ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಬದಲಿಸಿದ ತಂಬಾಕು

Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ರಾಸಾಯನಿಕಗಳನ್ನು ಬಳಸಿ ಬೆಳೆ ತೆಗೆಯುವತ್ತ ಗಮನ ಹರಿಸುವ ಬಹುತೇಕ ರೈತರು ಮಣ್ಣಿನ ಫಲವತ್ತತೆ, ಉತ್ಕೃಷ್ಟತೆ ಕಾಪಾಡಿಕೊಳ್ಳುವಲ್ಲಿ ಸೋಲುವುದೇ ಹೆಚ್ಚು. ಆದರೆ ಬೆಳೆಯಿಂದ ಲಾಭ ಗಳಿಸುವುದರ ಜೊತೆಗೇ ಮಣ್ಣಿನ ಫಲವತ್ತತೆಯನ್ನೂ ಇಮ್ಮಡಿಗೊಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಜಂಗಸೋವೆನಹಳ್ಳಿ ಗ್ರಾಮದ ಕೃಷಿಕ ಉಪ್ಪಾರ ಕಾಳಪ್ಪ.

ಹಿರೇಹೆಗ್ಡಾಳ್ ಸಮೀಪದಲ್ಲಿರುವ ಕೇವಲ ಎರಡು ಎಕರೆ ಜಮೀನಿನ ಮೇಲೆಯೇ ಇವರ ಸಂಸಾರ ನಿರ್ವಹಣೆ. ಇಂತಿಪ್ಪ ಜಮೀನಿನ ಭೂಮಿ ಸತ್ವ ಕಳೆದುಕೊಂಡು ಫಸಲು ಕೈ ಹತ್ತಲಿಲ್ಲ. ಬೆಳೆಗಿಂತ ಕಳೆಯದ್ದೇ ಮೇಲುಗೈ. ಈ ಸಮಸ್ಯೆ ಸಾಲದು ಎಂಬುದಕ್ಕೆ ಅನಾವೃಷ್ಟಿ ಬೇರೆ. ನೆರೆಯ ಹೊಲದವರಿಂದ ಕೊಳವೆ ನೀರನ್ನು ಪಡೆದು ಕೃಷಿ ಮಾಡಿದರು. ಸಾರ ಕಳೆದುಕೊಂಡಿದ್ದ ಭೂಮಿಯಲ್ಲಿ ಬೆಳೆದ ಬೆಳೆಗೆ ರಾಸಾಯನಿಕ ಗೊಬ್ಬರಗಳನ್ನೂ ಹಾಕಿದರು. ನಿರೀಕ್ಷಿತ ಫಲ ಮಾತ್ರ ಸಿಗಲಿಲ್ಲ. ಆಗ ಅವರಿಗೆ ಕಂಡದ್ದು ತಂಬಾಕು ಬೆಳೆ. ಕಾಳಪ್ಪ ಇದನ್ನು ಲಾಭದ ದೃಷ್ಟಿಯಿಂದ ನೋಡದೇ ಭೂಮಿಗೆ ಕಸುವು ತುಂಬಲು ಬೆಳೆದಿದ್ದರು. ನಂತರ ಇದೇ ಅವರಿಗೆ ಲಾಭದತ್ತ ಮುಖ ಮಾಡಿಸಿತು.

ತಮ್ಮ ಎರಡು ಎಕರೆಗೆ ಮಾಗಿ ಮಳೆಗೆ ಸಸಿ ನೆಟ್ಟರು. ಮಿತ ನೀರಿನಲ್ಲಿಯೇ ತಂಬಾಕು ಹುಲುಸಾಗಿ ಬೆಳೆಯುವುದರಿಂದ ನೀರಿಗಾಗಿ ಗೋಗರೆಯುವುದು ತಪ್ಪಿತು. ಗಿಡದಲ್ಲಿ ಬೆಳೆದ ಅನಗತ್ಯ ಎಲೆಗಳನ್ನು, ಕುಡಿಗಳನ್ನು ಕಟಾವು ಮಾಡಿ ಹೊಲದಲ್ಲಿ ಹಾಕಿದರು. ಗಿಡದಿಂದ ಗಿಡಕ್ಕೆ ನಿರ್ದಿಷ್ಟ ಅಂತರ ಕಾಯ್ದುಕೊಂಡಿದ್ದರಿಂದ ಅನಗತ್ಯವಾಗಿ ಬೆಳೆದಿದ್ದ ಕಳೆಯನ್ನು ತಹಬದಿಗೆ ತಂದರು. ತಂಬಾಕು ಗಿಡ ಬೆಳೆದಂತೆಲ್ಲಾ ಕಳೆಯನ್ನು ಕೊಲ್ಲುತ್ತದೆ. ಇದರಿಂದಾಗಿ ಅವರು ಬೆಳೆಯಲ್ಲಿ ಉತ್ತಮ ಫಲಿತಾಂಶ ಕಂಡರು. ಇದರೊಂದಿಗೆ ಜಮೀನಿಗೆ ಕೆರೆ ಮಣ್ಣು, ಕೊಟ್ಟಿಗೆ ಗೊಬ್ಬರ ತುಂಬಿಸಿದರು. ವರ್ಷ ಬಿಟ್ಟು ವರ್ಷ ತಂಬಾಕು ಹಾಕುತ್ತಾ ಬಂದರು. ಇದರಿಂದ ಇಂದು ಇವರ ಜಮೀನಿನಲ್ಲಿ ಮಣ್ಣಿನ ಸಾರ ಸಿಕ್ಕಾಪಟ್ಟೆ ವೃದ್ಧಿಯಾಗಿದೆ.

ವಾಣಿಜ್ಯ ಬೆಳೆಯಾಗಿರುವುದರಿಂದ ಇತ್ತ ಈ ಬೆಳೆಗೆ ಮಾರುಕಟ್ಟೆ ಹಾಗೂ ಬೆಲೆಯೂ ಇದೆ. ಇದರಿಂದ ಕಾಳಪ್ಪ ಪ್ರತಿ ಮೂರು ವರ್ಷಕ್ಕೊಮ್ಮೆ ತಂಬಾಕು ಬೆಳೆಯನ್ನು ಬೆಳೆಯುತ್ತಾರೆ. ತಮ್ಮ ಗ್ರಾಮದ ಬದಿಯಲ್ಲಿ ಮತ್ತೆರಡು ಎಕರೆ ಜಮೀನು ತೆಗೆದುಕೊಂಡು ಬೇಸಾಯ ಮಾಡುತ್ತಿದ್ದು, ಈ ಜಮೀನಲ್ಲಿಯೂ ಇದೇ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಾರೆ. `ತಂಬಾಕು ಗಿಡದ ಪ್ರತಿ ಭಾಗವೂ ಭೂಮಿಯ ಸಾರ ಹೆಚ್ಚಲು ಪ್ರಯೋಜನಕಾರಿ. ನಿರುಪಯೋಗ ತಂಬಾಕಿಗೆ ಸಗಣಿ ಕುಳ್ಳು ಸೇರಿಸಿ ರುಬ್ಬಿ ಅದನ್ನು ಬೀಜ ಬಿತ್ತನೆ ಸಮಯದಲ್ಲಿ ಸೇರಿಸಿ ಬಿತ್ತನೆ ಮಾಡುವುದರಿಂದ ಒಳ್ಳೆಯ ಫಲಿತಾಂಶ ಕಾಣಬಹುದು' ಎನ್ನುವುದು ಉಪ್ಪಾರ ಕಾಳಪ್ಪ ಅವರ ಅಭಿಮತ.

ತಂಬಾಕು ಬೆಳೆಯಿಂದ ಇವರು ಸಾವಯವ ಕೃಷಿ ಮಾಡುವುದರತ್ತ ವಾಲಿದ್ದಾರೆ. ಕಸುವು ಕಳೆದುಕೊಂಡಿದ್ದ ಭೂಮಿಯಲ್ಲಿ ಈಗ ಚಿನ್ನದಂತೆ ಬೆಳೆ ನಳನಳಸುತ್ತಿದೆ. `ತಂಬಾಕು ಬೆಳೆಯನ್ನು ನಾನು ಆಗಾಗ್ಗೆ ಬೆಳೆಯುವುದರಿಂದ ಹೊಲದಲ್ಲಿ ಒಳ್ಳೆಯ ಕಸುವು ಮೂಡಿದೆ. ಒಮ್ಮೆ ತಂಬಾಕು ಬೆಳೆದರೆ ಕನಿಷ್ಠ ಮೂರು ವರ್ಷ ಹೊಲಕ್ಕೆ ರಾಸಾಯನಿಕ ಗೊಬ್ಬರ ಇಡುವ ಪ್ರಮೇಯವೇ ಬರುವುದಿಲ್ಲ' ಎನ್ನುವುದು ಅವರ ನುಡಿ. ಸಂಪರ್ಕಕ್ಕೆ 9845867738.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT