ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಹಸನಾಗಲು ಸಂಸ್ಕೃತಿ ಅಗತ್ಯ: ಶರಣರು

Last Updated 3 ನವೆಂಬರ್ 2011, 10:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಾನವ ಬದುಕಿನಲ್ಲಿ ಪ್ರಭಾವಕ್ಕೆ ಒಳಗಾಗಬೇಕು. ಪ್ರಭಾವಗಳ ರಾಶಿಯೇ ನಮ್ಮಲ್ಲಿ ಬಿದ್ದಿದೆ. ಅದರಲ್ಲಿ ಸಕಾರಾತ್ಮಕ ಪ್ರಭಾವಗಳನ್ನು ಆಯ್ಕೆ ಮಾಡಿಕೊಂಡು ಬೆಳೆಸಿಕೊಳ್ಳಬೇಕು ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮುರುಘಾಮಠದ ಆವರಣದಲ್ಲಿ ಇರುವ `ಜಮುರಾ~ ಬಯಲು ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿರುವ ನಾಟಕೋತ್ಸವದ ಎರಡನೇ ದಿನದ ಕಾರ್ಯಕ್ರಮದ ನೇತೃತ್ವವಹಿಸಿ ಅವರು ಮಾತನಾಡಿದರು.

ಗಾಂಧೀಜಿ ಅವರು ಹರಿಶ್ಚಂದ್ರ, ಶ್ರವಣಕುಮಾರ ಮುಂತಾದವರ ನಾಟಕಗಳನ್ನು ನೋಡುವುದರ ಜೊತೆಗೆ ಸಕಾರಾತ್ಮಕ ಬೆಳವಣಿಗೆಯನ್ನು ರೂಢಿಸಿಕೊಂಡರು. ಸಾಂಸ್ಕೃತಿಕ ವಾತಾವರಣವಿಲ್ಲದಿದ್ದರೆ ಬಾಳು ಗೋಳಾಗುತ್ತದೆ. ಸಾಂಸ್ಕೃತಿಕ ವಾತಾವರಣವನ್ನು ರೂಢಿಸಿಕೊಂಡರೆ ಬಾಳು ಗೀಳಾಗುತ್ತದೆ. ಬಾಳು ಎಂದೆಂದೂ ಗೀಳಾಗಬೇಕು ಎಂದರು.
 

ನಾಟಕಗಳು ಯಾವತ್ತೂ ಜನರ ಹತ್ತಿರ ಹೋಗಬೇಕು. ಜನರನ್ನು ಉತ್ತಮ ಬದುಕಿನೆಡೆಗೆ ಕರೆದುಕೊಂಡು ಹೋಗುವಂತಿರಬೇಕು. ನಾಟಕಗಳು ಜನರನ್ನು ಮಂತ್ರಮುಗ್ಧರನ್ನಾಗಿಸಬೇಕು ಎಂದು ನುಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ  ಸಿ.ಮಹಾಲಿಂಗಪ್ಪ ಮಾತನಾಡಿ, ನಾಟಕಗಳು ಮರೆಯಾಗುವ ಸಂದರ್ಭದಲ್ಲಿ ಮುರುಘಾಮಠ ನಾಟಕಗಳಿಗೆ ಹೊಸ ರೂಪುರೇಷೆಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಜಯರಾಂ ಮಾತನಾಡಿ, ಕಾಲ ಕಳೆದಂತೆ ಬೇರೆ ಸಂಸ್ಕೃತಿಗೆ ಹೊಂದಿಕೊಳ್ಳುತ್ತಿದ್ದೇವೆ. ಸಿನಿಮಾ ಬದುಕು ಬಂದಾಗಿನಿಂದ ನಾಟಕ ಪರಂಪರೆ ಹೆಚ್ಚಿನ ಪ್ರಾಶಸ್ತ್ಯವನ್ನು ಪಡೆದುಕೊಳ್ಳುತ್ತಿಲ್ಲ. ಇಂತಹ ದಿನಮಾನಗಳಲ್ಲಿ ರಾಜಾಶ್ರಯದಲ್ಲಿದ್ದ ಪರಂಪರೆಯನ್ನು ಮುರುಘಾಮಠವು ಮುನ್ನಡೆಸಿಕೊಂಡು ಬರುವುದರ ಜತೆಗೆ ನಾಟಕ ಸಂಸ್ಕೃತಿಯನ್ನು ಜೀವಂತವಾಗಿಸಿದೆ. ಇದೊಂದು ಉತ್ತಮ ಬೆಳವಣಿಗೆ ಎಂದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಚಿದಾನಂದಪ್ಪ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಂಗಕಲಾವಿದ ಜೆ.ಡಿ. ತಿಮ್ಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ.ಬಸವರಾಜ್ ಅವರು ನಮ್ಮಳಗಿನ ಬಷೀರ್ ನಾಟಕವನ್ನು ವಿಮರ್ಶಿಸಿ ವಿಶ್ಲೇಷಿಸಿದರು. ನಂತರ ನೀನಾಸಂ ತಿರುಗಾಟ ಹೆಗ್ಗೋಡು ತಂಡದಿಂದ ಸುಪ್ರಸಿದ್ಧ ಕತೆಗಾರ ವಿವೇಕ ಶಾನಭಾಗರ ಕಥೆಯನ್ನಾಧರಿಸಿದ, ಚನ್ನಕೇಶವ ನಿರ್ದೇಶನದ ಕಂತು ನಾಟಕ ಯಶಸ್ವಿ ಪ್ರದರ್ಶನಗೊಂಡಿತು.

`ಜಮುರಾ~ ಕಲಾವಿದರು ಪ್ರಾರ್ಥಿಸಿದರು. ಶೇಷಣ್ಣಕುಮಾರ್ ಸ್ವಾಗತಿಸಿದರು. ನಾಗರಾಜ ಸಂಗಂ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT