ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾದ ದೇಶ-ಕಾಲ ಆದರದೇ ಭಾವ

Last Updated 29 ಮೇ 2012, 19:30 IST
ಅಕ್ಷರ ಗಾತ್ರ

ಇನಿಯ ಪರದೇಶದಲ್ಲಿ ನಾನು ಬಾಡಿದ್ದೇನೆ ಇಲ್ಲಿ
ಚೋಕೊಚ್ಚಿನೊ ಕಹಿಯಾಗಿದೆ...
ಕಣ್ಣು ಮಂಜಾಗಿದೆ...
ಕಾಂಪ್ ಸ್ಕ್ರೀನ್ ಮಬ್ಬಾಗಿದೆ
ಮಧುವಿನ ಕರೆದು ತಾರೇ ನೀರೆ
ನನ್ನ
ನಲ್ಲನ ಕರೆದು ತಾರೇ...


ನರ್ತಕಿಯೂ ಆಗಿರುವ ಟೆಕ್ಕಿ ಗೆಳತಿಯೊಬ್ಬಳು ತನ್ನ ಬ್ಲಾಗ್‌ನಲ್ಲಿ   ಬರೆದುಕೊಂಡ ಪ(ಗ)ದ್ಯವಿದು. ಆಕೆಯ ಬಾಯ್‌ಫ್ರೆಂಡ್ ಮಧು `ಆನ್ ಸೈಟ್~ ಕೆಲಸಕ್ಕೆಂದು ವಿದೇಶಕ್ಕೆ ತೆರಳಿದ್ದಾಗ ತೋಡಿಕೊಂಡ ವಿರಹವೇದನೆಯಿದು.

ವರ್ಷಗಳ ಹಿಂದೆ ಓದಿದ್ದ ಈ ಸಾಲುಗಳು ಕಳೆದ ಶುಕ್ರವಾರ ಸಂಜೆ ಯವನಿಕದಲ್ಲಿ ಶ್ವೇತಾ ವೆಂಕಟೇಶ್ ಅವರ ಭರತನಾಟ್ಯ ಕಾರ್ಯಕ್ರಮದಲ್ಲಿ ಥಟ್ಟನೆ ನೆನಪಿಗೆ ಬಂದವು.
ಭರತ `ನಾಟ್ಯಶಾಸ್ತ್ರ~ದಲ್ಲಿ ರಸ ಸಿದ್ಧಾಂತ ಪ್ರತಿಪಾದಿಸಿ ಎರಡು ಸಾವಿರ ವರ್ಷಗಳೇ ಆಗಿವೆ.

ಭರತ ಸೇರಿದಂತೆ ಎಲ್ಲಾ ಲಾಕ್ಷಣಿಕರು ಶೃಂಗಾರ ರಸಕ್ಕೆ `ರಸಗಳ ರಾಜ~ ಎಂಬ ಪಟ್ಟ ನೀಡಿದ್ದಾರೆ. ಪ್ರೀತಿ ಭಾವದ ಸೆಲೆ, ಜೀವದ ಮೂಲ. ಅದಕ್ಕೆಂದೇ ಎಲ್ಲರನ್ನೂ ತಟ್ಟುತ್ತದೆ. ಪ್ರೀತಿ, ಪ್ರಣಯ, ಒಲುಮೆ, ವಿರಹ ವೇದನೆಗಳೆಲ್ಲ ಶೃಂಗಾರ ರಸದ ವಿವಿಧ ಮುಖಗಳು. ರಂಗದ ಮೇಲೆ ಇವುಗಳ ನಿವೇದನೆ ಕಲಾವಿದರಿಗೆ ಪ್ರಿಯವಾದದ್ದು.

ಹೃದಯ ತಟ್ಟುವ, ಮನ ಮುಟ್ಟುವ ಮತ್ತು ಆ ಮೂಲಕ ಪ್ರೇಕ್ಷಕರ ಸಂವೇದನೆಗೆ ನಿಲುಕುವ ಪ್ರೀತಿ, ವಿರಹದ ವಸ್ತು-ವಿಷಯಗಳು ದೇಶ, ಭಾಷೆ ಮತ್ತು ಕಾಲಾತೀತವಾದದ್ದು. ಬಹುಶಃ ಅದಕ್ಕೇ ಇರಬೇಕು, ಶ್ವೇತಾ ಹಾಗೂ ಆಕೆಯ ಅಮ್ಮ ಮತ್ತು ಗುರು ಸುಪರ್ಣ ವೆಂಕಟೇಶ್ ಅಂದು ಮುಖ್ಯವಾಗಿ ಆಯ್ದುಕೊಂಡದ್ದು ಈ ಮೇಲಿನ ವಸ್ತು-ವಿಷಯಗಳನ್ನೇ.

`ವಳ್ಳಿಭಾರತಂ~ ನಿಂದ ಆಯ್ದುಕೊಂಡ ರಚನೆಯನ್ನು ಭರತನಾಟ್ಯ ಕಾರ್ಯಕ್ರಮದ ಹೃದಯ ಭಾಗವಾದ ಪದವರ್ಣ (ಕಮಾಚ್ ರಾಗ, ರೂಪಕ ತಾಳ)ವಾಗಿ ಪ್ರದರ್ಶಿಸಲಾಯಿತು. ವಿರಹೋತ್ಕಂಠಿತ ನಾಯಕಿ ಭಾವದ ವಿವಿಧ ಮಗ್ಗಲುಗಳನ್ನು ಸಮರ್ಥವಾಗಿ ಬಿಂಬಿಸಿದಳು ಶ್ವೇತಾ.

ನಾಯಕ ಮುರುಗನಿಂದ ಬೇರ್ಪಟ್ಟ ಸಂಕಟದಲ್ಲಿ ಬಿಕ್ಕಿದಳು, ಬೆಚ್ಚಿದಳು, ಬೆದರಿ-ಬೆವರಿ ಬಸವಳಿದಳು. ರಾತ್ರಿಯಲ್ಲಿ ಕದ್ದು, ಮುಸುಕು ಹೊದ್ದು, ಪುಟ್ಟ ದೀಪ ಹಿಡಿದು ನಲ್ಲನನ್ನು ಹುಡುಕಿ ಹೊರಟಳು. ಇನ್ಯಾವ ಹೆಣ್ಣು ಗಂಟು ಬಿದ್ದಿದ್ದಾಳೋ ಎಂದು ಶಂಕಿಸಿದಳು.

`ಪ್ರೀತಿಯ ಸಾವಿರ ಬಾಣಗಳು ನನ್ನೆದೆಗೆ ನಾಟಿವೆ, ಇದೊಂದು ಸಿಹಿಯಾದ ಹಿಂಸೆಯಲ್ಲವೇ~ ಎಂದು ಕನವರಿಸಿದಳು. ಒಟ್ಟಿನಲ್ಲಿ ಸ್ಥಾಯಿ ಭಾವ ಮತ್ತು ಮೂಡಿ ಮರೆಯಾಗುವ ಸಂಚಾರಿ ಭಾವಗಳ ಜಾಲದಲ್ಲಿ ಪ್ರೇಕ್ಷಕರನ್ನು ಸೆರೆಹಿಡಿದಳು.
ನಂತರದ ಜಯದೇವನ ಅಷ್ಟಪದಿ `ರಾಧಿಕಾ ತವ ವಿರಹೇ~ಯಲ್ಲಿ ಮೇಲಿನ ವಿಷಯದ ಮುಂದುವರಿದ ಭಾಗ ಕಂಡುಬಂತು ಎನ್ನಬಹುದು.

`ಕೃಷ್ಣನ ಅಗಲಿಕೆಯಿಂದ ರಾಧಾ ಕೃಶವಾಗಿದ್ದಾಳೆ, ಮರಣ ಶಯ್ಯೆಯಲ್ಲಿದ್ದಾಳೆ. ಒಂದು ಬಾರಿ ನಿನ್ನ ಜೀವದ ಗೆಳತಿಯನ್ನು ಬಂದು ನೋಡಬಾರದೇ~ ಎಂದು ವಿಲಪಿಸುವ ಸಖಿಯಾದಳು ಶ್ವೇತಾ.

ಇದಕ್ಕೂ ಮೊದಲು, ಕಾರ್ಯಕ್ರಮದ ಆರಂಭದಲ್ಲಿ ಪುಷ್ಪಾಂಜಲಿ ಮತ್ತು ನಟೇಶ ಕೌತ್ವಂ (ಕದ್ಯೋತ್ಕಾಂತಿ ರಾಗ, ಆದಿ ತಾಳ), ಮುತ್ತುಸ್ವಾಮಿ ದೀಕ್ಷಿತರ ಕೃತಿ `ಆನಂದ ನರ್ತನ ಪ್ರಕಾಶಂ~ (ಕೇದಾರ, ಮಿಶ್ರ ಛಾಪು) ಪ್ರದರ್ಶಿಸಿದರು. ಪುಷ್ಪಾಂಜಲಿಯಲ್ಲಿ ಕೆಲವು ಚಾರಿಗಳನ್ನು ಅಳವಡಿಸಿದ್ದು ಸ್ವಾಗತಾರ್ಹ. ದೇಶ್ ರಾಗದ ತಿಲ್ಲಾನದೊಂದಿಗೆ ಕಾರ್ಯಕ್ರಮ ಅಂತ್ಯಗೊಂಡಿತು.

ಅಭಿನಯ ಭಾಗದಲ್ಲಿ ಪ್ರಜ್ವಲಿಸುವ ಶ್ವೇತಾ ಹಾಗೆಂದೇ ಪ್ರೇಕ್ಷಕರಿಗೆ ಬೇಗ ಹತ್ತಿರವಾಗುತ್ತಾಳೆ. ಆದರೆ, ಭರತನಾಟ್ಯದ ತಾಂತ್ರಿಕ ಅಂಶಗಳತ್ತ ಗಮನ ಹರಿಸಿ, ನೃತ್ತ (ಅಭಿನಯ ರಹಿತ ನೃತ್ಯಚಲನೆಗಳು) ಭಾಗದಲ್ಲಿ ಕೊಂಚ ಬಿಗಿ ಕಾಯ್ದುಕೊಳ್ಳುವ ಅವಶ್ಯಕತೆಯಿದೆ. ಬೆಳಕು-ರಂಗಸಜ್ಜಿಕೆ ತಜ್ಞ ಸಾಯಿ ವೆಂಕಟೇಶ್ ಮತ್ತು ಗುರು ಸುಪರ್ಣ ವೆಂಕಟೇಶ್ ಅವರ ಪುತ್ರಿ ಶ್ವೇತಾ.

ಆಕೆಗೆ ಜನ್ಮದತ್ತವಾಗಿ ಬಂದ ಪ್ರತಿಭೆ, ಸೌಂದರ್ಯ ಮತ್ತು ನೃತ್ಯಕ್ಕೆ ಹೇಳಿ ಮಾಡಿಸಿದಂತಹ ನಿಲುವು ಇದೆ. ಅಪ್ಪನ ಬೆಂಬಲ, ಅಮ್ಮನ ಮಾರ್ಗದರ್ಶನವೂ ಇದೆ. ಇದೀಗ ಎಂಇಎಸ್ ಕಾಲೇಜಿನಲ್ಲಿ ಪ್ರಥಮ ಪದವಿ ವಿದ್ಯಾರ್ಥಿನಿ. ಮುಂದೆ ನೃತ್ಯಲೋಕದಲ್ಲಿ ಮಿನುಗು ತಾರೆಯಾಗುವ ಲಕ್ಷಣಗಳೆಲ್ಲವೂ ಇವೆ.

ಹಿಮ್ಮೇಳದಲ್ಲಿ ಸುಪರ್ಣ ವೆಂಕಟೇಶ್(ನಟುವಾಂಗ), ಶ್ರೀವತ್ಸ (ಗಾಯನ), ಜಿ.ಗುರುಮೂರ್ತಿ (ಮೃದಂಗ) ಮತ್ತು ಎಚ್.ಎಸ್. ವೇಣುಗೋಪಾಲ್(ಕೊಳಲು), ಸಾಯಿವೆಂಕಟೇಶ್ ಮತ್ತು ಮುನಿಯಪ್ಪ (ಬೆಳಕು, ಧ್ವನಿ) ಸಹಕಾರ ನೀಡಿದರು. ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಬರಹಗಾರರ ಮತ್ತು ಕಲಾವಿದರ ಬಳಗ - ಈ ನಾಲ್ಕು ಸಂಸ್ಥೆಗಳು ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಕಿವಿಮಾತು: ನೃತ್ತದಲ್ಲಿ ಸ್ವಲ್ಪ ಬಿಗಿ, ಬಲಗೈ ಹಸ್ತ ಕ್ಷೇತ್ರಗಳತ್ತ ಗಮನ ಹರಿಸು ಶ್ವೇತಾ, ಆಲ್ ದ ಬೆಸ್ಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT