ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ, ಕರೆಯುತ್ತಿದೆ ಔಷಧಶಾಸ್ತ್ರ

Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ಷಧ ವಿಜ್ಞಾನ ಶಾಸ್ತ್ರ (ಫಾರ್ಮಸಿ) ವಿದೇಶಗಳ ವೈದ್ಯಕೀಯ ರಂಗದಲ್ಲಿ ತುಂಬಾ ಎತ್ತರಕ್ಕೆ ಬೆಳೆದಿದೆ. ಆದರೆ ನಮ್ಮಲ್ಲಿ ವೈದ್ಯಕೀಯ ರಂಗ  ಎಷ್ಟೇ ಜಾಗೃತವಾಗಿದ್ದರೂ, ನೂತನ ಸಂಶೋಧನೆಗಳ ಮೂಲಕ ಔಷಧಿಗಳನ್ನು ಕಂಡುಹಿಡಿದು ಬಳಸುತ್ತಿದ್ದರೂ ಅವುಗಳ ಬಗ್ಗೆ ನಮಗೆ ಸರಿಯಾಗಿ ಮಾಹಿತಿ ದೊರೆಯುತ್ತಿಲ್ಲ.

ಮಾನವನ ಆರೋಗ್ಯ ಕಾಪಾಡುವಲ್ಲಿ ಹಾಗೂ ಜೀವ ಉಳಿಸುವ ಕಾರ್ಯದಲ್ಲಿ ಔಷಧಿಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಈ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳನ್ನು ಕೈಗೊಂಡು ಔಷಧಿಗಳನ್ನು ಕಂಡುಹಿಡಿದು, ಅವುಗಳ ಬಗ್ಗೆ ವೈದ್ಯರಿಗೆ ಹಾಗೂ ಉಪಯೋಗಿಸುವ ಜನರಿಗೆ ಸರಿಯಾದ ಮಾಹಿತಿ ನೀಡಿ, ಅವರ ಆರೋಗ್ಯ ಕಾಪಾಡುವಲ್ಲಿ ಔಷಧ ವಿಜ್ಞಾನ ಶಾಸ್ತ್ರದ ಕೋರ್ಸುಗಳು ತುಂಬಾ ಉಪಯುಕ್ತವಾಗಿವೆ.

ಕೋರ್ಸ್ ಪ್ರವೇಶಕ್ಕೆ ಅರ್ಹತೆ 
1. ಫಾರ್ಮ ಡಿ ರೆಗ್ಯುಲರ್ (ಡಾಕ್ಟರ್ ಆಫ್ ಫಾರ್ಮಸಿ): ಆರು ವರ್ಷಗಳ ಈ ಕೋರ್ಸ್ ಸ್ನಾತಕೋತ್ತರ ಪದವಿಗೆ ಸಮನಾದದ್ದು. ಇದರಲ್ಲಿ ಐದನೇ ವರ್ಷದವರೆಗೆ ಪ್ರತಿ ವರ್ಷಕ್ಕೊಮ್ಮೆ ಅಂತಿಮ ಪರೀಕ್ಷೆ ಹಾಗೂ ಆರನೇ ವರ್ಷ ಪೂರ್ತಿ ತರಬೇತಿ (ಇಂಟರ್ನ್ ಶಿಪ್) ಇರುತ್ತದೆ. ಈ ಕೋರ್ಸ್‌ಗೆ ಪ್ರವೇಶ ಪಡೆಯಲು ಪ್ರತಿ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕೇವಲ 30 ಸೀಟುಗಳಿಗೆ ಅನುಮತಿ ಇರುತ್ತದೆ.

ಹೀಗಿವೆ ಕೋರ್ಸ್‌ಗಳು
ಭಾರತೀಯ ಔಷಧ ವಿಜ್ಞಾನ ಪರಿಷತ್ತಿನ ಅಡಿ ಬರುವ ಔಷಧ ವಿಜ್ಞಾನ ಶಾಸ್ತ್ರದ ಕೋರ್ಸ್‌ಗಳೆಂದರೆ:
1. ಫಾರ್ಮ ಡಿ ರೆಗ್ಯುಲರ್ (ಡಾಕ್ಟರ್ ಆಫ್ ಫಾರ್ಮಸಿ) ಆರು ವರ್ಷದ ಕೋರ್ಸ್.
2.  ಡಿ. ಫಾರ್ಮ (ಡಿಪ್ಲೊಮಾ ಇನ್ ಫಾರ್ಮಸಿ) ಎರಡು ವರ್ಷದ ಕೋರ್ಸ್.
3. ಬಿ. ಫಾರ್ಮ (ಬ್ಯಾಚ್ಯುಲರ್ ಆಫ್ ಫಾರ್ಮಸಿ) ನಾಲ್ಕು ವರ್ಷದ ಕೋರ್ಸ್.
4. ಎಂ. ಫಾರ್ಮ (ಮಾಸ್ಟರ್ ಆಫ್ ಫಾರ್ಮಸಿ) ಎರಡು ವರ್ಷದ ಕೋರ್ಸ್.

ಪ್ರವೇಶ ಪಡೆಯ ಬಯಸುವವರು ಪಿಯುಸಿ ವಿಜ್ಞಾನ (ಪಿ.ಸಿ.ಎಂ.ಬಿ) ವಿಭಾಗದಲ್ಲಿ ಕನಿಷ್ಠ ಶೇ 35 ಅಂಕಗಳೊಂದಿಗೆ ತೇರ್ಗಡೆ ಆಗಿರಬೇಕು.  ಎರಡು ವರ್ಷದ ವೃತ್ತಿಪರ ಔಷಧ ಶಾಸ್ತ್ರ (ಡಿಪ್ಲೊಮಾ ಇನ್ ಫಾರ್ಮಸಿ) ವಿಭಾಗದಲ್ಲಿ ಕನಿಷ್ಠ ಶೇ 50 ಅಂಕಗಳೊಂದಿಗೆ ತೇರ್ಗಡೆ ಆಗಿರಬೇಕು. ಇಂಟರ್ನ್‌ಶಿಪ್ ಮಾಡುವಾಗ ಮಾಸಿಕ ಸ್ಟೈಫಂಡ್ ದೊರೆಯುತ್ತದೆ.

2. ಡಿ. ಫಾರ್ಮ (ಡಿಪ್ಲೊಮಾ ಇನ್ ಫಾರ್ಮಸಿ): ಎರಡು ವರ್ಷದ ಈ ಕೋರ್ಸ್‌ನಲ್ಲಿ ಪ್ರತಿ ವರ್ಷ ಅಂತಿಮ ಪರೀಕ್ಷೆ ಇರುತ್ತದೆ. ಬಳಿಕ ಮೂರು ತಿಂಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಔಷಧ ವಿಭಾಗದಲ್ಲಿ ತರಬೇತಿ ಪಡೆಯಬೇಕು. ಪ್ರತಿ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕೇವಲ 40-60 ಸೀಟುಗಳಿಗೆ ಅನುಮತಿ ಇರುತ್ತದೆ. ಆಕಾಂಕ್ಷಿಗಳು ಪಿಯುಸಿ ವಿಜ್ಞಾನ (ಪಿ.ಸಿ.ಎಂ.ಬಿ) ವಿಭಾಗದಲ್ಲಿ ಕನಿಷ್ಠ ಶೇ 35 ಅಂಕಗಳೊಂದಿಗೆ ತೇರ್ಗಡೆ ಆಗಿರಬೇಕು.

3. ಬಿ. ಫಾರ್ಮ (ಬ್ಯಾಚ್ಯುಲರ್ ಆಫ್ ಫಾರ್ಮಸಿ): ನಾಲ್ಕು ವರ್ಷಗಳ ಈ ಕೋರ್ಸ್‌ನಲ್ಲಿ ಪ್ರತಿ ವರ್ಷ ಅಂತಿಮ ಪರೀಕ್ಷೆ ಇರುತ್ತದೆ. ಕೊನೆಯಲ್ಲಿ ಒಂದು ತಿಂಗಳು ಆಸ್ಪತ್ರೆ ಅಥವಾ ಔಷಧ ತಯಾರಿಕಾ ಕಂಪೆನಿಗಳಲ್ಲಿ ತರಬೇತಿ ಇರುತ್ತದೆ. ಎಲ್ಲೆಡೆ 40-60 ಸೀಟುಗಳಿಗೆ ಮಾತ್ರ ಅನುಮತಿ ಲಭ್ಯ.

ಪ್ರವೇಶ ಪಡೆಯಲು ಪಿಯುಸಿ ವಿಜ್ಞಾನ (ಪಿ.ಸಿ.ಎಂ.ಬಿ) ವಿಭಾಗದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಕನಿಷ್ಠ ಶೇ 50 ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಶೇ 40 ಅಂಕಗಳೊಂದಿಗೆ ತೇರ್ಗಡೆ ಆಗಿರಬೇಕು. ಎರಡು ವರ್ಷದ ವೃತ್ತಿಪರ ಔಷಧ ಶಾಸ್ತ್ರದಲ್ಲಿ (ಡಿಪ್ಲೊಮಾ ಇನ್ ಫಾರ್ಮಸಿ) ಕನಿಷ್ಠ ಶೇ 50 ಅಂಕಗಳೊಂದಿಗೆ ತೇರ್ಗಡೆ ಆಗಿರಬೇಕು.

ಸೂಚನೆ: ಡಿ ಫಾರ್ಮದಿಂದ  ಬಿ ಫಾರ್ಮ ಕೋರ್ಸಿಗೆ ಬರುವ ವಿದ್ಯಾರ್ಥಿಗಳು ನೇರವಾಗಿ ಎರಡನೇ ವರ್ಷಕ್ಕೆ ಪ್ರವೇಶ ಪಡೆಯಬಹುದು.

4. ಎಂ. ಫಾರ್ಮ (ಮಾಸ್ಟರ್ ಆಫ್ ಫಾರ್ಮಸಿ): ಇದು ಎರಡು ವರ್ಷಗಳ ಕೋರ್ಸ್. ಮೊದಲನೇ ವರ್ಷ ಅಂತಿಮ ಪರೀಕ್ಷೆ ಇರುತ್ತದೆ. ಎರಡನೇ ವರ್ಷ (ಡೆಸರ್ಟೇಷನ್ ಅಥವಾ ಥೀಸೀಸ್ ವರ್ಕ್ ವಿತ್ ವೈವ) ಸಂಶೋಧನಾ ಪ್ರಬಂಧ ಮಂಡಿಸಬೇಕಾಗುತ್ತದೆ.

ಇದರಲ್ಲಿ ಪ್ರತ್ಯೇಕವಾದ ವಿಷಯಗಳ ವಿಭಾಗಗಳಿದ್ದು, ಇವು ಶಿಕ್ಷಣ ಮತ್ತು ವೃತ್ತಿಯಲ್ಲಿ ತಮ್ಮದೇ ಆದ ಗೌರವ ಹಾಗೂ ಬೆಳವಣಿಗೆಯಲ್ಲಿ ವಿಶೇಷವಾದ ಸ್ಥಾನ ಹೊಂದಿವೆ. ಪ್ರವೇಶ ಪಡೆಯಲು ಔಷಧ ಶಾಸ್ತ್ರದ ಪದವಿ (ಬಿ ಫಾರ್ಮ) ವಿಭಾಗದಲ್ಲಿ ಕನಿಷ್ಠ ಶೇ 50 ಅಂಕಗಳೊಂದಿಗೆ ತೇರ್ಗಡೆ ಆಗಿರಬೇಕು.

ನಂತರ ಏನು ಮಾಡಬಹುದು?
* ಡಿ. ಫಾರ್ಮ ಕೋರ್ಸ್ ಮುಗಿದ ನಂತರ ನೀವು ಕೇಂದ್ರ (ರೈಲ್ವೆ, ಸೇವಾದಳ, ವಾಯುಪಡೆ ಇತರೆ) ಮತ್ತು ರಾಜ್ಯ ಸರ್ಕಾರಿ ನೌಕರರಾಗಿ,  ಖಾಸಗಿ ಆಸ್ಪತ್ರೆಗಳಲ್ಲಿ ಫಾರ್ಮಸಿಸ್ಟ್‌ಗಳಾಗಿ ಕೆಲಸ ಮಾಡಬಹುದು. ಔಷಧ ತಯಾರಿಕಾ ಕಂಪೆನಿಯಲ್ಲಿ ಕೆಲಸ ಮಾಡಬಹುದು ಅಥವಾ ಸ್ವಂತ ಔಷಧ ಅಂಗಡಿ ತೆರೆಯಬಹುದು.
* ಹೆಚ್ಚಿನ ವಿದ್ಯಾಭ್ಯಾಸ ಮಾಡಬಹುದು (ಬಿ ಫಾರ್ಮ ಅಥವಾ ಫಾರ್ಮ ಡಿ) ವಿದ್ಯಾಭ್ಯಾಸ, ನೌಕರಿಗಾಗಿ ವಿದೇಶಕ್ಕೆ ಹೋಗಬಹುದು.
* ವೈದ್ಯಕೀಯ ((Medical/ Clinical Research) ಮತ್ತು ಔಷಧ ಸಂಶೋಧನೆಯ  (Drug/ Pharmaceutical Research) ಘಟಕಕ್ಕೆ ಸೇರಬಹುದು.  
* ಫಾರ್ಮ ಡಿ ನಂತರ ಔಷಧ ವಿಜ್ಞಾನ ಮಹಾವಿದ್ಯಾಲಯಗಳು, ಆಸ್ಪತ್ರೆಗಳಲ್ಲಿ ಫಾರ್ಮ ಡಿ ಕೋರ್ಸಿಗೆ ಬೋಧಿಸಲು ಉಪನ್ಯಾಸಕರಾಗಿ ಸೇರಬಹುದು.
* ಆಸ್ಪತ್ರೆಗಳಲ್ಲಿ ಚಿಕಿತ್ಸಾ ಔಷಧ ತಜ್ಞರಾಗಿ ((Clinical Pharmacist) ಕೆಲಸ ಮಾಡಬಹುದು.
* ಸ್ವಂತ ಔಷಧ ಮಾರಾಟ ಮಳಿಗೆ ತೆರೆದು ಇದರೊಂದಿಗೆ ಫಾರ್ಮಸಿ ಸಮಾಲೋಚನಾ ಕೇಂದ್ರ (Pharmacy Consultation Center)ತೆರೆಯಬಹುದು. ಅಲ್ಲಿ ರೋಗಿಗಳಿಗೆ ಆರೋಗ್ಯ ಕಾಪಾಡಿಕೊಳ್ಳುವುದು, ಔಷಧಗಳ ಉಪಯೋಗ ಹಾಗೂ ಔಷಧಿಗಳ ಬಗ್ಗೆ ಮಾಹಿತಿ ಕೊಡಬಹುದು.
* ದೇಶ ವಿದೇಶಗಳ ಔಷಧ ತಯಾರಿಕಾ ಕಂಪೆನಿಗಳ ಪ್ರೀ-ಕ್ಲಿನಿಕಲ್ ಮತ್ತು ಕ್ಲಿನಿಕಲ್ ಟ್ರಯಲ್ ಕೇಂದ್ರಗಳಲ್ಲಿ ಹಾಗೂ ಅಧ್ಯಯನ ಕೇಂದ್ರಗಳ ಮುಖ್ಯ ಸ್ಥಾನಗಳಲ್ಲಿ ಕೆಲಸ ಮಾಡಬಹುದು. ತಯಾರಿಕೆ ಹಾಗೂ ಹಂಚಿಕೆ ವಿಭಾಗಗಳ ಮುಖ್ಯ ಸ್ಥಾನಗಳಲ್ಲೂ ಕೆಲಸ ಮಾಡಬಹುದು.
* ಔಷಧ ತಯಾರಿಕಾ ಕಂಪೆನಿಗಳ ಫಾರ್ಮಕೋ ವಿಜಿಲೆನ್ಸ್ ವಿಭಾಗದಲ್ಲಿ ಕೆಲಸ ಮಾಡಬಹುದು. 
* ಬಿ ಫಾರ್ಮ ನಂತರ ಸರ್ಕಾರಿ ಹಾಗೂ ಖಾಸಗಿ ಔಷಧ ವಿಜ್ಞಾನ ಮಹಾವಿದ್ಯಾಲಯಗಳಲ್ಲಿ ಡಿ ಫಾರ್ಮ ಕೋರ್ಸ್‌ಗೆ ಉಪನ್ಯಾಸಕರಾಗಿ ಸೇರಬಹುದು.
* ಎಂ ಫಾರ್ಮ ನಂತರ ಸರ್ಕಾರಿ ಹಾಗೂ ಖಾಸಗಿ ಔಷಧ ವಿಜ್ಞಾನ ಮಹಾವಿದ್ಯಾಲಯಗಳಲ್ಲಿ ಡಿ ಫಾರ್ಮ, ಬಿ ಹಾಗೂ ಎಂ ಫಾರ್ಮ ಕೋರ್ಸ್‌ಗೆ ಉಪನ್ಯಾಸಕರಾಗಬಹುದು. ಇದರ ಜೊತೆಗೆ ಸಂಶೋಧನೆ ಮತ್ತು ಪಿಎಚ್.ಡಿ. ಕೂಡ ಮಾಡಬಹುದು.
* ಐ.ಎ.ಎಸ್ ಹಾಗೂ ಐ.ಪಿ.ಎಸ್., ಐ.ಆರ್.ಎಸ್.ನಂತಹ ಉನ್ನತ ಸ್ಥಾನಗಳಿಗೆ ಪರೀಕ್ಷೆ ತೆಗೆದುಕೊಳ್ಳಬಹುದು.
* ರಾಜ್ಯ ಸರ್ಕಾರದ ಅಡಿ ಬರುವ ಔಷಧ ಪರಿವೀಕ್ಷಣಾಧಿಕಾರಿ ((Drug Inspector) ಹಾಗೂ ಔಷಧ ನಿಯಂತ್ರಣಾಧಿಕಾರಿ  (Drug Control)ತ್ತು ಔಷಧ ವಿಶ್ಲೇಷಣಾಧಿಕಾರಿ ((Drug Analysis) ವಿಭಾಗಕ್ಕೆ ಸೇರಬಹುದು.
* ಕೇಂದ್ರ ಸರ್ಕಾರದ ಅಡಿ ಬರುವ ಔಷಧ ನಿಯಂತ್ರಣ ಮತ್ತು ಔಷಧ ವಿಶ್ಲೇಷಣ ವಿಭಾಗದಲ್ಲಿ ಸೇರಬಹುದು. 
* ಕೇಂದ್ರೀಯ ಔಷಧ ಪ್ರಯೋಗಾಲಯಕ್ಕೆ  (Central Drug Laboratory Department) ಸೇರಬಹುದು.
* ಕೇಂದ್ರ, ರಾಜ್ಯ ಸರ್ಕಾರದ ಅಡಿ ಬರುವ ಡ್ರಗ್ ಇನ್‌ಫರ್ಮೇಷನ್ ವಿಭಾಗದಲ್ಲಿ ಕೆಲಸ ಮಾಡಬಹುದು.
* ಸ್ವಂತ ಔಷಧ ತಯಾರಿಕೆ ಕಂಪೆನಿಗಳನ್ನು ತೆರೆಯಬಹುದು ಹಾಗೂ ಸಂಶೋಧನೆ ಕೈಗೊಳ್ಳಬಹುದು.

ಔಷಧಿಗಳಿಲ್ಲದೆ ಯಾವ ವೈದ್ಯರೂ ರೋಗಿಯನ್ನು ಗುಣಪಡಿಸಲು ಸಾಧ್ಯವಿಲ್ಲ ಹಾಗೂ ಔಷಧ ತಜ್ಞರಿಲ್ಲದೆ ಯಾವ ಔಷಧ ಕಂಪೆನಿಗಳೂ ಏನೂ ಮಾಡಲಾಗುವುದಿಲ್ಲ. ಆದ್ದರಿಂದ ಔಷಧಗಳಿಗೆ ಸಂಬಂಧಪಟ್ಟ ಎಲ್ಲ ಕಾರ್ಯ ಚಟುವಟಿಕೆಗಳೂ ನಿಂತಿರುವುದು ಔಷಧ ತಜ್ಞರಿಂದ ಎಂಬುದನ್ನು ಮರೆಯಬಾರದು.

ಈ ಮೇಲಿನ ಎಲ್ಲವೂ ನಿಂತಿರುವುದು ಔಷಧ ಶಾಸ್ತ್ರದಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳು ಔಷಧ ವಿಜ್ಞಾನದಲ್ಲಿರುವ ವಿಷಯಗಳನ್ನು ತಿಳಿದುಕೊಳ್ಳುವುದರಿಂದ. ಆದ್ದರಿಂದ ತಡಮಾಡದೆ ಔಷಧ ಶಾಸ್ತ್ರ ವಿಭಾಗಕ್ಕೆ ಪ್ರವೇಶ ಪಡೆದು ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ.  
-ಕರಿಬಸಪ್ಪ ಮ.ವೀ. ಗೋಣಿಮಠದ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT