ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆ ಆಗಲೂಬಹುದು....ಪರಿವರ್ತನೆ?

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಆಗ್ರಾ: ಮುಸ್ಲಿಂ ಮೀಸಲಾತಿಗಾಗಿ ಗಲ್ಲಿಗೇರಲು ಸಲ್ಮಾನ್ ಖುರ್ಷಿದ್ ಮತ್ತು ಬೇಣಿಪ್ರಸಾದ್ ವರ್ಮಾ ಪೈಪೋಟಿಯಲ್ಲಿದ್ದಾರೆ.., ಸಮಾಜವಾದಿ ಪಕ್ಷದ ಪ್ರಣಾಳಿಕೆಯನ್ನು ರಾಹುಲ್‌ಗಾಂಧಿ ಸಾರ್ವಜನಿಕ ಸಭೆಯಲ್ಲಿ ಹರಿದುಹಾಕಿದ್ದಾರೆ..,
 
ಕಾನ್ಪುರದಲ್ಲಿ ರಾಹುಲ್ ಕಾನೂನು ಉಲ್ಲಂಘಿಸಿ ರೋಡ್ ಶೋ ನಡೆಸಿದ್ದಾರೆ..., ವೆಲಂಟೈನ್ಸ್ ಡೇ ದಿನ ಪ್ರಿಯಾಂಕಾ ಗಾಂಧಿ ತಾಯಿಯ ಕೆನ್ನೆ ಚಿವುಟಿ ಶುಭ ಕೋರಿದ್ದಾರೆ.., ಲಖನೌ ನಗರವನ್ನು ಪ್ಯಾರಿಸ್ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಮಾಯಾವತಿ ಘೋಷಿಸಿದ್ದಾರೆ.... ಅಖಿಲೇಶ್ ಯಾದವ್ ಸಭೆಯಲ್ಲಿ ನಾಚ್‌ವಾಲಿಯನ್ನು ಕರೆತಂದು ಉ..ಲಲಾ ಎಂದು ಕುಣಿಸಿದ್ದಾರೆ...,ಈಗ ಚುನಾವಣಾ ಆಚಾರ ಸಂಹಿತೆಗೆ ಕಾನೂನಿನ ರೂಪ ನೀಡಿ ಚುನಾವಣಾ ಆಯೋಗದ ಇರುವ ಒಂದೆರಡು ಹಲ್ಲುಗಳನ್ನು ಕಿತ್ತುಹಾಕಲು ಕಾಂಗ್ರೆಸ್ ಹೊರಟಿದೆ.....

ಇವು ಉತ್ತರಪ್ರದೇಶದ ಚುನಾವಣಾ ಪ್ರಚಾರದ ಮುಖ್ಯಾಂಶಗಳು. ಕಳೆದ 17 ದಿನಗಳಿಂದ ಈ ರಾಜ್ಯ ಸುತ್ತಾಡುತ್ತಿರುವ ನಾನು ಒಂದಷ್ಟು ಭಾಷಣಗಳನ್ನು ಕೇಳಿದ್ದೇನೆ, ಕೇಳಲಾಗದ ಭಾಷಣಗಳನ್ನು ಪತ್ರಿಕೆಗಳಲ್ಲಿ ಓದಿದ್ದೇನೆ. ಆದರೆ ಉತ್ತರಪ್ರದೇಶದ ನಿಜವಾದ ಸಮಸ್ಯೆಗಳ ಬಗ್ಗೆ ಎಲ್ಲಾದರೂ, ಯಾರಾದರೂ ಚರ್ಚೆಗೆ ಎತ್ತಿಕೊಂಡಿದ್ದಾರೆಯೇ ಎಂಬ ನನ್ನ ಕುತೂಹಲಕ್ಕೆ ನಿರಾಶೆಯ ಉತ್ತರವಷ್ಟೇ ಸಿಕ್ಕಿದೆ.

ಲೋಕಪಾಲರ ನೇಮಕಕ್ಕಾಗಿ ಒತ್ತಾಯಿಸಿ ಅಣ್ಣಾ ಹಜಾರೆ ತಂಡ ಪ್ರಾರಂಭಿಸಿದ್ದ ಚಳುವಳಿ ಉತ್ತರಪ್ರದೇಶ ಚುನಾವಣೆಯ ಫಲಿತಾಂಶದಲ್ಲಿ ತಾರ್ಕಿಕ ಅಂತ್ಯ ಕಾಣಬಹುದು ಎಂದು ಹಲವರು ಭವಿಷ್ಯ ನುಡಿದಿದ್ದರು. ಇದನ್ನೇ ನಂಬಿದ ಅಣ್ಣಾ ತಂಡ ತೋಳೇರಿಸಿ ರಣಕಹಳೆ ಊದಿತ್ತು. ಆದರೆ ರಾಜ್ಯದ ಕೆಲವು ನಗರಗಳಲ್ಲಿ ಅಣ್ಣಾ ತಂಡದ ಸದಸ್ಯರು ಭಾಷಣ ಮಾಡಿ ಕಾಂಗ್ರೆಸ್ ವಿರುದ್ದ ಕಿಡಿಕಾರಿ ಹೋಗಿದ್ದನ್ನು ಬಿಟ್ಟರೆ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮಾಡುವ ಕೆಲಸ ಇಲ್ಲಿ ನಡೆಯುತ್ತಿಲ್ಲ. ಯೋಗಗುರು ರಾಮದೇವ್ ಅಲ್ಲಲ್ಲಿ ಮಾತಿನ ಮನರಂಜನೆ ನೀಡುತ್ತಿದ್ದಾರೆ.

ಭ್ರಷ್ಟಾಚಾರ ಈ ಚುನಾವಣೆಯಲ್ಲಿ ಚರ್ಚೆಯ ಪ್ರಮುಖ ವಿಷಯವಾಗಿ ಹೊರಹೊಮ್ಮಬಹುದು ಎಂಬ ನಿರೀಕ್ಷೆಯನ್ನು ಮೊದಲು ಹುಟ್ಟಿಸಿದವರೇ ಮುಖ್ಯಮಂತ್ರಿ ಮಾಯಾವತಿ. ಭ್ರಷ್ಟಾಚಾರ ಮತ್ತಿತರ ಆರೋಪಗಳಿಗಾಗಿ ಸುಮಾರು 25 ಸಚಿವರನ್ನು ಅವರು ಸಂಪುಟದಿಂದ ಕೈಬಿಟ್ಟಿದ್ದರು, ಕೆಲವರನ್ನು ಪಕ್ಷದಿಂದಲೇ ಹೊರಹಾಕಿದ್ದರು. ಇದೇ ಕಾರಣಗಳಿಗಳಿಗಾಗಿ ನೂರಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದ್ದರು.

ಈ ಮೂಲಕ ತಮ್ಮ ಸರ್ಕಾರದ ಭ್ರಷ್ಟಾಚಾರವನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದರು.  ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯಲ್ಲಿ ನಡೆದ ಸುಮಾರು ರೂ 8,500 ಕೋಟಿ ದುರುಪಯೋಗ ಅತೀ ದೊಡ್ಡ ಹಗರಣವಾಗಿ ಬಿಎಸ್‌ಪಿ ಸರ್ಕಾರದ ತಲೆಮೇಲೆ ಕೂತಿತ್ತು. ಚುನಾವಣೆ ನಡೆಯುತ್ತಿರುವಾಗಲೇ ಈ ಹಗರಣದ ಇಬ್ಬರು ಪ್ರಮುಖ ಸಾಕ್ಷಿಗಳು ನಿಗೂಢ ಸಾವಿಗೀಡಾಗಿದ್ದರು.

  ಆಡಳಿತಾರೂಢ ಸರ್ಕಾರವನ್ನು ಚುನಾವಣಾ ಕಣದಲ್ಲಿ ಕೆಡವಿಹಾಕಲು ಇದಕ್ಕಿಂತ ಬೇರೆ ಬಡಿಗೆ ಯಾಕೆ ಬೇಕು? ಆದರೆ ವಿರೋಧಪಕ್ಷಗಳ ಯಾವ ನಾಯಕರ ಭಾಷಣದಲ್ಲಿಯೂ ಇದು ಪ್ರಮುಖ ವಿಷಯ ಅಲ್ಲವೇ ಅಲ್ಲ. `ಯೇ ನೇತಾ ಬೋಲಿ ಭೀ ತೋ, ಕಿಸ್ ಮುಹ್‌ಸೇ?~ (ಅವರು ಯಾವ ಮುಖಹೊತ್ತು ಹೇಳುವುದು?) ಎಂದ ಕಾನ್ಪುರದ  ಕಾರ್ಮಿಕ ನಾಯಕ ಸುನೀಲ್ ಚೌರಾಸಿಯಾ ಪ್ರಶ್ನೆ ಸರಿಯಾಗಿಯೇ ಇದೆ.
 
ಈ ಹಗರಣದ ಪ್ರಮುಖ ಆರೋಪಿ ಬಾಬುಸಿಂಗ್ ಕುಶವಾಹಾ ಈಗ ತಮ್ಮ ಪರವಾಗಿ ಪ್ರಚಾರ ನಡೆಸುತ್ತಿರುವ ಕಾರಣ ಬಿಜೆಪಿ ನಾಯಕರು ಈಬಗ್ಗೆ ಮಾತನಾಡುವಂತಿಲ್ಲ. ಮಾತನಾಡಿದರೆ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ ನಾಲ್ಕುವರೆಯಷ್ಟಿರುವ ಕುಶವಾಹಾ ಸಮುದಾಯವನ್ನು ಎದುರುಹಾಕಿಕೊಂಡಂತಾಗುತ್ತದೆ ಎಂಬ ಭಯದಿಂದ ಕಾಂಗ್ರೆಸ್‌ನವರು ಬಾಯಿಬಿಚ್ಚುವುದಿಲ್ಲ. ಇದೇ ಭೀತಿ ಸಮಾಜವಾದಿ ಪಕ್ಷಕ್ಕೂ ಇದೆ.

ನಿರ್ದಿಷ್ಟ ಹಗರಣವನ್ನು ಉಲ್ಲೇಖಿಸದೆ ಒಟ್ಟು ಭ್ರಷ್ಟಾಚಾರದ ವಿರುದ್ದ ಪ್ರಾರಂಭದಲ್ಲಿ ಅಡ್ವಾಣಿ ಸೇರಿದಂತೆ ಕೆಲವು ಬಿಜೆಪಿ ನಾಯಕರು ಮಾತನಾಡಿದ್ದರು. ಅಷ್ಟರಲ್ಲಿ ಮಾಯಾವತಿ ಅವರು `ಕರ್ನಾಟಕದಲ್ಲಿ ಯಡಿಯೂರಪ್ಪ ಸರ್ಕಾರ ಮಾಡಿದ್ದೇನು?~ ಎಂದು ಪ್ರಶ್ನಿಸಿದರು, ಅದರ ಜತೆಯಲ್ಲಿ ಕರ್ನಾಟಕದ ಬಿಜೆಪಿ ಸಚಿವರ ಪೊರ್ನೋಗ್ರಾಫಿ ಹಗರಣ ಬಯಲಾಯಿತು.
 
ಅಲ್ಲಿಗೆ ಬಿಜೆಪಿ ನಾಯಕರ ಬಾಯಿ ಬಂದ್ ಆಯಿತು. ಕಾಂಗ್ರೆಸ್ ಪಕ್ಷದ ನಾಯಕರು ಕೂಡಾ ಭ್ರಷ್ಟಾಚಾರ ಮುಕ್ತ ಉತ್ತರಪ್ರದೇಶ ಮಾಡುತ್ತೇವೆ ಎಂದು ಪ್ರಾರಂಭದಲ್ಲಿ ಹೇಳಿದ್ದರು. ಅವರ ಮೇಲೆರಗಿದ ಬಿಎಸ್‌ಪಿ,ಬಿಜೆಪಿ, ಎಸ್‌ಪಿ ನಾಯಕರು ಯುಪಿಎ ಎರಡನೇ ಅವಧಿಯ ಹಗರಣಗಳ ಪಟ್ಟಿ ಮಾಡಿ ಓದತೊಡಗಿದರು. ಅಲ್ಲಿಗೆ ಕಾಂಗ್ರೆಸ್ ಮಾತು ಕೂಡಾ ನಿಂತುಹೋಯಿತು.

ಈ ಮುಜುಗರದ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಎಲ್ಲ ವಿರೋಧಪಕ್ಷಗಳು ಯಾವ ಹಗರಣವನ್ನೂ ನಿರ್ದಿಷ್ಟವಾಗಿ ಉಲ್ಲೇಖಿಸದೆ ಬಹಳ ಸುರಕ್ಷಿತವಾಗಿ `ಬದಲಾವಣೆ~ಯ ಹಾಡು ಹಾಡತೊಡಗಿವೆ. ಬದಲಾವಣೆ ಎಂದರೇನು ಎನ್ನುವುದನ್ನು ಯಾರೂ ಬಿಡಿಸಿಹೇಳುವುದಿಲ್ಲ.

ಅವರ ದೃಷ್ಟಿಯಲ್ಲಿ ಬದಲಾವಣೆ ಸರ್ಕಾರದ್ದು. `ಬದಲಾವಣೆ ಮತ್ತು ಪರಿವರ್ತನೆ ಬೇರೆಬೇರೆ. ಸರ್ಕಾರಗಳು ಬದಲಾಗುವುದರಿಂದ ಏನೂ ಆಗುವುದಿಲ್ಲ, ಆಗಬೇಕಾಗಿರುವುದು ಈಗಿನ ರಾಜಕೀಯದ ಪರಿವರ್ತನೆ. ಅದು ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯ ಜತೆಯಲ್ಲಿಯೇ ಪ್ರಾರಂಭವಾಗಬೇಕಿತ್ತು, ಆಗಿಲ್ಲ. ಇವೆಲ್ಲ  ನಾಟಕ~ ಎಂದು ಬದಲಾವಣೆಯ ಪ್ರಶ್ನೆಗೆ ಉತ್ತರಿಸಿದವರು ಲಖನೌದ ಹಿರಿಯ ರಾಜಕೀಯ ವಿಶ್ಲೇಷಕ ಸುನೀಲ್.

ಭ್ರಷ್ಟಾಚಾರ ನಂತರ ಉತ್ತರಪ್ರದೇಶವಿಭಜನೆಯ ವಿವಾದ ಚರ್ಚೆಯಾಗಬಹುದೆಂಬ ನಿರೀಕ್ಷೆಯೂ ಇತ್ತು. ಇದನ್ನು ಕೂಡಾ ಎತ್ತಿಕೊಟ್ಟವರು ಮುಖ್ಯಮಂತ್ರಿ ಮಾಯಾವತಿ. ಆಡಳಿತ ವಿರೋಧಿ ಅಲೆಯನ್ನು ಎದುರಿಸುವ ತಂತ್ರವಾಗಿ ರಾಜ್ಯವಿಭಜನೆಯ ವಿವಾದವನ್ನು ಅವರು ಹುಟ್ಟುಹಾಕಿದ್ದರು. ಆದರೆ ಬಹಳ ವರ್ಷಗಳಿಂದ ಪ್ರತ್ಯೇಕ ರಾಜ್ಯದ  ಬೇಡಿಕೆಯನ್ನು ಮುಂದಿಟ್ಟುಕೊಂಡು ಚಳುವಳಿ ನಡೆಯುತ್ತಿದ್ದ ಪೂರ್ವಾಂಚಲ, ಬುಂದೇಲಖಂಡ ಮತ್ತು ಹರಿತಪ್ರದೇಶದಲ್ಲಿಯೇ ಇದು ಚುನಾವಣಾ ಕಾಲದ ಚರ್ಚಾ ವಿಷಯ ಆಗಿಲ್ಲ. ಈ ವಿವಾದವನ್ನು ಬಳಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಬಿಎಸ್‌ಪಿಗೆ ಬಂದೇ ಇಲ್ಲ. ಎಸ್‌ಪಿ, ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯ ವಿಭಜನೆಗೆ ವಿರುದ್ಧವಾಗಿರುವುದರಿಂದ ಅದನ್ನು ಚರ್ಚಿಸಲು ಇಷ್ಟಪಡುತ್ತಿಲ್ಲ.

ಮಾಯಾವತಿ ಸರ್ಕಾರದ ಕೊನೆಯ ದಿನಗಳಲ್ಲಿ ರಾಜಕೀಯ ಸಂಘರ್ಷಗಳಿಗೆ ಕಾರಣವಾಗಿದ್ದು ರೈತರ ಭೂಸ್ವಾಧೀನದ ವಿವಾದ. ಆದರೆ ಗಂಗಾ ಮತ್ತು ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿ ಯೋಜನೆಯ ವಿರುದ್ದದ ಪ್ರತಿಭಟನೆಯಾಗಲಿ, ಭಟ್ಟಾ ಪರಸೋಲ್ ಮತ್ತು ನೊಯಿಡಾದಲ್ಲಿ ಭೂಸ್ವಾಧೀನದ ವಿರುದ್ಧ ನಡೆದ ಹೋರಾಟವಾಗಲಿ ಚುನಾವಣೆಯ ಪ್ರಚಾರದ ಕಾಲದಲ್ಲಿ ಕನಿಷ್ಠ ಬಿಎಸ್‌ಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದಕ್ಕೆ ಕಾರಣವಾಗಬಹುದೆಂಬ ನಿರೀಕ್ಷೆ ಇತ್ತು. ಈ ವಿವಾದದ ಸ್ಥಳಗಳು ಇನ್ನು ಮತದಾನ ನಡೆಯಬೇಕಾದ ಪಶ್ಚಿಮ ಉತ್ತರಪ್ರದೇಶದಲ್ಲಿದ್ದರೂ ಅಲ್ಲಿಯೂ ಈ ವರೆಗೆ ಯಾರೂ ಮಾತನಾಡಿಲ್ಲ.

ಸುಮಾರು 2.5 ಲಕ್ಷ ಚದರ ಕಿ.ಮೀ. ವಿಸ್ತೀರ್ಣದ, ಅಂದಾಜು 20 ಕೋಟಿ ಜನಸಂಖ್ಯೆಯ, 75 ಜಿಲ್ಲೆಗಳನ್ನೊಳಗೊಂಡ 3-4 ರಾಜ್ಯಗಳ ಒಕ್ಕೂಟದಂತಿರುವ ಉತ್ತರಪ್ರದೇಶ ಸಮಸ್ಯೆಗಳ ಜ್ವಾಲಾಮುಖಿ ಮೇಲೆ ಕೂತಂತಿದೆ.
 
ಲಖನೌದಲ್ಲಿ ನಗರ ಮೂಲಸೌಕರ್ಯದ ಕುರುಹುಗಳಿಲ್ಲ, ಗೋರಖ್‌ಪುರದಲ್ಲಿ ಮೆದುಳು ಜ್ವರದಿಂದ ಜನ ಸಾಯುತ್ತಲೇ ಇದ್ದಾರೆ, ಬನಾರಸ್ ಸೀರೆಗೆ ಹೆಸರುವಾಸಿಯಾದ ವಾರಣಾಸಿಯಲ್ಲಿ ನೇಕಾರರು ಉದ್ಯೋಗ ಕಳೆದುಕೊಂಡು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ, ಒಂದು ಕಾಲದಲ್ಲಿ `ಭಾರತದ ಮ್ಯಾಂಚೆಸ್ಟರ್~ ಎಂಬ ಖ್ಯಾತಿ ಪಡೆದಿದ್ದ ಕಾನ್ಪುರದಲ್ಲಿ ಕಳೆದ 20 ವರ್ಷಗಳಲ್ಲಿ ಕನಿಷ್ಠ 50 ದೊಡ್ಡ ಮತ್ತು ಸಣ್ಣ ಬಟ್ಟೆ ಗಿರಣಿಗಳು ಮುಚ್ಚಿ ಲಕ್ಷಾಂತರ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಬುಂದೇಲ್‌ಖಂಡದಲ್ಲಿನ ಆತ್ಮಹತ್ಯೆ, ಹಸಿವಿನಿಂದ ನಡೆಯುವ ಸಾವುಗಳು ನಿಂತಿಲ್ಲ.

 ಇವ್ಯಾವುದೂ ರಾಜಕೀಯ ನಾಯಕರ ಪ್ರಚಾರದ ಪ್ರಮುಖ ವಿಷಯ ಆಗಿಯೇ ಇಲ್ಲ. ಹಾಗಿದ್ದರೆ  ಪಕ್ಷಗಳು ಬಯಸುತ್ತಿರುವ ಬದಲಾವಣೆ ಯಾವುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT