ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾದ ಪ್ರಭಾವಳಿ (ಚಿತ್ರ: ಸಾರಥಿ)

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪ್ರಭಾವಳಿಯಲ್ಲೇ ನಾಯಕನನ್ನು ತೋರುವುದು ಜನಪ್ರಿಯ ಚಿತ್ರಗಳ ಲಾಗಾಯ್ತಿನ ಸೂತ್ರ. ಇತ್ತೀಚೆಗೆ ದಕ್ಷಿಣ ಭಾರತದ ಜನಮನ್ನಣೆ ಪಡೆದ ಕೆಲವು ಚಿತ್ರಗಳಲ್ಲಿ ನಾಯಕನ ಈ ಪ್ರಭಾವಳಿಯಲ್ಲಿ ಆಗೀಗ ಬದಲಾವಣೆ ಆಗುತ್ತಿರುವುದನ್ನು ಕಾಣಬಹುದು. ತೆಲುಗಿನ ರವಿತೇಜ, ಜೂನಿಯರ್ ಎನ್‌ಟಿಆರ್, ಅಲ್ಲು ಅರ್ಜುನ್, ತಮಿಳಿನ ವಿಕ್ರಂ, ಸೂರ್ಯ, ಧನುಷ್ ವಿಷಯದಲ್ಲಿ ಹೀಗೆ ಆಗಿದೆ. ಕನ್ನಡದಲ್ಲಿ `ಮಾಸ್ ಹೀರೋ~ ಎಂಬ ಗುಣವಿಶೇಷಣಕ್ಕೆ ಪಕ್ಕಾಗಿರುವ ದರ್ಶನ್ ಅವರನ್ನೂ `ಸಾರಥಿ~ ಬೇರೆ ಪ್ರಭಾವಳಿಯಲ್ಲಿ ತೋರಿಸಿದೆ.

ತೆಲುಗಿನ `ಭದ್ರ~ದ ರೀಮೇಕ್ ಆಗಿದ್ದ `ಗಜ~ ಬಂದ ನಂತರ ದರ್ಶನ್‌ಗೆ ಹೆಚ್ಚು ಪ್ರಸಂಗಗಳನ್ನೂ ನಟನಾವಕಾಶಗಳನ್ನೂ ಸೃಷ್ಟಿಸಿರುವ ಸಿನಿಮಾ ಇದು. ಚಿತ್ರದ ಮೊದಲರ್ಧದಲ್ಲಿ ಆಟೋ ಚಾಲಕನಾಗಿ ಪ್ರಕಟಗೊಳ್ಳುವ ನಾಯಕನ ಪಾತ್ರ ಎರಡನೇ ಅರ್ಧದಲ್ಲಿ ಸಿನಿಮೀಯ ಸ್ಥಿತ್ಯಂತರ ಪಡೆದು ಕೊಳ್ಳುತ್ತದೆ. ಆತನ ಜನ್ಮವೃತ್ತಾಂತ, ಕರಳುಬಳ್ಳಿ ಯಿಂದ ಬೇರಾಗುವ ಕರುಣಾಜನಕ ಕಥಾನಕ, ಆಧುನಿಕ ಜಗತ್ತಿನಲ್ಲೂ ಉಸಿರಾಡುತ್ತಿರುವ ಪಾಳೆಗಾರಿಕೆ, ಅದಕ್ಕಾಗಿಯೇ ನಡೆಯುತ್ತಿರುವ ದಾಯಾದಿ ಕಲಹ ಎಲ್ಲವೂ `ಮಾರ್ಪಡಿಸಿದ ಮಹಾಭಾರತ~ದಂತೆ ಬಿಚ್ಚಿಕೊಳ್ಳುತ್ತವೆ.

ಉತ್ತರಾರ್ಧದಲ್ಲಿ ಇಡೀ ಚಿತ್ರದ ಪರಿಸರ, ಪಾತ್ರಗಳೇ ಬದಲಾಗುತ್ತವೆ. ಜನ್ಮಾಂತರದ ಕಥೆಗಳನ್ನು ಒಳಗೊಂಡಿದ್ದ ತೆಲುಗಿನ `ಮಗಧೀರ~, ಹಿಂದಿಯ `ಓಂ ಶಾಂತಿ ಓಂ~ (ಕನ್ನಡದಲ್ಲಿ ಹಿಂದೆ ಇದೇ ಧಾಟಿಯಲ್ಲಿ ರವಿಚಂದ್ರನ್ ಅಭಿನಯದ `ಯುಗಪುರುಷ~ ಬಂದಿತ್ತು) ಚಿತ್ರಗಳಲ್ಲಿನ ರಂಜನೆಯ ಧಾಟಿಯನ್ನು ನಿರ್ದೇಶಕ ದಿನಕರ್ ತೂಗುದೀಪ `ಸಾರಥಿ~ಗೆ ಸಮರ್ಥವಾಗಿ ಒಗ್ಗಿಸಿದ್ದಾರೆ. ಜನ್ಮಾಂತರದ ಕಥೆಯನ್ನಾಗಿಸಬಹುದಾಗಿದ್ದ ವಸ್ತು ವನ್ನೇ ಅವರು ಈ ಕಾಲಮಾನಕ್ಕೆ ಬದಲಿಸಿರುವುದು ಸ್ಪಷ್ಟ. ಚಿತ್ರಕಥಾರಚನೆಯಲ್ಲಿ ಮಾತ್ರ ಮಾಡಿಕೊಂಡಿ ರುವ ಈ ಬದಲಾವಣೆಯನ್ನು `ಫ್ಯಾಂಟಸಿ~ಗೆ ಸೋಕದಂತೆ ನೋಡಿಕೊಂಡಿರುವುದು ಕಮರ್ಷಿ ಯಲ್ ಚಿತ್ರ ನಿರ್ದೇಶಕರಾಗಿ ಅವರಿಗಿರುವ ಜಾಣ್ಮೆಗೆ ಸಾಕ್ಷಿ. ಅವರಿಗೆ ಚಿತ್ರಕಥೆಯಲ್ಲಿ ಸಾಥ್ ನೀಡುವುದರ ಜೊತೆಗೆ ಸಂಭಾಷಣೆ ಬರೆದಿರುವ ಚಿಂತನ್ `ಸಿನಿಮ್ಯಾಟಿಕ್~ ಚಿಂತನೆಯೂ ಗಮನಾರ್ಹ. ಮೊದಲರ್ಧದಲ್ಲಿ ಕೆಲವೇ ಕೆಲವು ಅನವಶ್ಯಕ ದೃಶ್ಯಗಳು ಬಂದುಹೋಗುತ್ತವೆ ಎಂಬುದನ್ನು ಬಿಟ್ಟರೆ ಚಿತ್ರದ ಸಂಗತಿಗಳ ಪರಿಕಲ್ಪನೆ ಜನಪ್ರಿಯ ಮಾದರಿಗೆ ಹದವಾಗಿ ಹೊಂದಿಕೊಂಡಿದೆ. ದೃಶ್ಯದ ತೀವ್ರತೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಅವರು ಆಗೀಗಷ್ಟೇ ಪಂಚ್ ಸಂಭಾಷಣೆಗಳನ್ನು ಬರೆದಿದ್ದು, ಅದನ್ನು ದರ್ಶನ್ ತಮ್ಮದಾಗಿಸಿಕೊಂಡೇ ಪ್ರಸ್ತುತಪಡಿಸಿದ್ದಾರೆ.

ತಂತ್ರಜ್ಞರ ಶ್ರಮ ಚಿತ್ರದ ಇಂಚಿಚಲ್ಲೂ ಕಾಣುತ್ತದೆ. ರವಿವರ್ಮ ಹಾಗೂ ಪಳನಿರಾಜ್ ಸಾಹಸ ಸಂಯೋಜನೆ ಮೈಮರೆಸಿದರೆ, ಬಣ್ಣ- ಭಾವಗಳು ಹದಗೆಡದಂತೆ ಕೆ.ಕೃಷ್ಣಕುಮಾರ್ ಕ್ಯಾಮೆರಾ ನಿಗಾ ವಹಿಸಿದೆ. ಸಂಗೀತ ನಿರ್ದೇಶಕ ಹರಿಕೃಷ್ಣ ಮೂರು ಹಾಡುಗಳಲ್ಲಿ ಆಟವಾಡಿದ್ದಾರೆ.

ನಾಯಕತ್ವದ ಮೆರೆದಾಟದ ಸುಖವನ್ನು ದರ್ಶನ್ ಸಂಪೂರ್ಣವಾಗಿ ಅನುಭವಿಸಿ ಅಭಿನಯಿಸಿದ್ದಾರೆ. ಮೊದಲ ಯತ್ನದಲ್ಲಿಯೇ ನಾಯಕಿ  ದೀಪಾ ಸನ್ನಿಧಿ ಮೊಗದಲ್ಲಿ ಭವಿಷ್ಯದ ಕುರಿತು ಭರ್ತಿ ಭರವಸೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಶರತ್ ಲೋಹಿತಾಶ್ವ, ಸೀತಾ ಅಭಿನಯ ಚಿತ್ರದ ಉದ್ದೇಶಕ್ಕೆ ಪೂರಕ. ದರ್ಶನ್ ತಂದೆಯ ಪಾತ್ರದಲ್ಲಿ ಶರತ್ ಕುಮಾರ್ ನಟಿಸಿದ್ದು, ಅವರ `ಸ್ಟಾರ್‌ಗಿರಿ~ಯನ್ನು ಉಜ್ಜುವ ರೀತಿಯಲ್ಲೇ ನಿರ್ದೇಶಕರು ಪಾತ್ರಪೋಷಣೆ ಮಾಡಿರುವುದು ಸ್ಪಷ್ಟ. 

 ಈಗ ಕೌಟುಂಬಿಕ ಸಮಸ್ಯೆಯ ಕಾರಣ ಜೈಲುಸೇರಿರುವ ದರ್ಶನ್ ಬಾಯಲ್ಲಿ ರೈತರ ಹಿತದ, ಗಣಿಗಾರಿಕೆ ವಿರುದ್ಧದ, ಮಾತೃಪಿತೃ ವಾತ್ಸಲ್ಯದ ಕುರಿತು ಉದ್ದುದ್ದ ಸಂಭಾಷಣೆ ಹೊಮ್ಮುವುದರ ಸಾಮಾಜಿಕ ಸಂದರ್ಭ ಮಾತ್ರ ವ್ಯಂಗ್ಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT