ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆಯ ಗಾಳಿ...

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನಿಖಿಲ್‌ ಚಂದವಾನಿ
‘ಎಂಜಿನಿಯರಿಂಗ್‌ ಪದವಿಯನ್ನು ಅರ್ಧಕ್ಕೆ ನಿಲ್ಲಿಸಿ ಬರೆದೇ ಬದುಕುತ್ತೇನೆ’ಎಂದು ಮನೆಯವರಿಗೆ ಸವಾಲು ಹಾಕಿ ಅಂತರರಾಷ್ಟ್ರೀಯ ಬರಹಗಾರನಾಗಿ ಯಶಸ್ವಿಯಾಗಿರುವ ನಿಖಿಲ್‌ ಚಂದವಾನಿ ಕಥೆ ಇದು.

‘ಅದು ಕೀನ್ಯಾದ ದಟ್ಟಕಾಡು. ಹಾವಿನ ಸಾಕ್ಷಚಿತ್ರ ಮಾಡುತ್ತಿದ್ದೆವು. ಹಾವುಗಳನ್ನು ಹುಡುಕಿ ಚಿತ್ರೀಕರಿಸುವುದರಲ್ಲೇ ಕತ್ತಲು ಆವರಿಸಿತು. ಕಾಡಿನಿಂದ ಹೊರ ಬರುವಾಗ ನಮ್ಮ ತಂಡದ ಸದಸ್ಯನಿಗೆ ದೊಡ್ಡದೊಂದು ಹಾವು ಕಚ್ಚಿತ್ತು. ಇದರಿಂದ ಕೋಪಗೊಂಡ ನಮ್ಮ ತಂಡ ಅದನ್ನು ಹುಡುಕಿ ಕೊಂದು ಹಾಕಿತು. ನಂತರ ಬೆಂಕಿಯಲ್ಲಿ ಸುಟ್ಟು ನಾವೆಲ್ಲ ಅದನ್ನು ತಿಂದೆವು’ ಎಂದು ‘ಎಸ್ಕೇಪ್‌ ಆಫ್ ಕೀನ್ಯಾ’ ಎಂಬ ಲೇಖನದಲ್ಲಿ ನಿಖಿಲ್‌ ಮಾಂಸಾಹಾರಿಯಾದ ಬಗ್ಗೆ ಬರೆದುಕೊಂಡಿದ್ದಾರೆ.

ನಿಖಿಲ್‌ ಚಂದವಾನಿ ಭಾರತದ ಭರವಸೆಯ ಯುವ ಬರಹಗಾರ, ಸಿನಿಮಾ ನಿರ್ಮಾಪಕ ಮತ್ತು ಹವ್ಯಾಸಿ ಛಾಯಾಗ್ರಾಹಕನೂ ಹೌದು.
ನಿಖಿಲ್‌ ಇತ್ತೀಚೆಗೆ ಬರೆದ ‘ಕೋಡೆಡ್‌ ಕಾನ್‌ಸ್ಪಿರಸಿ’ ಪುಸ್ತಕ ಅಮೆರಿಕದ ಪ್ರತಿಷ್ಠಿತ ‘ಲಿಟರರಿ ಫೋರಮ್‌ ಸೊಸೈಟಿ’ ಪುರಸ್ಕಾರಕ್ಕೆ ಪಾತ್ರವಾಗಿದೆ. ಕಳೆದ ವರ್ಷ ನಿಖಿಲ್‌ ಅವರ ‘ಅನ್‌ಸಂಗ್‌ ವರ್ಡ್ಸ್‌’ ಕವನ ಸಂಕಲನ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕವನ ಸಂಕಲನ.

ಮುಂಬೈ ಮೂಲದ ನಿಖಿಲ್‌ ಬರಹಗಾರನಾಗಬೇಕು ಎಂದು ಚಿಕ್ಕಂದಿನಲ್ಲೇ ಕನಸು ಕಂಡವರು. ಮನೆಯವರ ಒತ್ತಾಯಕ್ಕೆ ಎಂಜಿನಿಯರಿಂಗ್‌ ಕಾಲೇಜು ಮೆಟ್ಟಿಲು ಹತ್ತಿದರು. ಆದರೆ ನಿಖಿಲ್‌ ಎಂಜಿನಿಯರಿಂಗ್‌ ಪಾಸು ಮಾಡಲಿಲ್ಲ.  ನಿಖಿಲ್‌ ನಡೆ ಮನೆಯವರಿಗೆ ಗಾಬರಿ ಹುಟ್ಟಿಸಿತ್ತು. ಬರೆದುಕೊಂಡು ಜೀವನ ನಡೆಸಲು ಸಾಧ್ಯವಿಲ್ಲ, ಎಂಜಿನಿಯರಿಂಗ್‌ ಪಾಸು ಮಾಡು ಜೀವನಕ್ಕೆ ದಾರಿಯಾಗುತ್ತದೆ ಎಂದು ಹಲವು ಸಲ ಬುದ್ಧಿ ಹೇಳಿದ್ದರು.

ನಾನು ಬರೆದೇ ಬದುಕುತ್ತೇನೆ ಎಂಬ ಹಟಕ್ಕೆ ಬಿದ್ದು ಕಾಲೇಜಿಗೂ ಗುಡ್‌ಬೈ ಹೇಳಿ ಮನೆಯಿಂದ ಹೊರ ಬಂದರು. ಹೀಗೆ ಮನೆ ಬಿಟ್ಟು ಬಂದ ನಿಖಿಲ್‌ ಇಂದು ಅಂತರರಾಷ್ಟ್ರೀಯ ಮಟ್ಟದ ಬರಹಗಾರರಾಗಿದ್ದಾರೆ. ಹಾಲಿವುಡ್‌ ಸಿನಿಮಾಗಳಿಗೂ ಚಿತ್ರಕಥೆ ಬರೆಯುತ್ತಿದ್ದಾರೆ. ಇವರ ಇಚ್ಛಾಶಕ್ತಿ ಇತರರಿಗೆ ಸ್ಫೂರ್ತಿಯ ಸೆಲೆ.

ರಿತೇಶ್‌–ರಾಜೇಶ್‌–ಕೊಟ್ರೇಶ್‌


ಕ್ಯಾರಿಕ್‌ಮಿ (caricme)- ಇದು ಮೂವರು ಗೆಳೆಯರು ಕಟ್ಟಿದ ಉಡುಗೊರೆಗಳ ಇ–ಕಾಮರ್ಸ್‌ ಕಂಪೆನಿ.
ಕ್ಯಾರಿಕ್‌ಮಿ ಗ್ರಾಹಕರಿಗೆ ಉಡುಗೊರೆಗಳನ್ನು ತಯಾರಿಸುತ್ತದೆ. ಮದುವೆ, ಹುಟ್ಟುಹಬ್ಬ ಸೇರಿದಂತೆ ಕಾರ್ಪೊರೇಟ್‌ ಅಥವಾ ಖಾಸಗಿ ಸಂಸ್ಥೆಗಳ ಸ್ಮರಣೀಯ ಕಾರ್ಯಕ್ರಮಗಳಿಗೂ ಗಿಫ್ಟ್‌ಗಳನ್ನು ಒದಗಿಸುತ್ತದೆ.

ಇದನ್ನು ಕಟ್ಟಿದ್ದು ಚಿತ್ರಕಲಾವಿದರಾದ ರಿತೇಶ್‌ ರಾವ್‌, ರಾಜೇಶ್‌ ಆಚಾರ್ಯ ಮತ್ತು ಕೊಟ್ರೇಶ್‌ ಚಟ್ರಿಕಿ. ರಿತೇಶ್‌ ಮತ್ತು ಕೊಟ್ರೇಶ್‌ ಫೈನ್‌ ಆರ್ಟ್ಸ್‌ನಲ್ಲಿ ಪದವಿ, ರಾಜೇಶ್‌ ಪೇಂಟಿಂಗ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದವರು.

ಮೂವರೂ ಬೆಂಗಳೂರಿನ ಇನ್ಫೋಸಿಸ್‌ ಕಂಪೆನಿಯ ಕಮ್ಯುನಿಕೇಶನ್‌ ಡಿಸೈನ್‌ ವಿಭಾಗದಲ್ಲಿ ಆರು ವರ್ಷಗಳ ಕಾಲ  ಕೆಲಸ ಮಾಡಿದವರು. ಇಲ್ಲಿನ ಅನುಭವಗಳು ಇವರ ಭಿನ್ನ ಆಲೋಚನೆಗೆ ಬುನಾದಿಯಾಯಿತು. ಕಲಾಕೃತಿಗಳ ರಚನೆ, ಕಾರ್ಯಕ್ರಮಗಳ ಆಯೋಜನೆ, ಚಿತ್ರರಚನೆಯಲ್ಲಿ ಪಡೆದ ಅನುಭವದಿಂದ ‘ಕ್ಯಾರಿಕ್‌ಮಿ’ ಕಂಪೆನಿ ಜನ್ಮ ತಾಳಿತು.

2012ರಲ್ಲಿ ಆರಂಭವಾದ ಈ ಕಂಪೆನಿ ಇಂದು ಪ್ರತಿ ತಿಂಗಳೂ 350ಕ್ಕೂ ಹೆಚ್ಚು ಆರ್ಡರ್‌ಗಳನ್ನು ಪಡೆಯುತ್ತಿದೆ. ಇಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಉಡುಗೊರೆಗಳನ್ನು ತಯಾರಿಸಿಕೊಡುವುದು ವಿಶೇಷ.

ಕ್ಯಾರಿಕ್‌ಮಿ ಗಿಫ್ಟ್‌ಗಳನ್ನು ಇತರ ಇ–ಕಾಮರ್ಸ್‌ ಜಾಲತಾಣಗಳಾದ ಸ್ನ್ಯಾಪ್‌ಡೀಲ್‌, ಅಮೆಜಾನ್‌, ಫರ್ನ್ಸ್‌ ಅಂಡ್‌ ಪೆಟಲ್ಸ್‌ನಲ್ಲೂ ಗ್ರಾಹಕರು ಕೊಳ್ಳಬಹುದು.

‘ನಮಗೆ ದೊಡ್ಡ ದೊಡ್ಡ ಕನಸುಗಳಿಲ್ಲ. ಕಲೆಗೆ ಸಂಬಂಧಿಸಿದ ಎಲ್ಲಾ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಾಗಬೇಕು ಎನ್ನುವ ಉದ್ದೇಶ ನಮ್ಮದು. ಈ ನಿಟ್ಟಿನಲ್ಲಿ ಕ್ಯಾರಿಕ್‌ಮಿ ಕಾರ್ಯನಿರ್ವಹಿಸುತ್ತಿದೆ’ ಎನ್ನುತ್ತಾರೆ ಕೊಟ್ರೇಶ್‌.

  ಮನಸ್ಸು ಕ್ರಿಯಾಶೀಲವಾಗಿದ್ದರೆ ಅಂದುಕೊಂಡಿದ್ದನ್ನು ಸಾಧಿಸುವುದು ಬಲು ಸುಲಭ ಎಂಬುದನ್ನು ತೋರಿಸಿಕೊಟ್ಟ ಇವರ ಸಾಧನೆ ಯುವಕರಿಗೆ ಸ್ಫೂರ್ತಿ.
http://www.caricme.com

ರೋಹಿತ್‌–ಫಣೀಂದರ್
ಚೈನ್‌ಲಿಂಕ್‌ ಮ್ಯಾನೇಜ್‌ಮೆಂಟ್‌ ಮತ್ತು ಲಾಜಿಸ್ಟಿಕ್‌ ಉದ್ಯಮವು ಇಂದು ಇ–ಕಾಮರ್ಸ್‌ನಂತೆ ವೇಗವಾಗಿ ಬೆಳೆಯುತ್ತಿರುವ ಉದ್ಯಮ.
ಕಡಿಮೆ ಬಂಡವಾಳ ಬಯಸುವ ಈ ಉದ್ಯಮಕ್ಕೆ ಆರ್ಡರ್‌ ಮಾಡಲು ಒಂದು ಸಾಫ್ಟ್‌ವೇರ್‌ ಅಥವಾ ಅಪ್ಲಿಕೇಶನ್‌ ಇದ್ದರೆ ಸಾಕು, ಸುಲಭವಾಗಿ ವ್ಯವಹಾರ ನಡೆಸಬಹುದು ಎನ್ನುತ್ತಾರೆ ರೋಹಿತ್‌ ಫರ್ನಾಂಡಿಸ್‌.

ಬೆಂಗಳೂರು ನಗರವನ್ನು ಮಾತ್ರ ಸೀಮಿತವಾಗಿರಿಸಿಕೊಂಡು ಶಿಪ್ಪರ್‌.ಇನ್‌ (shippr.in) ಕಂಪೆನಿಯನ್ನು ಆರಂಭಿಸಿದ್ದಾರೆ. ಸರಕುಗಳನ್ನು ಹಾಳಾಗದಂತೆ ಮತ್ತು ತ್ವರಿತವಾಗಿ ಸಾಗಣೆ ಮಾಡುವುದು ಶಿಪ್ಪರ್‌. ಇನ್‌ನ ಮುಖ್ಯ ಕೆಲಸ. ಗ್ರಾಹಕರಿಗೆ ಹೆಚ್ಚಿನ ಹೊರೆಯಾಗದಂತೆ ಕಡಿಮೆ ದರದಲ್ಲಿ ಸೇವೆ ನೀಡಲಾಗುತ್ತಿದೆ.

ಶಿಪ್ಪರ್‌.ಇನ್‌ ಕಟ್ಟಿದ್ದು ಮೂವರು ಗೆಳೆಯರು. ರೋಹಿತ್‌ ಫರ್ನಾಂಡಿಸ್‌, ಫಣೀಂದರ್‌ ಹೆಗ್ಡೆ ಮತ್ತು ರಾಹುಲ್‌ ಅರುಣ್‌. ರೋಹಿತ್‌, ಲಾಜಿಸ್ಟಿಕ್‌ ವ್ಯವಹಾರದಲ್ಲಿ ಅನುಭವ ಹೊಂದಿದವರು. ರಾಹುಲ್‌ ಮತ್ತು ಫಣೀಂದರ್‌ ಎಂಜಿನಿಯರ್‌ಗಳು.
ರೋಹಿತ್‌ ಅನುಭವದೊಂದಿಗೆ ಶಿಪ್ಪರ್‌ ಆರಂಭವಾಗಿ ಇನ್ನೂ ಎರಡು ತಿಂಗಳು ಕಳೆದಿಲ್ಲ ಆಗಲೇ ಪ್ರತಿ ನಿತ್ಯ ನೂರಾರು ಆರ್ಡರ್‌ಗಳು ಬರುತ್ತಿವೆ ಎನ್ನುತ್ತಾರೆ ಇವರು.

ಪ್ರಸ್ತುತ ಸಣ್ಣ ಸಣ್ಣ ಆರ್ಡರ್‌ಗಳನ್ನು ಮಾತ್ರ ಪಡೆಯಲಾಗುತ್ತಿದೆ. ಮುಂದೆ ಶಿಪ್ಪರ್‌.ಇನ್‌ ಅನ್ನು ದೊಡ್ಡದಾಗಿ ಬೆಳೆಸುವ ಯೋಚನೆ ಇದೆ. ಬೆಂಗಳೂರಿನ ಎಲ್ಲಾ ಭಾಗದಲ್ಲೂ ಶಿಪ್ಪರ್‌.ಇನ್‌ ಸೇವೆ ಲಭ್ಯವಿದ್ದು, ಗ್ರಾಹಕರು ವೆಬ್‌ಸೈಟ್‌ಗೆ ಲಾಗಿನ್‌ ಆಗಿ  ಸುಲಭವಾಗಿ ಬುಕ್‌ ಮಾಡಬಹುದು.

‘ಇದೇ ವಲಯದಲ್ಲಿ ಕೆಲಸ ಮಾಡಿದರೆ ಕೈತುಂಬಾ ಸಂಬಳ ಸಿಗುತ್ತದೆ. ಆದರೆ ಹತ್ತಾರು ಜನರಿಗೆ ಕೆಲಸ ಕೊಡುವುದರಲ್ಲಿ ಸಿಗುವ ಆತ್ಮತೃಪ್ತಿ ಕಂಪೆನಿಯೊಂದರಲ್ಲಿ ಕೆಲಸ ಮಾಡುವುದರಲ್ಲಿ ಸಿಗುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅನುಭವ. ಈ ನಿಟ್ಟಿನಲ್ಲಿ ಸಾಗುತ್ತಿದ್ದು ದೇಶದ ಎಲ್ಲಾ ಮಹಾನಗರಗಳಲ್ಲೂ ಶಿಪ್ಪರ್‌.ಇನ್‌ ವಿಸ್ತರಿಸುವ ಕನಸು ನನ್ನದು’ ಎನ್ನುತ್ತಾರೆ ರೋಹಿತ್‌.
http://www.shippr.in

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT