ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗದ ರೈತಪಥ

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

 ಶೇ.70ಕ್ಕೂ ಹೆಚ್ಚು ರೈತರೇ ಇರುವ ಈ ದೇಶದ ರೈತರಿಗೆ ಬಂದೊದಗಿದ ಸಮಸ್ಯೆಗಳನ್ನು ನೆನೆದರೆ ಇದಕ್ಕೆ ಎಂದು ಪರಿಹಾರ ಸಿಗುವುದೆಂದು ಯೋಚನೆಯಾಗುತ್ತದೆ. ಬಯಲುನಾಡಿನಲ್ಲಿ ಒಂದು ರೀತಿ. ಅರೆಮಲೆನಾಡಿನಲ್ಲಿ ಇನ್ನೊಂದು ರೀತಿ. ಪೂರ್ಣ ಮಲೆನಾಡಿನಲ್ಲಿ ಮತ್ತೊಂದು ರೀತಿ ಸಮಸ್ಯೆಯಾಗಿದೆ.

ಈ ಹಿಂದೆಲ್ಲ ಸಮಸ್ಯೆಗೆ ಒಳಗಾದ ರೈತರು ಈಗಿನಂತೆ ಆತ್ಮಹತ್ಯೆಗೆ ಒಳಗಾಗುತ್ತಿರಲಿಲ್ಲ. ಆದರೆ ಸರ್ಕಾರ ಅಧಿಕ ಆಹಾರ ಉತ್ಪಾದನೆ ಮಾಡುವ ಅವಸರದಲ್ಲಿ ರೈತರಿಗೆ ಹಣದ ರೂಪದಲ್ಲಿ ಸಾಕಷ್ಟು ಸಹಾಯ ಮಾಡಲು ಶುರುಮಾಡಿದ ನಂತರದಲ್ಲಿ ರೈತರ ಆತ್ಮಹತ್ಯೆ ಜಾಸ್ತಿಯಾಗಿದೆ.

ಕುವೆಂಪು ಅವರ `ಧನ್ವಂತರಿ ಚಿಕಿತ್ಸೆ~ ನಾಟಕವನ್ನು ಓದಿದ ಮೇಲೆ ಆ ಕಾಲದಲ್ಲಿ ರೈತ ಸಾಲಬಾಧೆಗೆ ಒಳಗಾಗಿದ್ದರೂ ನರಳೀ ನರಳೀ ಆಯುಷ್ಯ ಕಳೆಯುತ್ತಿದ್ದರು. ಆದರೆ ಈಗ ರೈತರ ಕೈಗೆ ಕೀಟನಾಶಕಗಳು ಸಿಗುತ್ತಿರುವುದರಿಂದ ಅವರು ಪರಿಹರಿಸಲಾಗದ ಆರ್ಥಿಕ ಸಮಸ್ಯೆ ಎದುರಾದಾಗಲೆಲ್ಲ ವಿಷ ಕುಡಿದು ಪ್ರಾಣ ಕಳೆದುಕೊಳ್ಳಲು ಪ್ರಾರಂಭಿಸಿದ್ದಾರೆ.
 
ರೈತರಿಗೆ ಸಾಲ ಸಿಗುವ ವ್ಯವಸ್ಥೆ ಜಾಸ್ತಿಯಾದ ಹಾಗೆಲ್ಲ ಪ್ರಾಣ ಕಳೆದುಕೊಳ್ಳುವ ಘಟನೆಗಳೂ ಹೆಚ್ಚಾಗುತ್ತಿವೆ. ಸಾಲ ಕೊಟ್ಟದ್ದನ್ನು ರೈತ ಪ್ರಾಮಾಣಿಕವಾಗಿ ಬೆಳೆಯ ಮೇಲೆ ಖರ್ಚು ಮಾಡಿರುತ್ತಾನೆ.

ಬೆಳೆಯನ್ನು ಮಾರಾಟ ಮಾಡಿದಾಗ ತಾನು ಮಾಡಿದ ಖರ್ಚಿಗೆ ಅನುಗುಣವಾಗಿ, ಅಂದ್ರೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಹಣ ಸಿಗದಿದ್ದಾಗ ಬ್ಯಾಂಕು, ಸೊಸೈಟಿ, ಅಥವಾ ಖಾಸಗಿಯಾಗಿ ಮಾಡಿದ ಸಾಲ ತೀರಿಸಲಾಗದೆ ಮರ್ಯಾದೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ.
 
ದಿಕ್ಕು ತೋಚದಾಗ ಸಲೀಸಾಗಿ ಸಿಗುವ ಔಷಧಗಳನ್ನು ಕುಡಿಯುವುದು ಸುಲಭ ಮಾರ್ಗೋಪಾಯವಾಗಿಬಿಟ್ಟಿದೆ.

ಹಿಂದೆಲ್ಲ ರೈತ ತಾನು ಬೆಳೆದ ಬೆಳೆಯಲ್ಲಿ ಬೀಜವನ್ನು ಉಳಿಸಿಕೊಂಡಿರುತ್ತಿದ್ದ. ಜಾನುವಾರು ಸಾಕಿ ಗೊಬ್ಬರವನ್ನು ತಾನೇ ತಯಾರು ಮಾಡಿಕೊಳ್ಳುತ್ತಿದ್ದ. ಈಗ ಎಲ್ಲವನ್ನೂ ಕೊಂಡೇ ತರುತ್ತಿದ್ದಾನೆ. ಕೃಷಿ ಸಂಸ್ಕೃತಿಯೇ ಅದಲು ಬದಲಾಗಿದೆ. ಹಿಂದಿನ ದಿನಗಳಲ್ಲಾಗಿದ್ದರೆ ಕೈಗೆ ಇಷ್ಟು ಸುಲಭವಾಗಿ ಸಾಯುವ ಔಷಧಗಳೂ ಸಿಗುತ್ತಿರಲಿಲ್ಲ. ಸುಲಭವಾಗಿ ಸಾಲವೂ ಸಿಗುತ್ತಿರಲಿಲ್ಲ.

ರೈತನಿಗೆ ಬೆಳೆ ಬೆಳೆಯಲು ಸುಲಭವಾಗಿ ಹಣ ದೊರೆಯುವಂತೆ ಮಾರ್ಗಗಳನ್ನು ರಚಿಸಿಕೊಡುವುದು ಇವತ್ತಿನ ಅಗತ್ಯವಾಗಿದೆ. ಮುಂದೆ ಬೆಳೆ ಬಂದಾಗಲೂ ರೈತರಿಗೆ ಉತ್ಪಾದನೆಗೆ ಅನುಗುಣವಾದ ಲಾಭದಾಯಕ ಬೆಲೆ ಸಿಗುವಂತೆ ಮಾಡುವ ಶ್ರಮವನ್ನು ಅಥವಾ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು.

ಹಾಗೆ ಮಾರುಕಟ್ಟೆಯ ಮೇಲೆ ಸರ್ಕಾರ ಹಿಡಿತ ಇಟ್ಟುಕೊಳ್ಳದಿದ್ದಾಗ ಬೆಳೆ ಬೆಳೆದ ರೈತ ಏನಾಗುತ್ತಾನೆಂದು ತಿಳಿದುಕೊಳ್ಳುವ ಸಾಮಾನ್ಯ ತಿಳಿವಳಿಕೆ ಅಥವಾ ಜವಾಬ್ದಾರಿ, ಬೆಳೆ ಬೆಳೆಸಲು ಹಣವನ್ನು ಸಾಲ ಕೊಡುವ ಅಥವಾ ಕೊಡಿಸುವ ಸರ್ಕಾರಕ್ಕೆ ಇಲ್ಲದೆ ಹೋಗುವುದಕ್ಕೆ ಏನೆಂದು ಹೇಳಬೇಕೋ ತಿಳಿಯುವುದಿಲ್ಲ. ನಡುನೀರಿನಲ್ಲಿ ಸಲೀಸಾಗಿ ಕೈಬಿಡುವ ಸರ್ಕಾರವೆಂದೇ ಹೇಳಬೇಕಷ್ಟೆ.

ನಮ್ಮ ದೇಶದ ರೈತನ ಪರಿಸ್ಥಿತಿ ಹೇಗೆಂದರೆ ಬೆಳೆದ ಬೆಳೆಯನ್ನು ಮಾರುಕಟ್ಟೆಯಲ್ಲಿ ತಕ್ಷಣ ಮಾರಲೇಬೇಕು, ಅದರಿಂದ ಬರುವ ಲಾಭದಿಂದ ರೈತ ಬದುಕಬೇಕು. ಹಾಗಾಗಿ ರೈತ ಬದುಕುವಷ್ಟು ಲಾಭ ಬರುವಂತೆ ನೋಡಿಕೊಳ್ಳುವುದು, ಬೆಳೆಗೆ ಬೆಲೆ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ.

ಕೃಷಿ ವೆಚ್ಚವನ್ನು ಸಾಲವಾಗಿ ಕೊಟ್ಟ ಬ್ಯಾಂಕು ಅಥವಾ ಸೊಸೈಟಿಗಳಾದರೂ, ನ್ಯಾಯವಾದ ಬೆಲೆ ಬರುವವರೆಗಾದರೂ ರೈತನ ಬೆಳೆಯನ್ನು ದಾಸ್ತಾನು ಮಳಿಗೆಯಲ್ಲಿ ತಾವಿಟ್ಟುಕೊಂಡು ರೈತನಿಗೆ ಜೀವನಕ್ಕೆ ಬೇಕಾಗುವ ಮೊಬಲಗನ್ನಾದರೂ ಕೊಡಬೇಕು.

ರೈತರ ಸಮಸ್ಯೆಗಳು ಹೇಗಿರುತ್ತವೆ ಎನ್ನುವುದಕ್ಕೆ ಅಡಕೆ ಬೆಳೆಗಾರರನ್ನು ಉದಾಹರಣೆಯಾಗಿ ನೋಡಬಹುದು. ನೋಡಿ, ಅಡಕೆಗೆ 4 ಮುಖ್ಯ ರೋಗಗಳಿವೆ. ಹಿಡಿಮುಂಡಿಗೆ, ಹಳದಿರೋಗ, ಬೇರು ಹುಳದ ರೋಗ, ಅಣಬೆ ರೋಗ. ಇವಕ್ಕೆ ತಜ್ಞರು ಔಷಧಿ ಪತ್ತೆ ಮಾಡದೆ ರೈತರು ನರಳುತ್ತಿದ್ದಾರೆ. ಈ ವರ್ಷ ತೀರ್ಥಹಳ್ಳಿ ಹಾಗೂ ಹೊಸನಗರ ತಾಲ್ಲೂಕಿನಲ್ಲಿ ಹೊಸದೊಂದು ರೋಗ ಪ್ರಾರಂಭವಾಗಿದೆ.
 
ಏನಂದ್ರೆ ಹಿಂಗಾರ ಕಾಯಿ ಹಿಡಿದಾದ ಮೇಲೆ ಕಾಯಿ ತಾನಾಗೇ ಉದುರಿ ಹೋಗುವುದು. ಇದು ಕೊಳೇರೋಗವೂ ಅಲ್ಲ. ಇದರಿಂದ 10 ಕ್ವಿಂಟಾಲ್ ಅಡಿಕೆಯಾಗುವವನಿಗೆ ಅರ್ಧ ಕ್ವಿಂಟಾಲ್ ಅಡಿಕೆಯೂ ಈ ವರ್ಷ ಆಗುವುದಿಲ್ಲ. ಆ ರೈತನ ಕಥೆ ಏನಾಗಬೇಕು ಹೇಳಿ. ಈಗಾಗಲೇ ಆ ಎರಡು ತಾಲ್ಲೂಕುಗಳಲ್ಲಿ ಮೂರು ಜನ ರೈತರು ಗೊಟಕ್ ಎಂದಿದ್ದಾರೆ. ಕೇವಲ ಅವಮಾನಕ್ಕೆ ಹೆದರಿ, ಬ್ಯಾಂಕಿನಲ್ಲಿ ಜಾಮೀನು ಹೇಳಿದವರು ಏನು ಮಾಡುತ್ತಾರೋ ಎಂದು.

ಇಂತಹ ಪರಿಸ್ಥಿತಿಗೆ ಒಳಗಾದ ರೈತ ಸಮಾಜದ ಎದುರು ಮರ್ಯಾದೆಯಿಂದ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿಗೆ ತಂದು ನಿಲ್ಲಿಸುವ ಸರ್ಕಾರದ್ದು ಹೀನ ಕೃತ್ಯ ಎಂದೆನ್ನದೆ ಬೇರೇನೂ ಹೇಳುವುದಕ್ಕಾಗುವುದಿಲ್ಲ. ಇಂತಹ ಜವಾಬ್ದಾರಿರಹಿತ ಸರ್ಕಾರಗಳಿರುವಾಗ ರೈತರೂ ಜವಾಬ್ದಾರಿಯಿಂದ ಉತ್ತಮವಾದ ಇಳುವರಿ ತೆಗೆಯುವ ಪ್ರಯತ್ನಕ್ಕೆ ಹೋಗಬೇಕೆಂದು ನಿರೀಕ್ಷಿಸುವುದೂ ತಪ್ಪೆನಿಸುತ್ತದೆ.

ಸಂಘಟಿತರಾಗಿ ಇದಕ್ಕೆ ಪ್ರಯತ್ನಿಸಬೇಕೆಂದು ಸಲೀಸಾಗಿ ಹೇಳುವ ಮಾತಿದೆ. ಸರ್ಕಾರಿ ನೌಕರರು ಸಂಘಟಿತರಾಗಿ ಹೋರಾಡಿದಂತೆ, ಕಾರ್ಖಾನೆಯವರು ಸಂಘಟಿತರಾಗಿ ಹೋರಾಡಿದಂತೆ, ಗ್ರಾಮೀಣ ಅವಿದ್ಯಾವಂತ ರೈತರು ಬೆಲೆ ನೀತಿ ಬದಲಿಸುವುದು ಕಷ್ಟವಾದ ಸಾಹಸವಾಗುತ್ತದೆ. ಇದನ್ನು ಸುಮಾರು 36 ವರ್ಷಗಳಿಂದ ರೈತ ಸಂಘಟನೆಯಲ್ಲಿದ್ದು ಹೋರಾಡಿದ ನನಗೆ ಅರ್ಥವಾಗಿದೆ.

ಸಂಘಟನೆಯಾದ ನಂತರ ರೈತರ ಸಾವು ಮೊದಲಿಗಿಂತ ಹೆಚ್ಚಾಗಿದೆ. ದೇಶದಲ್ಲಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕ ರಾಜ್ಯ ಒಂದರಲ್ಲೇ ಸಾವಿರಾರು ರೈತರು ಆತ್ಮಹತ್ಯೆಗೆ ಒಳಗಾಗಿದ್ದಾರೆ.

ಇದರ ಸರಿಯಾದ ಲೆಕ್ಕ ಸಿಗುವುದಾದರೂ ಹೇಗೆ? ರೈತರ ಆತ್ಮಹತ್ಯೆಗೆ ನಮ್ಮ ಇಲಾಖೆಯವರು, ರೈತರು ಸರಿಯಾದ ರೀತಿಯಿಂದ ಎಂದರೆ ಕಾಲಕ್ಕೆ ಸರಿಯಾಗಿ ಬೆಳೆ ಬೆಳೆಯುವುದನ್ನು ಅನುಸರಿಸದಿರುವುದರಿಂದ ರೈತರ ಆತ್ಮಹತ್ಯೆಯೂ ಜಾಸ್ತಿಯಾಗುತ್ತಿದೆ ಎಂದು ವರದಿಯನ್ನು ಸರ್ಕಾರಕ್ಕೆ ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ. ಗೋಲೀಬಾರಿನಲ್ಲಿ ಕೊಂದ ರೈತರಿಗೆ ಕೊಡಬೇಕಾದ ಪರಿಹಾರವನ್ನೂ ಮಧ್ಯವರ್ತಿಗಳು ತಿಂದುಹಾಕಿರುವ ಸನ್ನಿವೇಶಗಳಿವೆ.

ನಮ್ಮ ಬೆಳೆ ಬೆಳೆಯುವ ಭೂಮಿಯನ್ನು ವಿದೇಶದ ಕೈಗಾರಿಕೋದ್ಯಮಿಗಳಿಗೆ ಮಾರಾಟ ಮಾಡಿದಾಗ ಅಲ್ಲಿ ವಿದೇಶೀಯರು ಕೈಗಾರಿಕೆ ಪ್ರಾರಂಭಿಸುತ್ತಾರೆ. ಆ ಕೈಗಾರಿಕೆಗಳಿಂದ ನಮ್ಮ ಜನಕ್ಕೆ ಉದ್ಯೋಗ ಸಿಗುತ್ತದೆಂದು ಸರ್ಕಾರ ಹೇಳುತ್ತದೆ. ನಾವು ಕೇಳುವುದು ನಮ್ಮ ನಮ್ಮ ಪೂರ್ವಿಕರು ಕೊಟ್ಟ ಜಮೀನು ಉತ್ಪಾದನೆಯ ಸಾಧನವಲ್ಲವೆ?
ಬ್ರಿಟಿಷರು ಈ ದೇಶ ಬಿಡಲಿಕ್ಕೆ ಮೊದಲೇ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ `ಗಾಮ~ ಗ್ರಾಮದ ಪ್ರಜೆಗಳು ಸರ್ಕಾರಕ್ಕೆ ಸುಂಕ ಕೊಡುವುದಿಲ್ಲವೆಂದು ಚಳವಳಿ ಮಾಡಿ ಜೈಲು ಸೇರಿದ್ದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ ಗೇಣಿದಾರರ ಚಳವಳಿ ಸಾಗರದ ಕಾಗೋಡಿನಲ್ಲಿ ನಡೆಯಿತು. ನಂತರ ಇದು ಅಳತೆಯ ಕೊಳಗದಿಂದ ಪ್ರಾರಂಭವಾದ ಗೇಣಿದಾರರ ಚಳವಳಿಯಾಗಿ, ಸಮಾಜವಾದಿ ಪಕ್ಷದ ಮುಂದಾಳತ್ವದಲ್ಲಿ ನಡೆಯಿತು.

ಈ ಚಳವಳಿಯಿಂದಾಗಿ ದೇವರಾಜ ಅರಸರ ಕಾಲದಲ್ಲಿ ಉಳುವವನೇ ಹೊಲದೊಡೆಯನೆಂಬ ಭೂಸುಧಾರಣ ಕಾಯಿದೆ ಜಾರಿಗೆ ಬಂದಿತು. 1980ರಲ್ಲಿ `ಕರ್ನಾಟಕ ರಾಜ್ಯ ರೈತ ಸಂಘ~ದ ವತಿಯಿಂದ ಬೃಹತ್ ರೈತ ಚಳವಳಿ ಪ್ರಾರಂಭವಾಯ್ತು. ಇದರ ಮೂಲಕ ರೈತರ ಸಮಸ್ಯೆಗಳನ್ನು ಸರ್ಕಾರಕ್ಕೆ ನಿವೇದಿಸಲಾಯಿತು. ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಎದುರು ತಿಂಗಳಾನುಗಟ್ಟಲೆ ರೈತರು ಚಳವಳಿ ನಡೆಸಿದರು.

ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದಾಗ, ಸರ್ಕಾರ ರೈತರ 19 ಬೇಡಿಕೆಗಳಲ್ಲಿ ಕೆಲವನ್ನು ಈಡೇರಿಸಿತ್ತು. 1980ರಿಂದ ಪ್ರಾರಂಭವಾದ ರೈತ ಚಳವಳಿ 2011 ಆದರೂ ಮುಗಿಯದೆ ಮುನ್ನಡೆಯುತ್ತಿದೆ.

1980ರಿಂದ ಈವರೆಗೆ ನರಗುಂದ ನವಿಲುಗುಂದದಲ್ಲಿ ನಡೆದ ರೈತರ ಮೇಲಿನ ಗೋಲಿಬಾರಿನಿಂದ ಇಬ್ಬರು ರೈತರು ಸಾವಿಗೀಡಾದರು. ಅಲ್ಲಿಂದ ಈಚೆಗೆ ಹಾವೇರಿಯ ರೈತರ ಮೇಲಿನ ಗೋಲೀಬಾರಿನವರೆಗೆ 152 ರೈತರು ಗೋಲಿಗೆ ಮೃತರಾಗಿದ್ದಾರೆ.

ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ರೈತ ಚಳವಳಿಯು ತುಂಬಾ ಪರಿಣಾಮಕಾರಿಯಾಗಿ ನಡೆದಿದೆ ಎಂದೇ ಹೇಳಬೇಕು. 1980ರಿಂದಲೂ ರಾಜ್ಯ ರೈತ ಸಂಘ ಎಚ್.ಎಸ್. ರುದ್ರಪ್ಪ, ಪ್ರೊ. ನಂಜುಂಡಸ್ವಾಮಿ, ಸುಂದರೇಶ್, ಬಸವರಾಜ ತಂಬಾಕೆ, ಸುರೇಶ್‌ಬಾಬು ಪಾಟೀಲ್, ಬಾಬಾಗೌಡ ಪಾಟೀಲ್ ಮುಂತಾದವರ ಮುಖಂಡತ್ವದಲ್ಲಿ ಸಮರ್ಥ ರೀತಿಯಿಂದ ಚಳವಳಿ ಹಾಗೂ ಚುನಾವಣೆಗಳಲ್ಲೂ ಭಾಗಿಯಾಗಿ ರೈತರ ಹಿತಕ್ಕಾಗಿ ಕೆಲ್ಸ ಮಾಡಿಕೊಂಡು ಬಂದಿದೆ.

ನಂಜುಂಡಸ್ವಾಮಿ, ಬಾಬಾಗೌಡ ಪಾಟೀಲ್ ಈಗಿನ ಕೆ.ಆರ್.ಆರ್.ಎಸ್. ಅಧ್ಯಕ್ಷರಾದ ಪುಟ್ಟಣ್ಣಯ್ಯನವರವರೆಗೆ ಮೂರು ಜನ ಶಾಸಕರನ್ನೂ ವಿಧಾನಸೌಧಕ್ಕೆ ಕಳಿಸಲಾಗಿದೆ. ಒಂದು ಸಾರಿ ಎಲ್ಲಾ ಪಾರ್ಲಿಮೆಂಟ್ ಸೀಟುಗಳಿಗೂ `ಮತದಾರರ ವೇದಿಕೆಯಿಂದ~ ಸ್ಪರ್ಧಿಸಿ ಸಂಪೂರ್ಣ ಸೋಲು ಅನುಭವಿಸಿ, ಮುಂದೆ ಚುನಾವಣೆ ಸಹವಾಸವೇ ಬೇಡವೆಂಬ ತೀರ್ಮಾನಕ್ಕೆ ಬರಲಾಗಿತ್ತು. ಆದರೂ ಪ್ರತಿ ಚುನಾವಣೆಯಲ್ಲೂ ಅಲ್ಲೊಬ್ಬ ಇಲ್ಲೊಬ್ಬರಂತೆ ಶಾಸನಸಭೆಗೆ ಚುನಾವಣೆ ನಿಂತು ಅಲ್ಪಮತದ ವ್ಯತ್ಯಾಸದಲ್ಲಿ ಸೋಲನುಭವಿಸುತ್ತಿದ್ದೇವೆ.
 
ಅದಕ್ಕೆ ಕಾರಣ ನಗರಗಳಲ್ಲಿನ ಜನರು ರೈತಸಂಘಕ್ಕೆ ಮತ ಹಾಕುವುದಿಲ್ಲ. ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರೂ ಮತ ಹಾಕುವುದಿಲ್ಲ. ರೈತಸಂಘ ಚುನಾವಣೆಯಲ್ಲಿ ಏಕಾಂಗಿಯಾಗಿ ಗೆದ್ದು ಬರುವುದು ಕಷ್ಟ. ಪ್ರಣಾಳಿಕೆಯಲ್ಲಿ ರೈತರ ಹತ್ತಿರ ಹತ್ತಿರದ ಸಮಸ್ಯೆಗಳಿಗಾದರೂ ಸ್ಪಂದಿಸುವ ಯಾವುದಾದರೂ ರಾಜಕೀಯ ಪಕ್ಷದೊಡನೆ ಹೊಂದಾಣಿಕೆ ಮಾಡಿಕೊಂಡರೆ ರೈತಸಂಘ ಸಾಕಷ್ಟು ಸೀಟುಗಳನ್ನು ಗೆಲ್ಲಲು ಸಾಧ್ಯವಾಗುತ್ತದೆಂದು ಮನಗಂಡಿದ್ದೇವೆ.
 
ಚುನಾವಣೆಗೆ ಇಳಿಯುವುದೇ ಇಲ್ಲವೆಂದಿದ್ದರೆ ಟ್ರೇಡ್ ಯೂನಿಯನ್ ರೀತಿ ರೈತಸಂಘವೂ ಆಗುತ್ತದೆಂದು ಅನ್ನಿಸುತ್ತಿದೆ. ನನ್ನ `ಕಾಡತೊರೆಯ ಜಾಡು~ ಪುಸ್ತಕದಲ್ಲಿ ಸುಮಾರಾಗಿ ರೈತಸಂಘದ ಹುಟ್ಟು, ನಡೆ, ಈಗಿನ ಪರಿಸ್ಥಿತಿ ಬರೆದಿದ್ದೇನೆ.

1980ರಲ್ಲಿ ನರಗುಂದ - ನವಿಲಗುಂದದಲ್ಲಿ ರೈತ ಚಳವಳಿ ನಡೆಯಲು ಮುಖ್ಯ ಕಾರಣ, ನೀರಾವರಿ ಪ್ರದೇಶದ ರೈತರ ತಲೆಯ ಮೇಲೆ `ಬೆಟರ್‌ಮೆಂಟ್ ಲೆವಿ~ ಎಂದು ಸರ್ಕಾರ ಕಂದಾಯ ವಿಧಿಸಿದ್ದು. ಅದನ್ನು ಕಟ್ಟಲಾಗದೆ ರೈತರು ಕಂಗಾಲಾಗಿದ್ದರು. ಅದನ್ನು ಮನ್ನಾ ಮಾಡಬೇಕೆಂದು ರೈತರು ಹಟ ಹಿಡಿದು ತಹಸೀಲ್‌ದಾರ ಕಚೇರಿಗೆ ಮುತ್ತಿಗೆ ಹಾಕಿದ್ದರು.

ಆಗ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ನರಗುಂದ, ನವಿಲುಗುಂದದ ಇಬ್ಬರು ರೈತರು ಮೃತಪಟ್ಟಿದ್ದರು. ಅದೇ ಕಾವಿನಲ್ಲಿ ಕರ್ನಾಟಕದಾದ್ಯಂತ ರೈತ ಚಳವಳಿ ಪ್ರಾರಂಭವಾಗಿತ್ತು. ಶಿವಮೊಗ್ಗದ ತುಂಗಭದ್ರಾ ಕಾರ್ಖಾನೆಯ ವಿರುದ್ಧ ಚಳವಳಿ ನಡೆಸುತ್ತಿದ್ದ ರೈತಸಂಘವೇ ಆಗ ಗೋಲೀಬಾರಿಗೆ ಬಲಿಯಾಗಿದ್ದ ಇಬ್ಬರು ರೈತರ ಪರವಾಗಿ ದನಿಯೆತ್ತಿ, ಇಡೀ ಘಟನೆಯ ವಿರುದ್ಧ ಮೌನ ಚಳವಳಿ ನಡೆಸಿದ್ದೆವು.

ಅಂದಿನಿಂದ ಅದೇ ಕಬ್ಬು ಬೆಳೆಗಾರರ ಸಂಘಟನೆ ಕರ್ನಾಟಕ ರಾಜ್ಯ ರೈತಸಂಘವಾಗಿ ದಿ. ಎಚ್.ಎಸ್. ರುದ್ರಪ್ಪನವರ ಅಧ್ಯಕ್ಷತೆಯಲ್ಲಿ ಶುರುವಾಯಿತು. ದಿ. ಪ್ರೊ. ನಂಜುಂಡಸ್ವಾಮಿ ಕಾರ‌್ಯಾಧ್ಯಕ್ಷರಾಗಿ, ದಿ. ಡಿ. ಸುಂದ್ರೇಶ್ ಕಾರ‌್ಯದರ್ಶಿಯಾದರು. ಇದೇ ಫೆಬ್ರುವರಿ 13ಕ್ಕೆ ಎಂಡಿಎನ್‌ರವರ ಜನ್ಮದಿನ ಆಚರಿಸುವಂದು ಸಂಪೂರ್ಣ ರೈತಸಂಘದ ರಾಜ್ಯ ಸಮಿತಿ ಸಭೆ ಸೇರಿ ಹೊಸ ಪದಾಧಿಕಾರಿಗಳನ್ನು ಆರಿಸಲು ತೀರ್ಮಾನಿಸಲಾಗಿದೆ.

ಈಗ್ಗೆ ಐದಾರು ವರ್ಷದಿಂದ ನೈಸರ್ಗಿಕ ಕೃಷಿ ಪ್ರತಿಪಾದಿಸುವ ಪಾಳೇಕರ್ ಅವರನ್ನು ರೈತಸಂಘ ಕರೆಸಿ, ನೈಸರ್ಗಿಕ ಕೃಷಿ ವಿಧಾನದ ಸೆಮಿನಾರುಗಳನ್ನು ನಡೆಸಿದೆ. ಶೂನ್ಯ ಬಂಡವಾಳದ ಅಥವಾ ಕಡಿಮೆ ಖರ್ಚಿನ ಕೃಷಿ ಪದ್ಧತಿ ಪ್ರಚಾರವಾಗಿ ಎಲ್ಲಾ ರೈತರು ಅದರ ಪ್ರತಿಫಲ ಪಡೆಯುವುದಕ್ಕೆ ತುಂಬಾ ಸಮಯ ಬೇಕು. ಅದೊಂದೇ ಭಾರತದ ರೈತರನ್ನು ಉಳಿಸುವ ಕಾರ‌್ಯಕ್ರಮವೆಂದು ನಂಬಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT