗಳನ್ನು ಹಾಕಿ ಸೀರೆ ಉತ್ಪಾದನೆ ಮಾಡುತ್ತಿರುವ ಮಹೇಶನಿಗೆ ಹೆಣ್ಣು ನೋಡುತ್ತಿದ್ದಾರೆ. ಅವನು ಸ್ಫುರದ್ರೂಪಿ, ಬಿ.ಎ. ಓದಿದ್ದಾನೆ. ಆದರೂ ಅವನಿಗೆ ಯಾರೂ ಹೆಣ್ಣು ಕೊಡಲು ಸಿದ್ಧರಿಲ್ಲ. ಕಾರಣ ಅವನ ಉದ್ಯೋಗ.

ಮಹೇಶ ಹಳ್ಳಿಯಲ್ಲಿದ್ದಾನೆ. ಆದರೆ ನಗರದಲ್ಲಿರುವ ಪ್ರಮೋದನೂ ನೇಕಾರ. ಸ್ವಂತ ಮನೆ, ದೊಡ್ಡ ಕಾರ್ಖಾನೆ, ಜೊತೆಗೆ ಕಾರು ಸಹ ಅವನಿಗೆ ಇದೆ. ಅವನೂ ಸ್ಫುರದ್ರೂಪಿಯೇ. ಆದರೆ ಅವನಿಗೂ ಹೆಣ್ಣು ಸಿಗುತ್ತಿಲ್ಲ.

`ಹುಡುಗಗ ನಾಕ ಸಾವಿರ ಪಗಾರ ಇರಲಿ, ಆದ್ರ ನೋಕರಿ ಮಾಡವ ಇರಲಿ. ನೇಕಾರಕಿ ಉದ್ಯೋಗದಾರರಿಗೆ ನಮ್ಮ ಹುಡುಗಿನ್ನ ತೋರಸುದಿಲ್ಲ~ ಇದು ನೇಕಾರ ಜನಾಂಗದ ಹೆಣ್ಣು ಹೆತ್ತವರ ಸಾಮಾನ್ಯ ತೀರ್ಮಾನ.

 ಇತ್ತೀಚೆಗೆ ಉತ್ತರ ಕರ್ನಾಟಕದ ನೇಕಾರ ಸಮುದಾಯದ ಹುಡುಗರಿಗೆ ಹೆಣ್ಣು ಸಿಗುತ್ತಿಲ್ಲ. ಮದುವೆ ಆಗುವುದೇ ದೊಡ್ಡ ಸಮಸ್ಯೆಯಾಗಿದೆ.

ನೇಕಾರಿಕೆ ಜಂಜಾಟದ ಉದ್ಯೋಗ. ಸಾಕಷ್ಟು ಶ್ರಮವಹಿಸಿದರೆ ಉತ್ತಮ ಆದಾಯ ತಂದುಕೊಡುವ ಉದ್ಯೋಗ. ನೇಕಾರಿಕೆ ಕುಟುಂಬಗಳಲ್ಲಿ ಮನೆ ಮಂದಿಗೆಲ್ಲ ಕೆಲಸವಿರುತ್ತದೆ.

ಈ ಕುಟುಂಬಗಳಿಗೆ ಹೆಣ್ಣು ಕೊಟ್ಟರೆ ಅವಳೂ ಜೀವಮಾನವಿಡೀ ನೇಕಾರಿಕೆಯ ಕೆಲಸಗಳನ್ನು ಮಾಡುತ್ತ ಇರಬೇಕಾಗುತ್ತದೆ ಎಂಬ ಕಾರಣಕ್ಕೆ ಹೆಣ್ಣು ಹೆತ್ತವರು ಹಿಂಜರಿಯುತ್ತಿದ್ದಾರೇನೋ. ನೇಕಾರಿಕೆ ನಮ್ಮ ದೇಶದ ಅತ್ಯಂತ ಪ್ರಾಚೀನ ಉದ್ಯೋಗ. ಅದನ್ನು ಇನ್ನೂ ಸಶಕ್ತವಾಗಿ ಬೆಳೆಸುವತ್ತ ಚಿಂತನೆ ನಡೆಯಬೇಕಿದೆ. ನೇಕಾರರಷ್ಟೇ ಅಲ್ಲ, ಸರ್ಕಾರವೂ ಇತ್ತ ಗಮನ ಹರಿಸಬೇಕಿದೆ.

ಕೃಷಿಗೆ ಪೂರಕವಾದ ಹೈನುಗಾರಿಕೆ, ಜೇನುಸಾಕಣೆ, ಮೊಲ, ಕೋಳಿ. ಹಂದಿ ಸಾಕಣೆ ಇತ್ಯಾದಿ ಪೂರಕ ಉದ್ಯೋಗಗಳು ಇರುವಂತೆ  ನೇಕಾರಿಕೆಗೆ ಪೂರಕವಾದ ಕೆಲಸಗಳನ್ನು ಮಾಡುವ ಸಾಧ್ಯತೆಗಳಿವೆಯೇ ಎಂಬ ಬಗ್ಗೆಯೂ  ಹೊಸ ಚಿಂತನೆ ಆಗಬೇಕಿದೆ.

ದಿನೇಶ ಮತ್ತು ರಾಧಾ ಕೂಲಿ ನೇಕಾರ ದಂಪತಿ. ಒಂದು ಕಾರ್ಖಾನೆಯಲ್ಲಿ ಶ್ರಮಪಟ್ಟು ದುಡಿದು  ಮನೆ ಕಟ್ಟಿಕೊಂಡರು. ಇನ್ನೂ ಹೆಚ್ಚು ದುಡಿಯುವ ಆಸೆಯಿಂದ ಮನೆಯಲ್ಲಿಯೇ ಮಗ್ಗ ಹಾಕಿಕೊಳ್ಳಬೇಕೆಂದು ನಿರ್ಧರಿಸಿದರು. ವಿದ್ಯುತ್ ಹಾಗೂ ಉದ್ಯೋಗದ ಪರವಾನಿಗೆ ಪಡೆದು ಮಗ್ಗಗಳನ್ನು ನಡೆಸಲು ಸಾಕಷ್ಟು ಸಾಲ ಮಾಡಿದರು. ಸಾಲವಾದರೂ ಪರವಾಗಿಲ್ಲ, ಸ್ವಂತ ಮನೆಯಲ್ಲಿ ಮಗ್ಗಗಳಿವೆ ಎಂದು ಧೈರ್ಯದಿಂದ ಹಗಲು ರಾತ್ರಿ ದುಡಿಯ ತೊಡಗಿದರು. ಆದರೆ ಅವರ ಮನೆಯ ಪಕ್ಕದಲ್ಲಿಯೇ ಇದ್ದ ನಿವೃತ್ತ ಸರ್ಕಾರಿ ನೌಕರರೊಬ್ಬರು ಹಗಲು ರಾತ್ರಿ  ಸದ್ದು ಮಾಡುತ್ತಲೇ ಇರುವ ಮಗ್ಗಗಳಿಂದ ಬೇಸತ್ತು ನೇಕಾರರ ವಿರುದ್ಧ ದೂರು ನೀಡಿದರು.

ದೂರು ತಾಲೂಕು ಪಂಚಾಯ್ತಿವರೆಗೆ ಹೋಯಿತು.  ಸಾಲವನ್ನು ತೀರಿಸಲು ಹೆಣಗಾಡುತ್ತಿದ್ದ ನೇಕಾರ ದಂಪತಿ ತಮ್ಮ ಪರ `ನ್ಯಾಯ~ ಪಡೆಯಲು ಮತ್ತಷ್ಟು ಸಾಲ ಮಾಡಬೇಕಾಯಿತು. ನೆರೆಮನೆಯ ನಿವೃತ್ತರ ನೆಮ್ಮದಿಗೆ ಭಂಗವಾಗದಂತೆ ಮಗ್ಗಗಳನ್ನು ನಿಲ್ಲಿಸಿದರೆ ಹೊಟ್ಟೆ ತುಂಬಿಸುವುದು ಹೇಗೆ?  

ಇಂತಹ ಸಮಸ್ಯೆಗಳನ್ನು ನೇಕಾರರು ಎದುರಿಸುತ್ತಿದ್ದಾರೆ. ನೇಕಾರರು ಕನಿಷ್ಠ ಕೂಲಿ ಪಡೆಯಲಾಗದೆ ಬೇರೆ ಕೆಲಸಗಳತ್ತ ವಾಲುತ್ತಿದ್ದಾರೆ. ನೇಕಾರಿಕೆ ವೃತ್ತಿಯಲ್ಲಿಯೂ ಹಲವಾರು ಸಮಸ್ಯೆಗಳು ಹುಟ್ಟಿಕೊಂಡಿವೆ. ಹಳ್ಳಿಗಳಲ್ಲಿರುವ ನೇಕಾರರು ಎಷ್ಟೇ ಲಾಗ ಹಾಕಿದರೂ `ಗುರಿ~ ತಲುಪಲು ಸಾಧ್ಯವಾಗುತ್ತಿಲ್ಲ.
 
ಇಲ್ಲಿ ಮುಖ್ಯವಾಗಿ ತಾಂತ್ರಿಕ ಸಮಸ್ಯೆಗಳನ್ನು ನೀಗಿಸುವ ಜಾಬರ್ ಎಂದು ಕರೆಯಲ್ಪಡುವ ವ್ಯಕ್ತಿಗಳ ಕೊರತೆ. ಅಷ್ಟೇ ಅಲ್ಲ, ಹೆಚ್ಚಿನ ಕುಸುರಿ ಹಾಗೂ ಸೂಕ್ಷ್ಮ ಸೀರೆಗಳನ್ನು ತಯಾರಿಸುವ ಕೂಲಿ ನೇಕಾರರು ಸಿಗುವುದು ಕಷ್ಟ. ಕೃಷಿ ಕಾರ್ಮಿಕರಿಗೆ ಈಗ ತರಬೇತಿ ಸಿಗುತ್ತಿದೆ. ಟಿವಿ ಮತ್ತಿತರ ಮಾಧ್ಯಮಗಳನ್ನು ಅದಕ್ಕೆ ಬಳಸಿಕೊಳ್ಳಲಾಗುತ್ತಿದೆ.
 
ಅದರಂತೆ ನೇಕಾರರಿಗೆ ಮತ್ತು ಅದೇ ವೃತ್ತಿಯಲ್ಲಿರುವ ಇತರ ಕೆಲಸಗಾರರಿಗೆ ತರಬೇತಿ ನೀಡುವ ವ್ಯವಸ್ಥೆ ಇಲ್ಲ. ಹೀಗಾಗಿ ಈ ವೃತ್ತಿಯಲ್ಲಿ ತೊಡಗಿರುವ ಕೂಲಿಕಾರರಲ್ಲಿ ವೃತ್ತಿ ಕೌಶಲ್ಯದ ಅಭಾವವಿದೆ.

ಈಗ ಬೇಸಿಗೆಯ ಸಮಯ. ರಾಜ್ಯದ ಎಲ್ಲೆಡೆ ವಿದ್ಯುತ್ತಿಗೆ ಅಭಾವ. ಬೆಳಗಾವಿ ಭಾಗದ ಹಳ್ಳಿಗಳಲ್ಲಿ ಈ ಮೊದಲೇ ವಿದ್ಯುತ್ ಅಭಾವವಿದೆ. ಅದು ಇನ್ನೂ ಹೆಚ್ಚಾಗಲಿದೆ. ವಿದ್ಯುತ್ ಕೊರತೆಯಿಂದ ಕೂಲಿಕಾರರಿಗಾಗಲಿ, ಉತ್ಪಾದಕರಿಗಾಗಲಿ ಆಗುವ ನಷ್ಟ ಸರಿದೂಗಿಸಲು ವಿದ್ಯುತ್ ಸಹಾಯವಿಲ್ಲದೆ ಕೂಲಿಗಾರರಿಗೆ ಬೇರೆ ಆದಾಯ ತರುವಂತಹ ವಸ್ತುಗಳನ್ನು ತಯಾರಿಸುವ ಪ್ರಯತ್ನ ಮಾಡಬಹುದಲ್ಲವೇ.

ಕೃಷಿ ಕ್ಷೇತ್ರಕ್ಕೆ ನೀಡಿದಷ್ಟು ಆದ್ಯತೆಯನ್ನು ಸರ್ಕಾರ ನೇಕಾರಿಕೆ ಕ್ಷೇತ್ರಕ್ಕೆ ನೀಡುತ್ತಿಲ್ಲ. ರಾಜ್ಯದಲ್ಲಿ ಕೃಷಿ ಮೇಳಗಳು ನಡೆಯುತ್ತಲೇ ಇರುತ್ತವೆ. ಆದರೆ ನೇಕಾರ ಮೇಳ ನಡೆದ ಉದಾಹರಣೆಗಳಿಲ್ಲ. ಇದಕ್ಕೆ ನೇಕಾರರ ಅಸಂಘಟನೆಯೂ ಕಾರಣವಾಗಿರಬಹುದು ಅಥವಾ ಸರ್ಕಾರದ ನಿರ್ಲಕ್ಷವೂ ಕಾರಣವಾಗಿರಬಹುದು.

ಸರ್ಕಾರ ನೇಕಾರರಿಗಾಗಿ ದೊಡ್ಡ ಯೋಜನೆಗಳನ್ನು ರೂಪಿಸುತ್ತದೆ. ಆದರೆ ಅವು ಕಾರ್ಯರೂಪಕ್ಕೆ ಬರುವುದೇ ಇಲ್ಲ. ನೇಕಾರರ ಆರೋಗ್ಯ ವಿಮೆ ಯೋಜನೆ, ಸುವರ್ಣ ವಸ್ತ್ರ ಯೋಜನೆ ಇತ್ಯಾದಿಗಳಿವೆ. ಅದರಿಂದ ಎಷ್ಟು ಮಂದಿ ನೌಕರರಿಗೆ ಅನುಕೂಲವಾಗಿದೆ?

ನೇಕಾರಿಕೆಯಂತಹ ಪ್ರಾಚೀನ ಉದ್ಯೋಗವನ್ನು ಆಧುನಿಕ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸುವ ಅಗತ್ಯವಿದೆ. ರಾಜ್ಯ ಸರ್ಕಾರ ಈ ವರ್ಷದ ಮುಂಗಡ ಪತ್ರದಲ್ಲಿ ನೇಕಾರರಿಗೆ ಹೆಚ್ಚಿನ ಸೌಲಭ್ಯ ನೀಡಲು ಮನಸ್ಸು ಮಾಡಬಹುದೇ? ಅಥವಾ ಹಿಂದಿನಂತೆ  ನೇಕಾರರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಿದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT