ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಬದಲಿಸುವ ಬ್ಯಾಟ್

Last Updated 15 ಜುಲೈ 2013, 19:59 IST
ಅಕ್ಷರ ಗಾತ್ರ

ಕ್ರಿಕೆಟಿಗರು ಸಿಕ್ಸ್, ಬೌಂಡರಿ ಬಾರಿಸುತ್ತಿದ್ದರೆ, ಅಭಿಮಾನಿಗಳು  ರೋಮಾಂಚಿತಗೊಂಡು ಹುಚ್ಚೆದ್ದು ಕುಣಿದು ಕುಪ್ಪಳಿಸುತ್ತಾರೆ. ಆದರೆ ಈ ಕ್ರೀಡಾಪಟುಗಳ ಸಾಧನೆಗೆ ಕಾರಣವಾಗಿರುವುದಕ್ಕೆ ಬ್ಯಾಟ್ ಕೂಡ ಒಂದು ಕಾರಣವೇ ಎನ್ನುವುದು ಎಷ್ಟೋ ಮಂದಿಯ ಗಮನಕ್ಕೆ ಬರುವುದೇ ಇಲ್ಲ.
ಇಂಥ  ಬ್ಯಾಟ್‌ಗಳನ್ನು ತಯಾರಿಸುವ  25 ಕುಟುಂಬಗಳು ರಾಮನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಮತ್ತು ಅರ್ಚಕರಹಳ್ಳಿ ಬಳಿ ಬೀಡುಬಿಟ್ಟಿವೆ. ಬಡ, ಮಧ್ಯಮ, ಸಿರಿವಂತ ಎಲ್ಲ ಕ್ರಿಕೆಟ್ ಪ್ರೇಮಿಗಳ, ಎಲ್ಲರಿಗೂ ಅವರವರ ಆರ್ಥಿಕ ಯೋಗ್ಯತೆಗೆ ತಕ್ಕ ಬೆಲೆ ನಿಗದಿ ಮಾಡಿ ಮಾರಾಟ ಮಾಡುತ್ತಿದೆ ಈ ಕುಟುಂಬ.

ಅಲೆಮಾರಿ ಬದುಕು
ಮೂಲತಃ ಗುಜರಾತಿನ ಖೇಡಾ ಜಿಲ್ಲೆಯ ನಡಿಯಾದ್ ನಗರದ ಕಣಂಜ್ರಿಯವರೆನ್ನಲಾದ ಈ 25 ಕುಟುಂಬಗಳು ಬಡಗಿ ಸಮುದಾಯಕ್ಕೆ ಸೇರಿದ `ಸುಥಾರ್' ಜನಾಂಗದವರು. ತಮ್ಮ ಗ್ರಾಮದಲ್ಲಿ ಉತ್ತಮ ಮನೆ, ಜಮೀನನ್ನು ಹೊಂದಿ, ಸ್ಥಿತಿವಂತರಾಗಿದ್ದರೂ ಇವರದು ಅಲೆಮಾರಿ ಬದುಕು. ಓದುವ ಮಕ್ಕಳು ಮತ್ತು ವಯಸ್ಸಾದವರನ್ನು ಹೊರತುಪಡಿಸಿ ಮಿಕ್ಕೆಲ್ಲರೂ ದೇಶದ ನಾನಾ ಭಾಗಗಳಿಗೆ ತಂಡೋಪತಂಡವಾಗಿ ತೆರಳಿ, ಟೆಂಟು ಕಟ್ಟಿಕೊಂಡು ಬ್ಯಾಟ್ ತಯಾರಿಕೆಯಲ್ಲಿ ತೊಡಗುತ್ತಾರೆ.

ಸ್ಥಳೀಯವಾಗಿ ಸಿಗುವ ಹಗುರ ಮತ್ತು ಗಟ್ಟಿಯಾದ ಮರಗಳಿಂದ ಬ್ಯಾಟ್, ವಿಕೆಟ್‌ಗಳನ್ನು ತಯಾರಿಸುತ್ತಾರೆ. ಅಂತೆಯೇ ರಾಮನಗರದಲ್ಲಿ ಬೀಡುಬಿಟ್ಟಿರುವ ಇವರು ಬ್ಯಾಟ್ ತಯಾರಿಸಲು ಬಳಸುವುದು ತುರುಬೇವು ಮರವನ್ನು. `ತುರುಬೇವು ಮರ ತುಂಬಾ ಗಟ್ಟಿಯಾದದ್ದು ಮತ್ತು ಸುಲಭವಾಗಿ ಮುರಿಯಲಾರದ್ದು. ಅಲ್ಲದೆ ಹುಳು-ಹುಪ್ಪಟೆಗಳು ಇದಕ್ಕೆ ಹಾನಿಮಾಡುವುದಿಲ್ಲ. ಇದನ್ನು ಸ್ಥಳೀಯ ಸಾಮಿಲ್‌ಗಳಿಂದಲೇ ಖರೀದಿಸುತ್ತೇವೆ'  ಎನ್ನುತ್ತಾರೆ ಜನಾಂಗದ ಮುಖ್ಯಸ್ಥ ಮುಖೇಶ್.

ಹೀಗಿದೆ ವಿವಿಧ ಹಂತ
ಸಾಮಿಲ್‌ನಿಂದ ಬ್ಯಾಟಿನ ಅಳತೆಗೆ ಕತ್ತರಿಸಲ್ಪಟ್ಟ ಮರದ ಪಟ್ಟಿಗಳನ್ನು  ಖರೀದಿಸಿ ಮಷಿನ್‌ನಿಂದ ಆಕಾರ ನೀಡಲಾಗುತ್ತದೆ. ಇದು ಬ್ಯಾಟ್ ತಯಾರಿಕೆಯ ಪ್ರಾಥಮಿಕ ಹಂತ. ಈ ಹಂತದಲ್ಲಿ ಬ್ಯಾಟಿನ ಹಿಡಿಕೆಯನ್ನು ಕತ್ತರಿಸಲು ಮತ್ತು ಅದಕ್ಕೆ ವರ್ತುಲ ಆಕಾರ ನೀಡಲು ಪ್ರತ್ಯೇಕವಾಗಿ 12 ಜನರ ಒಂದು ತಂಡವಿದೆ.

ನಂತರ ಇಲ್ಲಿಂದ ಅದನ್ನು ಎರಡನೆಯ ತಂಡಕ್ಕೆ ವರ್ಗಾಯಿಸಲಾಗುತ್ತದೆ. ಈ ಎರಡನೆಯ ತಂಡ ಹಿಡಿಕೆಯ ಭಾಗವನ್ನು ನಯಗೊಳಿಸುವುದರ ಜತೆಗೆ ಪಾಲಿಷ್ ಮಾಡಿ, ಬ್ಯಾಟಿನ ಮುಂಭಾಗಕ್ಕೆ ಉಳಿಯಿಂದ ಅಂತಿಮ ರೂಪ ನೀಡುತ್ತದೆ. ಈ ಹಂತದ ಕೆಲಸದಲ್ಲಿ ಸುಮಾರು  ಏಳು ಕುಟುಂಬಗಳು ನಿರತವಾಗಿವೆ ಎಂದು ವಿವರ ನೀಡುತ್ತಾರೆ ಜನಾಂಗದ ರೋಹನ್ ಮತ್ತು ದಿನೇಶ್.

ದಿನವೊಂದಕ್ಕೆ ಪ್ರತಿಯೊಬ್ಬರು 200 ಬ್ಯಾಟಿನ ಹಿಡಿಕೆಗಳನ್ನು ಮಾಡುವ ಸಾಮರ್ಥ್ಯದ ಆರು ಮೆಷಿನ್‌ಗಳಿದ್ದು, ದಿನಕ್ಕೆ ಸರಾಸರಿ 1200 ಬ್ಯಾಟುಗಳು ಪ್ರಾಥಮಿಕ ಹಂತವನ್ನು ಪೂರೈಸಿ, ಅಂತಿಮ ಹಂತ ತಲುಪುತ್ತವೆ. ಈ ಬಗ್ಗೆ ಇನ್ನಷ್ಟು ವಿವರ ನೀಡಿದರು ಸುಖೇಶ್.

`ನೋಡಿ ಸಾಬ್, ನಮ್ದು ಊರು ಗುಜರಾತ್‌ನ ನಡಿಯಾದ್ ಬಳಿಯ ಕಣಂಜ್ರಿ. ನಮ್ಮ ಊರಿನ ಜನ ಎಲ್ಲಾ ಇದೇ ರೀತಿ ದೇಶದ ನಾನಾಕಡೆ ಕೆಲಸ ಮಾಡ್ತಿದ್ದಾರೆ. ಕರ್ನಾಟಕದಲ್ಲಿ ಬೆಂಗಳೂರಿನ ಗೌಸಿಯಾ ಕಾಲೇಜಿನ ಹತ್ರ ಮತ್ತು ಅರ್ಚಕರಹಳ್ಳಿ ಹತ್ರ ಮಾತ್ರ ನಮ್ದೇ ಆದ ಜನ ಇದಾರೆ. ಹಂಗೇನೆ... ಶಿವಮೊಗ್ಗ, ಧಾರವಾಡ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಕಾರವಾರ... ಹೀಗೇ ಎಲ್ಲಾ ಕಡೆನೂ ಟೆಂಟ್ ಹಾಕಿದ್ದೀವಿ. ಒಂದ್ ಜಾಗದಲ್ಲಿ ಸುಮಾರು 25 ರಿಂದ 35 ದಿನಗಳವರೆಗೂ ಇದ್ದು, ಯಾಪಾರ ಮಾಡ್ತೀವಿ. ಯಾಪಾರ ಚೆನ್ನಾಗಿ ಆದ್ರೆ ಇನ್ನು ಒಂದಷ್ಟ್ ದಿವಸ ಅಲ್ಲೇ ಇರ‌್ತೀವಿ. ಇಲ್ಲಾಂದ್ರೆ ಬೇರೆ ಕಡೆಗೆ ಹೋಗ್ತೀವಿ. ಒಟ್ಟಿನಲ್ಲಿ ನಮಗೆ ಬ್ಯಾಟ್ ಮಾಡೋಕೆ ಮರ-ಮುಟ್ಟು ಸೀದಾ ಸಿಗಬೇಕು ಅಷ್ಟೆ' ಅಂದು ತಮ್ಮ ಕಸುಬಿನ ಬಗ್ಗೆ ಹೇಳಿಕೊಂಡರು.

ಅಲ್ಲಿಯೇ ಪಕ್ಕದಲ್ಲಿಯೇ ಕುಳಿತು ಬ್ಯಾಟನ್ನು ನಯಗೊಳಿಸುತ್ತ `ಈ ಕಸುಬು ನಮ್ ಕೈನ ಚೆನ್ನಾಗಿ ಹಿಡಿದೈತೆ. ವ್ಯಾಪಾರಕ್ಕೇನೂ ತೊಂದರೆ ಇಲ್ಲ. ಲಾಭ ಇಲ್ಲ ಅಂದ್ರೆ ಸುಳ್ಳು ಹೇಳಿದಂಗಾಗುತ್ತೆ. ಇದುವರೆಗೂ ಈ ಕಸುಬಿನಲ್ಲಿ ನಷ್ಟವಂತೂ ಆಗಲಿಲ್ಲ. ದಿನವೊಂದಕ್ಕೆ ಒಬ್ಬ 30 ಬ್ಯಾಟುಗಳನ್ನು ತಯಾರಿಸುತ್ತಾನೆ. ಬ್ಯಾಟಿನ ಹಿಡಿಕೆಯನ್ನು ಹೊರತುಪಡಿಸಿ, ಮಿಕ್ಕೆಲ್ಲವನ್ನು ಕೈಯಲ್ಲೇ ಸಿದ್ಧಗೊಳಿಸುವುದರಿಂದ ಅತಿ ಹೆಚ್ಚಿನ ಖರ್ಚೇನೂ ಬರೊಲ್ಲ. ಒಟ್ಟಿನಲ್ಲಿ ಮಳೆಗಾಲದಲ್ಲಿ ಮಾತ್ರ ಬ್ಯಾಟುಗಳ ವ್ಯಾಪಾರದಲ್ಲಿ ನಷ್ಟ ಆಗುತ್ತೆ...' ಎನ್ನುತ್ತಾರೆ.

ಬ್ಯಾಟು ತಯಾರಿಕೆಯಲ್ಲಿ ಗಂಡಸರದೇ ಮುಖ್ಯ ಪಾತ್ರ ಎನಿಸಿದರೂ ಇಲ್ಲಿ ಮಹಿಳೆಯರ ಪಾತ್ರ ಇಲ್ಲವೆನ್ನಲಾಗದು. ಕುಟುಂಬದ ಜವಾಬ್ದಾರಿಯೊಂದಿಗೆ ಬ್ಯಾಟುಗಳಿಗೆ ಪಾಲಿಷ್ ಹಾಕಿ, ಲೇಬಲ್ ಅಂಟಿಸುವ ಕಾಯಕ ಮಹಿಳೆಯರದ್ದೇ.

ಋಣ ಮರೆಯರು
ಇವಿಷ್ಟೂ ಕುಟುಂಬಗಳು ರಾಮನಗರದಲ್ಲಿ ತಮ್ಮ ನೆಲೆಕಂಡುಕೊಳ್ಳಲು ಆಶ್ರಯ ನೀಡುವುದರ ಜೊತೆಗೆ ಬ್ಯಾಟಿಗೆ ಬೇಕಾದ ಮರವನ್ನು ಪೂರೈಸುತ್ತಿರುವವರು ಸಾಮಿಲ್ ಮಾಲೀಕ ಜಂಷೀದ್.

ಪ್ರತಿ ಬ್ಯಾಟಿನ ಬೆಲೆ ಸಗಟು ದರದಲ್ಲಿ 140 ರಿಂದ 150 ರೂಪಾಯಿಗಳಿಗೆ ಮಾರುತ್ತಾರೆ. ಬಿಡಿ ಮಾರಾಟವಾದರೆ, ಪ್ರತಿಬ್ಯಾಟಿಗೆ 175 ರಿಂದ 185 ರೂ.ಗಳವರೆಗೂ ಬೆಲೆ ಇದೆ. ಒಟ್ಟಿಗೆ ಯಾರಾದರೂ 4 ಅಥವಾ 5 ಬ್ಯಾಟು ಖರೀದಿಸಿದರೆ ರಿಯಾಯಿತಿ ದರದಲ್ಲಿ  ನೀಡುತ್ತೇವೆ' ಎನ್ನುತ್ತಾರೆ ಬಕುಲ್ ಬೀ.
ಮಾರಾಟಕ್ಕೆ ಸಿದ್ಧಗೊಂಡ ಬ್ಯಾಟುಗಳನ್ನು ಹತ್ತಿರದ ಪಟ್ಟಣ ಮತ್ತು ನಗರ ಪ್ರದೇಶಗಳ ಮಾರುಕಟ್ಟೆಗೆ ಕೊಂಡೊಯ್ಯುತ್ತಾರೆ. ಮಾರಾಟ ಮಾಡುವುದಕ್ಕಾಗಿಯೇ ಮಹಿಳಾ ತಂಡಗಳಿವೆ. ಕೆಲವು ಅಂಗಡಿಗಳಿಗೂ ಹಾಕಿ ಬರುತ್ತಾರೆ. ಹೆಚ್ಚಾಗಿ ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆ, ಮೆಜೆಸ್ಟಿಕ್, ಕಲಾಸಿಪಾಳ್ಯ, ಅವೆನ್ಯೂ ರಸ್ತೆ, ಶಿವಾಜಿನಗರ, ಯಶವಂತಪುರ ಮಾರುಕಟ್ಟೆಗಳಿಗೆ  ಕೊಂಡೊಯ್ದು ಮಾರುತ್ತಾರೆ. ಒಟ್ಟಿನಲ್ಲಿ ತಮ್ಮ ಮೂಲ ಕಸುಬಿನಿಂದ ತಮ್ಮ ಜೀವನಕ್ಕೊಂದು ನೆಲೆ ಕಂಡುಕೊಂಡಿದೆ ಈ ಜನಾಂಗ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT