ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗದ ಬರ: ಕೇಂದ್ರದ ಅಧ್ಯಯನ ನಿರಂತರ...!

Last Updated 23 ಡಿಸೆಂಬರ್ 2013, 6:01 IST
ಅಕ್ಷರ ಗಾತ್ರ

ಕೋಲಾರ: ದಿಸ್ ಈಸ್ ದ ರಿಯಲ್ ಪಿಕ್ಚರ್ ಆಫ್ ಭಾರತ್ ಮಾತಾ (ಇದೇ ಭಾರತಮಾತೆಯ ನಿಜವಾದ ಚಿತ್ರಣ)..

-ಬರ ಪರಿಸ್ಥಿತಿ ಅಧ್ಯಯನದ ಸಲುವಾಗಿ 2011ರ ಡಿಸೆಂಬರ್ 15ರಂದು ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ಅಧಿಕಾರಿಗಳ ತಂಡದ ಸದಸ್ಯ, ಕೇಂದ್ರ ಸರ್ಕಾರದ ತೋಟಗಾರಿಕೆ ಇಲಾಖೆ ಆಯುಕ್ತರಾಗಿದ್ದ ಗೋರಖ್ ಸಿಂಗ್ ಹೀಗೆ ಉದ್ಗರಿಸಿದ್ದರು.

ಭಾರತಮಾತೆಯ ಬರಗಾಲದ ಚಿತ್ರಣವನ್ನು ಕೋಲಾರ ಜಿಲ್ಲೆ ಚೆನ್ನಾಗಿ ಕಟ್ಟಿಕೊಡುತ್ತದೆ ಎಂಬುದು ಅವರ ಉದ್ಗಾರದ ಹಿಂದಿನ ಅರ್ಥವಾಗಿತ್ತು. ಆ ಚಿತ್ರಣ ಜಿಲ್ಲೆಯಲ್ಲಿ ಹಾಗೇ ಉಳಿದಿದೆ ಎಂಬುದು ಸದ್ಯದ ಸ್ಥಿತಿ- ಗತಿ.

ಆ ತಂಡ ಭೇಟಿ ನೀಡಿ ಎರಡು ವರ್ಷದ ಬಳಿಕ ಮತ್ತೆ ಕೇಂದ್ರದ ಅಧಿಕಾರಿಗಳ ತಂಡ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡುವ ಸಲುವಾಗಿ ಸೋಮವಾರ ಜಿಲ್ಲೆಗೆ ಬರಲಿದೆ. ರೈತರ ದಿನವೇ ತಂಡ ಭೇಟಿ ನೀಡುತ್ತಿರುವುದು ವಿಪರ್ಯಾಸ.

ಕುಸಿಯುತ್ತಿರುವ ಅಂತರ್ಜಲ ಮತ್ತು ಸಕಾಲಕ್ಕೆ ಬಾರದ ಮಳೆ ಪರಿಣಾಮವಾಗಿ ಇತ್ತೀಚಿನ ವರ್ಷಗಳಲ್ಲಿ ‘ಶಾಶ್ವತ ಬರಗಾಲ ಪೀಡಿತ ಜಿಲ್ಲೆ’ ಎಂದೇ ಕರೆಯುವ ಕೋಲಾರ ಜಿಲ್ಲೆಗೆ ಬರಗಾಲ ಹೊಸದೇನಲ್ಲ. ಬರಗಾಲ ಎಂಬುದು ಜಿಲ್ಲೆಯ ಜನರ ನಿತ್ಯಜೀವನದ ಭಾಗವಾಗಿದೆ.  ಬರದ ನೆರಳಿನಲ್ಲಿಯೇ ಇಲ್ಲಿನ ರೈತರು ತಮ್ಮ ಬದುಕು-ಭವಿಷ್ಯವನ್ನು ಆತಂಕಿತ ನೆಲೆಯಲ್ಲೇ ಕಟ್ಟಿಕೊಳ್ಳಲು ಆರಂಭಿಸಿ ಹಲವು ವರ್ಷಗಳಾಗಿವೆ.


ವಿಪರ್ಯಾಸವೆಂದರೆ, ಐದು ವರ್ಷದ ಅವಧಿಯಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡುತ್ತಲೇ ಇದೆ. ಆದರೆ ಅದರಿಂದ ಆದ ಪ್ರಯೋಜನವೇನು ಎಂದು ಅಧಿಕಾರಿಗಳನ್ನು ಕೇಳಿದರೆ ಸ್ಪಷ್ಟ ಉತ್ತರವಂತೂ ದೊರಕುವುದಿಲ್ಲ. ರೈತರನ್ನು ಕೇಳಿದರೆ ನಿರಾಶಾದಾಯಕ ಮಾತುಗಳನ್ನಷ್ಟೇ ಆಡುತ್ತಾರೆ.

ಕುಡಿಯುವ ನೀರು, ಮಳೆ ಕೊರತೆಯಿಂದ ಇಡೀ ಜಿಲ್ಲೆಯ ಜನ, ಜಾನುವಾರು ಜೀವನ ಈ ವರ್ಷಗಳಲ್ಲಿ (2009, 2011, 2013) ತುರ್ತು ಪರಿಸ್ಥಿತಿಗಳಿಗೆ ಮುಖಾಮುಖಿಯಾಗಿದೆ. ಒಂದು ವರ್ಷ ಕೊಂಚ ನಿರಾಳ. ಮತ್ತೊಂದು ವರ್ಷ ಭರ್ತಿ ತಳಮಳ. ಇದು ಜಿಲ್ಲೆಯ ಬರಗಾಲದ ವಾರ್ಷಿಕ ಕ್ಯಾಲೆಂಡರ್.

2009ರ ಆಗಸ್ಟ್ 24ರಂದು ಜಿಲ್ಲೆಗೆ ಬರ ಅಧ್ಯಯನ ತಂಡವು ಭೇಟಿ ನೀಡಿದ್ದ ಸಂದರ್ಭದಲ್ಲಿ, ಜಿಲ್ಲೆಯ 300 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಆತಂಕವಿತ್ತು. ಅದಕ್ಕಾಗಿ ಪ್ರತ್ಯೇಕ ಕ್ರಿಯಾ ಯೋಜನೆಯನ್ನೂ ತಯಾರಿಸಲಾಗಿತ್ತು. 776 ಕೊಳವೆಬಾವಿ ಕೊರೆಯಲು ಜಿಲ್ಲಾಡಳಿತ ನಿರ್ಧರಿಸಿತ್ತು. ಆಗಲೇ 110 ಹಳ್ಳಿಗಳಿಗೆ ನೀರನ್ನು ಸಾಗಿಸಿ ಪೂರೈಸುವ ಯೋಜನೆಯನ್ನೂ ರೂಪಿಸಲಾಗಿತ್ತು. 4 ವರ್ಷದ ಬಳಿಕ, ಈ ಬಾರಿ ಕುಡಿಯುವ ನೀರಿಗಾಗಿಯೇ ಜಿಲ್ಲಾ ಪಂಚಾಯತಿಯು ₨ 100 ಕೋಟಿ ವೆಚ್ಚದ ಕ್ರಿಯಾಯೋಜನೆಯನ್ನು ತಯಾರಿಸಿದೆ!

43 ಗ್ರಾಮಗಳಿಗೆ ಟ್ಯಾಂಕರ್ ನೀರು: ನಾಲ್ಕು ವರ್ಷಗಳ ಬಳಿಕವೂ ಜಿಲ್ಲೆಯ ನೂರಾರು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಮತ್ತು ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಕೊಡುವ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲ ಎಂಬುದು ಗಮನಾರ್ಹ.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎನ್.ಶ್ರೀನಿವಾಸಾಚಾರಿ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಜಿಲ್ಲೆಯ 156 ಗ್ರಾಮ ಪಂಚಾಯತಿಗಳಲ್ಲಿ 43 ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಸಂಖ್ಯೆ ಕೆಲವು ತಿಂಗಳ ಹಿಂದೆ 200 ದಾಟಿತ್ತು.

ಬಾರದ ಮಳೆ: 2009ರ ಮುಂಗಾರು ಅವಧಿಯಲ್ಲಿ ಸತತ 54 ದಿನ ಮಳೆಯೇ ಇಲ್ಲದೆ ಒಣ ಹವೆ ಹರಡಿತ್ತು. ನಾಲ್ಕು ವರ್ಷದ ಬಳಿಕವೂ ಇಂಥದ್ದೇ ಸನ್ನಿವೇಶವಿದೆ. ಈ ಬಾರಿ ಮುಳಬಾಗಲು ಸೇರಿದಂತೆ ಹಲವೆಡೆ ಸತತ 45 ದಿನ ಮಳೆ ಬಾರದ ಸನ್ನಿವೇಶ ನಿರ್ಮಾಣವಾಗಿತ್ತು. 

2010ರಲ್ಲಿ ಅಂಥ ಸನ್ನಿವೇವಶ ಇರಲಿಲ್ಲವಾದರೂ, ಮುಂಗಾರು ಮಳೆ ಮುಂಚೆಯೇ ಬಂದಿತ್ತು. ಆದರೆ ನಿರೀಕ್ಷೆಯಂತೆ ಬರದೆ ಬಿತ್ತನೆ ಕುಂಠಿತಗೊಂಡಿತ್ತು. 2011 ಮತ್ತು 2012ರಲ್ಲೂ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆ ಹೆಚ್ಚು ಕಡಿಮೆ ಹಾಗೆಯೇ ಮುಂದುವರಿದಿತ್ತು. 
ಜಿಲ್ಲೆಯ ಮುಳಬಾಗಲು, ಬಂಗಾರಪೇಟೆ ಮತ್ತು ಶ್ರೀನಿವಾಸಪುರವನ್ನು ಬರಗಾಲ ಪೀಡಿತ  ತಾಲ್ಲೂಕುಗಳೆಂದು ರಾಜ್ಯ ಸರ್ಕಾರ ನ.16ರಂದು ಘೋಷಿಸಿತ್ತು.  ಈ ಬಾರಿ ಒಟ್ಟಾರೆ ಗುರಿ 1.02 ಲಕ್ಷ ಗುರಿ ಪೈಕಿ 70 ಸಾವಿರ ಹೆಕ್ಟೇರ್‌್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿತ್ತು.

ಆಗಸ್ಟ್ ಎರಡನೇ ವಾರದ ಹೊತ್ತಿಗೆ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ರಾಗಿ ಮೊಳಕೆ ಬಂದಿರಲೇ ಇಲ್ಲ. ಮಳೆ ಬಂದರೂ ಮೊಳಕೆ ಒಡೆಯುವ ಸಾಧ್ಯತೆಯೂ ಇರಲಿಲ್ಲ. ಕೆಲವೆಡೆ ಬೆಳೆ ಚೆನ್ನಾಗಿದ್ದರೂ ತೇವಾಂಶದ ಕೊರತೆ ಇತ್ತು.ರಾಗಿಯ ನಡುವೆ ಅಂತರ ಬೆಳೆಯದ ಅವರೆ ಮೊದಲಾದ ಅಂತರ ಬೆಳೆಗಳನ್ನು ಬೆಳೆಯಲು ಮುಂದಾದವರಿಗೆ ಗೊಬ್ಬರ ಹಾಕುವ ಅವಕಾಶವೂ ಇಲ್ಲದಂತಾಗಿತ್ತು.

ಮುಳಬಾಗಲು ತಾಲ್ಲೂಕಿನಲ್ಲಿ ಶೇ 50ರಷ್ಟು ಪ್ರದೇಶದಲ್ಲಿ ನೆಲಗಡಲೆ ಬಿತ್ತನೆಯೇ ಆಗಿರಲಿಲ್ಲ. ಬಿತ್ತನೆ ಆದೆಡೆ ಸತತ 45 ದಿನ ಮಳೆಯೇ ಬಾರದಿದ್ದ ಹಿನ್ನೆಲೆಯಲ್ಲಿ ಬೆಳೆಯ ಬೆಳವಣಿಗೆ ಕುಂಠಿತಗೊಂಡಿತ್ತು. ಜಿಲ್ಲೆಯ ಪ್ರಧಾನ ಬೆಳೆಗಳಾದ ರಾಗಿ 15,235 ಹೆಕ್ಟೇರ್ ಮತ್ತು ನೆಲಗಡಲೆ 5745 ಹೆಕ್ಟೇರ್‌ನಷ್ಟು ನಷ್ಟವಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿತ್ತು.

ಜಿಲ್ಲೆಯ ಒಟ್ಟಾರೆ 27 ಹೋಬಳಿಗಳ ಪೈಕಿ 13ರಲ್ಲಿ ಸತತ ನಾಲ್ಕು ವಾರ ಮಳೆ ಇಲ್ಲದೆ ತೇವಾಂಶದ ಕೊರತೆಯಿಂದ ಬೆಳೆಗಳು ನೆಲಕಚ್ಚಿದ್ದವು. ಬಂಗಾರಪೇಟೆ ತಾಲ್ಲೂಕಿನ ಎಲ್ಲ 6 ಹೋಬಳಿ, ಕೋಲಾರ ತಾಲ್ಲೂಕಿನ 2, ಮಾಲೂರು ಮತ್ತು ಮುಳಬಾಗಲು ತಾಲ್ಲೂಕಿನ ತಲಾ 1 ಮತ್ತು ಶ್ರೀನಿವಾಸಪುರ ತಾಲ್ಲೂಕಿನ 3 ಹೋಬಳಿಗಳಲ್ಲಿ ಮಳೆಯೇ ಇರಲಿಲ್ಲ. ಇದು ಮೇವಿನ ಸಮಸ್ಯೆಗೂ ದಾರಿ ಮಾಡಿತ್ತು. 
ಈಗ ಸನ್ನಿವೇಶ ಸುಧಾರಿಸಿದೆ. ಮೇವು ಸಾಕಾಗುವಷ್ಟಿದೆ. ಟ್ಯಾಂಕರ್ ನೀರಿನ ಪೂರೈಕೆ ಪ್ರಮಾಣ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಬರ ಘೋಷಣೆಯಾಗಿರುವ ಮೂರು ತಾಲ್ಲೂಕುಗಳಲ್ಲಿ ಉದ್ಯೋಗ ಕೇಳುವವರ ಸಂಖ್ಯೆಯೇನೂ ಹೆಚ್ಚಿಲ್ಲ. ಕೆರೆಗಳಲ್ಲಿ ಎಂದಿನಂತೆ ನೀರಿಲ್ಲ. ರಾಗಿ ಬೆಳೆಯ ಕಟಾವು ಕೆಲಸ ಬಹುತೇಕ ಪೂರ್ಣಗೊಂಡಿದೆ.

ಇಂಥ ಸಂದರ್ಭದಲ್ಲಿ ಬರ ಅಧ್ಯಯನ ಮಾಡಲು ಅಧಿಕಾರಿಗಳು ಬರುತ್ತಿದ್ದಾರೆ. ಅವರು ಬಂದು ಹೋಗುವುದರಿಂದ ನಮಗಾಗುತ್ತಿರುವ ಪ್ರಯೋಜನವಾದರೂ ಏನು ಎಂದು ಜಿಲ್ಲೆಯ ಜನ ಎಂದಿನಂತೆ ಕೇಳುತ್ತಿದ್ದಾರೆ.

ಇಂದು ಬರ ಅಧ್ಯಯನ ಪ್ರವಾಸ
ಕೇಂದ್ರ ತಂಡದ ಅಧಿಕಾರಿಗಳು ಸೋಮವಾರ ಬೆಳಿಗ್ಗೆ 10 ಗಂಟೆಗೆ ನಗರಕ್ಕೆ ಬರಲಿದೆ. ಮೊದಲಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಲಿದ್ದಾರೆ. 11 ಗಂಟೆಗೆ ಬಂಗಾರಪೇಟೆ, 11.15 ಕ್ಕೆ ಬಡಮಾಕನಹಳ್ಳಿ, ಗೊಲ್ಲಹಳ್ಳಿ, ಅಯ್ಯಪಲ್ಲಿ, ನಲ್ಲೂರು ಕೆರೆ, ನತ್ತ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಮಧ್ಯಾಹ್ನ 12.40ಕ್ಕೆ ಮುಳಬಾಗಲು ತಾಲ್ಲೂಕಿನ ಊರುಕುಂಟೆ ಮಿಟ್ಟೂರು, ಬಲ್ಲಾ ಗ್ರಾಮಕ್ಕೆ, ಕೂತಾಂಡಹಳ್ಳಿ ಮತ್ತು ಮುಡಿಯನೂರು ಕೆರೆಗೆ ಭೇಟಿ ನೀಡುತ್ತಾರೆ. 3 ಗಂಟೆ ಬಳಿಕ ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆ, ಹೆಬ್ಬಟ, ಗುಲ್ಲಕುಂಟೆ ಗ್ರಾಮ, ತಾಡಿಗೋಳ್ ಕೆರೆ ವೀಕ್ಷಣೆ ಮಾಡುತ್ತಾರೆ.

ಬರದ ತೀವ್ರತೆ ಹೆಚ್ಚು...
ಅಧ್ಯಯನ ತಂಡದ ಅಧಿಕಾರಿಗಳು ಭೇಟಿಗೆ ಜಿಲ್ಲಾಡಳಿತ ಆಯ್ಕೆ ಮಾಡಿರುವ ಮೂರು ತಾಲ್ಲೂಕಿನ ಹಳ್ಳಿಗಳಲ್ಲಿ ಬರಗಾಲದ ತೀವ್ರತೆ ಹೆಚ್ಚಿತ್ತು. ಬಂಗಾರಪೇಟೆ ತಾಲ್ಲೂಕಿಗೆ ಸೇರಿದ ಕ್ಯಾಸಂಬಳ್ಳಿ ಹೋಬಳಿಯ ಬಡಮಾಕನಹಳ್ಳಿ, ಗೊಲ್ಲಹಳ್ಳಿ, ಅಯ್ಯಪಲ್ಲಿಯಲ್ಲಿ ನೆಲಗಡಲೆ ಶೇ 70ರಷ್ಟು ನೆಲಕಚ್ಚಿತ್ತು. ಶ್ರೀನಿವಾಸಪುರ ತಾಲ್ಲೂಕಿನ  ಲಕ್ಷ್ಮೀಸಾಗರ ಕೆರೆ, ಹೆಬ್ಬಟ, ತಾಡಿಗೋಳ್ ಕೆರೆಗಳಲ್ಲಿ, ಮುಳಬಾಗಲು ತಾಲ್ಲೂಕಿನ ಕೂತಾಂಡಹಳ್ಳಿ ಮತ್ತು ಮುಡಿಯನೂರು ಕೆರೆಗಳಲ್ಲಿ ನೀರಿಲ್ಲ.

ಕೇಂದ್ರಕ್ಕೆ ವಿವರಣೆ: ಸಕಲ ಸಿದ್ಧತೆ
ಜಿಲ್ಲೆಯ ಬರ ಪರಿಸ್ಥಿತಿಯನ್ನು ಕೇಂದ್ರದ ಬರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಸಲು ಸಕಲ ಸಿದ್ಧತೆ ನಡೆಸಲಾಗಿದೆ. 2004ರಿಂದ 2013ರವರೆಗಿನ ಮಳೆ ಪ್ರಮಾಣ, 2006ರಿಂದ ಜಿಲ್ಲೆಯ ಕೆರೆಗಳು ತುಂಬದೇ ಬಿರುಕು ಬಿಟ್ಟಿರುವುದು ಮತ್ತು  ಅದರ ಪರಿಣಾಮದ ಕುರಿತು ಪವರ್ ಪಾಯಿಂಟ್ ಪ್ರಸೆಂಟೇಶನ್ ಮಾಡಲಾಗುವುದು. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 724 ಮಿಮೀ. ಈ ವರ್ಷ ಜೂನ್ ನಿಂದ ಡಿಸೆಂಬರಿನವರಿಗೆ 634.38 ಮಿಮೀ ಮಳೆ ಮಾತ್ರ ಬಂದಿದೆ. ಜುಲೈ, ಆಗಸ್ಟಿನಲ್ಲಿ ಮಳೆ ಇಲ್ಲದೆ ತೇವಾಂಶ ಕೊರತೆ ಏರ್ಪಟ್ಟು ಬೆಳೆಗಳು ಆರಂಭಿಕ ಹಂತದಲ್ಲೇ ಸೊರಗಿವೆ. ಮುಳಬಾಗಲು, ಬಂಗಾರಪೇಟೆ, ಶ್ರೀನಿವಾಸಪುರದಲ್ಲಿ ಪ್ರಮುಖ ಬೆಳೆಗಳಾದ ನೆಲಗಡಲೆ, ಮತ್ತು ರಾಗಿ ಬೆಳೆಯ ನಷ್ಟದ ಕುರಿತು ಗಮನ ಸೆಳೆಯಲಾಗುವುದು.

– ಜುಲ್ಪಿಕಾರ್ ಉಲ್ಲಾ,  ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಕೇಂದ್ರ ತಂಡ ಭೇಟಿ ಸಕಾಲಿಕವಲ್ಲ
ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದಾಗ ತಂಡವು ಬಂದಿದ್ದರೆ ನಮ್ಮ ಕಷ್ಟಗಳು ಅರ್ಥವಾಗುತ್ತಿದ್ದವು. ಆದರೆ ಈಗ ರಾಗಿ ಬೆಳೆ ಕಟಾವು ಮುಗಿದಿದೆ. ನೆಲಗಡಲೆ ತೆಗೆದಾಗಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಬರ ಎಂದರೆ ಏನು ಅರ್ಥವಾಗುತ್ತದೆ. ಅಧಿಕಾರಿಗಳು ಬರುವುದೇ ಆಗಿದ್ದರೆ ಕನಿಷ್ಠ ನವೆಂಬರ್ ಆರಂಭದ ಹೊತ್ತಿಗಾದರೂ ಬರಬಹುದಿತ್ತು.

ಆಗ ಬಂಗಾರಪೇಟೆ ತಾಲ್ಲೂಕಿನ ಹಳ್ಳಿಗಳಲ್ಲಿ ನೆಲಗಡಲೆಯು ನೆಲಕಚ್ಚಿರುವುದನ್ನು ಕಾಣಬಹುದಾಗಿತ್ತು ಎಂಬುದು ಎನ್ನುವುದು ರೈತರಾದ ಎನ್.ಆರ್.ಚಂದ್ರಶೇಖರ, ಯಲುವಳ್ಳಿಯ ನಾರಾಯಣಸ್ವಾಮಿ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT