ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಮೂರಾಬಟ್ಟೆ: ವರದಿ ಅನುಷ್ಟಾನಕ್ಕೆ ಆಗ್ರಹ `ಶೀತ' ಮುಕ್ತವಾಗದ ನಲ್ಲುಲ್ಲಿ!

Last Updated 5 ಆಗಸ್ಟ್ 2013, 8:16 IST
ಅಕ್ಷರ ಗಾತ್ರ

ಸಕಲೇಶಪುರ: ಹೇಮಾವತಿ ಜಲಾಶಯದ ಹಿನ್ನೀರಿನ ನಲ್ಲುಲ್ಲಿ ಗ್ರಾಮದ ಮನೆಗಳು ಹಂತ ಹಂತವಾಗಿ ಧರೆಗುರುಳುತ್ತಿದ್ದು, ಮನೆ ಕಟ್ಟಿಕೊಳ್ಳುವುದಕ್ಕೆ ನಿವೇಶನವೂ ಇಲ್ಲ, ಬಿದ್ದು ಹೋಗುತ್ತಿರುವ ಮನೆಗಳಿಗೆ ಸರ್ಕಾರದಿಂದ ಪರಿಹಾರ ಸಹ ಇಲ್ಲದೇ ಜನರ ಬದುಕು ಮೂರಾಬಟ್ಟೆಯಾಗಿದೆ.

ಮೂರು ದಶಕಗಳ ಹಿಂದೆ ಹೇಮಾವತಿ ಜಲಾಶಯದ ಹಿನ್ನೀರು ಈ ಗ್ರಾಮದ ತಗ್ಗು ಪ್ರದೇಶದ ಗದ್ದೆಗಳವರೆಗೆ ನಿಲ್ಲುತ್ತದೆ. 80 ಎಕರೆ ಪ್ರದೇಶದ ಭತ್ತ ಬೆಳೆಯುವ ಗದ್ದೆಗಳನ್ನು ಮುಳುಗಡೆ ಪ್ರದೇಶ ಎಂದು ಘೋಷಣೆ ಮಾಡಿ ಪರಿಹಾರ ನೀಡಲಾಗಿದೆ. ಬದುಕಿಗೆ ಆಧಾರವಾಗಿದ್ದ ಭತ್ತ ಬೆಳೆಯುವ ಭೂಮಿ ಕಳೆದುಕೊಂಡಿರುವ ಗ್ರಾಮಸ್ಥರಿಗೆ ಉಳಿದುಕೊಂಡಿರುವುದು ಅವರು ವಾಸ ಮಾಡುತ್ತಿರುವ ಮನೆಗಳು ಮಾತ್ರ.

ಆ ಮನೆಯ ಹಿತ್ತಲಿನವರೆಗೆ ನೀರು ನಿಲ್ಲುವುದರಿಂದ, ಶೀತ ಹೆಚ್ಚಾಗಿ, ಮನೆಗಳಲ್ಲಿ ವಾಸ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಗೋಡೆಗಳು ಬಿರುಕು ಬಿಟ್ಟಿವೆ. ಕೆಲವು ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಕೆಲವು ಮನೆ ಒಳಭಾಗದ ನೆಲದಲ್ಲಿ ಜಲ ಉಕ್ಕುತ್ತಿದೆ. 40 ಮನೆಗಳಲ್ಲಿ 15 ಮನೆಗಳು ಈಗಾಗಲೆ ಬಿದ್ದು ಹೋಗಿವೆ. ಉಳಿದಿರುವ ಮನೆಗಳು ಯಾವುದೇ ಸಂದರ್ಭದಲ್ಲಿ ಬಿದ್ದರೂ ಆಶ್ಚರ್ಯ ಪಡಬೇಕಾಗಿಲ್ಲ.

ಉಳುವ ಭೂಮಿ ಕಳೆದುಕೊಂಡಿರುವ ಕುಟುಂಬಗಳು ಈಗ ಬೇರೆಯವರ ತೋಟ, ಗದ್ದೆಗಳಲ್ಲಿ ಕೂಲಿ ಮಾಡುತ್ತಿದ್ದಾರೆ. ದಣಿದು ಮನೆಗೆ ಬಂದರೂ, ಯಾವಾಗ ಸೂರು ಬಿದ್ದು ಹೋಗುತ್ತದೆಯೋ ಎಂಬ ಭಯ ಇದೆ. ನಿದ್ರೆ ಮಾಡುವುದಕ್ಕೂ ಆಗದೇ ಬಹಳ ಕಷ್ಟದ ಬದುಕು ಸಾಗಿಸುತ್ತಿದ್ದಾರೆ.

ಜಲಾಶಯದ ಹಿನ್ನೀರು ನಿಂತಾಗ ಹಾವು, ಉಡ, ಕಾಡು ಇಲಿಗಳು, ಹೆಗ್ಗಣಗಳು, ವಿಪರೀತ ಸೊಳ್ಳೆಗಳು ನೇರವಾಗಿ ಮನೆಯೊಳಗೆ ನುಗ್ಗುತ್ತವೆ. ಇದರಿಂದ ಸದಾ ಭಯದ ನೆರಳಿನಲ್ಲಿ ಗ್ರಾಮದ ಜನರು ವಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ನಾಗೇಶ್, ಬೆಳ್ಳಿಗೌಡ, ನಾಗೇಶ್ ಅವರ ಮನೆಗಳು ಇತ್ತೀಚೆಗೆ ಶಿಥಿಲಗೊಂಡು ಬಿದ್ದು ಹೋಗಿವೆ. ಹೇಮಾವತಿ ಜಲಾಶಯಕ್ಕೆ ಮುಳುಗಡೆಯಾದ ನಂತರ ಗ್ರಾಮದಲ್ಲಿ ತಲಾ- ತಲಾಂತರದಿಂದ ಇದ್ದಂತಹ ತೊಟ್ಟಿ ಮನೆಗಳು ಸೇರಿದಂತೆ 20ಕ್ಕೂ ಹೆಚ್ಚು ಮನೆಗಳು ಈಗಾಗಲೆ ನೆಲಸಮ ಆಗಿವೆ.

`ಮಳೆಗಾಲದಲ್ಲಿ ಭತ್ತ, ಬೇಸಿಗೆಯಲ್ಲಿ ಹಸಿರುಮೆಣಸಿನಕಾಯಿ, ಶುಂಠಿ, ತರಕಾರಿ ಬೆಳೆದು ಹೇಗೋ ಸುಖವಾಗಿ ಜೀವನ ನಡೆಸುತ್ತಿದ್ದೆವು. ಗೊರೂರಿನಲ್ಲಿ ಅಣೆಕಟ್ಟೆ ಕಟ್ಟಿದ ಮೇಲೆ, ನಮ್ಮ ಗದ್ದೆಗಳೆಲ್ಲಾ ಹೇಮಾವತಿ ಜಲಾಶಯಕ್ಕೆ ಸೇರಿ, ನೀರಿನಲ್ಲಿ ಮುಳುಗಿದ ನಂತರ, ನಮ್ಮ ಜೀವನ ಸಹ ಮುಳುಗಿ ಹೋಗಿದೆ' ಎಂದು ಗ್ರಾಮದ ಮೀನಾಕ್ಷಮ್ಮ ಹಾಗೂ ಹೂವಣ್ಣಗೌಡ ಶಿಥಿಲಾವಸ್ಥೆಯಲ್ಲಿರುವ ಮನೆಯನ್ನು ತೋರಿಸಿ ಕಣ್ಣೀರು ಹಾಕುತ್ತಾರೆ.

ಶಾಸಕರು ಹೇಳಿದ್ದು: ಹಾಸನ-ಆಲೂರು- ಸಕಲೇಶಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಹೇಮಾವತಿ ಜಲಾಶಯದ ಹಿನ್ನೀರಿನ ಶೀತ ಪೀಡಿತ  21 ಗ್ರಾಮಗಳಲ್ಲಿ ನಲ್ಲುಲ್ಲಿ ಗ್ರಾಮ ಸಹ ಒಂದು. ಸತತ ಐದು ವರ್ಷಗಳಿಂದ ಈ 21 ಗ್ರಾಮಗಳ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಬದಲಿ ವ್ಯವಸ್ಥೆಗಾಗಿ ಸರ್ಕಾರದ ಮೇಲೆ ತೀವ್ರ ಒತ್ತಡ ತರಲಾಗಿದೆ. ಈ ಗ್ರಾಮಗಳ ಸಮೀಕ್ಷೆ ನಡೆಸಿ ವರದಿ ನೀಡುವ ಸಲುವಾಗಿ ಸರ್ಕಾರ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. ಈ ಸಮಿತಿ ತಂಡ 2012ರ ಫೆಬ್ರವರಿ 2ರಂದು ಈ ಗ್ರಾಮಗಳಿಗೆ ಭೇಟಿ ನೀಡಿ ಹೋಗಿದೆ. ಅಧಿಕಾರಿಗಳಿಗೆ ಸಮಯ ಪ್ರಜ್ಞೆ ಇಲ್ಲ ಎಂದ ಅವರು ಜಲಾಶಯದ ಹಿನ್ನೀರು ನಿಂತಿರುವ ಮಳೆಗಾಲದ ಈ ದಿನಗಳಲ್ಲಿ ಅಧಿಕಾರಿಗಳ ತಂಡ ಬಂದು ಅಧ್ಯಯನ ನಡೆಸಬೇಕು' ಎಂದರು ಶಾಸಕ ಎಚ್.ಕೆ. ಕುಮಾರಸ್ವಾಮಿ.

`ಹೇಮಾವತಿ ಹಿನ್ನೀರಿನ ಶೀತ ಪೀಡಿತ ಪ್ರದೇಶಗಳಿಗೆ ಎರಡು ಬಾರಿ ಅಧಿಕಾರಿಗಳ ತಂಡ ಕರೆದುಕೊಂಡು ಬಂದು ಸ್ಥಳ ಪರಿಶೀಲನೆ ನಡೆಸಿದ್ದರು. ಇನ್ನೇನು ಪರಿಹಾರ ಹಾಗೂ ಮನೆ ಕಟ್ಟಿಕೊಳ್ಳುವುದಕ್ಕೆ ಸೂಕ್ತ ನಿವೇಶನ ದೊರೆಯುತ್ತದೆ ಎಂಬ ಭರವಸೆ ಸಂತ್ರಸ್ತರಲ್ಲಿ ಇತ್ತು.  ನಂತರ ಬಂದ ಸರ್ಕಾರಗಳ ನಿರ್ಲಕ್ಷ್ಯತೆಯಿಂದ ಬದುಕು ಹೀನಾಯ ಸ್ಥಿತಿ ತಲುಪಿದೆ' ಎಂದು ಸಮಾಜಸೇವಕ ಬ್ಯಾಕರವಳ್ಳಿ ಜಯರಾಜ್ ನೋವಿನಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT