ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗಿದ್ದು ಕಾಲವಲ್ಲ!

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

`ತಿಂಡಿ ತಿಂದ್ ಹೋಗೇ, ಅದೇನ್ ಅವಸರ...'
`ಬೇಡಮ್ಮ ಟೈಮಿಲ್ಲ, ಆಫೀಸಲ್ಲೇ ಏನಾರೂ ತಿಂತೀನಿ'. ಬೋರ್ನ್‌ವಿಟಾ ಹಾಕಿಟ್ಟ ಹಾಲನ್ನು ಒಂದೇ ಗುಟುಕಿಗೆ ಗುಳುಂ ಎನ್ನಿಸಿ ಹೋದ ಮಗಳತ್ತ ನೋಡುತ್ತಾ ನಿಲ್ಲುವುದು ಬಿಟ್ಟು ಬೇರೇನೂ ತೋಚಲಿಲ್ಲ.

ಟೈಟ್ ಜೀನ್ಸ್, ಮೇಲೊಂದು ಕುರ್ತಾ ಧರಿಸಿ ತಾಲಿಬಾನೀಯರಂತೆ ತಲೆಗೊಂದು ಸ್ಕಾರ್ಫ್ ಸುತ್ತಿಕೊಂಡು ಕಣ್ಣುಗಳನ್ನು ಪಿಳಿಪಿಳಿ ಬಿಡುತ್ತಾ ಸ್ಕೂಟಿ ಸ್ಟಾರ್ಟ್ ಮಾಡಿ `ಜುಂ' ಅಂತ ಹೊರಟೇಬಿಟ್ಟಳು ಅವಳು. ಕಿವಿಗಿಲ್ಲ, ಕೈಗಿಲ್ಲ, ಕುತ್ತಿಗೆಗಂತೂ ಇಲ್ಲವೇ ಇಲ್ಲ.

ಹಣೆಯದ್ದನ್ನು ಕೇಳಬೇಡಿ. ಕೂದಲನ್ನು ಸೇರಿಸಿ ಬ್ಯಾಂಡ್ ಹಾಕಿ ಕಟ್ಟಲು ಎಷ್ಟೊತ್ತು ಬೇಕು? ಆದರೂ ದಿನದಿನವೂ ಅವಸರವೇ. ಭಯೋತ್ಪಾದಕ­ರನ್ನು ನೆನಪಿಸುವ ಈಗಿನವರ ಗೆಟಪ್ ಅನೇಕ ವಿಧದಲ್ಲಿ ಆಪದ್ಬಾಂಧವನಂತೆ ಕೆಲಸ ಮಾಡುತ್ತದೆ. ಹುಡುಗರೊಡನೆ ಹೋಗುವಾಗ ಗುರುತು ಮರೆಮಾಚ­ಬಹುದು; ದೂಳಿನಿಂದ ರಕ್ಷಣೆ ಪಡೆಯಬಹುದು; ಬಿಸಿಲಿನ ಬೇಗೆಯಿಂದ ಬಚಾವಾಗ­ಬಹುದು; ಪಡ್ಡೆ ಹುಡುಗರ ಕಾಕದೃಷ್ಟಿಯಿಂ­ದಲೂ ತಪ್ಪಿಸಿಕೊಳ್ಳಬಹುದು, ಇನ್ನು ಹೇರ್‌ಸ್ಟೈಲೂ ಹಾಳಾಗದು!

ರೂಮಿಗೆ ಹೋಗಿ ನೋಡಿದರೆ ಪೂರ್ತಿ ಚೆಲ್ಲಾಪಿಲ್ಲಿಯಾಗಿ ಹರಡಿತ್ತು. ನಾವೆಂದಾದರೂ ಹೀಗಿದ್ದೆವೇ? ಇರೋದರಲ್ಲೇ ನೀಟಾಗಿ ಇರ್ತಿದ್ದೆವು. ಈಗಿನ ಎಲ್ಲರ ಮನೆಯ ಹಣೆಬರಹವೂ ಇದೇ ಇರಬೇಕು. ಓದುವಾಗ ಓದುವ ನೆಪವಾದರೆ ನಂತರವೂ ಇದು ಸಾಮಾನ್ಯ ಚಿತ್ರಣ.  ಒಬ್ಬೊಬ್ಬರಿಗೆ ಒಂದೊಂದು ರೂಮು ಅನ್ನೋ ಪರಿಕಲ್ಪನೆಯೇ ಇರಲಿಲ್ಲ ಆಗ. ಒಂದು ರೂಮಿನಲ್ಲೇ ಮೂರ್ನಾಲ್ಕು ಜನ ಮಲಗುವ ವ್ಯವಸ್ಥೆ ಇತ್ತು. ನೆಲದ ಮೇಲೆ ಕುಳಿತೇ ಓದು-ಬರಹ. ಈಗಿನವರಿಗೆ ಹಾಗಲ್ಲ. ಹಡೆಯೋದೇ ಗರಿಷ್ಠ ಎರಡಾಗಿ­ರುವಾಗ, ಇಬ್ಬರಿಗೂ ಬೇರೆ ಬೇರೆ ರೂಮಿನ ವ್ಯವಸ್ಥೆ. ಮಲಗಲು ಮಂಚ, ಓದಲು ಟೇಬಲ್ಲು.

ಸ್ವತಂತ್ರಕ್ಕಂತೂ ಬರವಿಲ್ಲ. ಇವಳಿಗೇನು ಸಣ್ಣ ವಯಸ್ಸೇ? ಭರ್ತಿ ಇಪ್ಪತ್ತಾರು. 80ರ ದಶಕದ ನಮ್ಮ ಕಾಲದಲ್ಲಿ 21 ದಾಟಿ 22–- 23 ಆದರೆ ಸಾಕು, `ವಯಸ್ಸು ಮೀರುತ್ತಿದೆ ಬೇಗ ಮದುವೆ ಮಾಡಿ' ಎಂಬ ವರಾತ ಮನೆಯಲ್ಲಿ. ಯಾವ ಗುರಿಯಿಲ್ಲದೇ ಸ್ನಾತಕೋತ್ತರ ಪದವಿ ಗಳಿಸಿದ್ದೆ. ಕೆಲಸಕ್ಕೆ ಹೋಗಲು ಬೆಟ್ಟದಷ್ಟು ಆಸೆಯಿತ್ತು. ಆದರೆ ಮದುವೆ ತಯಾರಿ ನಡೆಸಿದ್ದ ಹಿರಿಯರು ಕೆಲಸಕ್ಕೆ ಹೋಗಲು ಬಿಡಲಿಲ್ಲ. `ಗಂಡನ ಮನೆಯಲ್ಲಿ ಹೇಗೆ ಹೇಳ್ತಾರೋ ಹಾಗೆ ಮಾಡು' ಸಿದ್ಧ ಉತ್ತರ ಅವರ ಬತ್ತಳಿಕೆಯಲ್ಲಿತ್ತು.

`ನಾ ಓದಿದ್ದು ಏಳನೇ ಇಯತ್ತೆ ಮಾತ್ರ. ಹದಿನೇಳಕ್ಕೇ ಮದುವೆ. ತುಂಬಿದ ಮನೆಯಲ್ಲಿ ನಾಲ್ಕು ಮಕ್ಕಳನ್ನು ಬೆಳೆಸುತ್ತಾ ನಿಮಗೆಲ್ಲ ವಿದ್ಯೆಯಾದರೂ ಕೊಡಿಸಿದ್ದೇವೆ. ಹಾಗ್ ನೋಡಿದ್ರೆ ನೀನೇ ಲಕ್ಕಿ. ಇಪ್ಪತ್ಮೂರನೇ ವರ್ಷದ ತನಕವಾದ್ರೂ ಹಾಯಾಗಿದ್ದೆ. ಸಂತೋಷ ಪಡು' ಇದು ಅಮ್ಮನ ವ್ಯಾಖ್ಯಾನ. `ಅಯ್ಯೋ ನಿಂದೇನು ಪುರಾಣ ನಂದು ಕೇಳು. ಒಂದನೇ ಇಯತ್ತೆ ಮಾತ್ರ ಕಲಿತಿದ್ದೆ. ಹನ್ನೆರಡು ವರ್ಷ­ವಾಗಿತ್ತು. ಮದುವೆ ಮಾಡಿ­ಬಿಟ್ರು. ಆಗಿನ ಕಾಲ್‌­ದಲ್ಲಿ ಅದೇ ಲೇಟು. ಹತ್ತು ಮಕ್ಕಳನ್ನು ಹಡೀಲಿಲ್ಲವೇ? ನನಗೇನಾಗಿದೆ ಧಾಡಿ, ಗುಂಡುಕಲ್ಲಿನಂಗೆ ಇದ್ದೀನಿ. ನಿನ್ನ ಮದುವೆ ನೋಡೇ ಕಣ್ಮುಚ್ತೇನೆ ಕಣೇ' ಅಮ್ಮನ ಕೊರೆತಕ್ಕೆ ಅಜ್ಜಿ ತನ್ನದೂ ಸೇರಿಸಿ ಮದುವೆಗೆ ಒಪ್ಪಿಸಿದ್ದರು.

ವಿಭಕ್ತ ಕುಟುಂಬ ಜೀವನ ಹಾಸುಹೊಕ್ಕಾಗಿರುವ ಈಗಿನ ಕಾಲದಲ್ಲಿ ತಾಯಂದಿರು ತಾವೇನೇನು ಮಾಡಲಾಗದೆ ಕಳೆದುಕೊಂಡಿ­ದ್ದರೋ ಅವನ್ನೆಲ್ಲ ಮಕ್ಕಳ ಮೂಲಕ, ಅದರಲ್ಲೂ ಹೆಣ್ಣು ಮಕ್ಕಳ ಮೂಲಕ ತೀರಿಸಿಕೊಳ್ಳಲು ಯತ್ನಿಸುತ್ತಾರೆ. ನೋಡಿ, ಈಗಿನ ಹೆಣ್ಣು ಮಕ್ಕಳಿಗೆ ಸಮಯದ ಮಿತಿ ಇಲ್ಲ. ನಮ್ಮ ಕಾಲದಲ್ಲಾಗಿದ್ದರೆ ಸಂಜೆ ಕಪ್ಪಾಗುವ ಸಮಯ ಮನೆ ಸೇರಲೇಬೇಕು. ಆಗ ಲಂಗ ಬ್ಲೌಸು, ದಾವಣಿ, ಮ್ಯಾಕ್ಸಿ, ಚೂಡಿದಾರ್ ಮಧ್ಯಮವರ್ಗದ ಮಡಿವಂತರ ಡ್ರೆಸ್ ಕೋಡಾಗಿತ್ತು. ಭುಜಕ್ಕೆ ಬ್ಯಾಗು, ಎದೆಗೆ ಬುಕ್‌ಗಳನ್ನು ಅವುಚಿಕೊಂಡು ತಲೆತಗ್ಗಿಸಿ ನಡೆಯು­ವುದು ರೂಢಿ. ಜಡೆ ಹಾಕಿಕೊಳ್ಳುವುದು ಸಂಪ್ರ­ದಾಯ. ಪೋನಿ­ಟೇಲ್ ಇರಲಿಲ್ಲವೆಂತಲ್ಲ, ಪ್ಯಾಂಟೂ ಚಾಲ್ತಿಯಲ್ಲಿತ್ತು. ಆದರೆ ಬಹಳ ಕಡಿಮೆ. ಮದುವೆಯಾದವರಿಗೆ ಸೀರೆ ಕಡ್ಡಾಯ. ನಗರಗಳಲ್ಲಿ ನೈಟಿ ಹಾವಳಿಯೂ ಹೆಚ್ಚಾಗಿತ್ತು. ನೈಟಿಯನ್ನು ಡೇಟಿ ಮಾಡಿ ಓಡಾಡುವವರಿಗೇನೂ ಕಡಿಮೆ ಇರಲಿಲ್ಲ.

ಅಮ್ಮನ ಕಾಲದಲ್ಲಿ ಸೀರೆ ಸೆರಗನ್ನು ಮೈತುಂಬಾ ಹೊದ್ದು ಓಡಾಡುವುದು ಪದ್ಧತಿ. ಹಾಗೆಯೇ ತುಂಡು ಸೆರಗಿನ ಸ್ಟೈಲೂ ಇತ್ತು. ಅಜ್ಜಿ ಕಾಲದಲ್ಲಿ ಲಂಗ ಧರಿಸದೆ ಒಂಬತ್ತು ಗಜದ ಸೀರೆ ಉಡುವುದು ಪದ್ಧತಿಯಲ್ಲಿತ್ತಂತೆ. ಎಲ್ಲ ಕಾಲದಲ್ಲೂ ಅತಿ ಬೋಲ್ಡು, ಅತಿ ಸೌಮ್ಯ ಸಂಪ್ರದಾಯವಾದಿಗಳು ಇದ್ದೇ ಇರುತ್ತಾರೆ. ಅಮ್ಮನ ಕಾಲದಲ್ಲಿ ಕನಿಷ್ಠ ನಾಲ್ಕು ಮಕ್ಕಳಿಗೆ ಕುಟುಂಬ ಸೀಮಿತವಾದರೆ, ಅಜ್ಜಿ ಕಾಲದಲ್ಲಿ ಕನಿಷ್ಠ ಏಳು, ಗರಿಷ್ಠ ಹತ್ತಂತೆ! ಇನ್ನು ನಮ್ಮ ಕಾಲ, ಅಂದರೆ 80ರ ದಶಕ­ದಲ್ಲಿ ಎರಡು ಮಕ್ಕಳ ಸಂಸಾರದ ಚಿತ್ರಣ ಸಾಮಾನ್ಯವಾಗಿತ್ತು. ನಮಗಿಂತ ಹತ್ತು ಹದಿನೈದು ವರ್ಷದ ನಂತರದವರು `ನಾವಿಬ್ಬರು ನಮಗೊಬ್ಬರು' ಎಂಬ ಘೋಷಣೆಗೆ ಬದ್ಧರಾದದ್ದೂ ಅಷ್ಟೇ ಸತ್ಯ. ಈಗಾದರೆ `ನಾವಿಬ್ಬರೇ' ಅದೂ ಮದುವೆ ಯಶಸ್ವಿಯಾದರೆ ಮಾತ್ರ ಎನ್ನುವ ಪರಿಸ್ಥಿತಿ.

ಈಗೆಲ್ಲ ಹೆಣ್ಣು ಮಕ್ಕಳು 28-–29ನೇ ವಯಸ್ಸಿಗೆ ಮದುವೆಯಾಗುವ ಮನಸ್ಸು ಮಾಡುತ್ತಾರೆ. ಇಲ್ಲಿ ನಮ್ಮ ಕಾಲದಲ್ಲಿ ಮದುವೆಯ ಬಗ್ಗೆ ಇದ್ದಂತಹ ನವಿರು ಭಾವನೆ ಇರುವುದಿಲ್ಲ. ಮದುವೆಯ ಸಲುವಾಗಿ ಮದುವೆಯಾಗುವ ಸ್ಥಿತಿ. ಹುಡುಗರಿಗೆ ಅವರೇ ಪ್ರೊಪೋಸ್ ಮಾಡುವಷ್ಟು ದಿಟ್ಟೆಯರು. ನಾವು ಸಣ್ಣವರಾಗಿದ್ದಾಗ ಹೆಂಗಸರು ಅಡುಗೆ ಮನೆಯಲ್ಲಿ ಇರಬೇಕಿತ್ತು. ಪಡಸಾಲೆಯಲ್ಲಿ ಗಂಡಸರು ಹರಟುವಾಗ ಮೂಗು ತೂರಿಸುವಂತೆ ಇರಲಿಲ್ಲ. ಇವರ ಕೆಲಸ ಏನಿದ್ದರೂ ತಿಂಡಿ ತೀರ್ಥ ಸರಬರಾಜು ಅಷ್ಟೇ.

ನಾನು ಕೆಲಸಕ್ಕೆ ಹೋಗಲು ಗಂಡನ ಮನೆಯಲ್ಲಿ ಅನುಮತಿ ಇರಲಿಲ್ಲ. ಗಂಡನಿಗೆ ಸಂಸಾರ ನಡೆಸುವ ತಾಕತ್ತಿರುವಾಗ ಹೆಣ್ಣಿಗೆ ಹೊರಗೆ ದುಡಿಯುವ ಅಗತ್ಯ ಇರುವುದಿಲ್ಲ ಎಂಬ ವಿಚಾರ­ಧಾರೆ ಹಿರಿಯರದ್ದು. ಅದೇ ಹಿರಿಯರ ಈಗಿನ ವಿಚಾರಧಾರೆಯೇ ಬೇರೆ. ಮೊಮ್ಮಕ್ಕಳಿಗೆ ಅವರ ಪೂರ್ತಿ ಬೆಂಬಲ. `ಅಷ್ಟೆಲ್ಲ ಕಲಿತವರು ಮನೆಯಲ್ಲಿ ಹೇಗೆ ಕುಳಿತಾರು. ಮದುವೆಯಾಗಿ ನಮ್ಮಂತೆ ಮಕ್ಕಳನ್ನು ಹೆತ್ತು ಮನೆಯಲ್ಲಿ ಕೂರಲು ಹೇಳುವುದು ತರವಲ್ಲ' ಎನ್ನುವಾಗ ಬೆರ­ಗಾ­ಗುವ ಸರದಿ ನನ್ನದು. ಹಾಗಾದರೆ ನಾನೇನು ಕಡಿಮೆ ಓದಿದ್ದೆನೇ?

ಎಲ್ಲದಕ್ಕೂ ಸೈ
ಹರಡಿದ್ದ ಮಗಳ ರೂಮು ಓರಣ ಮಾಡುವಷ್ಟರಲ್ಲಿ ಸಾಕು ಸಾಕಾಯಿತು. ಬಟ್ಟೆಗಳ ರಾಶಿಯೋ... ಬ್ಯಾಗ್‌ಗಳಿ­ಗಂತೂ ಲೆಕ್ಕವಿಲ್ಲ. ಇನ್ನು ಚಪ್ಪಲಿಗಳು ಕನಿಷ್ಠ ಅರ್ಧ ಡಜನ್ ಬೇಕೇ ಬೇಕು. ಒಂದು ಸಮಾರಂಭಕ್ಕೆ ಧರಿಸಿದ ಬಟ್ಟೆಯನ್ನು ಇನ್ನೊಂದಕ್ಕೆ ಹಾಕಲಾರರು. ಪುನಃ ಸಾವಿರಾರು ರೂಪಾಯಿ ಸುರಿದು ಹೊಸದರ ಖರೀದಿ. ಹಾಗೆಯೇ ಈಗಿನ ಯುವ ಪೀಳಿಗೆ ಹಾಗೂ ಅಮ್ಮಂದಿರಲ್ಲಿ ಪಾರ್ಲರ್ ಸಂಸ್ಕೃತಿ ಊಟ ತಿಂಡಿಯಂತೇ ಸಾಮಾನ್ಯವಾಗಿದೆ.

ಮಧ್ಯಮ ವರ್ಗದ ನಮ್ಮ ಕಾಲದಲ್ಲೂ ಪಾರ್ಲರ್ ಇತ್ತು. ಆದರೆ ಅದಕ್ಕೆ ಒಂದು ವರ್ಗದವರು ಮಾತ್ರ ಹೋಗುತ್ತಿದ್ದರು. ಆಗಲೂ ಸೌಂದರ್ಯ ಪ್ರಜ್ಞೆ ಇತ್ತು. ರಾತ್ರಿ ಮಲಗುವಾಗ ಶ್ರೀಗಂಧ ತೇಯ್ದು ಅರಿಶಿನ ಕೂಡಿಸಿ ಮುಖಕ್ಕೆ ಹಚ್ಚಿ, ಬೆಳಿಗ್ಗೆ ತೊಳೆಯುತ್ತಿದ್ದೆವು. ಮೊಡವೆ ಬರದು, ಬಣ್ಣ ತಿಳಿಯಾ­ಗು­ತ್ತದೆ ಎಂಬ ನಂಬಿಕೆ. ಕೈಗಳಿಗೆ ರಾತ್ರಿ ಮೆಹಂದಿ ಹಚ್ಚಿ ಪ್ಲಾಸ್ಟಿಕ್ ಕವರ್ ಕಟ್ಟಿ, ಕೈಗಳನ್ನು ಅಲುಗಿಸದೇ ಮಲಗಿ ಬೆಳಿಗ್ಗೆ ಬೇಗ ಎದ್ದು ತೊಳೆದು ನೋಡುವ ತನಕ ಪುರುಸೊ­ತ್ತಿಲ್ಲ. ಕೆಂಪು ಹೆಚ್ಚಾಗಿದ್ದಲ್ಲಿ ಉಷ್ಣದ ಮೈ ಅನ್ನುವವರು ಕೆಲವರಾದರೆ, ಇನ್ನು ಕೆಲವರು ಜಾಸ್ತಿ ಪ್ರೀತಿಸುವ ಗಂಡೇ ಸಿಗುವುದು ಎಂದು ಕಿಚಾಯಿಸುತ್ತಿದ್ದುದು ಮುದ ನೀಡುತ್ತಿತ್ತು.

ಈಗಿನವರು ಮಕ್ಕಳು ಓದಿಕೊಳ್ಳಲಿ ಎಂದು ಯಾವ ಕೆಲಸವನ್ನೂ ಕಲಿಸದೆ ಮುಚ್ಚಟೆಯಿಂದ ಬೆಳೆಸುತ್ತಾರೆ. ನಂತರ ಅಮ್ಮಂದಿರಿಗೆ ವಯಸ್ಸಾದಾಗ `ಬಾರೇ ಹೆಲ್ಪ್ ಮಾಡೇ/ ಮಾಡೋ' ಎಂದು ಕರೆದರೆ `ಹೋಗಮ್ಮ ನನಗೆ ಟೈಮಿಲ್ಲ, ಹೊರ­ಗಿನಿಂದ ತಂದ್ರಾಯ್ತು' ಎಂತಲೋ ಅಥವಾ `ಇದ್ಯಲ್ಲಾ ನೂಡಲ್ಸ್. 2 ನಿಮಿಷಕ್ಕೆ ರೆಡಿ' ಉಡಾಫೆ ಉತ್ತರ ರೆಡಿ!

ಇದೆಲ್ಲ ನೋಡಿದರೆ ಕಳೆದ 20 ವರ್ಷಗಳಲ್ಲಿ ಹೆಣ್ಣಿನ ಸ್ಥಾನಮಾನ ಸುಧಾರಿಸಿದಷ್ಟು ತೀವ್ರವಾಗಿ ಹಿಂದೆಂದೂ ಆಗಿರಲಿಲ್ಲ. ಈಗಿನ ಹೆಣ್ಣಿಗೆ ತನಗೆ ಮದುವೆಯಾಗು­ವವನಿಗೆ ಇಷ್ಟೇ ವರ್ಷವಾಗಿ­ರಬೇಕು, ಇಂತಹದ್ದೇ ಕೆಲಸವಿರಬೇಕು, ಇದೇ ಊರಲ್ಲಿರಬೇಕು ಎಂಬಂತಹ ಆಯ್ಕೆಗಳ ಸ್ವಾತಂತ್ರ್ಯ ಢಾಳಾಗಿದೆ. ಸಮ ವಯಸ್ಕರಿದ್ದರೆ ಉತ್ತಮ, 2–-3 ವರ್ಷಗಳ ಅಂತರ ಅಡ್ಡಿಯಿಲ್ಲ, ನಾಲ್ಕಾದರೆ ಹೆಚ್ಚಾಯಿತು ಎಂದು ಮುಲಾಜಿಲ್ಲದೇ ನಿರಾಕರಿಸುವ ಸ್ವಾತಂತ್ರ್ಯ!

ನಮ್ ಕಾಲದಲ್ಲಿ 10 ವರ್ಷ ಅಂತರದಲ್ಲಿ ಮದುವೆ ಮಾಡಿದರೂ ಮಂಕುದಿಣ್ಣೆಗಳಂತೆ ಸುಮ್ಮನಿರುತ್ತಿದ್ದೆವು. ವರ ಏನು ಮಾಡುತ್ತಾನೆ, ಪಗಾರ ಎಷ್ಟು ಯಾವುದೂ ಹೆಣ್ಣಿನ ತಲೆನೋವಲ್ಲ. ಆಗೆಲ್ಲ ಪ್ರೀತಿಸಿ ಮದುವೆ­ಯಾದದ್ದೂ ಇತ್ತು. ಆದರೆ ಬಹಳ ಕಡಿಮೆ. ಡೈವೋರ್ಸ್ ಕೂಡ ಇತ್ತು. ಆದರೆ  ಮರ್ಯಾದೆಗೆ ಅಂಜಿ ಹೊಂದಾಣಿಕೆ ಮಾಡಿ­ಕೊಂಡು ಸಂಸಾರ ಸಾಗಿಸುತ್ತಿದ್ದರು. ಹೆಚ್ಚಾಗಿ ಹೆಣ್ಣೇ ಹೊಂದಿಕೊಳ್ಳುವ ವಾಡಿಕೆ ಇತ್ತು. ಈಗ ಹಾಗಲ್ಲ. ಪ್ರೀತಿಸಿ ಮದುವೆಯಾಗು­ವುದೂ ಹೆಚ್ಚು, ಡೈವೋರ್ಸ್ ಕೇಸ್‌ಗಳೂ ಹೆಚ್ಚು.

ಹನ್ನೆರಡನೇ ವಯಸ್ಸಿಗೆ ಮದುವೆಯಾದ ಅಜ್ಜಿ, ಹದಿನೇಳಕ್ಕೆ ಮದುವೆಯಾದ ಅಮ್ಮ, ಇಪ್ಪತ್ಮೂರಕ್ಕೆ ಮದುವೆಯಾದ ನಾನು ಹಾಗೂ ಇನ್ನೂ ಮದುವೆಯ ಮಾತಿಗೆ ಸೊಪ್ಪು ಹಾಕದ ಇಪ್ಪತ್ತಾರರ ಮಗಳು... ಒಂದು ಶತಕದಲ್ಲಿ ಹೆಣ್ಣಿನ ಸ್ಥಾನಮಾನದಲ್ಲಿ ಅದೆಷ್ಟು ಬದಲಾವಣೆ! ಓದಿದ ಆಕೆ ದುಡಿಯುತ್ತಾಳೆ. ಹಣ ಖರ್ಚು ಮಾಡುವಲ್ಲಿ ಸ್ವತಂತ್ರಳು. ಮನೆಯವರೊಂದಿಗೆ ಮಾತನಾಡಲು ಪುರುಸೊತ್ತಿರುವುದಿಲ್ಲ. ಮೊಬೈಲ್ ಅಥವಾ ಕಂಪ್ಯೂಟರ್ ಒಡನಾಟದಲ್ಲೇ ದಿನದ ಆರಂಭ–- ಅಂತ್ಯ.

ಕಾಲ ಬದಲಾಗಿದೆ ಎಂದು ಕೊರಗಿದರೇನು ಬಂತು. ಕಾಲ ಹಾಗೆಯೇ ಇದೆ. ಬದಲಾದದ್ದು ನಮ್ಮ ಆಲೋಚನಾ ಸರಣಿ ಹಾಗೂ ವ್ಯವಸ್ಥೆ. ಒಮ್ಮೊಮ್ಮೆ, ಯಾಕೋ ಈ ವ್ಯವಸ್ಥೆ ಸರಿಯಿಲ್ಲ ಎನಿಸುತ್ತದೆ. ಆದರೆ ಕಾಲ ಮೀರಿ ಹೋಗಿದೆ. ಇದಕ್ಕೇ ಇರಬೇಕು `ಜನರೇಷನ್ ಗ್ಯಾಪ್' ಎನ್ನುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT