ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕುವ ದಾರಿಗಾಗಿ ಸಿ.ಎಂಗೆ ಮೊರೆ

ಜನತಾದರ್ಶನದಲ್ಲಿ ಸಮಸ್ಯೆಗಳ ಸರಮಾಲೆ
Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹಲವರು ಕಣ್ಣೀರು ಸುರಿಸಿದರು. ಮನವಿ ಸಲ್ಲಿಸಿ ಅಳಲು ತೋಡಿಕೊಂಡು ಸಮಸ್ಯೆ ಬಗೆಹರಿಸು­ವಂತೆ ಕೈ ಮುಗಿ­ದರು. ಬದುಕಿಗೆ ಆಸರೆ ಒದಗಿಸುವ ಕೋರಿಕೆಗಳಿಗೆ ಕೊನೆ ಇರಲಿಲ್ಲ. ವೈದ್ಯಕೀಯ ಪರಿಹಾರಕ್ಕೆ ಮನವಿ­ಗಳು ಹರಿದು ಬಂದವು. ಜತೆಗೆ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಆಕ್ರೋಶವೂ ಅಲ್ಲಿ ವ್ಯಕ್ತವಾಯಿತು.

–ಇವು ಮಂಗಳವಾರ ಮುಖ್ಯಮಂತ್ರಿ ಗೃಹಕಚೇರಿ ‘ಕೃಷ್ಣಾ’ದಲ್ಲಿ ನಡೆದ ಜನತಾದರ್ಶನದಲ್ಲಿ ಕಂಡು ಬಂದ ದೃಶ್ಯಗಳು.
ಗೌರಿಬಿದನೂರಿನಿಂದ ಬಂದಿದ್ದ ಇಬ್ಬರು ಅಂಗವಿಕಲ ಸಹೋದರರು ಸ್ವಾವಲಂಬಿಯಾಗಿ ಬದುಕು ಸಾಗಿಸಲು ನೆರವು ನೀಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಕಣ್ಣೀರಿಟ್ಟಿರು.

ತಮಗೆ ದೊರೆಯುತ್ತಿದ್ದ ಮಾಸಾಶನ ನಿಲ್ಲಿಸಲಾಗಿದೆ. ಓಡಾಡಲು ತ್ರಿಚಕ್ರದ ಸೈಕಲ್‌ ನೀಡಬೇಕು ಹಾಗೂ ಬದುಕು ಸಾಗಿಸಲು ಅಂಗಡಿಗೆ ಆರ್ಥಿಕ ನೆರವು ನೀಡಬೇಕು ಎಂದು ಸಹೋದರ­ರಾದ ನರಸಿಂಹಮೂರ್ತಿ ಮತ್ತು ಮಲ್ಲಿಕಾರ್ಜುನಯ್ಯ ಕೋರಿದರು. ಇವರ ಸಮಸ್ಯೆ ಆಲಿಸಿದ ಮುಖ್ಯಮಂತ್ರಿ ತಕ್ಷಣವೇ ಎಲ್ಲ ಸೌಲಭ್ಯಗಳನ್ನು ಒದಗಿ­ಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

10 ವರ್ಷಗಳ ಹಿಂದೆ ಮಿದುಳು ಗಡ್ಡೆಗೆ ತುತ್ತಾಗಿ ದೃಷ್ಟಿ ಕಳೆದು­ಕೊಂಡಿರುವ ನಗರದ ಚಾಮರಾಜ­ಪೇಟೆಯ ಸತೀಶ್‌ಚಂದ್ರ ಅವರು ತಮ್ಮ ಪತ್ನಿಗೆ ಉದ್ಯೋಗ ನೀಡುವಂತೆ ಮೊರೆ ಇಟ್ಟರು. ‘ತಮಗೆ ತಂದೆ, ತಾಯಿ, ಪತ್ನಿ, ಒಬ್ಬ ಮಗಳು ಇದ್ದು, ಮಾಸಾಶನದಲ್ಲಿ ಬದುಕು ಸಾಗಿಸುವುದು ಕಷ್ಟಕರ­ವಾಗಿದೆ’ ಎಂದು ತಮ್ಮ ಸಮಸ್ಯೆಗಳನ್ನು ವಿವರಿಸಿದರು.

ಇವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಸತೀಶ್‌ಚಂದ್ರ ಅವರ ತಂದೆ–ತಾಯಿಗೆ ಬಿಪಿಎಲ್‌ ಕಾರ್ಡ್‌ ನೀಡಬೇಕು ಹಾಗೂ ಅವರ ಪತ್ನಿಗೆ ಉದ್ಯೋಗ ದೊರೆಯುವಂತೆ ಕ್ರಮ­ಕೈಗೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸೂಚಿಸಿದರು.

ರೂ.3–4 ಸಾವಿರ ಪಡೆದರೂ ಬಿಬಿಎಂಪಿ ಅಧಿಕಾರಿಗಳು  ಗಂಡನ ಹೆಸರಿನಲ್ಲಿದ್ದ ನಿವೇಶನದ ಖಾತೆಯನ್ನು ತಮ್ಮ ಹೆಸರಿಗೆ ಮಾಡಿಕೊಡುತ್ತಿಲ್ಲ. ಇಳಿವಯಸ್ಸಿನಲ್ಲೂ ಅಲೆದಾಡಿ­ಸುತ್ತಿ­ದ್ದಾರೆ ಎಂದು ನಗರದ ಲಕ್ಷ್ಮೀನಾರಾಯ­ಣಪುರದ ವೃದ್ಧೆ ಸಿದ್ಧಲಿಂಗಮ್ಮ ದೂರಿದರು.

ಮೂಳೆ ಕಾಯಿಲೆಗೆ ತುತ್ತಾದ 17 ವರ್ಷದ ಬಾಲಕಿ ಶಿಲ್ಪಾ ಪೋಷಕ­ರೊಂದಿಗೆ ಬಂದು ಆರ್ಥಿಕ ನೆರವು ನೀಡಲು ಅಹವಾಲು ಸಲ್ಲಿಸಿದರು.
ಈ ಬಾರಿಯ ಜನತಾದರ್ಶನದಲ್ಲೂ ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ನಾಯಕರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವಂತೆ ಕೋರಿದ ಪ್ರಸಂಗವೂ ನಡೆಯಿತು.

ಬಡ್ತಿಗಾಗಿ ಅಧಿಕಾರಿಣಿ ಕಣ್ಣೀರು!
ಜನತಾದರ್ಶನದಲ್ಲೂ ಅಧಿಕಾರಿ­ಯೊಬ್ಬರು ಬಡ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮುಂದೆ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.

ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತೆ ಕೆ.ಆರ್‌. ಸುಶೀಲಾ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ತಾವು ಬಡ್ತಿಗೆ ಅರ್ಹರಿದ್ದರೂ ಹಿರಿಯ ಅಧಿಕಾರಿಗಳು ಉದ್ದೇಶಪೂರ್ವಕ­ವಾಗಿ ತಡೆ ಹಿಡಿದ್ದಾರೆ.   ಕಳೆದ ತಿಂಗಳು 24ರಂದೇ ತಮಗೆ ಬಡ್ತಿ ದೊರೆಯ­ಬೇಕಾ­ಗಿತ್ತು. ತಾವು ನಿವೃತ್ತಿಯಾಗಲು 10 ದಿನಗಳು ಮಾತ್ರ ಉಳಿದಿವೆ. ಬಡ್ತಿ ದೊರೆತರೆ ಹೆಚ್ಚುವರಿ ಆಯುಕ್ತರಾಗಿ ನೇಮಕಗೊಳ್ಳಬಹುದು. ಆದ್ದ­ರಿಂದ ತ್ವರಿತಗತಿಯಲ್ಲಿ ಬಡ್ತಿ ಆದೇಶ ನೀಡಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕೋರಿ ಕಣ್ಣೀರು ಸುರಿಸಿದರು.

ಈ ವಿಷಯದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಜನತಾ­ದರ್ಶನ ಜನಸಾಮಾ­ನ್ಯರಿಗೆ ಮೀಸಲಾಗಿದೆ. ಅಧಿಕಾರಿಗಳ ಸಮಸ್ಯೆ ಹೇಳಿಕೊಳ್ಳಲು ಇದು ವೇದಿಕೆ ಅಲ್ಲ. ಇಲ್ಲಿಗೆ ಅವರು ಬರಬಾರದಿತ್ತು. ಆದರೆ, ಮಹಿಳೆ ಎನ್ನುವ ಕಾರಣಕ್ಕೆ ಅವರ ಸಮಸ್ಯೆ ಆಲಿಸಿ ಮುಂದಿನ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ’ ಎಂದು ತಿಳಿಸಿದರು.

ಶಾಸಕರ ವಿರುದ್ಧ ಮತ್ತೆ ದೂರು
ಶಾಸಕ ಬಾಲಚಂದ್ರ ಜಾರಕಿಹೊಳಿ ಕಿರುಕುಳದಿಂದ ತಮ್ಮ ಗ್ರಾಮ ತೊರೆದ ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ತಪಸಿಯ ರೇಣುಕಾ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಮುಂದೆ ದೂರು ಸಲ್ಲಿಸಿದರು.

ಇದೇ ತಿಂಗಳ 3ರಂದು ನಡೆದ ಜನತಾದರ್ಶನದಲ್ಲೂ ಇವರು ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದರು.  ಆದರೆ, ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿ ಮತ್ತೊಮ್ಮೆ ಮನವಿ ಸಲ್ಲಿಸಿದರು.

ಈ ಪ್ರಕರಣದ ಬಗ್ಗೆ ಸಂಪೂರ್ಣ ವಿಚಾರಣೆ ನಡೆಸಿ ವರದಿ ನೀಡುವಂತೆ ಸ್ಥಳದಲ್ಲಿದ್ದ ಸಾರ್ವಜನಿಕ ಕುಂದುಕೊರತೆ ಮತ್ತು ಮಾನವ ಹಕ್ಕುಗಳ ವಿಭಾಗದ ಐಜಿಪಿ ಅಲೋಕ್‌ ಕುಮಾರ್‌ಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT