ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ ಹಬ್ಬದಲ್ಲಿ ಬಂಗಾರದ ವಿನಿಮಯ

Last Updated 7 ಅಕ್ಟೋಬರ್ 2011, 9:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಾತ್ರೆಯ ಖದರು ಗುರುವಾರ ನಗರದಲ್ಲಿತ್ತು. ಬನ್ನಿಹಬ್ಬದ ಅಂಗವಾಗಿ ವಿವಿಧ ದೇವಸ್ಥಾನದ ಪಲ್ಲಕ್ಕಿಗಳ ಮೆರವಣಿಗೆ, ದುರ್ಗಾದೇವಿ ಮೂರ್ತಿಯ ಮೆರಣಿಗೆ ವೈಭವ ಜೋರಾಗಿತ್ತು. ಕಳೆದ ಒಂಬತ್ತು ವರ್ಷಗಳಿಂದ ನಿಂತಿದ್ದ ಮೂರುಸಾವಿರಮಠದ ಮೇಣೆ ಮೆರವಣಿಗೆ ಕೂಡಾ ನಡೆದು ಭಕ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿತು.


ಮೇಣೆ ಬಲು ಭಾರ ಎನ್ನುವುದರ ಜೊತೆಗೆ ಅದನ್ನು ಭಕ್ತರು ಹೊರುವುದು ಬೇಡ ಎನ್ನುವ ಕಾರಣಕ್ಕೆ 2003ರಿಂದ ಅದರಲ್ಲಿ ಕೂಡುವುದನ್ನು ಬಿಟ್ಟಿದ್ದ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಭಕ್ತರ ಅಪೇಕ್ಷೆ ಹಾಗೂ ಒತ್ತಾಯದ ಮೇರೆಗೆ ಗುರುವಾರ ಸಿಂಗರಿಸಿದ ಟ್ರ್ಯಾಕ್ಟರ್‌ನಲ್ಲಿಟ್ಟ ಮೇಣೆಯಲ್ಲಿ ಆಸೀನರಾದರು. ಗೊಂಡೆಗಳು ಹಾಗೂ ಹೂವಿನಿಂದ ಸಿಂಗರಿಸಿದ್ದ ಮೇಣೆಯಲ್ಲಿ ಆಸೀನರಾಗಿದ್ದ ಸ್ವಾಮೀಜಿ ಭಕ್ತರಿಗೆ ಆಶೀರ್ವಾದ ನೀಡಿದರು.

ಮಲ್ಲಿಕಾರ್ಜುನ ಗಚ್ಚಿನ ಬಸವೇಶ್ವರ ದೇವಸ್ಥಾನದದಿಂದ ಆರಂಭಗೊಂಡ ಮೇಣೆ ಮೆರವಣಿಗೆ ಗಬ್ಬೂರು, ದೇಸಾಯಿ ಓಣಿ, ಯಲ್ಲಾಪುರ ಓಣಿ, ಎರಡೆತ್ತಿನ ಮಠ, ಬಾರದಾನ ಸಾಲ, ಬಮ್ಮಾಪುರ ಓಣಿ ಮೂಲಕ ಗುರುಸಿದ್ಧೇಶ್ವರ ಕಲ್ಯಾಣಮಂಟಪಕ್ಕೆ ಬಂದು ತಲುಪಿತು.

ಸ್ವಾಮೀಜಿ ಮೇಣೆ ತಮ್ಮ ಮನೆಗಳ ಮುಂದೆ ಆಗಮಿಸುತ್ತಿದ್ದಂತೆ ಭಕ್ತರು ನೀರು ಹಾಕಿ ಸ್ವಾಗತಿಸಿದರು. ಮಹಿಳೆಯರು ಆರತಿ ಬೆಳಗಿ, ಬನ್ನಿಯನ್ನು ಸ್ವಾಮೀಜಿ ಪಾದದ ಬಳಿಯಿಟ್ಟು ಆಶೀರ್ವಾದ ಕೋರಿದರು. ಪುಟ್ಟ ಕಂದಮ್ಮಗಳನ್ನು ಸ್ವಾಮೀಜಿ ಪಾದದ ಬಳಿ ಹಾಕಿ ಆಶೀರ್ವಾದ ಪಡೆಯಲಾಯಿತು. ಬಿಳಿ ಲುಂಗಿ, ಬಿಳಿ ಅಂಗಿ ಹೆಗಲ ಮೇಲೊಂದು ಕೆಂಪು ಕಡ್ಡಿ ವಸ್ತ್ರ ಹಾಕಿಕೊಂಡ ಮೂರುಸಾವಿರಮಠದ ವಿದ್ಯಾರ್ಥಿಗಳು ಸಕಲ ಬಿರುದಾವಳಿಗಳನ್ನು ಹಿಡಿದು ಮುಂದೆ ಸಾಗಿದರು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಶಿರಬಡಗಿಯ ವಿಜಯ ಮಹಾಂತೇಶ್ವರ ಹೆಜ್ಜೆ ಮೇಳಕ್ಕೆ ಹೋರಿ ಕೂಡಾ ಹೆಜ್ಜೆ ಹಾಕಿತು. ಹನುಮಂತಪ್ಪ ಹುಲಿಮನೆ ಕೀಲುಕುದುರೆ ಕುಣಿತ ಆಕರ್ಷಕವಾಗಿತ್ತು. ನಾಗಶೆಟ್ಟಿಕೊಪ್ಪದ ಸನಾದಿ ಮೇಳ, ಹೂವಿನಶಿಗ್ಲಿಯ ಕರಿಸಿದ್ಧೇಶ್ವರ ಡೊಳ್ಳಿನ ಸಂಘದ ಡೊಳ್ಳು ಕುಣಿತ, ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಅರಳೇಶ್ವರದ ಡೊಳ್ಳು ಕುಣಿತ, ನೇಕಾರನಗರದ ಕುದುರೆ ಮೊದಲಾದವು ಮೆರವಣಿಗೆಗೆ ಮೆರುಗು ತಂದವು.

ಪಾಲಕಿ ಮೆರವಣಿಗೆ: ತಂಬದಮನೆಯ ಐದು ಮನೆ ಸಾಲದಿಂದ ಅಂಬಾಭವಾನಿ ದೇವಿಯ ಪಾಲಕಿ ಮೆರವಣಿಗೆಯು ಬಿಡ್ನಾಳದ ಬನ್ನಿ ಮಹಾಂಕಾಳಿ ದೇವಸ್ಥಾನದವರೆಗೆ ತೆರಳಿತು. ಅಲ್ಲಿ ಬನ್ನಿ ಮುಡಿದ ನಂತರ ಮೆರವಣಿಗೆಯು ಮತ್ತೆ ಐದುಮನೆ ಸಾಲಕ್ಕೆ ಆಗಮಿಸಿತು.

ಮಹಾವೀರಗಲ್ಲಿ ಶಾಂತಿನಾಥ ದೇವಸ್ಥಾನದಲ್ಲಿ ತೀರ್ಥಂಕರರಿಗೆ ಪೂಜೆ ಸಲ್ಲಿಸಿದ ನಂತರ ಪದ್ಮಾವತಿ ದೇವಿಗೆ ಪೂಜೆ ನಡೆಯಿತು. ಆಮೇಲೆ ಬನ್ನಿ ಪೂಜೆಯಾದ ನಂತರ ಪರಸ್ಪರ ಬನ್ನಿ ನೀಡಿದರು. ಹಳೇಹುಬ್ಬಳ್ಳಿಯ ಆಸಾರ ಓಣಿಯಲ್ಲಿಯ 1300 ವರ್ಷಗಳ ಹಿಂದಿನ ಅನಂತನಾಥಸ್ವಾಮಿ ದಿಗಂಬರ ಜೈನ ಬಸದಿಯಲ್ಲಿ ಶಮೀ ವೃಕ್ಷ ಪೂಜೆ ನಡೆಯಿತು.

ಹೊಸೂರಿನ ಗಾಳಿ ದುರ್ಗಮ್ಮ ಗುಡಿ, ದಾಜಿಬಾನಪೇಟೆಯ ಅಂಬಾಭವಾನಿ ದೇವಿಗೆ ಮೊದಲಾದ ಕಡೆ ಪೂಜೆ ಸಲ್ಲಿಸಲಾಯಿತು. ಇದೇ ರೀತಿ ತಮ್ಮ ಮನೆಗಳ ಸಮೀಪದ ದೇವಸ್ಥಾನಗಳಿಗೆ ತೆರಳಿ ದೇವರಿಗೆ ಬನ್ನಿಯನ್ನು ಅರ್ಪಿಸಿದ ನಂತರ ಪರಸ್ಪರ ಬನ್ನಿ ನೀಡಿ ಬಂಗಾದಂಗಿರೋಣ, ನಗುತ್ತ ಇರೋಣ ಎಂದು ಶುಭ ಹಾರೈಸಿದರು. ಬನ್ನಿಯನ್ನು ಕೊಟ್ಟ ಚಿಕ್ಕವರು ದೊಡ್ಡವರ ಪಾದಗಳಿಗೆ ಎರಗಿ ನಮಸ್ಕರಿಸಿ ಆಶೀರ್ವಾದ ಪಡೆದರು.

ಕಲ್ಯಾಣನಗರದ ರಾಮಕೃಷ್ಣ ವಿವೇಕಾನಂದ ಆಶ್ರಮ, ಬೆಂಗಾಲಿ ಸಾಂಸ್ಕೃತಿಕ ಸಂಸ್ಥೆ, ಸಾರ್ವಜನಿಕ ದುರ್ಗಾದೇವಿ ಪ್ರತಿಷ್ಠಾಪನಾ ಸಮಿತಿ ಸೇರಿದಂತೆ ವಿವಿಧ ಉತ್ಸವ ಸಮಿತಿಗಳು ಪ್ರತಿಷ್ಠಾಪಿಸಿದ್ದ ದೇವಿ ಮೂರ್ತಿಗಳನ್ನು ಉಣಕಲ್ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

ಮನೆ-ಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಘಟಸ್ಥಾಪನೆಯನ್ನೂ ಗುರುವಾರ ವಿಸರ್ಜನೆ ಮಾಡಲಾಯಿತು. ಸಂಜೆ ಬನ್ನಿ ವಿನಿಮಯ ಮಾಡಿಕೊಂಡ ಜನ `ಬನ್ನಿ ತಗೊಂಡು ಬಂಗಾರದಂತೆ ಇರೋಣ~ ಎಂದು ಪರಸ್ಪರ ಶುಭಾಶಯ ಹೇಳಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT