ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆ ಬೇಡುವ ನೃತ್ಯಗಳು

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು ಲಲಿತಕಲಾ ಪರಿಷತ್ತಿನಲ್ಲಿ ಕಳೆದ ಶುಕ್ರವಾರ (ಫೆ.17) ಭರತನಾಟ್ಯ ಮಾಡಿದ ದೀಪಾಭಟ್ ಕಲಾಭಿಮಾನಿಗಳಿಗೆ ಅಪರಿಚಿತರೇನಲ್ಲ. `ಕಲಾಕ್ಷಿತಿ~ಯಲ್ಲಿ ಕಲಿತು, ವಿದ್ವತ್‌ನಲ್ಲಿ ತೇರ್ಗಡೆಯಾಗಿ ಅವರು ಶಿಷ್ಯವೇತನ ಪಡೆದಿದ್ದಾರೆ. ಅನೇಕ ವೇದಿಕೆಗಳಿಂದ ನರ್ತಿಸಿದ ಅನುಭವವೂ ಇದ್ದು, ಕೆಲ ಕಾಲದಿಂದ ತಮ್ಮದೇ ಶಾಲೆ ನೃತ್ಯ ಕುಟೀರದ ಮೂಲಕ ಕಿರಿಯರಿಗೆ ಶಿಕ್ಷಣ ನೀಡುತ್ತಿದ್ದಾರೆ.

ತಮ್ಮ ಕಾರ್ಯಕ್ರಮದ ಪ್ರಧಾನ ಭಾಗವಾಗಿ ಶಂಕರಾಭರಣ ರಾಗದ ಕನ್ನಡ ವರ್ಣ ದೀನಬಂಧು ಆಯ್ದು, ಸುಲಲಿತವಾಗಿ ನರ್ತಿಸಿದರು. ಉತ್ತರಾರ್ಧದಲ್ಲಿ ಐದು ರಚನೆಗಳಿಗೆ ನರ್ತಿಸಿದರು. ಅಭಿನಯಕ್ಕೆ ಒತ್ತು ಕೊಡುವ- ಸುಬ್ರಹ್ಮಣ್ಯನ ಮೇಲಿನ ಪದ, ಅಭೋಗಿ ರಾಗದ ಕೃತಿ, ಜಯದೇವನ ಅಷ್ಟಪದಿ (ರಾಗಮಾಲಿಕೆ), ಸಿಂಧುಭೈರವಿ ರಾಗದಲ್ಲಿ ಸ್ವಾತಿ ತಿರುನಾಳ ಮಹಾರಾಜರ ಒಂದು ಕೃತಿಗಳನ್ನು ಅಭಿನಯಿಸಿದರು. ಉತ್ತಮ ರಚನೆಗಳನ್ನು ಆಯ್ದ ದೀಪಾಭಟ್ ಅವರ ಶ್ರದ್ಧೆ ಮೆಚ್ಚಬೇಕಾದದ್ದೇ. ಕೃತಿಗಳ ಆಳಕ್ಕೆ ಇಳಿದು ನೃತ್ಯವನ್ನು ಇನ್ನೂ ಪ್ರೌಢ ಸ್ಥಿತಿಗೆ ತೆಗೆದುಕೊಂಡು ಹೋದರೆ, ಪರಿಣಾಮ ಮತ್ತಷ್ಟು ಗಾಢವಾಗಬಹುದು. ಹಂಸಾನಂದಿಯ ತಿಲ್ಲಾನದೊಂದಿಗೆ ಕಾರ್ಯಕ್ರಮಕ್ಕೆ ಮುಕ್ತಾಯ ತಂದರು. ಹಿನ್ನೆಲೆಯ ಗಾಯನ (ಅಕ್ಷತಾ ಉಪಾಧ್ಯ) ಶ್ರುತಿಶುದ್ಧವಾಗಿ, ಭಾವಪೂರ್ಣವಾಗಿದ್ದಿದ್ದರೆ ನರ್ತಕಿಗೆ ಸ್ಫೂರ್ತಿದಾಯಕವಾಗಿರುತ್ತಿತ್ತು. ನಟುವಾಂಗದಲ್ಲಿ ನಾಗಶ್ರೀ, ಮೃದಂಗದಲ್ಲಿ ವಿ.ಆರ್. ಚಂದ್ರಶೇಖರ್, ಮೋರ್ಚಿಂಗ್‌ನಲ್ಲಿ ಗಣೇಶ್ ನೆರವಾದರು.

ಸ್ಫೂರ್ತಿಯ ಸೆಲೆ ರಾಮಾಯಣ
ಲಲಿತ ಕಲೆಗಳಿಗೆ ರಾಮ, ಕೃಷ್ಣರು ಎಂದೂ ಬತ್ತದ ಆಕರಗಳು! ಕೃಷ್ಣನ ಬಾಲಲೀಲೆ, ಚೇಷ್ಟೆಗಳು ರಾಮನ ಪಿತೃವಾಕ್ಯ ಪರಿಪಾಲನೆ, ಕ್ಷಾತ್ರ ಗುಣಗಳು ಶಿಷ್ಟ ಜಾನಪದ ಕಲೆಗಳಿಗೆ ಸದಾ ಸ್ಫೂರ್ತಿದಾಯಕ! ರಾಮ ಚರಿತೆಯು ಗದ್ಯ, ಪದ್ಯ, ಕಥೆ, ಕಾದಂಬರಿ, ನಾಟಕ, ಚಿತ್ರಕಲೆ, ಶಿಲ್ಪಗಳಿಗೆ ನಿರಂತರ ಗ್ರಾಸವಾಗಿದೆ. ರಾಮಾಯಣದ ಇಡೀ ಕೃತಿ ಹಾಗೂ ಪಾತ್ರಗಳು ಇಂದಿಗೂ ಸ್ಫೂರ್ತಿದಾಯಕವಾಗಿವೆ. ರಾಮನನ್ನು ಆಧರಿಸಿದ ಕೃತಿಗಳು ಇಂದಿಗೂ ಸ್ಫೂರ್ತಿಯ ಸೆಲೆ! ಈ ದಿಕ್ಕಿನಲ್ಲಿ ಕುವೆಂಪು ಅವರ ರಾಮಾಯಣ ದರ್ಶನಂ ಒಂದು ಮೇರು ಕೃತಿ. ಅದನ್ನು ಆಧರಿಸಿ ನೃತ್ಯ, ಗಮಕ, ಗಾಯನಗಳು ಇಂದಿಗೂ ಬರುತ್ತಲೇ ಇವೆ. ಈ ನಿಟ್ಟಿನಲ್ಲಿ ನೂತನ ಹೆಜ್ಜೆ ಇಟ್ಟಿರುವವರೇ ವಿದ್ಯಾ ಶಿಮ್ಲಡ್ಕ.

ವಿದ್ಯಾ ಶಿಮ್ಲಡ್ಕ ಕಲಾಭಿಮಾನಿಗಳಿಗೆ ಹೊಸಬರೇನಲ್ಲ. ಪತ್ರಿಕೋದ್ಯಮದಲ್ಲಿದ್ದೂ ನೃತ್ಯ ಅಭ್ಯಾಸವನ್ನು ಮುಂದುವರೆಸಿಕೊಂಡು ಕೆಲ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡವರು. ಮೋಹನ್ ಉಲ್ಲಾಳ್, ನರ್ಮದಾ ಅವರಲ್ಲಿ ನೃತ್ಯ ಅಭ್ಯಾಸ ಮಾಡಿದ್ದಲ್ಲದೆ ಸುಂದರಿ ಸಂತಾನಂ ಅವರಲ್ಲಿ ಮಾರ್ಗದರ್ಶನವನ್ನೂ ಪಡೆದು, ಭದ್ರ ಬುನಾದಿ ಹಾಕಿಕೊಂಡವರು. ಇದೀಗ ಎಂ.ಫಿಲ್ ಮಾಡುತ್ತಾ ಫೆಲೊಶಿಪ್‌ಗೂ ಭಾಜನರಾಗಿದ್ದಾರೆ.

ಜ್ಞಾನಪೀಠ ಪ್ರಶಸ್ತಿಗೆ ಕಾರಣವಾದ `ರಾಮಾಯಣ ದರ್ಶನಂ~ ಕುವೆಂಪುರವರ ಮೇರು ಕಾವ್ಯ ಹಾಗೂ ಕನ್ನಡದ ಹೆಮ್ಮೆಯ ಕೃತಿ. ಶಿಮ್ಲಡ್ಕ ರಾಮಾಯಣ ದರ್ಶನಂ ಆಧರಿಸಿ ಹೆಣೆದ `ಸತ್ಪಥಾ~ ಏಕಪಾತ್ರದ ನೃತ್ಯರೂಪಕ. ಪ್ರಾರಂಭದಲ್ಲೇ ಸಂಚಾರಿ ಭಾವದಲ್ಲಿ ನವರಸಗಳು ಭಿನ್ನ ರೀತಿಯಲ್ಲಿ ಹೊಮ್ಮಿದವು. ಮುಖಿಜದಲ್ಲಿ ಭಿನ್ನ ರಸಗಳ ಪ್ರತಿಪಾದನೆ ಗಾಢವಾಗಿ ಮೂಡಲಿಲ್ಲ ಎಂದೇ ಹೇಳಬೇಕು! ವೀರ, ಭೀಭತ್ಸ ರಸಗಳ ಅಭಿನಯದಲ್ಲಿ ಬದಲಾವಣೆ ಕಾಣಬೇಡವೇ? ಅನುಭವ ಹಾಗೂ ದಕ್ಷ ಮಾರ್ಗದರ್ಶನಗಳಿಂದ ತಿದ್ದಿಕೊಂಡು, ಅಭಿನಯವನ್ನು ಪರಿಣಾಮಕಾರಿಯಾಗಿಸಬಹುದು. ಪುತ್ರಕಾಮೇಷ್ಟಿ ಯಾಗ, ಮಾರೀಚ ವಧೆ, ಅಹಲ್ಯೆ ಶಾಪವಿಮೋಚನೆ, ಸೀತಾ ಸ್ವಯಂವರ  ಮುಂತಾದ ಘಟನೆಗಳನ್ನು ಆಧರಿಸಿ ನೃತ್ಯ ಸಾಗಿತು. ಆದರೆ ಕೆಲ ದೃಶ್ಯಗಳು ತೀರಾ ಚಿಕ್ಕದಾಗಿ, ಪರಿಣಾಮಕಾರಿ ಆಗಲಿಲ್ಲ. ಪಾತ್ರಗಳನ್ನು ಕ್ಷಿಪ್ರವಾಗಿ ಬದಲಾಯಿಸಿಕೊಳ್ಳುತ್ತಾ ವಿದ್ಯಾ ಶಿಮ್ಲಡ್ಕ ನಿರಾಯಾಸವಾಗಿ ನರ್ತಿಸಿದರೂ, ಎಡಿಟ್ ಮಾಡಿ, ನೃತ್ಯರೂಪಕ ಬಿಗಿ ಹಂದರದಲ್ಲಿ ಸಾಗಿದರೆ ಪರಿಣಾಮ ಗಾಢವಾಗಬಹುದು. ಪರಿಷ್ಕಾರವಾದರೆ ಒಂದು ಉತ್ತಮ ನೃತ್ಯರೂಪಕವಾಗಬಲ್ಲ ಎಲ್ಲ ಸಾಧ್ಯತೆಗಳೂ ಇದೆ. ಕನ್ನಡ ಕಾವ್ಯವನ್ನು ಆಧರಿಸಿ ಹೆಣೆದ ಒಂದು ಉತ್ತಮ ಪ್ರಯತ್ನ ಎಂಬ ಶ್ಲಾಘನೆಯೂ ಇದೆ.

ಕುವೆಂಪು ಕೃತಿಗೆ ಹಂಸಧ್ವನಿ, ಆರಭಿ, ಹಂಸಾನಂದಿ, ಮಧುವಂತಿ, ದೇಶ್, ಸಿಂಧುಭೈರವಿ ಮುಂತಾದ ರಾಗಗಳನ್ನು ಆಧರಿಸಿ ದೀಪ್ತಿ ಶ್ರೀನಾಥ್ ಶ್ರಾವ್ಯವಾಗಿ ಹಾಡಿದರೆ, ಬೃಂದಾ ನಟುವಾಂಗದಲ್ಲಿ, ಶ್ರೀಹರಿ ಮೃದಂಗದಲ್ಲಿ, ಡಾ. ನಟರಾಜಮೂರ್ತಿ ಪಿಟೀಲಿನಲ್ಲಿ, ರೋಹಿತ್ ಚಂಡೆಯಲ್ಲಿ ಹಾಗೂ ಬೆಳಕು ಸಂಯೋಜನೆಯಲ್ಲಿ ಸಾಯಿ ವೆಂಕಟೇಶ್ ಉತ್ತಮ ನೆರವು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT