ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ ನುಡಿಹಬ್ಬಕ್ಕೆ...

Last Updated 2 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕನ್ನಡದ ನುಡಿಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ನಸುಕು ಹರಿದಾಕ್ಷಣ 77ನೇ ಸಾಹಿತ್ಯ ಜಾತ್ರೆಯ ಸೊಬಗು ಉದ್ಯಾನ ನಗರಿಯನ್ನು ಆವರಿಸಲಿದೆ. ಬರೋಬ್ಬರಿ 40 ವರ್ಷಗಳ ನಂತರ ರಾಜ್ಯದ ರಾಜಧಾನಿ ಈ ಸಾಹಿತ್ಯ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ. ನಾಲ್ಕು ದಶಕಗಳ ಹಿಂದೆ ಬೆಂಗಳೂರು ನಿವೃತ್ತರ ಸ್ವರ್ಗವಾಗಿತ್ತು. ಉದ್ಯಾನ ನಗರಿ ಎಂಬ ಹಣೆಪಟ್ಟಿ ಸಾರ್ಥಕವಾಗುವಂತೆ ಎಲ್ಲೆಲ್ಲೂ ಸಾಲು ಮರ. ಯಾವುದೇ ಅಬ್ಬರ, ಅವಸರವಿಲ್ಲದ ನಿಧಾನ ಜೀವನಶೈಲಿ. ಕನ್ನಡ ನುಡಿತೇರು ಎಳೆಯಲು ಕಂಕಣ ಕಟ್ಟಿದ್ದ ಧೀಮಂತ ಸಾಹಿತ್ಯವರ್ಗ. ಇಂಥ ಹಿಮ್ಮೇಳದ ಮಧ್ಯೆ 1970ರಲ್ಲಿ ನಡೆದ 40ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಆಗಿನ್ನೂ ಕಿರಿಯರಾಗಿದ್ದ ದೇಜಗೌ ಅಧ್ಯಕ್ಷರು.

ವರಕವಿ ಬೇಂದ್ರೆ, ಕನ್ನಡದ ಅಣ್ಣ ಮಾಸ್ತಿ, ಮಂಕುತಿಮ್ಮನ ಕಗ್ಗ ಹೊಸೆದ ಡಿವಿಜಿ ಸಾಹಿತ್ಯ ಸಮ್ಮೇಳನದಲ್ಲಿ ಹಾಜರಿದ್ದರು. ಗೋಷ್ಠಿಗಳಲ್ಲಿ ಕೂರುತ್ತಿದ್ದರು. ಚಾಮರಾಜಪೇಟೆಯ ಕೋಟೆ ಮೈದಾನದಲ್ಲಿ ಸಮ್ಮೇಳನ ಸಭಾಂಗಣವಿತ್ತು. ಆಗ ವಿದ್ಯಾರ್ಥಿಗಳಾಗಿ ಸಮ್ಮೇಳನದಲ್ಲಿ ಭಾಗವಹಿಸಿದ್ದವರನ್ನು ಆ ನೆನಪು ಈಗಲೂ ಪುಳಕಿತಗೊಳಿಸುತ್ತದೆ. ಈ ನಾಲ್ಕು ದಶಕಗಳಲ್ಲಿ ಈ ಊರು, ಬೆಚ್ಚಿಬೀಳಿಸುವಷ್ಟು, ದಿಗ್ಭ್ರಮೆ ಹುಟ್ಟಿಸುವಷ್ಟು ಬದಲಾಗಿದೆ. ಕಾಸ್ಮೋಪಾಲಿಟನ್ ನಗರ, ವಿಶ್ವದಲ್ಲೇ  ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಅಹಂಕಾರ ಅಂಟಿಸಿಕೊಂಡಿದೆ.

ಒಂದು ಅಂದಾಜಿನ ಪ್ರಕಾರ ದೇಶದ ಹಾಗೂ ಜಗತ್ತಿನ 68ಕ್ಕೂ ಹೆಚ್ಚು ಭಾಷೆಯನ್ನಾಡುವ ಜನ ಬೆಂಗಳೂರಿನಲ್ಲಿ ಇದ್ದಾರೆ. ಆದರೆ, ಒಟ್ಟು ಜನಸಂಖ್ಯೆಯಲ್ಲಿ ಕನ್ನಡಿಗರ ಸಂಖ್ಯೆ ಶೇ 38ನ್ನೂ ದಾಟಿಲ್ಲ. ಇದ್ದ ಕನ್ನಡಿಗರಲ್ಲೂ ‘ಎಲೈಟ್ ಕ್ಲಾಸ್’ನ ಆಧುನಿಕರು ತಾಯಿನುಡಿಯನ್ನು ಅಡುಗೆ ಮನೆಗಷ್ಟೇ ಸೀಮಿತಗೊಳಿಸಿಕೊಂಡಿದ್ದಾರೆ. ಮತ್ತೆ ಕೆಲವರ ಕನ್ನಡ ಪ್ರೀತಿ ನವೆಂಬರ್‌ನಲ್ಲಿ ಜಾಗೃತ. ಬೀದಿಯಲ್ಲಿ ಆರ್ಕೆಸ್ಟ್ರಾ, ಚಿತ್ರ ತಾರೆಯರ ಚಮಕ್‌ನಲ್ಲಿ ಅವರ ಕನ್ನಡ ಪ್ರೀತಿ ಮೆರೆಯುತ್ತದೆ.

ಈ ಎರಡೂ ವರ್ಗಗಳ ನಡುವೆ ಸಾಹಿತ್ಯ ಪ್ರೀತಿಸುವ, ಕನ್ನಡ ಪುಸ್ತಕ ಓದುವ ನೈಜ ಕನ್ನಡಿಗರಿದ್ದಾರೆ. ಇಂಥ ಕನ್ನಡಿಗರು ಮತ್ತು 30 ಜಿಲ್ಲೆಗಳಿಂದ ಪ್ರತಿನಿಧಿಗಳಾಗಿ ಬರುವ ಸಾಹಿತ್ಯಪ್ರೇಮಿಗಳಿಂದ ಸಮ್ಮೇಳನ ಕಳೆ ಕಟ್ಟಲಿದೆ. ಇದರ ನಡುವೆ ನೋವು ಹುಟ್ಟಿಸುವ ಸಂಗತಿಯೊಂದಿದೆ. ಸಾಹಿತ್ಯ ಸಮ್ಮೇಳನದ ಮುಖ್ಯ ಸಭಾಂಗಣ ಇರುವ ಬಸವನಗುಡಿ, ಸುತ್ತಲಿನ ಚಾಮರಾಜಪೇಟೆ, ಬನಶಂಕರಿ, ಜಯನಗರ ಇತ್ಯಾದಿ ಬಡಾವಣೆ ಹೊರತುಪಡಿಸಿದಲ್ಲಿ ಸಾಹಿತ್ಯ ಸಮ್ಮೇಳನದ ಸಂಭ್ರಮ ಇತರ ಕಡೆ ಕಾಣುತ್ತಿಲ್ಲ.

ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ನಡೆದ ಸಭೆಗೆ ಐಟಿ, ಬಿಟಿ ಉದ್ಯಮಿಗಳನ್ನು ಆಹ್ವಾನಿಸಿದ್ದರೂ ಅವರಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಕೋರಮಂಗಲ, ಇಂದಿರಾನಗರ, ಬಾಣಸವಾಡಿಯಂತಹ ಪ್ರದೇಶಗಳಲ್ಲಿ ಇಂತಹದ್ದೊಂದು ಸಾಹಿತ್ಯ ಜಾತ್ರೆ ನಡೆಯುತ್ತಿದೆ ಎಂಬ ಸುಳಿವೂ ಕಾಣುತ್ತಿಲ್ಲ. ಖಾಸಗಿ ಕಂಪೆನಿಗಳ ಪ್ರಾಯೋಜಕತ್ವದಲ್ಲಿ ನಡೆಯುವ ಕೆಲ ಸಾಂಸ್ಕೃತಿಕ ಹಬ್ಬಗಳಿಗಾಗಿ ನಗರದ ತುಂಬ ಜಾಹೀರಾತು ಫಲಕ ರಾರಾಜಿಸುತ್ತದೆ.

ಯಾವುದೋ ತಮಿಳು ಸಿನಿಮಾ, ಕಡೆಗೆ ಟಿವಿ ಧಾರಾವಾಹಿಗಳಿಗೂ ಅಬ್ಬರದ ಹೋರ್ಡಿಂಗ್ ಹಾಕಲಾಗುತ್ತದೆ. ಆದರೆ, ಸರ್ಕಾರದ ಸಂಪೂರ್ಣ ಸಹಕಾರದಲ್ಲಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲ ಬಡಾವಣೆಗಳಲ್ಲೂ ಬ್ಯಾನರ್ ಹಾಕಬಹುದಿತ್ತು.

ಅಧ್ಯಕ್ಷರ ಸಾರೋಟು
ಲೋಪಗಳ ನಡುವೆಯೂ ಸ್ವಾಗತ ಸಮಿತಿ ಸದಸ್ಯರು ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆಸಿದ್ದಾರೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆಗಾಗಿ ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ಮಾದರಿಯ ಸಾರೋಟು ಸಿದ್ಧಪಡಿಸಲಾಗಿದೆ. 15 ಅಡಿ ಎತ್ತರ, 15 ಅಡಿ ಉದ್ದದ ರಥದಲ್ಲಿ ಸಮ್ಮೇಳನಾಧ್ಯಕ್ಷ ನಿಘಂಟು ತಜ್ಞ ‘ಇಗೋ’ ಕನ್ನಡದ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರನ್ನು ಮೆರವಣಿಗೆ ಮಾಡಲಾಗುವುದು. ರಥದ ಅಕ್ಕಪಕ್ಕದಲ್ಲಿ ತಲಾ ಐವರು ಸೈನಿಕರ ವೇಷಭೂಷಣ ತೊಟ್ಟು ಪರಿಷತ್ತಿನ ಲಾಂಛನ ಹೊತ್ತು ಸಾಗುವರು.

ಈ ರಥದ ಮುಂಭಾಗ ಭುವನೇಶ್ವರಿಯ ರಥ. 77ನೇ ಸಾಹಿತ್ಯ ಸಮ್ಮೇಳನವಾಗಿದ್ದರಿಂದ 77 ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗುತ್ತಾರೆ. 77 ಪುರುಷರು ಕನ್ನಡ ಧ್ವಜ ಹೊತ್ತು ನಡೆಯುತ್ತಾರೆ. ರಥದ ಮುಂದೆ ಕೆಂಪೇಗೌಡ, ನಾಲ್ವಡಿ ಕೃಷ್ಣರಾಜ್ ಒಡೆಯರ್, ಜ್ಞಾನಪೀಠ ಪುರಸ್ಕೃತರ ಪ್ರತಿಕೃತಿ ಇರುವ ರೂಪಕಗಳಿರುತ್ತವೆ. ಶುಕ್ರವಾರ ಬೆಳಿಗ್ಗೆ 9.30ಕ್ಕೆ ಬೃಹತ್ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭ. ಪುರಭವನ, ಜೆ.ಸಿ. ರಸ್ತೆ, ಮಿನರ್ವ ರಸ್ತೆ, ಕೊಂಡಜ್ಜಿ ಬಸಪ್ಪ ವೃತ್ತ, ಮಕ್ಕಳ ಕೂಟದ ಮಾರ್ಗವಾಗಿ ಮೆರವಣಿಗೆ ನ್ಯಾಷನಲ್ ಕಾಲೇಜು ಮೈದಾನ ತಲುಪಲಿದೆ. ಮಧ್ಯಾಹ್ನ 1ಕ್ಕೆ ಸಮ್ಮೇಳನ ಉದ್ಘಾಟನೆ.

ಪುಸ್ತಕ ಪರಿಷೆ
ಸಾಹಿತ್ಯ ಸಮ್ಮೇಳನದ ಮತ್ತೊಂದು ಆಕರ್ಷಣೆ ಪುಸ್ತಕ ಪರಿಷೆ. ಪ್ರತಿವರ್ಷ ಕೋಟ್ಯಂತರ ಬೆಲೆಯ ಪುಸ್ತಕಗಳು ಸಮ್ಮೇಳನದಲ್ಲಿ ಮಾರಾಟವಾಗುತ್ತವೆ. ಸಮ್ಮೇಳನಕ್ಕಾಗಿ ಕಸಾಪ ಪ್ರಕಟಣೆಗಳಿಗೆ ವಿಶೇಷ ರಿಯಾಯ್ತಿ. ಕನ್ನಡದ ಪ್ರಮುಖ ಪ್ರಕಾಶನ ಸಂಸ್ಥೆಗಳಾದ ನವಕರ್ನಾಟಕ, ಸ್ವಪ್ನ ಬುಕ್ ಹೌಸ್ ಸೇರಿದಂತೆ ಬಹುತೇಕ ಎಲ್ಲ ಪ್ರಕಾಶಕರು ಇಲ್ಲಿ ಭಾಗವಹಿಸುತ್ತಾರೆ.

ಕಳೆ ಕಟ್ಟೀತು...
ಇಷ್ಟೆಲ್ಲ ಸಿದ್ಧತೆ, ಸಂಭ್ರಮದ ನಡುವೆಯೂ ಜನರು ಪಾಲ್ಗೊಂಡರೆ ಮಾತ್ರ ಸಮ್ಮೇಳನ ಸಾರ್ಥಕ. ಪ್ರತಿನಿಧಿಗಳಾಗಿ ಹೆಸರು ನೋಂದಾಯಿಸಿದವರು ‘ಒಒಡಿ’ಯ ನೆಪದಲ್ಲಿ ಬೆಂಗಳೂರಿಗೆ ಬರುವಂತಾಗಬಾರದು. ಬಂದವರು ಗೋಷ್ಠಿಗೆ ಚಕ್ಕರ್, ಊಟಕ್ಕೆ ಹಾಜರ್ ಎಂಬಂತಾಗಬಾರದು. ಸಮ್ಮೇಳನಕ್ಕಿಂತ ಪ್ರೇಕ್ಷಣಿಯ ಸ್ಥಳಗಳ ಪ್ರವಾಸಕ್ಕೆ ಬಸ್ ಏರುವಂತಾಗಬಾರದು. ಪ್ರತಿನಿಧಿಗಳು, ಸ್ಥಳೀಯ ಕನ್ನಡಿಗರು ಆಸ್ಥೆಯಿಂದ ಗೋಷ್ಠಿಗಳಲ್ಲಿ ಭಾಗವಹಿಸಿದಲ್ಲಿ, ಚರ್ಚೆ, ಸಂವಾದದಲ್ಲಿ ತೊಡಗಿಕೊಂಡಲ್ಲಿ, ಒಂದಿಷ್ಟು ಕನ್ನಡ ಪುಸ್ತಕ ಬಗಲಿಗೆ ಏರಿಸಿದಲ್ಲಿ ಸಾಹಿತ್ಯ ಸಮ್ಮೇಳನ ಕಳೆ ಕಟ್ಟೀತು.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT