ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಗಳ ಮೇಲೆ ತೊಗರಿ

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

ಪರ್ವತಪ್ಪ ಅವರಿಗೆ ಎರಡು ಎಕರೆ ಜಮೀನಿದೆ. ಮಳೆ ಬಿದ್ದರಷ್ಟೇ ವ್ಯವಸಾಯ. ರಾಗಿ ಪ್ರಮಖ ಬೆಳೆ. ತೊಗರಿ, ಹುರುಳಿ, ಸಾಸಿವೆ, ಜತೆಗೆ ಜೋಳ, ಅಕ್ಕಡಿ (ಮಿಶ್ರ ಬೆಳೆ) ಸಾಲುಗಳಲ್ಲಿ ಬೆಳೆಯುತ್ತಾರೆ.

ಕೂಲಿಕಾರರ ಕೊರತೆ, ಅಕಾಲಿಕ ಮಳೆ ಹೀಗೆ ಏನೇನೋ ಕಾರಣಗಳಿಂದ ನಾಲ್ಕೈದು ವರ್ಷಗಳಿಂದ ಅಕ್ಕಡಿ ಸಾಲು ಬೆಳೆ ಬಿಟ್ಟು ಎರಡು ಎಕರೆ ಪೂರ್ತಿ ರಾಗಿ ಬಿತ್ತುತ್ತಿದ್ದರು. 

ಎರಡು ವರ್ಷ ಹಿಂದೆ ನಬಾರ್ಡ್ ಹಾಗೂ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಜಂಟಿಯಾಗಿ ಬುಕ್ಕಸಾಗರದಲ್ಲಿ ಜಲಾನಯನ ಅಭಿವೃದ್ಧಿ ಯೋಜನೆ ಅನುಷ್ಠಾನ ಆರಂಭಿಸಿದವು. ಅದರಲ್ಲಿ ಪರ್ವತಪ್ಪ ಅವರ ಜಮೀನು ಒಳಪಟ್ಟಿತು.

ಯೋಜನೆಯಲ್ಲಿ ನೆಲ-ಜಲ ಸಂರಕ್ಷಣೆಗೆ ಆದ್ಯತೆ ನೀಡಲಾಯಿತು. ಹುದಿ-ಬದು (ಟ್ರಂಚ್ ಕಮ್ ಬಂಡ್), ಕೃಷಿಹೊಂಡ ಸೇರಿದಂತೆ ವಿವಿಧ ಮಣ್ಣು-ನೀರಿನ ಸಂರಕ್ಷಣೆ ಅಳವಡಿಸಲು ಸಂಸ್ಥೆ ಮುಂದಾಯಿತು.

`ಗುಂಡಿ ತೆಗೆದು ಬದು ಹಾಕಿದರೆ ಅಲ್ಲೇನೂ ಬೆಳೆಯಲಾಗುವುದಿಲ್ಲ. ನಮಗೆ ನಷ್ಟವಾಗುತ್ತದೆ~ ಎಂದು ಪರ್ವತಪ್ಪ ಸೇರಿದಂತೆ ಎಲ್ಲಾ ಫಲಾನುಭವಿ ರೈತರು ಹುದಿ-ಬದುಗಳ ನಿರ್ಮಾಣಕ್ಕೆ ಒಲ್ಲೆ ಎಂದರು. 

ಯೋಜನೆ ಅನುಷ್ಠಾನ ಅನಿವಾರ್ಯವಾಗಿತ್ತು. ಹಾಗಾಗಿ ರೈತರ ಮನವೊಲಿಸುವ ಸಲುವಾಗಿ ಭೂಮಿ ಸಂಸ್ಥೆಯವರು ರೈತರನ್ನೆಲ್ಲ `ಯಶಸ್ವಿ ಜಲಾನಯನ ಪ್ರದೇಶಗಳಿಗೆ~ ಪ್ರವಾಸ ಕರೆದೊಯ್ದರು.

ಪ್ರವಾಸದಲ್ಲಿ ವಿವಿಧೆಡೆ ರೈತರು ಬದುಗಳ ಮೇಲೆ ಬೆಳೆಸಿದ್ದ ಹಣ್ಣಿನ ಗಿಡ, ಮೇವಿನ ಬೆಳೆ, ಅವುಗಳಿಂದ ಗಳಿಸಿದ ಆದಾಯದ ಕುರಿತು ಮಾಹಿತಿ ನೀಡಿದರು. ಹುದಿ- ಬದುಗಳಿಂದ ಉಂಟಾದ ಜಾಗದ ನಷ್ಟವನ್ನು ಬೆಳೆಗಳು ತುಂಬಿ ಕೊಡುತ್ತವೆ ಎಂಬ ವಿಷಯ ಬುಕ್ಕಸಾಗರ ರೈತರ ಮನಸ್ಸನ್ನು ಪರಿವರ್ತಿಸಿತು.

ಪ್ರವಾಸದಿಂದ ವಾಪಸ್ಸಾದ ರೈತರು ಹುದಿ-ಬದುಗಳ ನಿರ್ಮಾಣಕ್ಕೆ ಸನ್ನದ್ಧರಾದರು. ಆದರೆ ಬದುಗಳ ಮೇಲೆ ಬೆಳೆ ಬೆಳೆಯುವುದಕ್ಕೆ ಒಪ್ಪಲಿಲ್ಲ. ಪರ್ವತಪ್ಪ ಅವರು ಮಾತ್ರ ಬದುಗಳ ಮೇಲೆ ಬೆಳೆ ಬೆಳೆಯುವುದಾಗಿ ಸಂಕಲ್ಪ ಮಾಡಿದರು. ಅದರಂತೆ 270 ಮೀಟರ್ (800 ಅಡಿ) ಹುದಿ ತೆಗೆಸಿ, ಬದು ನಿರ್ಮಿಸಿದರು.

ಹದ ಮಳೆ ಬಿದ್ದನಂತರ ಬದುಗಳ ಮೇಲೆ ನಾಲ್ಕು ಕೆ.ಜಿ. ಹೈಬ್ರಿಡ್ ತೊಗರಿ ಬೀಜಗಳನ್ನು ಎರಡು ಸಾಲುಗಳಲ್ಲಿ ನಾಟಿ ಮಾಡಿದರು. ಜೊತೆಗೆ ಎರಡು ಎಕರೆ ಹೊಲದಲ್ಲಿ ಎರಡು ಗಾಡಿ ಕೊಟ್ಟಿಗೆ ಗೊಬ್ಬರದೊಂದಿಗೆ ರಾಗಿ ಬಿತ್ತಿದರು.

ನಾಲ್ಕು ತಿಂಗಳ ನಂತರ:
ಸೆಪ್ಟೆಂಬರ್ ತಿಂಗಳಲ್ಲಿ ಬಿತ್ತಿದ ತೊಗರಿ ಜನವರಿ ಹೊತ್ತಿಗೆ ಕೊಯ್ಲಿಗೆ ಬಂತು. ರಾಗಿ ಕೊಯ್ಲಾಗಿ ಹದಿನೈದು ದಿನಗಳ ನಂತರ ತೊಗರಿ ಕೊಯ್ದರು. ಎಂಟನೂರು ಅಡಿ ಬದುಗಳ 70 ರಿಂದ 80 ಕೆ.ಜಿಯಷ್ಟು ತೊಗರಿ ಇಳುವರಿ ಬಂತು.

`ರಾಗಿಗೆ ಕೊಟ್ಟಿಗೆ ಗೊಬ್ಬರ ಹಾಕಿದ್ದೆ. ಹುದಿ(ಟ್ರಂಚ್)ಗೆ ಒಂದು ಮೀಟರ್ ಜಾಗ ಬಿಟ್ಟರೂ ಇಳುವರಿಯಲ್ಲೇನ್ನೂ ವ್ಯತ್ಯಾಸವಾಗಿಲ್ಲ. ಹಾಗೆಯೇ ಬದುಗಳ ಮೇಲೆ ತೊಗರಿ ಬೆಳೆಯಲು ಹೆಚ್ಚುಶ್ರಮ ವಹಿಸಿಲ್ಲ. ಹೆಚ್ಚು ಖರ್ಚನ್ನೂ ಮಾಡಿಲ್ಲ~ ಎಂದು ಪರ್ವತಪ್ಪ ಸಂತಸದಿಂದ ಹೇಳುತ್ತಾರೆ.

`ಅಕ್ಕಡಿ ಬೆಳೆ ಬೆಳೆಯುತ್ತಿದ್ದಾಗ ಎಷ್ಟೆಲ್ಲ ಗೊಬ್ಬರ -ಗೋಡು ಹಾಕಿ, ಕೂಲಿ ಕೊಟ್ಟು, ಕಳೆ-ಕಿತ್ತು ಆರೈಕೆ ಮಾಡಿದರೂ 8 ಕ್ವಿಂಟಲ್ ರಾಗಿ, 50 ರಿಂದ 60 ಕೆ.ಜಿ ತೊಗರಿ ಸಿಕ್ತಿತ್ತು. ಈಗ ಕೇವಲ ಎರಡು ಗಾಡಿ ಕೊಟ್ಟಿಗೆ ಗೊಬ್ಬರಕ್ಕೆ 10 ಕ್ವಿಂಟಲ್ ರಾಗಿ ಇಳುವರಿ ಬಂದಿದೆ.

ಬದುಗಳ ಮೇಲೆ 80 ಕೆ.ಜಿ ತೊಗರಿ, ಎರಡು ಗಾಡಿ ತೊಗರಿ ಕಟ್ಟಿಗೆ, ಆರು ಚೀಲ ತೌಡು (ಹೊಟ್ಟು) ಸಿಕ್ಕಿದೆ~ ಎಂದು ಲೆಕ್ಕ ಹೇಳುವ ಪರ್ವತಪ್ಪ, ಹುದಿಯಲ್ಲಿ ನೀರಿಂಗಿದ್ದು, ಹೊಲದ ಮಣ್ಣಿನ ಫಲವತ್ತತೆ ಹೆಚ್ಚಿದ್ದು ತಮಗೆ ಬೋನಸ್ ಎಂದು ಹೇಳುವುದನ್ನು ಮರೆಯುವುದಿಲ್ಲ.

ಪರ್ವತಪ್ಪ ಅವರ ಈ ಯಶೋಗಾಥೆ, ಬುಕ್ಕಸಾಗರ ಹಾಗೂ ಸುತ್ತಲಿನ ರೈತರನ್ನು ಜಾಗೃತಗೊಳಿಸಿದೆ. ಈ ಬಾರಿ ಜಲಾನಯನ ಪ್ರದೇಶದ ಫಲಾನುಭವಿಗಳೆಲ್ಲ ಸ್ವಯಂ ಪ್ರೇರಿತರಾಗಿ ಹುದಿ-ಬದು ನಿರ್ಮಿಸಿದ್ದಾರೆ.

ಅದರ ಮೇಲೆ ತೊಗರಿ, ಹಣ್ಣಿನ ಗಿಡಗಳು, ಮೇವಿನ ಬೀಜಗಳ ಬಿತ್ತನೆಗೆ ಮುಂದಾಗಿದ್ದಾರೆ. ಪರ್ವತಪ್ಪ ಕೂಡ, ಬದುಗಳ ಮೇಲೆ ಕಾಯಂ ಆಗಿ ಫಲ- ಫಸಲು ಕೊಡುವ ಬೆಳೆಗಳನ್ನು ಬೆಳೆಸಲು ಯೋಜನೆ ರೂಪಿಸುತ್ತಿದ್ದಾರೆ.   

 ಪರೋಕ್ಷ ಆದಾಯ   

ಹುದಿ-ಬದು ಲೆಕ್ಕಾಚಾರವನ್ನು ಕೇವಲ ಬೆಳೆಯ ಇಳುವರಿಯಲ್ಲಿ ಅಳೆಯಬೇಡಿ. ಒಳಸುರಿಗೆ ವ್ಯಯಿಸುವ ಹಣದ ಉಳಿತಾಯ ಜೊತೆಗೆ ಟ್ರಂಚ್‌ಗಳಲ್ಲಿ  ಇಂಗುವ ಲಕ್ಷಾಂತರ ಲೀಟರ್ ಮಳೆ ನೀರನ್ನೂ ಪರಿಗಣಿಸಿ~ ಎನ್ನುತ್ತಾರೆ ಭೂಮಿ ಸಂಸ್ಥೆಯ ಯೋಜನಾ ನಿರ್ದೇಶಕ ರವಿ.

ಅವರ ಪ್ರಕಾರ ನೀರಿಂಗಿಸುವ ಪ್ರಕ್ರಿಯೆಯಿಂದ ರೈತರಿಗೆ ಪ್ರತ್ಯಕ್ಷವಾಗಿ ಮತ್ತು ಪ್ರಕೃತಿಗೆ ಪರೋಕ್ಷವಾಗಿ ನೆರವಾಗುತ್ತದೆ. ಪ್ರತಿ ಹದ ಮಳೆಗೆ ಒಂದು ಘನ ಮೀಟರ್(ಸಿಎಂಟಿ- 1ಮೀ*1ಮೀ*1ಮೀ) ಅಳತೆಯ ಟ್ರಂಚ್‌ನಲ್ಲಿ ಒಂದು ಸಾವಿರ ಲೀಟರ್ ನೀರು ಇಂಗುತ್ತದೆ.

ನಬಾರ್ಡ್ ಯೋಜನೆಯಲ್ಲಿ ತುಸು ದೊಡ್ಡದಾಗಿ `ಟ್ರಂಚ್ ಮತ್ತು ಬಂಡ್~ ಹಾಕಿಸಿರುವುದರಿಂದ 2000 ದಿಂದ 3000 ಲೀಟರ್ ನೀರು ಇಂಗುತ್ತದೆ. ಒಂದೊಂದು ಜಮೀನಿನಲ್ಲಿ ಹತ್ತಿಪ್ಪತ್ತು ಗುಂಡಿಗಳಿರುತ್ತವೆ. ಈ ಲೆಕ್ಕಾಚಾರದ ಪ್ರಕಾರ ಪ್ರತಿಯೊಬ್ಬರ ಜಮೀನಿನಲ್ಲಿ ಒಂದು ಮಳೆಗೆ 2 ರಿಂದ 3 ಲಕ್ಷ ಲೀಟರ್ ನೀರು ಭೂಮಿಗಿಳಿಯುತ್ತದೆ.

ಮೇಲ್ಮಣ್ಣು  (ಫಲವತ್ತಾದ ಮಣ್ಣು) ಕೊಚ್ಚಣೆ ನಿಯಂತ್ರಣವಾಗುತ್ತದೆ. ಪ್ರತಿ ಮುಂಗಾರಿಗೆ ಮುನ್ನ ಮಣ್ಣು ಹೊಡೆಸುವುದು ತಪ್ಪುತ್ತದೆ ಎನ್ನುವುದು ಅವರ ಅಭಿಪ್ರಾಯ. ನಿರಂತರ ನೀರು ಇಂಗುವಿಕೆಯಿಂದ ಜಮೀನಿನಲ್ಲಿ ತೇವಾಂಶ ಸ್ಥಿರವಾಗುತ್ತದೆ.
 
ಜೊತೆಗೆ ಬದು ಮೇಲಿನ ಗಿಡಗಳಿಂದ ಉದುರುವ ಎಲೆ, ಜಮೀನಿನಲ್ಲಿ ದೊರೆಯುವ ಕೃಷಿ ತ್ಯಾಜ್ಯಗಳನ್ನು ಟ್ರಂಚ್‌ಗಳಲ್ಲಿ ತುಂಬುವುದರಿಂದ, ಮಳೆ ನೀರಿನಲ್ಲಿ ಕೊಳೆತು ಕಾಂಪೋಸ್ಟ್ ಆಗುತ್ತವೆ. ಈ ಕಾಂಪೋಸ್ಟ್ ಬೆಳೆಗಳಿಗೆ ಬೋನಸ್ ರೂಪದಲ್ಲಿ ಪೋಷಕಾಂಶ ಸರಬರಾಜು ಮಾಡುತ್ತವೆ.

ಎಂಟನೂರು ಅಡಿ ಉದ್ದದ ಬದುಗಳ ಮೇಲೆ ತೊಗರಿ ಬಿತ್ತನೆ ಮಾಡಿದಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ತಾಲ್ಲೂಕಿನ ಬುಕ್ಕಸಾಗರದ ರೈತರೊಬ್ಬರು 80 ಕೆ.ಜಿ ಇಳುವರಿ ಪಡೆದಿದ್ದಾರೆ.


                  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT