ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿಗೆ ಸಂಚಕಾರ ತಂದ ಅರಣ್ಯ ಭೂಮಿ ಗುತ್ತಿಗೆ

ತೀರ್ಥಹಳ್ಳಿ: ಬೀದಿಪಾಲಾಗುವ ಆತಂಕದಲ್ಲಿ ಐದು ಕುಟುಂಬಗಳು
Last Updated 20 ಡಿಸೆಂಬರ್ 2013, 7:03 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕೃಷಿ ಉದ್ದೇಶಕ್ಕಾಗಿ ಅರಣ್ಯ ಇಲಾಖೆಯಿಂದ ಭೂಮಿಯನ್ನು ಗುತ್ತಿಗೆ ಪಡೆದ ರೈತರ ಸ್ಥಿತಿ ಈಗ ಅತಂತ್ರವಾಗಿದೆ. ಇದೊಂದು ವಿಶಿಷ್ಟ ಪ್ರಕರಣವಾಗಿದ್ದು ತಾಲ್ಲೂಕಿನ ಹಣಗೆರೆ ಸಮೀಪದ ಶಿರನಲ್ಲಿ ಗ್ರಾಮದ ಐದು ಕುಟುಂಬದ ಬದುಕು ಸರ್ಕಾರದ ನಿರ್ಧಾರವನ್ನು ಅವಲಂಭಿಸಿದೆ.

ಮಂಡಗದ್ದೆ ಹೋಬಳಿ ಶಿರನಲ್ಲಿ ಗ್ರಾಮದ ಸರ್ವೇ ನಂ 19ರಲ್ಲಿ ಐದು ರೈತರಿಗೆ 1970ರಲ್ಲಿ ಅರಣ್ಯ ಇಲಾಖೆ ಕೃಷಿ ಉದ್ದೇಶಕ್ಕಾಗಿ 24 ಎಕರೆ ಭೂ ಪ್ರದೇಶವನ್ನು ಗುತ್ತಿಗೆ ನೀಡಿದೆ. 44 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಈ ಪ್ರದೇಶದಿಂದ ಒಕ್ಕಲೇಳುವಂತೆ ಅರಣ್ಯ ಇಲಾಖೆ ಕ್ರಮಕಕೆ ಮುಂದಾಗಿರುವುದು ರೈತ ಕುಟುಂಬಗಳಿಗೆ ಬರಸಿಡಿಲು ಎರಗಿದಂತಾಗಿದೆ.

ಕೃಷಿ ಉದ್ದೇಶದಲ್ಲಿ ಅರಣ್ಯ ಭೂ ಪ್ರದೇಶವನ್ನು ಗುತ್ತಿಗೆ ಪಡೆದಿರುವ ರೈತರು ಶಾಶ್ವತವಾಗಿ ಸ್ಥಳದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅಡಿಕೆ, ಭತ್ತ, ತೆಂಗು, ರಬ್ಬರ್‌, ಶುಂಠಿ, ಮೆಕ್ಕೆಜೋಳ, ಅರಶಿಣ ಹೀಗೆ ವಾರ್ಷಿಕ, ಬಹುವಾರ್ಷಿಕ ಬೆಳೆ ಬೆಳೆದು ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಅಭಿವೃದ್ಧಿ ಪಡಿಸಿದ ಸಾಗುವಳಿ  ಪ್ರದೇಶದಿಂದ ರೈತರು ಹೊರ ಹೋಗಲು ಒಪ್ಪುತ್ತಿಲ್ಲ.

1991–92ರಲ್ಲಿ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದು, ಈ ನಂತರ ಸೃಷ್ಟಿಯಾದ ಆಡಳಿತಾತ್ಮಕ ಕ್ರಮಗಳ ಕುರಿತು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ. ನ್ಯಾಯಾಲಯ 1998ರಲ್ಲಿ ಗುತ್ತಿಗೆ ಪ್ರದೇಶವನ್ನು ವಶಕ್ಕೆ ಪಡೆಯುವಂತೆ ಅರಣ್ಯ ಇಲಾಖೆಗೆ ಸೂಚಿಸಿದೆ. ರೈತರ ಮನವಿ ಆಧರಿಸಿ ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ನೀಡಲು 2001ರಲ್ಲಿ ಕಂದಾಯ ಇಲಾಖೆ ಒಪ್ಪಿಗೆ ನೀಡಿದ್ದರೂ ಅರಣ್ಯ ಇಲಾಖೆ ಭೂಮಿ ಪಡೆಯದೇ ಇರುವುದು ಈಗ ರೈತರ ಪಾಲಿಗೆ ಶಾಪವಾಗಿದೆ.

ಶಿರನಲ್ಲಿ ಗ್ರಾಮದ ಸರ್ವೇ ನಂ.19ರಲ್ಲಿ ಕಾಳನಾಯ್ಕ 4 ಎಕರೆ, ಗುರುಮೂರ್ತಿ ನಾಯ್ಕ 4, ಕೃಷ್ಣಪ್ಪ ನಾಯ್ಕ 4, ಲಲಿತಮ್ಮ 4 ಹಾಗೂ ರುಕ್ಮಣಿಯಮ್ಮ ಹೆಸರಿಗೆ 8 ಎಕರೆ ಪ್ರದೇಶವನ್ನು  ಗುತ್ತಿಗೆ ನೀಡಲಾಗಿದೆ. 1991–92ರಲ್ಲಿ  ಈ ಪ್ರದೇಶವು ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಗೆ ಸೇರ್ಪಡೆಗೊಂಡಿದೆ. ಗುತ್ತಿಗೆ ಪ್ರದೇಶಕ್ಕೆ ಪರ್ಯಾಯವಾಗಿ ಆಗುಂಬೆ ಹೋಬಳಿ ನೆಂಟೂರು ಗ್ರಾಮದ ಸರ್ವೇ ನಂ. 28ರಲ್ಲಿ 30 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು ಕಂದಾಯ ಇಲಾಖೆ ಕೈಗೊಂಡ ತೀರ್ಮಾನ ಇನ್ನೂ ಜಾರಿಗೆ ಬಂದಿಲ್ಲ.

ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯ ವನ್ಯ ಜೀವಿ ಅಭಯಾರಣ್ಯ ವ್ಯಾಪ್ತಿಯ ಭೂ ಪ್ರದೇಶವನ್ನು ಕೈಬಿಟ್ಟು ಪರ್ಯಾಯವಾಗಿ ಕಂದಾಯ ಭೂಮಿಯನ್ನು ಪಡೆಯುವಂತಿಲ್ಲ ಎನ್ನುವ ವಾದ  ಅರಣ್ಯ ಇಲಾಖೆಯದ್ದಾಗಿದ್ದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ.

ಈ ನಡುವೆ ಸಾಗುವಳಿ ಪ್ರದೇಶವನ್ನು ವಶಕ್ಕೆ ಪಡೆಯಲು ಸಿರಿಗೆರೆ ವನ್ಯಜೀವಿ ವಲಯ ಅರಣ್ಯ ವಿಭಾಗ ಪೂರ್ಣ ಆಡಳಿತ ಕ್ರಮಗಳನ್ನು ಕೈಗೊಂಡಿದ್ದು. ಬಲ್ಲ ಮೂಲಗಳ ಪ್ರಕಾರ ಡಿಸೆಂಬರ್‌ 27 ರಂದು ಭೂ ಪ್ರದೇಶವನ್ನು ವಶಕ್ಕೆ ಪಡೆಯಲು ಸಿದ್ದತೆ ಮಾಡಿಕೊಂಡಿದೆ.
  ಅರಣ್ಯ ಇಲಾಖೆ ಕ್ರಮ ಕೈಗೊಳ್ಳುವ ಸುಳಿವು ಅರಿತಿರುವ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಶಾಶ್ವತ ಬದುಕಿಗೆ ಸಂಚಕಾರ ಒದಗಿದೆ ಎಂದು ಆತಂಕಕ್ಕೆ ಒಳಗಾಗಿರುವ ರೈತರು ಸರ್ಕಾರ ನೆರವಿಗೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

‘ಕಾನೂನು ಕಾಯ್ದೆ ಏನಿದೆಯೋ ಗೊತ್ತಿಲ್ಲ. ನಾವು ಕಾಡು ಹಾಳು ಮಾಡಿಲ್ಲ. ರಕ್ಷಣೆಯ ಜತೆಗೆ ಸಾಗುವಳಿ ಮಾಡಿ ಜೀವನ ಕಟ್ಟಿಕೊಂಡಿದ್ದೇವೆ. ನಮ್ಮ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸರ್ಕಾರ ನಮ್ಮ ಸಮಸ್ಯೆಯನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು.  ಸರ್ಕಾರ ನಮ್ಮನ್ನು ಕೈಬಿಟ್ಟರೆ ನಮ್ಮ ಹೆಣವನ್ನು ಸಾಗುವಳಿ ಜಾಗದಲ್ಲಿ ನೋಡ ಬೇಕಾಗುತ್ತದೆ’ ಎಂದು ಸಂತ್ರಸ್ತ ರೈತ ದಾಸನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT