ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಶಂಕರಿ: ಜಾತ್ರೆಯೊ ನಾಟಕೋತ್ಸವವೊ?

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬದಾಮಿ ತಾಲ್ಲೂಕಿನಲ್ಲಿರುವ ಬನಶಂಕರಿ ಹಾಗೂ ಮಹಾಕೂಟಗಳಿಗೆ ಜನರನ್ನು ಸೆಳೆಯುವ ಯಾವುದೊ ಒಂದು ಶಕ್ತಿಯಿದ್ದಂತಿದೆ. ನೀರು ಹಳ್ಳ ಗಿಡಮರಗಳ ನಡುವೆ ಅಡಗಿಕೊಂಡಂತಿರುವ ಈ ಎರಡೂ ಕೊಳ್ಳಗಳು, ಬೇಂದ್ರೆಯವರ ‘ಜೋಗಿ’ ಕವನದಲ್ಲಿ ಬರುವ ಪರಿಸರದಂತೆ ನಿಗೂಢವಾಗಿವೆ.ಎಷ್ಟೊಂದು ಸಲ ಅಲ್ಲಿಗೆ ಹೋಗಿದ್ದೇನೆ. ಆದರೂ ಮನ ತಣಿಯದು. ಇಷ್ಟಾಗಿ, ಬದಾಮಿ ಗುಹೆಗಳ ಮೇಲಿನಿಂದ ಬೆಟ್ಟಗಳ ಮೇಲೆಯೇ ಕಾಲುಹಾದಿಯಲ್ಲಿ ಹೊರಟು, ಮಹಾಕೂಟಕ್ಕೆ ನಡೆದು ಹೋಗುವ ಕೆಲಸವೊಂದು ಬಾಕಿಯಿದೆ. ಬನಶಂಕರಿಯ ಜಾತ್ರೆಗೆ ಹೋಗುವ ಮತ್ತು ಅಲ್ಲಿ ಬರುವ ನಾಟಕಗಳನ್ನು ನೋಡುವ ಉದ್ದೇಶವೂ ಬಾಕಿಯಿತ್ತು. ಜತೆಗೆ ಕತೆಗಾರ್ತಿ ಕಸ್ತೂರಿ ಬಾಯಿರಿಯವರು, ‘ನಮ್ಮೂರ ಜಾತ್ರೆಗೆ ಬರ್ರಿ ಸರ್’ ಎಂದು ಬಹು ದಿನಗಳಿಂದ ಕರೆಯುತ್ತಿದ್ದರು. ಈ ಸಲ ಬನಶಂಕರಿಗೆ ಜಾತ್ರೆಗೆ ಹೋಗಿಬಂದೆ.  

ಬನಶಂಕರಿ, ಬದಾಮಿಯ ಹೊರವಲಯದಲ್ಲಿರುವ ಒಂದು ಪ್ರಸಿದ್ಧ ಸ್ಥಳ. ಶಕ್ತಿದೇವತೆಯ ಹಲವು ರೂಪಗಳಲ್ಲಿ ಬನಶಂಕರಿಯೂ ಒಬ್ಬಳು. ಈ ಭಾಗದಲ್ಲಿ ಬರಗಾಲ ಬಂದಾಗ ಸಸ್ಯಗಳನ್ನು ಹುಟ್ಟಿಸಿ ಬರನೀಗಿಸಿದವಳು ಎಂದು ಆಕೆಯನ್ನು ಶಾಕಂಬರಿ ಎಂದು ಕರೆಯುವರು. ‘ಬನ’ ಎಂಬುದೇ ಸಸ್ಯಸೂಚಕ ಹೆಸರಷ್ಟೆ. ಈ ಬನದಮ್ಮನ ಗುಡಿ ಹನ್ನೆರಡು ಶತಮಾನಗಳಷ್ಟು ಪ್ರಾಚೀನವಾದುದು. ಗುಡಿಯ ವಾಸ್ತುರಚನೆಯಲ್ಲಿ ವಿಶೇಷತೆಯೇನಿಲ್ಲ.

ವಿಶೇಷತೆ ಇರುವುದು ಗುಡಿಯ ಮುಂದಿರುವ ಹೊಂಡದಲ್ಲಿ ಮತ್ತು ಅದರ ದಂಡೆಗಿರುವ ದೀಪಸ್ಥಂಭದ ಗೋಪುರದಲ್ಲಿ. ಇಷ್ಟೊಂದು ಸುಂದರ ವಾಸ್ತುಶಿಲ್ಪವುಳ್ಳ ದೀಪಸ್ಥಂಭವನ್ನು ನಾನು ಬೇರೆಡೆ ನೋಡಿಲ್ಲ. ಈ ಹೊಂಡವು ಮೇಲುಕೋಟೆಯ ಕಲ್ಯಾಣಿಗಿಂತಲೂ ದೊಡ್ಡದಾಗಿದೆ. ಹೊಂಡದ ಸುತ್ತ ಕಲ್ಲಬೇಲಿ ಕಟ್ಟಿದಂತೆ ಮಂಟಪಗಳ ಸಾಲು. ಅವುಗಳ ಅಂಚಿಗೆ ತೋಟಪಟ್ಟಿ. ಅದರೊಳಗೆ ಎತ್ತೆತ್ತಲೊ ಬಾಗಿಕೊಂಡು ವಂಕಿಯಂತೆ ನುಲಿದುಕೊಂಡು ಮನಸೋ ಇಚ್ಛೆ ಬೆಳೆದಿರುವ ತೆಂಗಿನಮರಗಳು; ಅವುಗಳ ಒಳಗೆ ವೀಳ್ಯದೆಲೆ ಬಳ್ಳಿಯ ದಾವಣಿ ಸುತ್ತಿಕೊಂಡ ಗಿಡಗಳು. ಸುಡುಬಿಸಿಲ ಈ ನಾಡಿನಲ್ಲಿ, ಉರಿವ ಕೆಂಡದುಂಡೆಗಳಂತೆ ನಿಂತಿರುವ ಕಲ್ಲುಬೆಟ್ಟಗಳ ನಡುವೆ, ಬನಶಂಕರಿ ತನ್ನ ಪೈರುಪಚ್ಚೆಯಿಂದಲೂ ಗಿಡಮರಗಳಿಂದಲೂ ಕೊಳಗಳಿಂದಲೂ ತಂಪಾಗಿ ನೆಲೆಸಿದೆ. ಇದಕ್ಕೆ ಇಂಬಾಗಿ, ಇಲ್ಲಿ ಪುಟ್ಟಿಗಳಲ್ಲಿ ರೊಟ್ಟಿ ಪಲ್ಯ ಮೊಸರು ತುಂಬಿಕೊಂಡು ಮಾರುವ ಹೆಂಗಳೆಯರು, ದುಡಿದು ಬಂದ ಮಕ್ಕಳಿಗೆ ಉಣಲಿಕ್ಕುವ ತಾಯಂದಿರಂತೆ, ಪ್ರೀತಿಯ ಉಪಚಾರ ಮಾಡುತ್ತ ಬಡಿಸುವರು.

ನಾನು ಕಂಡಂತೆ, ಕರ್ನಾಟಕದಲ್ಲಿ ಸವದತ್ತಿಯ ಎಲ್ಲಮ್ಮ, ಮೈಲಾರದ ಮೈಲಾರಲಿಂಗ, ಚಿಂಚಲಿಯ ಮಾಯಮ್ಮ, ಚಿಕ್ಕಲ್ಲೂರಿನ ಮಂಟೇಸ್ವಾಮಿ, ಗುಲಬರ್ಗದ ಬಂದೇನವಾಜರ ಪರಿಸೆಗಳ ಹಾಗೆ, ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಜಾತ್ರೆಗಳಲ್ಲಿ ಬನಶಂಕರಿಯೂ ಒಂದು. ಮೂಲತಃ ನೇಕಾರ ಸಮುದಾಯದ ಕುಲದೇವತೆಯಾಗಿದ್ದರೂ ಬನಶಂಕರಿ, ಈ ಭಾಗದ ಅನೇಕ  ಸಮುದಾಯಗಳಿಗೆ ಆರಾಧ್ಯಳು. ಹಿಂದೆ ಸುತ್ತಮುತ್ತಲಿನ ಊರುಗಳ ಜನ ಹುಣ್ಣಿಮೆ ದಿನದಂದು ಬರಿಗಾಲಲ್ಲಿ ಗುಡಿಗೆ ನಡೆದು ಬರುತ್ತಿದ್ದರಂತೆ; ಜಾತ್ರೆ ಕಾಲಕ್ಕೆ ಬಂಡಿ ಕಟ್ಟಿಕೊಂಡು ಬಂದರೆ, ಹತ್ತೆಂಟು ದಿನವಿದ್ದು ಜಾತ್ರೆ ಮುಗಿಸಿಕೊಂಡು ಹೋಗುವ ಪದ್ಧತಿಯೂ ಇತ್ತಂತೆ. ಈಗ ಸರ್ಕಾರಿ ಬಸ್ಸುಗಳು ಟ್ರಾಕ್ಸುಗಳು ಒದಗಣೆಯಾಗಿ, ಬೆಳಿಗ್ಗೆ ಬಂದು ರಾತ್ರಿ ಹೋಗುವವರು ಹೆಚ್ಚಾಗಿರುವರು.

ಜಾತ್ರೆಯ ಮುಖ್ಯ ಘಟನೆಯಾದ ತೇರೆಳೆವಿಕೆ, ಕೆಲವೇ ಕ್ಷಣಗಳಲ್ಲಿ ಮುಗಿದುಬಿಡುವ ಘಟನೆ. ಇದಾದ ಬಳಿಕ ತೇರಿಗೆ ವರ್ಷಪೂರ್ತಿ ವಿಶ್ರಾಂತಿ. ತೇರು ಮುಗಿದ ಬಳಿಕ ಸುರುವಾಗುವ ಜಾತ್ರೆ ಬರೋಬ್ಬರಿ ಒಂದು ತಿಂಗಳ ತನಕ ನಡೆಯುತ್ತದೆ. ಹಾಗೆ ನೋಡಿದರೆ, ಜಾತ್ರೆಯಲ್ಲಿ ಜನ ಗುಡಿಗೆ ಪೂಜೆಗೆಂದು ಹೋಗಿಬರುವ ಸಮಯ ಬಹಳ ಕಡಿಮೆ; ಅಂಗಡಿ ಮುಂಗಟ್ಟುಗಳಲ್ಲಿ ಕಳೆಯುವ ಸಮಯವೇ ಹೆಚ್ಚು. ಈ ಮಾತು ಉರುಸುಗಳ ವಿಷಯದಲ್ಲಿಯೂ ನಿಜ. ದರ್ಗಾಕ್ಕೆ ಹೋಗಿ ಸಕ್ಕರೆ ಓದಿಸಿಕೊಂಡು ಬರುವ ಶಾಸ್ತ್ರವನ್ನು ಬಿಟ್ಟರೆ, ಮಹಿಳೆಯರ ಹೆಚ್ಚಿನ ಹೊತ್ತು, ಪಿಂಗಾಣಿ ವಸ್ತುಗಳ ಅಂಗಡಿಯಲ್ಲಿಯೇ ಕಳೆದುಹೋಗುತ್ತದೆ.

ಕರ್ನಾಟಕದ ಬಹುತೇಕ ಜಾತ್ರೆ ಉರುಸು ಪರಿಸೆಗಳು, ಆಯಾ ಪರಿಸರದ ರೈತಾಪಿ ಜನರ ಬೇಕುಗಳನ್ನು ಪೂರೈಸುವ ಜಾಗಗಳೂ ಆಗಿವೆ. ರೈತರು ತಮ್ಮ ಮೊದಲ ಪೀಕನ್ನು ಮಾರಿದ ರೊಕ್ಕ ಹಿಡಿದು ಮನೆಗೂ ಹೋಗದೆ ನೇರವಾಗಿ ಜಾತ್ರೆಗೇ ನುಗ್ಗುತ್ತಾರೇನೊ ಅನಿಸುತ್ತದೆ. ಜತೆಗೆ ಜಾತ್ರೆಗಳು ಆಯಾ ಸೀಮೆಯ ಕುಶಲ ಕಲೆಗಾರರು ತಮ್ಮ ವಸ್ತುಗಳನ್ನು ಮಾರುವ, ಜನ ತಮ್ಮ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವ ಬೃಹತ್ ಮಾರುಕಟ್ಟೆಗಳು. ಬನಶಂಕರಿಯಲ್ಲಿ ಹೆಚ್ಚಿನ ಕಾರೇಗಾರರು ಮರ ಕಲ್ಲುಗಳನ್ನು ತಂದಿಟ್ಟುಕೊಂಡು ಅಲ್ಲೇ ಕೆತ್ತನೆ ಮಾಡಿ ಸಿದ್ಧವಸ್ತು ತಯಾರಿಸಿ ಮಾರುತ್ತಿದ್ದರು. ಅವರಲ್ಲಿ ದೊಡ್ಡ ಪ್ರಮಾಣದಲ್ಲಿ ಮುಸ್ಲಿಮರಿದ್ದರು. ಜಾತ್ರೆಗೆ ಒಕ್ಕಲುತನಕ್ಕೆ ಬೇಕಾದ ದನ ಚಕ್ಕಡಿ ಕುಡ ಕುಳ ಕತ್ತಿ ಕುಡಗೋಲು ಬಾರುಕೋಲು ಮಿಣಿ ಎತ್ತಿನ ಕೊರಳ ಗೆಜ್ಜೆಸರ ದಾಬುಗಳನ್ನು ಮಾರುವ ಅಂಗಡಿಗಳು ಬಂದಿದ್ದವು. ಕಂಬಳಿ, ಪಾತ್ರೆ, ಭಾಂಡೆಸಾಮಾನು, ಬಳೆ, ಕೆತ್ತನೆಯುಳ್ಳ ಮರದ ಬಾಗಿಲು, ಮರದ ಸಂದೂಕ, ಕಬ್ಬಿಣದ ಟ್ರಂಕು, ಬಿದಿರಿನ ಪುಟ್ಟಿಮೊರ, ಮಕ್ಕಳ ಆಟಿಕೆ, ಒಳಕಲ್ಲು, ಮಡಕೆ- ಮಾರುವ ಅಂಗಡಿಗಳು ಸಾಲು ಸಾಲು

. ಹೊಸದಾಗಿ ಲಗ್ನವಾದವರು ರೊಕ್ಕ ಕೈಯಲ್ಲಿ ಹಿಡಿದು ಬಂದರೆ, ಸಂಸಾರ ಹೂಡಲು ಬೇಕಾದ ಎಲ್ಲ ವಸ್ತುಗಳು ಇಲ್ಲಿ ಸಿಗುತ್ತವೆ. ಬನಶಂಕರಿ ಜಾತ್ರೆಯ ಬಗ್ಗೆ ಹುಟ್ಟಿರುವ ಗಾದೆಯಲ್ಲಿ ಸಾಕಷ್ಟು ಸತ್ಯವಿದೆ: ‘ಇಲ್ಲಿ ಅಪ್ಪ ಅಮ್ಮ ಬಿಟ್ಟು ಉಳಿದುದೆಲ್ಲವೂ ಸಿಗುತ್ತದೆ’! ಜಾತ್ರೆಯ ನಿಜವಾದ ಕಳೆ ಹಗಲು ಮುಗಿದ ಬಳಿಕ ಕಟ್ಟುತ್ತಿತ್ತು. ಸಂಜೆಯಾಗುತ್ತಿದ್ದಂತೆ ಅಪಾರವಾದ ಜನ ಸೇರಿ ಯಕ್ಷಯಕ್ಷಿಯರ ಲೋಕವೇ ನಿರ್ಮಾಣವಾಗುತ್ತಿತ್ತು. ದಶದಿಕ್ಕುಗಳಿಂದ ಜನ ವಾಹನಗಳಲ್ಲಿ ಧಾವಿಸಿ ಬಂದು ಇಳಿಯುತ್ತಿದ್ದರು. ಜನಸಂದಣಿಯಲ್ಲಿ ನುಗ್ಗಾಡಿಕೊಂಡು ಗದ್ದಲದ ಪರಿಮೆಯಿಲ್ಲದೆ ಅಡ್ಡಾಡುತ್ತಿದ್ದರು; ಅರ್ಧಕ್ಕಿಂತ ಹೆಚ್ಚಿನ ಅಂಗಡಿಗಳು ಬಳೆ ಮತ್ತು ಮಿಠಾಯಿ ಮಾರುವವೇ ಆಗಿದ್ದವು.
 
ಹತ್ತಡಿ ಎತ್ತರದವರೆಗೆ ಜೋಡಿಸಿದ ತಿಂಡಿ ಅಂಗಡಿಗಳಲ್ಲಿ ಪೇರಿಸಿಟ್ಟ ತಿನಿಸುಗಳನ್ನು, ನೂರಾರು ಕಡಾಯಿಗಳ ಎಣ್ಣೆಗಳಲ್ಲಿ ಬೇಯುವ ಪೂರಿ ಮಿರ್ಚಿ ಬಜಿಗಳನ್ನು, ಕತ್ತರಿಸಿ ಮಾರುವ ಕರದಂಟುಗಳನ್ನು, ದೂಳಿಗೆ ಅಳುಕದೆ ಜನ ಕೊಂಡು ತಿನ್ನುತ್ತಿದ್ದರು. ಮೈಲಿಗೆ ಮತ್ತು ಸಂಭ್ರಮ ಜಾತ್ರೆಯಲ್ಲಿ ಅಗಲಿಸಲಾಗದ ಸಂಗತಿಗಳಿರಬೇಕು. ಜನ ಊರು ಮನೆಗಳಲ್ಲಿ ಬಿಗಿಹಿಡಿದ ಮನಸ್ಸನ್ನು ಸಡಿಲಬಿಟ್ಟು, ಅಲ್ಲಿ ಸಿಗದ ಮುಕ್ತತೆಯನ್ನು ಜಾತ್ರೆಯಲ್ಲಿ ಅಭಿವ್ಯಕ್ತಿ ಮಾಡುತ್ತಿರುವಂತೆ ತೋರುತ್ತಿತ್ತು. ಅದರಲ್ಲೂ ಎಲ್ಲ ಜಾತ್ರೆಗಳಲ್ಲಿ ಮಹಿಳೆಯರದೇ ಹೆಚ್ಚು ಕಾರುಬಾರು. ‘ಮಕ್ಕಳನ್ನ ಕರಕೊಂಡು ಮದುವಿಗೆ ಹೋಗಬ್ಯಾಡ, ಗಂಡನ್ನ ಕಟ್ಟಿಕೊಂಡು ಜಾತ್ರಿಗೆ ಹೋಗಬ್ಯಾಡ’ ಎಂಬ ಗಾದೆಯನ್ನು ಯಾರೊ ಜಾಣ ಅನುಭವಸ್ಥ ಮಹಿಳೆಯೇ ಹುಟ್ಟಿಸಿರಬೇಕು.

ಊರಲ್ಲಿ ಕಣ್ಣುಗಳಲ್ಲಷ್ಟೆ ಮಾತಾಡಿಕೊಂಡ ಹರೆಯದ ಜೀವಗಳು ಜಾತ್ರೆಯಲ್ಲಿ ಭೇಟಿಯಾಗಿ ಪರಸ್ಪರ ಮಾತಾಡುವ ಸುಖ ಅನುಭವಿಸುತ್ತವೆ. ಸಾಧ್ಯವಾದರೆ, ಗ್ರಾಮೀಣ ಪ್ರಿಯಕರರು ತಮ್ಮ ಪ್ರಿಯತಮೆಯರಿಗೆ ಬಳೆತೊಡಿಸುವರು; ಇನ್ನೂ ಸಾಧ್ಯವಾದರೆ ನಾಟಕಕ್ಕೊ ಸಿನಿಮಾಕ್ಕೊ ಕರೆದೊಯ್ಯುವರು. ಹೀಗೆ ಇಲ್ಲಿ ಜೋಡಿಯಾದವರು ಮುಂದೆ ಲಗ್ನವಾಗಿ ಬಾಳುವರೆಂದು ಬದಾಮಿಯ ಗೆಳೆಯರೊಬ್ಬರು ತಿಳಿಸಿದರು. ಹೊಸತಾಗಿ ಲಗ್ನವಾದವರಿಗೆ ಬಿಢೆ ಬಿಟ್ಟುಕೊಟ್ಟು ಬೆರೆಯಲು ಸಹ ಜಾತ್ರೆ ನೆರವಾಗುತ್ತದೆ. ಇನ್ನೂ ವಿಶೇಷತೆಯೆಂದರೆ, ಲಗ್ನವಾಗಿ ಮಕ್ಕಳಾಗದವರು ಕೂಡ ಬರುವುದು. ಅವರು ತೇರಿನ ದಿನ ಸಿಗುವ ಗಂಡುಹೆಣ್ಣಿನ ‘ಕಿಸಗಾಲಬೊಂಬೆ’ ಎನ್ನಲಾಗುವ ಜೋಡಿಗೊಂಬೆಗಳನ್ನು ಕೊಂಡುಹೋಗಿ, ತೊಟ್ಟಿಲಿಗೆ ಹಾಕಿ ತೂಗುವರು. ಲಗ್ನಪೂರ್ವ ನೋಟದ ವಿನಿಮಯ, ಲಗ್ನವಾದ ಬಳಿಕ ತಿರುಗಾಟ, ಲೈಂಗಿಕತೆ, ಸಂತಾನದ ಹರಕೆ- ಎಲ್ಲವೂ ಒಂದೇ ತರ್ಕದ ಧಾರೆಯಲ್ಲಿ ಬರುವ ಸಂಗತಿಗಳು; ಎಲ್ಲವೂ ಫಲವಂತಿಕೆಯ ಜತೆ ಸಂಬಂಧವುಳ್ಳವು. ತೇರುಗಳಲ್ಲಿರುವ ಮಿಥುನ ಶಿಲ್ಪಗಳನ್ನು ಈ ಹಿನ್ನೆಲೆಯಿಂದಲೇ ಅರ್ಥಮಾಡಿಕೊಳ್ಳಬೇಕಾಗಿದೆ.

ಜಾತ್ರೆಯಲ್ಲಿ ಸಿನಿಮಾ ಮತ್ತು ನಾಟಕದ ಕಂಪನಿಗಳ ಅಬ್ಬರ ಬಹಳ ಜೋರಾಗಿತ್ತು. ಕಾರಿಗೆ ಮೈಕುಕಟ್ಟಿಕೊಂಡು ಕಂಪನಿಯವರು ಒಬ್ಬರ ಮಾತು ಮತ್ತೊಬ್ಬರಿಗೆ ಕೇಳಲಾಗದಂತೆ, ತಮ್ಮ ನಾಟಕಗಳ ಪ್ರಚಾರ ಮಾಡುತ್ತಿದ್ದರು. ಈ ಸಲ ಬನಶಂಕರಿಗೆ 8 ಸಿನಿಮಾ ಟೆಂಟುಗಳು 9 ನಾಟಕ ಕಂಪನಿಗಳು ಬಂದು ಬಿಡಾರ ಹಾಕಿದ್ದವು. ಪ್ರತಿರಾತ್ರಿ ಮೂರು ಆಟಗಳು ನಡೆಯುತ್ತಿದ್ದವು. 9 ಕಂಪನಿಗಳ ತಲಾಮೂರು ಶೋ ಎಂದರೆ, ಒಟ್ಟು 27 ಶೋಗಳು. ಇದರ ಜತೆಗೆ 8 ಸಿನಿಮಾ ಟೆಂಟುಗಳ 24 ಶೋಗಳು. ಪ್ರತಿ ಶೋಗೂ 200 ಜನರ ಲೆಕ್ಕಹಿಡಿದರೂ ಪ್ರತಿರಾತ್ರಿ 10-15 ಸಾವಿರ ಜನ ನಾಟಕ ಮತ್ತು ಸಿನಿಮಾ ನೋಡುತ್ತಿದ್ದರು. ನಾಟಕ ನೋಡಲೆಂದೇ ಜನ ಜಾತ್ರೆ ಬರುತ್ತಿದ್ದುದನ್ನು ಕಂಡರೆ, ಬನಶಂಕರಿಯದು ಜಾತ್ರೆಯೋ ನಾಟಕೋತ್ಸವವೋ ಎಂಬ ವಿಭ್ರಮೆ ಬರುವುದು ಸಹಜ. 
ವಿಶೇಷವೆಂದರೆ, ಬನಶಂಕರಿಯಲ್ಲಿ ಬೀಡುಬಿಟ್ಟಿದ್ದ ನಾಟಕ ಕಂಪನಿಗಳೆಲ್ಲ ನಾಡಿನ ಸಂತರ ಹೆಸರಲ್ಲಿದ್ದವು. ಉದಾಹರಣೆಗೆ, ಜೇವರಗಿಯ ಶ್ರೀಗುರು ವಿಶ್ವಾರಾಧ್ಯ ನಾಟ್ಯಸಂಘ, ಗುಡಗೇರಿಯ ಸಂಗಮೇಶ್ವರ ನಾಟ್ಯಸಂಘ, ತಾಳಿಕೋಟೆಯ ಶ್ರೀಗುರು ಖಾಸ್ಗತೇಶ್ವರ ನಾಟ್ಯಸಂಘ, ಚಿತ್ತರಗಿಯ ಶ್ರೀಕುಮಾರ ವಿಜಯ ನಾಟ್ಯಸಂಘ, ಮಂಡಲಗಿರಿಯ ಶ್ರೀಗುರು ತೋಂಟದಾರ್ಯ ನಾಟ್ಯಸಂಘ, ಕುಂಟೋಜಿಯ ಶ್ರೀ ಘನಮಠೇಶ್ವರ ನಾಟ್ಯಸಂಘ, ಅಕ್ಕಲಕೋಟೆಯ ಸ್ವಾಮಿಸಮರ್ಥ ನಾಟ್ಯಸಂಘ- ಇತ್ಯಾದಿ. ಆದರೆ ಇವು ಆಡಿಸುತ್ತಿದ್ದ ನಾಟಕಗಳು ಸಂತರವಲ್ಲ; ಪುರಾಣದವಲ್ಲ. ಪಕ್ಕಾ ಸಾಮಾಜಿಕ ನಾಟಕಗಳು. ನಾಟಕಗಳ ಹೆಸರು ಹೀಗಿದ್ದವು: ‘ಮೂರ್ಖ ತಂದೆ ಮುಟ್ಠಾಳ ಮಕ್ಕಳು’, ‘ಸತ್ಯ ಸತ್ತಿತು’, ‘ಜಿದ್ದಿಗೆ ಬಿದ್ದ ಜಿಗದಹ್ವಾದ’, ‘ಆಗುದು ಆಕ್ಕೈತಿ ಹೋಗುದು ಹೋಕ್ಕೈತಿ’, ‘ಹೊತ್ತು ನೋಡಿ ಹೊಡತ ಹಾಕು’, ‘ನೀಚಲಿಂಗನ ಮಗ ಬೂಚಲಿಂಗ’, ‘ಅಪ್ಪ ಹಂಗ ಮಗ ಹೀಂಗ’, ಗಂಡುಕಿಲಾರಿ ಹೆಣ್ಣು ಜವಾರಿ’, ‘ಗಂಡಿಗೆ ಹಟ, ಹೆಣ್ಣಿಗೆ ಚಟ’.

ನಾನು ಕೆಲವು ನಾಟಕಗಳನ್ನು ನೋಡಿದೆ. ಅವೇನು ಅತ್ಯುತ್ತಮ  ಕಲಾಕೃತಿಗಳು ಎನ್ನಬಹುದಾದ ನಾಟಕಗಳಲ್ಲ. ಅವುಗಳ ಕಥೆಯೂ ಬಹಳ ಸರಳ ಮತ್ತು ಶಿಥಿಲವಾಗಿತ್ತು. ಜತೆಗೆ ಮಹಿಳೆಯರನ್ನು ಕಾಮದ ವಸ್ತುವನ್ನಾಗಿ ನೊಡುವ ಪುರುಷಪ್ರಧಾನ ದೃಷ್ಟಿಕೋನ, ಗೌಡರ ಗೌಡಿಕೆಯನ್ನು ಸಮರ್ಥಿಸುವಿಕೆ ದನಿ, ಎರಡರ್ಥದ ಸಂಭಾಷಣೆ ಎಲ್ಲವೂ ಅವುಗಳಲ್ಲಿ ಧಾರಾಳವಾಗಿದ್ದವು.

ಬಹುತೇಕ ನಾಟಕಗಳ ಕತೆ ಸುಪರಿಚಿತವಾದುದು. ಅಂದರೆ ಇಲ್ಲಿ ಸಜ್ಜನರನ್ನು ದುಷ್ಟರು ಕಾಡುತ್ತಾರೆ. ನಾನಾ ಕಷ್ಟವನ್ನು ಪಡುವ ಸಜ್ಜನರು ಕಡೆಗೂ ಜಯ ಪಡೆಯುತ್ತಾರೆ. ಈ ಕತೆಗಳಲ್ಲಿ, ಧರ್ಮ ಕರ್ಮಗಳ ಚರ್ಚೆ, ನೈತಿಕತೆ, ಮನೆತನದ ಗೌರವಕ್ಕಾಗಿ ಕೊಲೆ ಮಾಡುವುದು ಇಲ್ಲವೇ ಸತ್ತು ಹುತಾತ್ಮರಾಗುವುದು- ಇತ್ಯಾದಿ ಸಾಂಪ್ರದಾಯಿಕ ಮೌಲ್ಯಗಳು ತುಂಬಿದ್ದವು. ಕತೆಯ ಗಂಭೀರತೆಯಿಂದ ಬರುವ ಏಕತಾನತೆಯನ್ನು ಒಡೆಯಲೋ ಏನೋ, ನಾಟಕದಲ್ಲಿ ಒಂದು ಪರ್ಯಾಯ ಕತೆಯ ಎಳೆಯೂ ಇತ್ತು. ತಮಾಷೆಯಿಂದ ಕೂಡಿದ್ದ ಈ ಕತೆ ಅಷ್ಟೇನೂ ಗಟ್ಟಿಯಾಗಿರಲಿಲ್ಲ. ಆದರೆ ಇದು ಮೂಲಕತೆಗಿಂತ ಹೆಚ್ಚು ಜೀವಂತವಾಗಿತ್ತು. ಕಾರಣ ಈ ಕತೆ ಅಧೋಲೋಕಕ್ಕೆ ಸೇರಿತ್ತು.

‘ಕ್ಷುದ್ರ’ ಎನ್ನಲಾಗುವ ಉಂಡಾಡಿ ತರುಣ ತರುಣಿಯರು ಕಳ್ಳತನ ಮೋಸ ಪ್ರೇಮ ಮಾಡುವ ಸಂಗತಿಗಳು ಅದರಲ್ಲಿದ್ದವು. ಮೂಲಕತೆಯನ್ನು ‘ಮುಖ್ಯ’ ಪಾತ್ರಗಳು ಮೈಸೂರು ಕಡೆಯ ಶಿಷ್ಟಭಾಷೆಯಲ್ಲಿ ಆಡುತ್ತಿದ್ದರೆ, ಈ ತಮಾಷೆ ದೃಶ್ಯದ ಪಾತ್ರಗಳು ಸ್ಥಳೀಯ ಭಾಷೆಯಲ್ಲಿ ಆಡುತ್ತಿದ್ದವು. ಪ್ರೇಕ್ಷಕರು ಹಾತೊರೆಯುತ್ತಿದ್ದುದು ಮೂಲಕಥೆಗಲ್ಲ. ಈ ಉಪಕತೆಗಳಿಗೆ. ಮೂಲಕಥೆ ಬಂದಾಗ, ಇದು ಯಾವಾಗ ಮುಗಿಯುತ್ತದೆಯೊ ಎಂಬಂತೆ ಚಡಪಡಿಸುತ್ತ, ನಂತರ ಬರುವ ಹಾಸ್ಯದ ದೃಶ್ಯಗಳಿಗೆ ಅವರು ಕಾಯುತ್ತಿದ್ದರು. ಮೂಲಕತೆಗೆ ಅಡಿಟಿಪ್ಪಣಿಯಂತೆ ಹೇಗೋ ಸೇರಿಸಲಾಗಿದ್ದ ಈ  ಉಪಕತೆಗಳೇ ಮೂಲದ ಜಾಗವನ್ನು ತಾವೇ ಆಕ್ರಮಿಸಿಕೊಂಡು ಮೆರೆಯುತ್ತಿದ್ದವು.

ಜಾತ್ರೆಗಳು ಸಂಭ್ರಮವನ್ನು ಮಾತ್ರವಲ್ಲ, ದುಗುಡ ಹಂಚಿಕೊಳ್ಳುವ ಜಾಗಗಳೂ ಇರಬೇಕು. ಒಂದು ಕಡೆ ಬಂಡಿಯಲ್ಲಿ ಬಂದಿದ್ದ ಒಂದು ಕುಟುಂಬ, ತಮ್ಮ ನಂಟರೊಂದಿಗೆ ಹಳೆಯ ಜಗಳವನ್ನೆಲ್ಲ ಕೆದರಿಕೊಂಡು ಕಾದಾಡುತ್ತಿತ್ತು. ಮಡದಿಯನ್ನು ಸರಿಯಾಗಿ ಸಂಭಾಳಿಸಲಾಗದ ಗಂಡನ ಭರ್ತ್ಸನೆ ನಡೆಯುತ್ತಿತ್ತು. ಇನ್ನೊಂದು ಸುತ್ತು ಬರುವಾಗ, ಜಗಳ ಮಾಡಿದವರೆಲ್ಲ ರಾಜಿಯಾಗಿ ಸೇರಿಕೊಂಡು ರೊಟ್ಟಿ ಪಲ್ಯ ತಿನ್ನುತ್ತಿದ್ದರು. ಇದೂ ಒಂದು ನಾಟಕದಂತಿತ್ತು. ಆದರೆ ನನಗೆ ಕಂಗೆಡಿಸಿದ್ದು, ಹಿಂದಿನ ದಿನ ಬಿದ್ದಿರುವ ಮಹಿಳೆಯ ದೇಹವೊಂದು ಹೊಂಡದಲ್ಲಿ ನಿಧಾನವಾಗಿ ಮೇಲೆ ಬಂದು ತೇಲುತ್ತಿದ್ದ ದೃಶ್ಯ. ಬಹುಶಃ ಆಕೆ ಕೈಕಾಲು ತೊಳೆಯುವಾಗ ಆಯತಪ್ಪಿ ಬಿದ್ದಿರಬೇಕು; ಇಲ್ಲವೇ ಜೀವನವೆಂಬ ನಾಟಕವೇ ಬೇಡವಾಗಿ ಪ್ರಾಣಬಿಟ್ಟಿರಬೇಕು. ಆದರೆ ಅಲ್ಲಿದ್ದ ರೊಟ್ಟಿ ಮಾರುವ ಹೆಂಗಸರು ಮಾತ್ರ- ‘ಯವ್ವಾ, ಯಾವನೋ ಭಾಡ್ಯಾ ಹೊಂಡದಾಗೆ ದುಗಿಸಿ ಹೋಗ್ಯಾನೇ’ ಎಂದೇ ಆಡಿಕೊಳ್ಳುತ್ತಿದ್ದರು. ದೇವಿಗೆ ಈಗ ಪ್ರಾಣಿಯ ಬಲಿಯಿಲ್ಲ. ಆಕೆ ಶಾಕಂಬರಿ. ಆದರೆ ಅವಳ ಹೊಂಡದಲ್ಲಿ ಸಮಾಜ ತನಗೆ ಬೇಕಾದ ಬಲಿಯನ್ನು ಪಡೆದಿತ್ತು.  

ನಮ್ಮ ಜಾತ್ರೆಗಳನ್ನು ಧರ್ಮ ಮತ್ತು ಭಕ್ತಿಕೇಂದ್ರಿತವಾಗಿ ನೋಡುವುದೇ ಅರೆಸತ್ಯವಿರಬೇಕು. ಸಮುದಾಯಗಳ ಬದುಕಲ್ಲಿ ಲೌಕಿಕ-ಪಾರಲೌಕಿಕ ಎನ್ನುವುದು ಇಲ್ಲವೆಂತಲ್ಲ, ಇದೆ. ಆದರೆ ಅವುಗಳ ನಡುವಣ ಅಂಚು ಬಹಳ ತೆಳು ಅಥವಾ ಅಲ್ಲಿ ಲೌಕಿಕದ ಪಾಲೇ ಹೆಚ್ಚು. ದುಡಿದು ದಣಿದ ಜನ, ಮೈಮರೆತು ಸಂಭ್ರಮ ಪಡಲು ಹಸಿದು ಜಾತ್ರೆ-ಉರುಸಿಗೆ ಬರುತ್ತಾರೆ. ಈ ಸಂಭ್ರಮಕ್ಕೆ ದೈವಭಕ್ತಿಯು ಒಂದು ನೆಪಮಾತ್ರ. ಜಾತ್ರೆಯಲ್ಲಿ ದೈವಭಕ್ತಿ ಮತ್ತು ಲೌಕಿಕತೆಗಳ ವಿನ್ಯಾಸವು, ಇಲ್ಲಿನ ನಾಟಕದ ಮುಖ್ಯಕಥೆಗಿಂತಲೂ ಅದಕ್ಕೆ ಪ್ರಾಸಂಗಿಕವಾಗಿ ಜೋಡಿಸಿರುವ ಹಾಸ್ಯ ದೃಶ್ಯಗಳೇ ಮುಂಚೂಣಿಗೆ ಬಂದಂತಿದೆ; ಬನದಮ್ಮನ ಕೈಯಲ್ಲಿ ಕೊಲುವ ಹತ್ಯಾರವೂ ಅಭಯಹಸ್ತವೂ ಒಟ್ಟಿಗೇ ಇರುವಂತಿದೆ; ಸುಡುಬಂಡೆಯ ಬೆಟ್ಟಗಳ ನಡುವೆ ಹರಿವ ಮಲಪ್ರಭೆಯೂ ಒಟ್ಟಿಗೇ ಇರುವಂತಿದೆ; ಸಂತರ ಹೆಸರಿನ ಕಂಪನಿಗಳು ಲೌಕಿಕ ನಾಟಕಗಳನ್ನು ಆಡುವಂತಿದೆ; ಈ ಜಾತ್ರೆಯು ಹಲವು ಸಂಗತಿಗಳನ್ನು ಒಟ್ಟಿಗೇ ಹಿಡಿದುಕೊಂಡಿದೆ.

ದೂಳು ಗಲೀಜು ಗೌಜು ಎಂದು ಬಿಗುಮಾನ ಮಾಡುವವರಿಗೆ ಜಾತ್ರೆಯ ಸಂಭ್ರಮ ತಟ್ಟುವುದಿಲ್ಲ; ಸಂಭ್ರಮ ಮಾತ್ರ ಕಾಣುವವರಿಗೆ ಜಾತ್ರೆಯ ದುರಂತ ಇಕ್ಕಟ್ಟುಗಳು ಅರಿವಾಗುವುದಿಲ್ಲ. ಎರಡೇ ದಿನಕ್ಕೆ ದಣಿದ ನಾನು ಜಾತ್ರೆಯ ಹೊರಗೆ ಬಂದು ನಿಟ್ಟುಸಿರುಬಿಟ್ಟೆ. ಆದರೆ ಸಾಧ್ಯವಾದರೆ ಮುಂದಿನ ಸಲವೂ ಹೋಗುವೆ. ಯಾಕೆಂದರೆ ಹೊಸ ನಾಟಕ ಕಂಪನಿಗಳು ಬಂದಿರುತ್ತವೆ. ಹೊಸ ನಾಟಕಗಳೂ ಇರುತ್ತವೆ. ಆದರೆ ನಟರು ಮಾತ್ರ ಅವರೇ ಇರುತ್ತಾರೆಯೊ ಇಲ್ಲವೋ ತಿಳಿಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT