ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬದಲಾಗದಿದ್ದರೆ ಕಾಲ ದೂರ ತಳ್ಳುತ್ತದೆ'

Last Updated 22 ಏಪ್ರಿಲ್ 2013, 6:55 IST
ಅಕ್ಷರ ಗಾತ್ರ

ಬೆಳಗಾವಿ: `ನಾವು ಬದಲಾಗದಿದ್ದರೆ ಕಾಲವೇ ನಮ್ಮನ್ನು ಬೌದ್ಧಿಕ ವಲಯದಿಂದ ದೂರ ಇಡುತ್ತದೆ. ಜಾಗತಿಕ ವಿದ್ಯಮಾನಗಳ ಜೊತೆಗೆ ಉನ್ನತ ಶಿಕ್ಷಣವು ಮುಖಾಮುಖಿಯಾಗುತ್ತಿರುವುದರಿಂದ ಕಾಲಕ್ಕೆ ತಕ್ಕಂತೆ ಬದಲಾವಣೆ ತಂದುಕೊಳ್ಳುವುದು ಜೀವಂತಿಕೆಯ ಸ್ವರೂಪ' ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಆರ್. ಅನಂತನ್ ಅಭಿಪ್ರಾಯಪಟ್ಟರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು `ಉನ್ನತ ಶಿಕ್ಷಣದಲ್ಲಿ ಪರೀಕ್ಷಾ ಸುಧಾರಣೆಗಳು: ಕೆಲವು ಹೊಸ ಒಳನೋಟಗಳು' ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಉನ್ನತ ಶಿಕ್ಷಣದಲ್ಲಿ ಬದಲಾವಣೆ ಅನಿವಾರ್ಯ. ಬದಲಾಗುತ್ತಿರುವ ಜಾಗತಿಕ ಉನ್ನತ ಶಿಕ್ಷಣದ ಒಲವುಗಳು ಆ ಅನಿವಾರ್ಯತೆಯನ್ನು ಸೃಷ್ಟಿಸಿವೆ' ಎಂದು ಅವರು ಹೇಳಿದರು.

ಕಾರ್ಯಾಗಾರ ಉದ್ಘಾಟಿಸಿದ ವಿಶ್ರಾಂತ ಕುಲಪತಿ ಪ್ರೊ. ಎಂ.ಐ. ಸವದತ್ತಿ, `ವಿಶ್ವವಿದ್ಯಾಲಯಗಳ ಮೂಲ ಕರ್ತವ್ಯವು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಆಧುನಿಕ ಜಗತ್ತಿಗೆ ಸಂವಾದಿಯಾಗುವಂತೆ ರೂಪಿಸುವುದಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಹಾಗೂ ಕೌಶಲಗಳ ತರಬೇತಿ ಕೊಡುವ ಕೆಲಸವನ್ನು ನಿರಂತರ ಮಾಡುತ್ತಿವೆ. ಇದರಿಂದ ಜ್ಞಾನದ ಹುಟ್ಟುವಳಿ ಹೆಚ್ಚುತ್ತದೆ' ಎಂದು ಹೇಳಿದರು.

`ನಾವು ಕೊಟ್ಟ ಜ್ಞಾನವನ್ನು ಎಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಸ್ವೀಕರಿಸಿದ್ದಾರೆ ಎನ್ನುವ ಪ್ರಶ್ನೆ ಬಂದಾಗ ನಮ್ಮ ಶೈಕ್ಷಣಿಕ ಉಪಕ್ರಮಗಳನ್ನು ಅನಿವಾರ್ಯವಾಗಿ ಮೌಲ್ಯಮಾಪನಕ್ಕೆ ಒಳಪಡಿಸಿಕೊಳ್ಳಬೇಕು. ಉತ್ತಮ ಶೈಕ್ಷಣಿಕ ಉಪಕ್ರಮಗಳನ್ನು ರೂಪಿಸುವುದು ವಿಶ್ವವಿದ್ಯಾಲಯಗಳ ಪ್ರಾಥಮಿಕ ಜವಾಬ್ದಾರಿ. ಮೌಲ್ಯಮಾಪನ ಹಾಗೂ ಅದರ ಸುಧಾರಣೆಯು ಎರಡನೇ ಸಂಗತಿ' ಎಂದು ಅವರು ಅಭಿಪ್ರಾಯಪಟ್ಟರು.

ನಂತರ ನಡೆದ `ಪರೀಕ್ಷಾ ಸುಧಾರಣೆಗಳು: ಸಮಸ್ಯೆಗಳು ಮತ್ತು ಸವಾಲುಗಳು' ಕುರಿತ ಗೋಷ್ಠಿಯು ವಿಶ್ರಾಂತ ಕುಲಪತಿ ಪ್ರೊ. ಎಸ್.ಕೆ. ಸೈದಾಪೂರ ಅಧ್ಯಕ್ಷತೆಯಲ್ಲಿ ನಡೆಯಿತು. ಆರ್‌ಸಿಯು ಕುಲಸಚಿವ ಪ್ರೊ. ವಿಷ್ಣುಕಾಂತ ಸಿ. ಚಟಪಲ್ಲಿ ವಿಷಯ ಮಂಡಿಸಿದರು.

`ಪರೀಕ್ಷೆ ಸುಧಾರಣೆಗಳ ಸಂದರ್ಭದಲ್ಲಿ ಉದ್ಭವಿಸುವ ಅವಕಾಶಗಳು' ಕುರಿತ ಗೋಷ್ಠಿಯು ವಿಶ್ರಾಂತ ಕುಲಪತಿ ಪ್ರೊ. ಕೆ. ಸಿದ್ಧಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ಆರ್‌ಸಿಯು ಕುಲಸಚಿವರು (ಮೌಲ್ಯಮಾಪನ)ರಾದ ಪ್ರೊ. ಜೆ.ಜಿ. ನಾಯಿಕ ಒಳನೋಟಗಳನ್ನು ಮಂಡಿಸಿದರು.`ವಿಷಯ ಮತ್ತು ಉದ್ದೇಶಾಧಾರಿತ ಅಧ್ಯಯನದ ಫಲಿತಗಳು' ಕುರಿತ ಗೋಷ್ಠಿಯಲ್ಲಿ ಪ್ರಾಧ್ಯಾಪಕ ಪ್ರೊ. ಸಿದ್ದು ಪಿ. ಅಲಗೂರ ವಿಷಯ ಮಂಡಿಸಿದರು. ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಜಿ. ಮೂಲಿಮನಿ ಅಧ್ಯಕ್ಷತೆ ವಹಿಸಿದ್ದರು.

ಆನ್‌ಲೈನ್ ಪ್ರಶ್ನೆಪತ್ರಿಕೆಯ ಹಂಚಿಕೆ ಕುರಿತ ಗೋಷ್ಠಿಯಲ್ಲಿ ಬೆಂಗಳೂರಿನ ಲಾಜಿಸಿಸ್ ಕಂಪೆನಿಯ ಸಿಇಒ ಎಂ. ಎನ್. ರಮೇಶ ಮಾತನಾಡಿದರು. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮೀನಾ ಚಂದಾವರಕರ ಅಧ್ಯಕ್ಷತೆ ವಹಿಸಿದ್ದರು.

ಪರೀಕ್ಷಾ ಕಾರ್ಯವಿಧಾನ ಮತ್ತು ರಚನಾತ್ಮಕ ಬದಲಾವಣೆಯ ಅನಿವಾರ್ಯತೆಗಳು ಕುರಿತ ನಿರ್ಣಾಯಕ ಸಂವಾದವನ್ನು ಎಂ.ಜಿ. ಹೆಗಡೆ ನಡೆಸಿಕೊಟ್ಟರು.ಅಂತಿಮವಾಗಿ ಬಿ. ಆರ್. ಅನಂತನ್ ಸಮಾರೋಪ ಭಾಷಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT