ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಬಾವಿ: ಸಾಮಗ್ರಿ ಮರುಬಳಕೆಗೆ

ಬೆಂಗಳೂರು ಗ್ರಾ.ಜಿಲ್ಲೆ ಕೆಡಿಪಿ ಸಭೆಯಲ್ಲಿ ಸಚಿವ ಕೃಷ್ಣ ಭೈರೇಗೌಡ
Last Updated 11 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಜಿಲ್ಲೆಯಲ್ಲಿ ಬತ್ತಿ ಹೋಗಿರುವ ಕೊಳವೆ ಬಾವಿಗಳ ಸಾಮಗ್ರಿಗಳನ್ನೇ ಹೊಸ ಕೊಳವೆ ಬಾವಿಗಳನ್ನು ಕೊರೆಯುವಾಗ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಹಾಗೂ ಕೃಷಿ ಸಚಿವರೂ ಆದ ಕೃಷ್ಣ ಬೈರೇಗೌಡ ತಿಳಿಸಿದರು.

ಗುರುವಾರ ನಡೆದ ಪ್ರಥಮ ತ್ರೈಮಾಸಿಕ ಕೆಡಿಪಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, `ಗ್ರಾಮಾಂತರ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ 100ರಿಂದ 150ಕ್ಕೂ ಹೆಚ್ಚು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಈ ಕೊಳವೆ ಬಾವಿಗಳಿಗೆ ಅಳವಡಿಸಿರುವ ಮೋಟಾರ್, ಪೈಪುಗಳು, ಪ್ಯಾನಲ್ ಬೋರ್ಡ್, ಕೇಬಲ್ ವೈರ್, ವಿದ್ಯುತ್ ಸಂಪರ್ಕವನ್ನು ಮರು ಬಳಕೆ ಮಾಡಿಕೊಂಡಲ್ಲಿ ರೂ 2 ಲಕ್ಷ ಉಳಿಕೆಯಾಗಲಿದೆ.

ಈ ಹಣದೊಂದಿಗೆ ಕುಡಿಯುವ ನೀರಿಗಾಗಿ ಬಿಡುಗಡೆ ಮಾಡುವ ಅನುದಾನವನ್ನೂ ಬಳಸಿಕೊಂಡಲ್ಲಿ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯಲು, ಈ ಮೂಲಕ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಲು ಸಾಧ್ಯವಾಗಲಿದೆ' ಎಂದು ಹೇಳಿದರು.

ಸಮೀಕ್ಷಾ ವರದಿ ಸಲ್ಲಿಕೆಗೆ 15 ದಿನಗಳ ಗಡುವು: `ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬತ್ತಿ ಹೋಗಿರುವ ಕೊಳವೆ ಬಾವಿಗಳ ಸಮೀಕ್ಷೆ ನಡೆಸಿ, ಹದಿನೈದು ದಿನಗಳ್ಲ್ಲಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೊಸದಾಗಿ ಕೊರೆಯುವ ಕೊಳವೆ ಬಾವಿಗಳಿಗೆ ಹಳೆಯ ವಿದ್ಯುತ್ ಸಂಪರ್ಕವನ್ನೇ ವರ್ಗಾಯಿಸುವಂತೆ ಬೆಸ್ಕಾಂ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ.

ಆದೇಶ ಮೀರಿ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಿದ್ದು ಗಮನಕ್ಕೆ ಬಂದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನೇ ಹೊಣೆ ಮಾಡಲಾಗುವುದು. ಹೊಸ ಸಂಪರ್ಕದ ಅಗತ್ಯವಿದ್ದಲ್ಲಿ ಪರಿಶೀಲನೆ ನಡೆಸಿದ ಬಳಿಕವೇ ಒಪ್ಪಿಗೆ ನೀಡುವ ಕುರಿತು ತೀರ್ಮಾನಿಸಲಾಗುವುದು' ಎಂದರು.

`ಬತ್ತಿ ಹೋಗಿರುವ ಕೊಳವೆ ಬಾವಿಗಳಿಗೆ ನೀಡುತ್ತಿದ್ದ ವಿದ್ಯುತ್ ಸಂಪರ್ಕವನ್ನು ನಿಲ್ಲಿಸುವಂತೆ ಯಾರೊಬ್ಬರೂ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿರಲಿಲ್ಲ. ಪರಿಣಾಮವಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ 6 ಲಕ್ಷಕ್ಕೂ ಹೆಚ್ಚು ವಿದ್ಯತ್ ಶುಲ್ಕವನ್ನು ಅನಗತ್ಯವಾಗಿ ಪಾವತಿಸುವಂತಾಗಿದೆ.

ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಪತ್ರ ಬರೆಯಬೇಕಿತ್ತು. ಸಹಾಯಕ ಕಾರ್ಯನಿರ್ವಹಣಾಧಿಕಾರಿ, ಪಿಡಿಒ, ಕಾರ್ಯನಿರ್ವಹಣಾ ಎಂಜಿನಿಯರ್‌ಗಳು ಗಮನ ಹರಿಸಬೇಕಿತ್ತು. ಪರಿಣಾಮವಾಗಿ ಸರ್ಕಾರದ ಹಣ ಅನಗತ್ಯವಾಗಿ ಪೋಲಾಗಿದೆ' ಎಂದು ತಿಳಿಸಿದರು.

`ಬೆಂಗಳೂರು ಗ್ರಾಮಾಂತರ ಜಿಲ್ಲೆ ಒಂದರಲ್ಲೇ ಇಷ್ಟಾದರೆ ರಾಜ್ಯದ ಇತರೆ ಜಿಲ್ಲೆಗಳ ಪರಿಸ್ಥಿತಿ ಅಂದಾಜಿಸಬಹುದಾಗಿದೆ. ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಬತ್ತಿ ಹೋಗಿರುವ ಕೊಳವೆ ಬಾವಿಗಳ ವಿದ್ಯುತ್ ಸಂಪರ್ಕ ಸೇರಿದಂತೆ ಇತರೆ ಸಾಮಗ್ರಿಗಳನ್ನು ಬಳಕೆ ಮಾಡುವುದನ್ನು ಪ್ರಾಯೋಗಿಕವಾಗಿ ಗ್ರಾಮಾಂತರ ಜಿಲ್ಲೆಯಲ್ಲಿ ಜಾರಿ ಮಾಡಲಾಗುವುದು. ನಂತರ ಇದರ ಸಾಧಕ ಬಾಧಕಗಳನ್ನು ನೋಡಿಕೊಂಡು ರಾಜ್ಯದಾದ್ಯಂತ ಇದೇ ಮಾದರಿ ಅನುಸರಿಸುವ ಕುರಿತು ಮುಖ್ಯಮಂತ್ರಿ ಅವರಿಗೆ ಸಲಹೆ ನೀಡಲಾಗುವುದು' ಎಂದರು.

ಮಳೆಯಾಶ್ರಿತ ರೈತರ ಸ್ಥಿತಿ ಗಂಭೀರ: `ಜೂನ್ ಮೊದಲ ವಾರದಲ್ಲಿ ರಾಜ್ಯದಾದ್ಯಂತ ಮಳೆಯಾಗಿರುವುದು ಬಿಟ್ಟರೆ, ನಂತರದಲ್ಲಿ ಬಯಲುಸೀಮೆ ಪ್ರದೇಶಗಳಲ್ಲಿ ಸಮರ್ಪಕವಾಗಿ ಮಳೆ ಆಗದಿರುವುದರಿಂದ ಆತಂಕ ಎದುರಾಗಿದೆ. ಮಾಧ್ಯಮಗಳಲ್ಲಿ ಮಲೆನಾಡು ಪ್ರದೇಶಗಳ ಮಳೆ ವರದಿ, ಚಿತ್ರಗಳು ಹೆಚ್ಚು ಪ್ರಕಟವಾಗುತ್ತಿರುವ ಕಾರಣ ಎಲ್ಲೆಡೆ ವ್ಯಾಪಕವಾಗಿ ಮಳೆಯಾಗಿದೆ ಎಂಬ ಸಾರ್ವತ್ರಿಕ ಅಭಿಪ್ರಾಯ ಮೂಡಿದೆ.

ಜಿಲ್ಲೆಯಲ್ಲಿಯೂ ಮೊದಲ ವಾರದಲ್ಲಿ ಮಳೆಯಾಗಿರುವ ಕಾರಣ ಕಳೆದ ವರ್ಷಕ್ಕಿಂತ ಈ ಸಲ ಬಿತ್ತನೆ ಪ್ರಮಾಣದಲ್ಲಿ ಚೇತರಿಕೆ ಕಂಡುಬಂದಿದೆ. ಒಂದು ವೇಳೆ ಮಳೆ ಕೈಕೊಟ್ಟಲ್ಲಿ ಕೃಷಿ ಸೇರಿದಂತೆ ಕುಡಿಯುವ ನೀರಿನ ಮೇಲೆ ಗಂಭೀರ ಪರಿಣಾಮ ಎದುರಾಗಲಿದೆ. ಬೀಜ, ರಸಗೊಬ್ಬರಗಳ ಕೊರತೆ ಇದುವರೆಗೆ ಕಂಡುಬಂದಿಲ್ಲ' ಎಂದು ವಿವರಿಸಿದರು.

ವೈದ್ಯರ ನೇಮಕಕ್ಕೆ ಕ್ರಮ: `ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದೆ. ರಾಜ್ಯದಾದ್ಯಂತ ಶಿಕ್ಷಣ, ಆರೋಗ್ಯ, ಕೃಷಿಯಂತಹ ಅಗತ್ಯ ಸೇವಾ ಕ್ಷೇತ್ರಗಳಿಗೆ ಸಿಬ್ಬಂದಿ ಕೊರತೆ ಇದ್ದು, ನೇಮಕಾತಿ ನಿಯಮಗಳನ್ನು ಸಡಿಲಗೊಳಿಸಿ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಚಿಂತನೆ ನಡೆಸಿದ್ದು, ಈ ವಿಷಯವನ್ನು ಅವರ ಗಮನಕ್ಕೆ ತರಲಾಗುವುದು.

ಸದ್ಯ ಜಿಲ್ಲಾಧಿಕಾರಿ ಅವರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಕ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ' ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ವೆಂಕಟರಮಣಯ್ಯ, ಎಂ.ಟಿ.ಬಿ. ನಾಗರಾಜು, ಪಿಳ್ಳಮುನಿಶ್ಯಾಮಪ್ಪ, ಡಾ.ಶ್ರಿನಿವಾಸಮೂರ್ತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ತಿರುವರಂಗ ವಿ.ನಾರಾಯಣ ಸ್ವಾಮಿ, ಜಿಲ್ಲಾಧಿಕಾರಿ ವಿ.ಶಂಕರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಉಪಸ್ಥಿತರಿದ್ದರು.

ಅಧಿಕಾರಿಗಳ ಅಸಡ್ಡೆ; ಸಚಿವರ ಖಡಕ್ ನುಡಿ
* ವೈದ್ಯರು ಹೆಡ್‌ಕ್ವಾರ್ಟರ್ ಬದಲಿಗೆ ತಮ್ಮ ಕ್ವಾರ್ಟರ್ಸ್‌ನಲ್ಲಿ ಇದ್ದರೆ ಜನ ಸೇವೆ ಮಾಡಲು ಹೇಗೆ ಸಾಧ್ಯ. ಇಲಾಖೆ ಜನರ ಅನುಕೂಲಕ್ಕಾಗಿ ಇದೆಯೇ ವಿನಃ ತಮ್ಮ ವೈಯುಕ್ತಿಕ ಅನುಕೂಲಗಳಿಗಾಗಿ ಅಲ್ಲ.

* ಜಿಲ್ಲೆಯಲ್ಲಿ ಒಟ್ಟು ಎಷ್ಟು ಕೊಳವೆ ಬಾವಿಗಳು ಒಣಗಿ ಹೋಗಿವೆ ಎಂಬ ಬಗ್ಗೆ ಯಾರಲ್ಲೂ ಸೂಕ್ತ ಮಾಹಿತಿ ಇಲ್ಲ ಎಂದ ಮೇಲೆ ನೀವು ಮಾಡುವ ಕೆಲಸವಾದರೂ ಏನು? ಕಚೇರಿಯಲ್ಲಿ ಕುಳಿತು ಅಂಕಿ ಅಂಶಗಳ ಆಧಾರ ಇಟ್ಟುಕೊಂಡು ಮಾತಾಡುವುದರಲ್ಲಿ ಪ್ರಯೋಜನವಿಲ್ಲ. ಖುದ್ದು ಹಳ್ಳಿ ಹಳ್ಳಿಗೆ ಭೇಟಿ ನೀಡಿ ಸಮರ್ಪಕ ಮಾಹಿತಿ ಸಂಗ್ರಹಿಸಬೇಕು. ಆಗಮಾತ್ರ ಪರಿಸ್ಥಿತಿ ಸುಧಾರಣೆ ಸಾಧ್ಯ.

* ನೀವುಗಳು ಕೆಡಿಪಿ ಸಭೆಗೆ ಬರುವುದು ಮೆಜೆಸ್ಟಿಕ್ ನೋಡಿ ರೌಂಡ್ ಹಾಕಿ ಹೋಗುವುದಕ್ಕೆ ಅಲ್ಲ. ಮುಂದಿನ ಸಭೆಗೆ ಬರುವಾಗ ಅಗತ್ಯ ಅಂಕಿಂಶಗಳೊಂದಿಗೆ ಬರಬೇಕು. `ಹಳೇ ಕಲ್ಲು ಹೊಸ ಬಿಲ್ಲು' ಎನ್ನುವಂತೆ ಆಗಬಾರದು.

* ಸಾರ್ವಜನಿಕರ ತೆರಿಗೆ ಹಣದಲ್ಲಿ ನಿಮಗೆಲ್ಲಾ ಸಂಬಳ ನೀಡಲಾಗುತ್ತಿದೆ. ಅದಕ್ಕೆ ತಕ್ಕಂತೆ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿ, ಜನರ ಋಣ ತೀರಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಕೆಲಸದಲ್ಲಿ ಆತ್ಮವಂಚನೆ ಸಲ್ಲದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT