ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಾರಸ್‌ನಲ್ಲೊಬ್ಬ ಬೆಂಗಳೂರಿನ ಭಗವಾನ್

Last Updated 6 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ತಾಜ್ ಗೇಟ್‌ವೇಯಿಂದ ವಾರಾಣಸಿಯಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇರುವ ದೂರ ಕೇವಲ 21.5 ಕಿಲೋಮೀಟರ್‌. ಹೊಟೇಲ್‌ನ ಫ್ರಂಟ್ ಡೆಸ್ಕ್‌ನಲ್ಲಿ ‘ವಿಮಾನ ನಿಲ್ದಾಣ ತಲುಪಲು ಎಷ್ಟು ಸಮಯ ಬೇಕಾದೀತು’ ಎಂದು ವಿಚಾರಿಸಿದಾಗ, ‘ಒಂದೂವರೆ ಗಂಟೆ ಪ್ರಯಾಣ.

ಆದರೆ ಬನಾರಸ್‌ನ ಟ್ರಾಫಿಕ್ ಬಗ್ಗೆ ಯಾವ ಗ್ಯಾರಂಟಿ ನೀಡಲಾಗುವುದಿಲ್ಲ. ಕನಿಷ್ಠ ಎರಡೂವರೆ ಗಂಟೆ ಮೊದಲೇ ಇಲ್ಲಿಂದ ಹೊರಡುವುದು ಒಳ್ಳೆಯದು’ ಎಂಬ ಸಲಹೆ ಸಿಕ್ಕಿತ್ತು.

ನಾನು ಹಾರಲಿದ್ದ ವಿಮಾನ ಹೊರಡಲು ಎರಡು ಗಂಟೆ ಮಾತ್ರ ಬಾಕಿಯಿತ್ತು! ಈ ನಡುವೆ ಎಲ್ಲಾದರೂ ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡರೆ? ಗಡಿಬಿಡಿಯಲ್ಲಿ ರೂಮ್ ಖಾಲಿ ಮಾಡಿ, ಹೊಟೇಲ್‌ನ ಮುಂಬಾಗಿಲ ಮುಂದೆ ಬಂದು ನಿಂತಿದ್ದ ಕ್ಯಾಬ್ ಏರಿ ಕೂತೆ. ಕ್ಯಾಬ್ ಇನ್ನೂ ಹೊಟೇಲ್ ಆವರಣವನ್ನು ದಾಟಿರಲಿಲ್ಲ. ಡ್ರೈವರ್ ದ್ವಾರಕನಾಥ್ ಪಾಂಡೆ, ‘ನಿಮ್ಮ ಊರು ಯಾವುದು? ಎಲ್ಲಿಗೆ ಹೊರಟಿದ್ದೀರಿ?’ ಎಂಬ ಪ್ರಶ್ನೆಗಳ ಮೂಲಕ ಮಾತಿಗೆ ಮುನ್ನುಡಿ ಬರೆದರು. ‘ನಾನು ಬೆಂಗಳೂರಿನವ. ಈಗ ಬೆಂಗಳೂರಿಗೆ ಹೊರಟಿದ್ದೇನೆ’ ಎಂದ ತಕ್ಷಣ ಅವರು ಪಟ್ಟ ಖುಷಿ ವರ್ಣಿಸಲಾಗದ್ದು.

‘ನೀವು ಬೆಂಗಳೂರಿನವರೇ! ವ್ಹಾ! ನಮ್ಮ ಡಿಎಂ (ಡಿಸ್ಟ್ರಿಕ್ ಮ್ಯಾಜಿಸ್ಟ್ರೇಟ್ ಅಥವಾ ಜಿಲ್ಲಾಧಿಕಾರಿ) ಕೂಡ ಬೆಂಗಳೂರಿನವರೇ! ಸರ್, ಕಾಶಿಯಲ್ಲಿ ಇರೋದು ಎರಡೇ ಎರಡು ದೇವರು. ಒಂದು ವಿಶ್ವನಾಥ. ಮತ್ತೊಂದು ಡಿಎಂ ವಿಜಯ್ ಕಿರಣ್ ಆನಂದ್’ ಎಂದಾಗ ನನ್ನ ಕಿವಿಗಳನ್ನೇ ನಾನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ.

ಇದು ಬನಾರಸ್‌ನಲ್ಲಿನ ನನ್ನ ನಾಲ್ಕನೇ ದಿನ. ಭಾನುವಾರ ಮಧ್ಯಾಹ್ನ ಲಖನೌದಿಂದ ಬಂದು ರೈಲು ಇಳಿದ ತಕ್ಷಣ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿದ ಕ್ಯಾಬ್ ಡ್ರೈವರ್ ಗುಡ್ಡುವಿನಿಂದ ಹಿಡಿದು ಬುಧವಾರ ಮಧ್ಯಾಹ್ನ ಪಾಂಡೇಜಿವರೆಗೆ ಕನಿಷ್ಠ ನೂರು ಮಂದಿ ಜನಸಾಮಾನ್ಯರು, ‘ನಾನು ಬೆಂಗಳೂರು’ ಎಂದ ತಕ್ಷಣ ನನ್ನ ಬಳಿ ಜಿಲ್ಲಾಧಿಕಾರಿ ಆನಂದ್ ಬಗ್ಗೆ, ಅವರ ಕಾರ್ಯ ವೈಖರಿಯ ಬಗ್ಗೆ ಮನತುಂಬಿ ಮಾತನಾಡಿದ್ದರು.

ಬನಾರಸ್ ನಗರ ನನ್ನ ಪಾಲಿಗೆ ಹೊಸದೇನಲ್ಲ. ಇದು ಮೂರನೇ ಭೇಟಿ. ವೈಯಕ್ತಿಕವಾಗಿ ಅತ್ಯಂತ ಪ್ರೀತಿಸುವ ಸ್ಥಳಗಳಲ್ಲಿ ಗಂಗೆಯ ತಟದ ಈ ನಗರಕ್ಕೆ ಅಗ್ರಸ್ಥಾನ. ಮೊದಲ ಬಾರಿಗೆ ಬನಾರಸ್‌ನಲ್ಲಿ ಗಂಗೆಯೊಡಲಲ್ಲಿ ತೇಲಿದ ಕ್ಷಣದಿಂದಲೇ ಅದೇನೋ ಕರುಳುಬಳ್ಳಿಯ ಸಂಬಂಧ ಬೆಳೆದುಕೊಂಡಿತ್ತು.

ಇಲ್ಲಿನ ಘಾಟ್‌ಗಳು, ಹೊಂಡಗಳ ನಡುವಿನ ರಸ್ತೆಗಳು, ರಸ್ತೆಯ ನಡುವಿನ ದನ–ಕರು–ಎಮ್ಮೆಗಳು, ಸೈಕಲ್ ರಿಕ್ಷಾಗಳು, ನಡುವೆ ಹಾದುಹೋಗುವ ಶವಯಾತ್ರೆಗಳು, ಗಲ್ಲಿಗಳೊಳಗಿನ ಕೈಮಗ್ಗಗಳ ಸದ್ದಿನ ನಿನಾದ, ನೆಲದಾಳದಲ್ಲಿ ಹುದುಗಿರುವ ವಿಶ್ವನಾಥ, ಅಕ್ಕಪಕ್ಕದ ಗಲ್ಲಿಗಳಲ್ಲಿನ ಪುಟ್ಟಪುಟ್ಟ ಚಹಾದ ಅಂಗಡಿಗಳು, ಮುಕ್ತಿಧಾಮಗಳು... ಎಲ್ಲವೂ ಆತ್ಮೀಯ ಎನಿಸತೊಡಗಿತ್ತು. ಈ ನಡುವೆ ದಶಾಶ್ವಮೇಧ ಘಾಟ್ ಮತ್ತು ಸಂಜೆಯ ಆಭೂತಪೂರ್ವ ಗಂಗಾರತಿ; ಮಣಿಕರ್ಣಿಕಾ ಘಾಟ್‌ನ ಉರಿವ ಚಿತೆಗಳನ್ನು ಮರೆಯಲು ಹೇಗೆ ಸಾಧ್ಯ!

ಎರಡನೇ ಭೇಟಿಯ ಸಂದರ್ಭದಲ್ಲಿ ಮುಖಾಮುಖಿಯಾದ ಸಂಕಟ ಮೋಚನ ದೇವಸ್ಥಾನದ ಮಹಾಂತ ಪ್ರೊ. ವೀರಭದ್ರ ಮಿಶ್ರ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ (ಇಬ್ಬರೂ ಈಗಿಲ್ಲ) ಬನಾರಸ್‌ನ ಇನ್ನೆರಡು ಆಕರ್ಷಣೆಗಳಾಗಿದ್ದರು.

ಅದೆಲ್ಲದರ ಜೊತೆಗೆ ಹುಟ್ಟು–ಬದುಕು–ಸಾವಿನ ಸರಪಳಿಯ ಸೊಬಗಿನ ತಾಣ ಬನಾರಸ್. ಅಲ್ಲಿನ ಘಾಟ್‌ನ ಮೆಟ್ಟಿಲ ಮೇಲೆ ಕೂತು, ಎದುರು ಹರಡಿರುವ ವಿಶಾಲವಾದ ಗಂಗೆಯ ಮೇಲಿಂದ ಹಾದುಬರುವ ತಂಗಾಳಿಗೆ ಮೈಯೊಡ್ಡಿ ಕೂತು, ತೇಲುವ ನಾವೆಗಳನ್ನು ನೋಡುತ್ತಿರುವಾಗ ಸಿಗುವ ಶಾಂತಿ–ನೆಮ್ಮದಿ ಜಗತ್ತಿನ ಬೇರೆಲ್ಲೂ ಸಿಗಲಾರದು.

ಅಂತಹ ಬನಾರಸ್‌ಗೆ ನಾನು ಬಂದಿಳಿದಾಗ ಭಾನುವಾರ ಸಂಜೆ ಐದು ಗಂಟೆ. ರೈಲ್ವೆ ಸ್ಟೇಷನ್‌ನ ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿ ಸಿಕ್ಕ ಕ್ಯಾಬ್ ಡ್ರೈವರ್ ಗುಡ್ಡು, ‘ನಾನು ಬೆಂಗಳೂರಿನವನು’ ಎಂದ ಕೂಡಲೇ ಜಿಲ್ಲಾಧಿಕಾರಿಗಳ ಗುಣಗಾನ ಶುರು ಮಾಡಿಯೇ ಬಿಟ್ಟಿದ್ದ. ‘ಸರ್ ನಮ್ಮ ಡಿಎಂ ಬಹಳ ಒಳ್ಳೆಯ ಮನುಷ್ಯ. ಖಡಕ್ ಅಧಿಕಾರಿ. ಇಂತಹ ಅಧಿಕಾರಿಯನ್ನು ನನ್ನ ಜನ್ಮದಲ್ಲಿಯೇ ನೋಡಿರಲಿಲ್ಲ’. ತಾಜ್ ಗೇಟ್‌ವೇ ತಲುಪುವ ಹಾದಿಯುದ್ದಕ್ಕೂ ಜಿಲ್ಲಾಧಿಕಾರಿ ಆನಂದ್ ಬಗ್ಗೆ ಮಾತುಗಳ ಸುರಿಮಳೆ.

ಮರುದಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಕರೆದುಕೊಂಡು ಹೋಗಲು ಬಂದಿದ್ದ ಮತ್ತು ದಿನವಿಡಿ ಜೊತೆಯಲ್ಲಿದ್ದ ಮತ್ತೊಬ್ಬ ಡ್ರೈವರ್ ಧೀರಜ್ ಕೂಡ ಜಿಲ್ಲಾಧಿಕಾರಿಗಳ ಗುಣಗಾನ ಮಾಡಿದ್ದಲ್ಲದೇ ಪೂರ್ತಿ ಇತಿಹಾಸವನ್ನೇ ನನ್ನ ಮುಂದೆ ಬಿಚ್ಚಿಟ್ಟಿದ್ದ. ಮೂಲತಃ ಬೆಂಗಳೂರಿನವರೇ ಆದ ಆನಂದ್ ಉದ್ಯಾನನಗರಿಯಲ್ಲಿಯೇ ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿದವರು.

ದೊಮ್ಮಲೂರಿನ ನಿವಾಸಿ ಆನಂದ್ 2008ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿ, 2009ರಿಂದ ಉತ್ತರ ಪ್ರದೇಶ ಕ್ಯಾಡರ್‌ನಲ್ಲಿ ಐಎಎಸ್ ಅಧಿಕಾರಿಯಾಗಿ ಕೆಲಸ ಪ್ರಾರಂಭಿಸಿದ ಬಿಸಿ ರಕ್ತದ ಉತ್ಸಾಹಿ ಯುವಕ.

ಕಳೆದ ಏಳು ವರ್ಷಗಳ ಅವಧಿಯಲ್ಲಿ ಹಲವು ಬಾರಿ ವರ್ಗಾವಣೆಯ ಕತ್ತಿಗೆ ಕತ್ತೊಡ್ಡಿರುವ ಆನಂದ್ ಈ ಹಿಂದೆ ಉನಾವ್, ಬಿಜ್ನೂರ್, ಫಿರೋಜಾಬಾದ್ ಮತ್ತು ಶಹಜಹಾನ್‌ಪುರ್ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿ ಜನಸಾಮಾನ್ಯರ ಹೃದಯ ಗೆದ್ದಿದ್ದ ‘ಬೆಂಗಳೂರ್ ಕಾ ಬಾಬು’. ಬೆಳಿಗ್ಗೆ ಐದರಿಂದ ನಡುರಾತ್ರಿ ಹನ್ನೆರಡರವರೆಗೆ ಜನಸೇವೆಯಲ್ಲಿ ತೊಡಗುವ ಆನಂದ್, ತಾನು ಕೆಲಸ ಮಾಡಿದ ಜಿಲ್ಲೆಗಳಲೆಲ್ಲಾ ತಮ್ಮದೇ ಛಾಪು ಒತ್ತಿ ಮುಂದಡಿಯಿಟ್ಟವರು.

ಫಿರೋಜಾಬಾದ್ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ. ಅಲ್ಲಿನ ಸಿರ್ಸಾಗಂಜ್ ತಾಲ್ಲೂಕಿನ ಕಮಾರ್‌ಪುರ್ ಬರುಜಾ ಎಂಬ ಹಳ್ಳಿಯಲ್ಲಿ ನಾಲ್ಕು ವರ್ಷದ ಬಾಲಕನೊಬ್ಬ ತೆರೆದ ಕೊಳವೆಬಾವಿಗೆ ಬಿದ್ದುಬಿಟ್ಟಿದ್ದ. ಸುದ್ದಿ ತಿಳಿದ ತಕ್ಷಣ, ಜಿಲ್ಲಾ ಪೊಲೀಸ್ ಅಧಿಕಾರಿಯ ಜೊತೆಗೆ ಸ್ಥಳಕ್ಕೆ ಧಾವಿಸಿದ ಆನಂದ್, ಇಡೀ ರಾತ್ರಿ ನಡೆದ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ಜವಾಬ್ದಾರಿಯನ್ನು ತಾವೇ ಹೊತ್ತು, ಸ್ಥಳದಲ್ಲಿಯೇ ಇದ್ದು ಆ ಬಾಲಕನನ್ನು ರಕ್ಷಿಸಲು ನೆರವಾಗಿದ್ದರು.

17 ಗಂಟೆಗಳ ಕಾಲ 60 ಅಡಿ ಆಳದಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಕಿಶನ್ ರಕ್ಷಿಸಿದ ಮೇಲೆ ಆನಂದ್ ಮತ್ತು ಅವರ ತಂಡ ಆ ಜಿಲ್ಲೆಯ ಜನರ ಪಾಲಿಗೆ ದೇವದೂತರಾಗಿಬಿಟ್ಟಿದ್ದರು. ಆನಂತರ ಶಹಜಹಾನ್‌ಪುರ ಜಿಲ್ಲಾಧಿಕಾರಿಯಾಗಿದ್ದ ವೇಳೆ, ಆನಂದ್ ತನ್ನ ಜನಪರ ಕೆಲಸಗಳ ಮೂಲಕ ಅಲ್ಲಿನ ಜನರ ಹೃದಯ ಗೆದ್ದಿದ್ದರು. ಅವರ ವರ್ಗವಾದಾಗ ಆ ಎರಡೂ ಜಿಲ್ಲೆಗಳ ಜನರು ಹರತಾಳ ಮಾಡಿ, ಬಂದ್ ಕೂಡ ಆಚರಿಸಿದ್ದು ಈಗ ಇತಿಹಾಸದ ಪುಟ ಸೇರಿದ ಘಟನೆಗಳು. ಅಂತಹ ಅಪ್ಪಟ ಜನಪರ ಜಿಲ್ಲಾಧಿಕಾರಿ ಈಗ ವಾರಾಣಸಿಗೆ ಒದಗಿ ಬಂದಿದ್ದರು.

‘ಬೆಳಿಗ್ಗೆ ಆರು ಗಂಟೆಗೆ ಬೈಕ್ ಏರಿ ಹೊರಡುವ ನಮ್ಮ ಡಿಎಂ ನಗರಪ್ರದಕ್ಷಿಣೆ ಮಾಡುತ್ತಾರೆ. ಅದೂ ಯಾವುದೇ ಸೆಕ್ಯೂರಿಟಿ ಇಲ್ಲದೇ! ಆ ಸಂದರ್ಭದಲ್ಲಿ ನಗರದ ಸ್ವಚ್ಛತೆ, ರಸ್ತೆಗಳ ರಿಪೇರಿ ಕಾರ್ಯಗಳ ಸ್ವತಃ ಮೇಲ್ವಿಚಾರಣೆ ವಹಿಸುತ್ತಾರೆ. ಅವರು ಇಲ್ಲಿಗೆ ಬಂದು ಎರಡು ತಿಂಗಳಾಗಿದೆ ಅಷ್ಟೆ. ಆದರೆ ಈಗಾಗಲೇ ಇಲ್ಲಿರುವ ಉಳಿದ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಹೊಸ ಡಿಎಂ ಬಿಸಿ ಮುಟ್ಟಿಸಿಯಾಗಿದೆ’.ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ರವಿ ರಂಜನ್ ಹೇಳಿದ ಮಾತುಗಳಿವು.

ಕಾರ್ಯ ನಿಮಿತ್ತ ನಾನು ಭೇಟಿಯಾದ ಬನಾರಸ್‌ನ ಎಲ್ಲ ಪತ್ರಿಕಾ ಸಂಪಾದಕರ ಬಳಿ ಕೂಡ ಡಿಎಂ ಕಾರ್ಯ ವೈಖರಿಯ ಬಗ್ಗೆ ಪ್ರಸ್ತಾಪ ಮಾಡಿದೆ. ಅಚ್ಚರಿಯ ವಿಷಯವೆಂದರೆ ಯಾವುದೇ ಒಬ್ಬ ಪತ್ರಕರ್ತ ಕೂಡ ಆನಂದ್ ಬಗ್ಗೆ, ಅವರ ಕಾರ್ಯ ವೈಖರಿಯ ಬಗ್ಗೆ ಬೆರಳು ತೋರಿಸುವ ಯತ್ನ ಮಾಡಲಿಲ್ಲ. ಉತ್ತರ ಪ್ರದೇಶದ ನಂಬರ್ ಒನ್ ದಿನಪತ್ರಿಕೆ ‘ಅಮರ್ ಉಜಾಲ’ದ ಸ್ಥಾನಿಕ ಸಂಪಾದಕ ರಾಜೇಂದ್ರ ತ್ರಿಪಾಠಿ, ‘ಒಬ್ಬ ಪತ್ರಕರ್ತನಾಗಿ ನಾನು ಇಂತಹ ಒಬ್ಬ ಡಿಎಂ ಅವರನ್ನು ಯಾವತ್ತೂ ಕಂಡಿರಲೇ ಇಲ್ಲ’ ಎಂದಾಗ ಏಕೋ ಆನಂದ್ ಅವರನ್ನು ಭೇಟಿ ಮಾಡಲೇಬೇಕು ಎಂಬ ಹಂಬಲ ಉಂಟಾಯಿತು.

ಮೊಬೈಲ್ ನಂಬರ್ ಪಡೆದು, ನೇರವಾಗಿ ‘ನಾನು ಬೆಂಗಳೂರು ಮೂಲದ ಮಾಜಿ ಪತ್ರಕರ್ತ ಮತ್ತು ಲೇಖಕ. ಒಂದೈದು ನಿಮಿಷ ನಿಮ್ಮನ್ನು ಬಂದು ಭೇಟಿಯಾಗಬಹುದೇ?’ ಎಂಬ ಸಂದೇಶ ರವಾನಿಸಿದೆ. ತಕ್ಷಣ, ‘ಖಂಡಿತ ಬಂದು ಭೇಟಿಯಾಗಿ. ಸಂಜೆ 7.30ಕ್ಕೆ ನನ್ನ ಕಚೇರಿಯಲ್ಲಿ’ ಎಂಬ ಉತ್ತರ ಬಂತು. ಡ್ರೈವರ್ ಗುಡ್ಡು ಜೊತೆ ಬನಾರಸ್‌ನ ಜಿಲ್ಲಾಧಿಕಾರಿ ಕಚೇರಿ ತಲುಪಿದಾಗ ಹನಿಹನಿ ಮಳೆ ಸಿಂಚನ.

ಕತ್ತಲು ನಿಧಾನವಾಗಿ ಆವರಿಸಿಕೊಳ್ಳುತ್ತಾ ಬೆಳಕನ್ನು ನುಂಗುತ್ತಲಿತ್ತು. ಕಚೇರಿಯ ಎದುರು ಸುಮಾರು ಇನ್ನೂರಕ್ಕಿಂತ ಹೆಚ್ಚು ಜನರು ಆನಂದ್ ಬರುವಿಗಾಗಿ ಕಾದು ಕುಳಿತಿದ್ದರು.

ಮೊದಲ ಮಹಡಿಯ ಕಚೇರಿ ತಲುಪಿ, ಪರಿಚಯ ಮಾಡಿಕೊಂಡೆ. ಅಲ್ಲಿನ ಸಿಬ್ಬಂದಿ ನನ್ನನ್ನು ಕಾಯಲು ಹೇಳಿದರು. ಏಳೂವರೆ ಆಯಿತು. ಎಂಟಾಯಿತು. ಎಂಟೂವರೆ. ಡಿಎಂ ಸಾಹೇಬರ ಸುಳಿವೇ ಇಲ್ಲ. ಎಂಟೂ ಮುಕ್ಕಾಲರ ಹೊತ್ತಿಗೆ ಅಲ್ಲಿನ ಸಿಬ್ಬಂದಿ ನನ್ನ ಬಳಿ ಬಂದು, ‘ಇನ್ನು ಡಿಎಂ ಕಚೇರಿಗೆ ಬರುವುದಿಲ್ಲ.

ನೀವು ಅವರ ಮನೆ ಬಳಿ ಹೋಗಿ ಅಲ್ಲಿಯೇ ಅವರನ್ನು ಭೇಟಿ ಮಾಡಿ’ ಎಂದರು. ‘ಡಿಎಂಗೆ ತಿಳಿಸದೇ ನೇರವಾಗಿ ಅವರ ಮನೆಗೆ ನುಗ್ಗುವುದು ಹೇಗೆ?’ ಎಂಬ ಪ್ರಶ್ನೆಗೆ ಅವರು, ‘ನಮ್ಮ ಡಿಎಂ ಮನೆಗೆ ಯಾರು ಎಷ್ಟು ಹೊತ್ತಿಗೆ ಬೇಕಾದರೂ ಹೋಗಿ ಕದ ತಟ್ಟಬಹುದು. ನೀವು ಅಲ್ಲಿಗೆ ಈಗಲೇ ಹೋಗಿ’ ಎಂದು ಕ್ಯಾಬ್ ಹತ್ತಿರ ಬಂದು ಗುಡ್ಡುವಿಗೆ ದಾರಿ ಹೇಳಿದರು.

ಕಚೇರಿಯಿಂದ ಸುಮಾರು ಐದು ಕಿಲೋ ಮೀಟರ್ ದೂರದ ಜಿಲ್ಲಾಧಿಕಾರಿ ನಿವಾಸ ತಲುಪಿದಾಗ ನನ್ನ ಕಣ್ಣನ್ನು ನಾನೇ ನಂಬಲಾಗಲಿಲ್ಲ. ರಾತ್ರಿ ಒಂಬತ್ತರ ಸಮಯ. ಮನೆಯ ಹೊರಗೆ ಕನಿಷ್ಠ ಅರವತ್ತು–ಎಪ್ಪತ್ತು  ಮಂದಿ ಅಧಿಕಾರಿಗಳು–ಸಿಬ್ಬಂದಿಗಳ ಸಂತೆ. ಗೃಹ ಕಚೇರಿಯೊಳಗೆ ಸುಮಾರು ಇಪ್ಪತ್ತು ಅಧಿಕಾರಿಗಳ ಸಾಲು.

ಒಳಗೆ ಒಂದು ತಂಡದೊಂದಿಗೆ ಜಿಲ್ಲಾಧಿಕಾರಿಗಳ ಸಭೆ. ಆಪ್ತ ಸಹಾಯಕರ ಮೂಲಕ ಚೀಟಿ ಕಳುಹಿಸಿದ ಐದು ನಿಮಿಷಗಳೊಳಗೆ ಒಳ ಬರುವಂತೆ ಕರೆ ಬಂತು. ಒಬ್ಬ ಪತ್ರಕರ್ತನಕಾಗಿ ಎರಡು ದಶಕಗಳ ಅವಧಿಯ ನಡುವೆ ಕನಿಷ್ಠ 300 (ವಿವಿಧ ಹಂತದಲ್ಲಿ) ಐಎಎಸ್ ಅಧಿಕಾರಿಗಳನ್ನು ಕಂಡಿದ್ದ ನನಗೆ ಬೇರೆಲ್ಲೂ ಇಂತಹ ಅನುಭವ ಆಗಿರಲಿಲ್ಲ. ರಾತ್ರಿ ಒಂಬತ್ತು ಗಂಟೆಯವರೆಗೆ ಗೃಹ ಕಚೇರಿಯಲ್ಲಿ ಕೂತು ಜನಸೇವೆ ಮಾಡುವ ಜನಸೇವಕನನ್ನು ಕಂಡಿದ್ದು ಇದೇ ಮೊದಲ ಬಾರಿ.

ಸಂಗ್ರಹಿಸಿದ ಮಾಹಿತಿಯ ಪ್ರಕಾರ ಇದು ಆನಂದ್ ಅವರ ದಿನನಿತ್ಯದ ವೇಳಾಪಟ್ಟಿ. ಬೆಳಿಗ್ಗೆ ಆರರಿಂದ ಒಂಬತ್ತು ನಗರ ಪ್ರದಕ್ಷಿಣೆ. ಹತ್ತರಿಂದ ಸಂಜೆ ಎಂಟರವರೆಗೆ ಕಚೇರಿಯ ಕೆಲಸ. ನಂತರ ಮಧ್ಯರಾತ್ರಿಯವರೆಗೆ ಗೃಹಕಚೇರಿಯಲ್ಲಿ ಜನತಾ ಜನಾರ್ದನರ ಸೇವೆ!

ನಾನು ಎದುರು ಇರುವಂತೆಯೇ ಮೂರು ಕೋಟಿ ರೂಪಾಯಿಯ ರಸ್ತೆ ಕಾಮಗಾರಿಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆ ನಡೆಸಿದ ಆನಂದ್, ‘ಯಾವುದೇ ಕಾರಣಕ್ಕೆ ಕಳಪೆ ಕಾಮಗಾರಿ ಆದರೆ ಹಣ ಬಿಡುಗಡೆ ಮಾಡುವುದಿಲ್ಲ. ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳಿ. ಪ್ರತಿ ಸಂದರ್ಭದಲ್ಲೂ ನಾನೇ ಬಂದು ಕಾಮಗಾರಿಯ ಪರಿಶೀಲನೆ ಮಾಡುತ್ತೇನೆ’ ಎಂದು ಖಡಾಖಂಡಿತ ಎಚ್ಚರಿಕೆ ನೀಡಿ ಕಳುಹಿಸಿದರು.

ಉಭಯಕುಶಲೋಪರಿಯ ನಂತರ, ನಾನು ಮಾಡುತ್ತಿರುವುದು ಸರ್ಕಾರಿ ಕೆಲಸ. ಈ ಕೆಲಸ ಮಾಡಲೆಂದೇ ನನಗೆ ಸರ್ಕಾರ ಅಧಿಕಾರ ಮತ್ತು ಸಂಬಳ ಎರಡೂ ನೀಡುತ್ತಿದೆ. ಅದರಲ್ಲಿ ಹೆಚ್ಚಿನದೇನೂ ಇಲ್ಲ ಎಂದು ಹೇಳಿದರು. ಮಾತು ಖಡಕ್. ಆದರೆ ನಡೆ–ನುಡಿ ಸರಳ!

ಕೆಲಸ ಮತ್ತು ಕೆಲಸಕ್ಕೆ ಸಂಬಂಧಿಸಿದ ಮಾತುಗಳನ್ನು ಬಿಟ್ಟು ಬೇರೇನೇ ವಿಷಯಕ್ಕೂ ನಗು ತುಂಬಿದ ಮೌನದ ಉತ್ತರ ನೀಡಿದ ಆನಂದ್ ‘ಜನ ಪ್ರೀತಿಸುತ್ತಿದ್ದಾರೆ, ಗೌರವಿಸುತ್ತಿದ್ದಾರೆ, ನಂಬಿದ್ದಾರೆ ಮತ್ತು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಎಂದರೆ ನಮ್ಮಂತಹ ಅಧಿಕಾರಿಯ ಜವಾಬ್ದಾರಿ ಹೆಚ್ಚಾಗುತ್ತಾ ಸಾಗುತ್ತದೆ.

ಇಲ್ಲಿ ನನ್ನ ಕೆಲಸ ಮಾತನಾಡಬೇಕೆ ಹೊರತು ನಾನು ಮಾತನಾಡಬಾರದು. ಬನಾರಸ್‌ಗೆ ಅದರದ್ದೇ ಆದ ಮಹತ್ವವಿದೆ. ಈ ನಗರವನ್ನು ಅತ್ಯಂತ ಸ್ವಚ್ಛ, ಪ್ರವಾಸಿಗರ ಪಾಲಿಗೆ ಸ್ನೇಹ ಪೂರಕವಾದ ಪ್ರವಾಸಿ ಕೇಂದ್ರವಾಗಿಸಬೇಕು. ಅದಕ್ಕೆ ಸರ್ಕಾರದ ಜೊತೆ ಸ್ಥಳೀಯರು ಕೂಡ ಕೈಜೋಡಿಸಬೇಕು. ಒಬ್ಬ ಸರ್ಕಾರಿ ಅಧಿಕಾರಿ ತನ್ನ ಕೆಲಸವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡಿದರೆ ಜನ ಅವರನ್ನು ಬೆಂಬಲಿಸುತ್ತಾರೆ ಎನ್ನುವ ದೃಢ ನಂಬಿಕೆ ನನ್ನದು’ ಎಂದು ಹೇಳಿ ಲೋಕಾಭಿರಾಮಕ್ಕೆ ಇಳಿದರು.

ಹೊರಗಿನ ಕೊಠಡಿಯಲ್ಲಿದ್ದ ಅಧಿಕಾರಿಗಳ ಸಾಲು ನೆನಪಿಗೆ ಬಂದ ತಕ್ಷಣ, ‘ತುಂಬಾ ಜನ ನಿಮ್ಮನ್ನು ಕಾಯುತ್ತಿದ್ದಾರೆ. ನಿಮ್ಮ ಅಮೂಲ್ಯ ಸಮಯ ಹಾಳು ಮಾಡಲು ನನಗೆ ಇಷ್ಟವಿಲ್ಲ. ಒಮ್ಮೆ ನಿಮ್ಮನ್ನು ಭೇಟಿಯಾಗಬೇಕು, ಮಾತನಾಡಿಸಬೇಕು ಎಂದುಕೊಂಡು ಬಂದೆ. ಇನ್ನು ಹೊರಡುತ್ತೇನೆ’ ಎಂದು ಅವರಿಗೆ ವಿದಾಯ ಹೇಳಿ ಹೊರಬಂದೆ.
ಜಿಲ್ಲಾಧಿಕಾರಿಗಳ ನಿವಾಸದ ಆವರಣದಿಂದ ಹೊರಬರುತ್ತಿದ್ದ ವೇಳೆ, ನೂರಾರು ಜನರ ಗುಂಪು ಕಾಪೌಂಡ್ ಒಳಗೆ ಬರುತ್ತಿರುವುದು ಕಣ್ಣಿಗೆ ಬಿತ್ತು. ಗುಡ್ಡು ಬಳಿ, ‘ಇಷ್ಟು ಹೊತ್ತಿನಲ್ಲಿ ಇವರು ಯಾರು?’ ಎಂದು ಕೇಳಿದೆ.

‘ಅವರು, ಆಗ ನಾವು ಕಚೇರಿಯ ಬಳಿಯಿದ್ದಾಗ ಅಲ್ಲಿದ್ದರಲ್ಲ, ಅದೇ ಗುಂಪು ಇದು. ಅಕ್ಕಪಕ್ಕದ ಯಾವುದೋ ಹಳ್ಳಿಯಿಂದ ಬಂದಿರಬೇಕು. ಡಿಎಂ ಬೆಳಿಗ್ಗೆಯಿಂದ ಮಿನಿಸ್ಟರ್ ಜೊತೆ ಇದ್ದರಲ್ಲ. ಹೆಚ್ಚಿನ ಪಕ್ಷ ಕಚೇರಿಗೆ ಅವರು ಪಾಪಸು ಹೋಗಿಲ್ಲ. ಅದಕ್ಕೆ ಈ ಜನರು ಕಚೇರಿಯಿಂದ ಇಲ್ಲಿಗೆ ನಡೆದುಕೊಂಡು ಬಂದಿದ್ದಾರೆ. ರಾತ್ರಿ ಹತ್ತು–ಹನ್ನೊಂದು ಆಗಿದ್ದರೂ ಮನೆ ಬಾಗಿಲಿಗೆ ಬರುವ ಇಂತಹ ಜನಸಾಮಾನ್ಯರನ್ನು ಡಿಎಂ ಮಾತನಾಡಿಸಿಯೇ ಕಳುಹಿಸುತ್ತಾರೆ.

ಆಗ ಕೂಡ ಜನರ ಸಮಸ್ಯೆಗಳನ್ನು ಆಲಿಸಿ, ಅದು ನಿಜ ಎನಿಸಿದರೆ ತಕ್ಷಣ ಸಂಬಂಧಿಸಿದ ಅಧಿಕಾರಿಗಳನ್ನು ಫೋನ್‌ನಲ್ಲಿ ಸಂಪರ್ಕಿಸಿ, ಅವರಿಗೆ ಸೂಕ್ತ ಸಲಹೆ ನೀಡಿ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಆನಂದ್ ಬಾಬು ನಿಸ್ಸೀಮರು’ ಎಂದರು. ಮಾತು ಕಳೆದುಕೊಂಡೆ. ಈ ಘಟನೆ ನಡೆದಿದ್ದು ಮಂಗಳವಾರ ರಾತ್ರಿ.

ಆ ನೆನಪಿನಲ್ಲಿಯೇ ಬುಧವಾರ ಮಧ್ಯಾಹ್ನ ಪಾಂಡೇಜಿ ಕಾರು ಹತ್ತಿ ಕುಳಿತಿದ್ದು. ಆದರೂ, ಡಿಎಂ ಪರಿಚಯ ಇಲ್ಲದವನಂತೆ ನಾನು ‘ಪಾಂಡೇಜಿ, ಏನು ಹೇಳ್ತಾ ಇದೀರಾ? ನಿಮ್ಮ ಡಿಎಂ ಸಾಹೇಬರು ಅಷ್ಟು ದೊಡ್ಡ ಮನುಷ್ಯರೇ? ಅವರೂ ಉಳಿದ ಸರ್ಕಾರಿ ಬಾಬುಗಳ ತರಹದವರೇ ಅಲ್ಲವೇ?’ ಎಂದು ಮರು ಪ್ರಶ್ನೆ ಹಾಕಿದೆ.

‘ಸರ್ ಹಾಗೇ ಹೇಳಬೇಡಿ. ಈ ಮನುಷ್ಯ ನಿಜಕ್ಕೂ ದೇವರಂತಹವರು. ಇಡೀ ಜಿಲ್ಲೆಯ ಜನ ಅವರ ಮೇಲೆ ಭರವಸೆ ಇಟ್ಟುಕೊಂಡು ಬದುಕಲಾರಂಭಿಸಿದ್ದಾರೆ. ನಮ್ಮ ರಾಜ್ಯ ಎಂತಹದ್ದು ಅಂದರೆ, ಸೈಕಲ್ ಚಿಹ್ನೆಯ ಎಸ್‌ಪಿ ಅಧಿಕಾರದಲ್ಲಿದ್ದರೆ ಅವರ ಗೂಂಡಾಗಿರಿಗೆ ಜನ ತತ್ತರಿಸಿ ಹೋಗುತ್ತಾರೆ. ಅದೇ ಆನೆ ಚಿನ್ಹೆಯ ಬಿಎಸ್‌ಪಿ ಅಧಿಕಾರಕ್ಕೆ ಬಂದರೆ ಅವರ ಭ್ರಷ್ಟಾಚಾರಕ್ಕೆ ಜನ ಕುಸಿದು ಹೋಗುತ್ತಾರೆ.

ಇನ್ನು ಯಾರೇ ಅಧಿಕಾರದಲ್ಲಿ ಇದ್ದರೂ, ನಮ್ಮ ಪೊಲೀಸ್ ಠಾಣೆಗಳಲ್ಲಿರುವ ಅಧಿಕಾರಿಗಳು ರಾಜ್ಯಭಾರ ಮಾಡುತ್ತಾ ದಂಧೆ ನಡೆಸುತ್ತಾರೆ. ಉತ್ತರ ಪ್ರದೇಶದ ಇಂತಹ ರಾಜಕೀಯ ವಾತಾವರಣದಲ್ಲಿ ನಮಗೆ ಈ ಪುಣ್ಯಾತ್ಮ ಅಧಿಕಾರಿ ಸಿಕ್ಕಿರುವುದು ಅದೃಷ್ಟ. ನೋಡ್ತಾ ಇರಿ. ಇದೇ ಡಿಎಂ ಸಾಹೇಬರು ಒಂದು ವರ್ಷ ಇಲ್ಲಿದ್ದರೆ ಬನಾರಸ್ ಬಣ್ಣವೇ ಬದಲಾಗಿ ಹೋಗುತ್ತದೆ’. ಪಾಂಡೇಜಿ ಮಾತಿನಲ್ಲಿ ಪ್ರೀತಿ, ವಿಶ್ವಾಸ, ಭರವಸೆ ತುಂಬಿ ತುಳುಕುತ್ತಿದ್ದವು.

ವಿಮಾನ ನಿಲ್ದಾಣ ತಲುಪಿದಾಗ ಎದುರಿಗೆ ‘ಲಾಲ್ ಬಹಾದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ ಎಂಬ ದೊಡ್ಡ ಫಲಕ ಫಳಫಳನೇ ಹೊಳೆಯುತ್ತಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT