ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೂರಮಠ ನೇಮಕ: ಸರ್ಕಾರದ ಹಟ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಾಯುಕ್ತ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ಅವರನ್ನೇ ನೇಮಕ ಮಾಡಬೇಕು ಎಂದು ಪಟ್ಟು ಹಿಡಿದಿರುವ ರಾಜ್ಯ ಸರ್ಕಾರ, ತನ್ನ ಹಟಕ್ಕೆ ಬಲವಾದ ಸಮರ್ಥನೆಯನ್ನೇ ಮಂಡಿಸಿದೆ.

ಲೋಕಾಯುಕ್ತ ಹುದ್ದೆಗೆ ಬನ್ನೂರಮಠ ಅವರ ಹೆಸರನ್ನು ಒಪ್ಪುವುದಿಲ್ಲ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಬರೆದಿರುವ 2 ಪುಟಗಳ ಪತ್ರಕ್ಕೆ ಪ್ರತಿಯಾಗಿ 10 ಪುಟಗಳ ಪತ್ರ ಬರೆದಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ತಮ್ಮ ಶಿಫಾರಸಿಗೆ ಕಾರಣಗಳೇನೆಂಬುದನ್ನು ಸುದೀರ್ಘವಾಗಿ ವಿವರಿಸಿದ್ದಾರೆ.
ಇಬ್ಬರ ಪತ್ರಗಳ ಪ್ರತಿಗಳು `ಪ್ರಜಾವಾಣಿ~ಗೆ ಲಭ್ಯವಾಗಿವೆ.
 
ರಾಜ್ಯಪಾಲರು ತಮ್ಮ ಪತ್ರದಲ್ಲಿ ಪ್ರಮುಖವಾಗಿ ಎರಡು ತಕರಾರುಗಳನ್ನು ಎತ್ತಿದ್ದಾರೆ. ಕಾಯ್ದೆ ಪ್ರಕಾರ ಸಾಂವಿಧಾನಿಕ ಸಂಸ್ಥೆಗಳ ಪ್ರಮುಖರೊಂದಿಗೆ ಸರಿಯಾಗಿ ಸಮಾಲೋಚನೆ ನಡೆಸದೇ ಬನ್ನೂರ ಮಠ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಹಾಗೂ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಬನ್ನೂರಮಠ ಅವರ ಮೇಲೆ ಆರೋಪಗಳ ಸುರಿಮಳೆಯೇ ಆಗಿದೆ ಎಂಬುದು ರಾಜ್ಯಪಾಲರ ಎರಡು ಮುಖ್ಯ ಆಕ್ಷೇಪಗಳು.

ಇದಕ್ಕೆ ತಮ್ಮ ಪತ್ರದಲ್ಲಿ ಮುಖ್ಯಮಂತ್ರಿಯವರು ವಿವರವಾದ ಸಮಜಾಯಿಷಿ ನೀಡಿದ್ದಾರೆ. ಈ ಪತ್ರದಲ್ಲಿ ಇದುವರೆಗೆ ಬಹಿರಂಗವಾಗದ ಹಲವು ಅಂಶಗಳು ಇವೆ. ಪತ್ರದ ಮುಖ್ಯಾಂಶಗಳು ಇಲ್ಲಿವೆ;

`ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 3 (2) ರ ಪ್ರಕಾರ ಬನ್ನೂರ ಮಠ ಅವರ ಹೆಸರು ಶಿಫಾರಸಿಗೆ ಮುನ್ನ ಸಮಾಲೋಚನೆ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಡೆಸಲಾಗಿದೆ. ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರ ಹೆಸರನ್ನು ಶಿಫಾರಸು ಮಾಡುವಾಗ ಏನೆಲ್ಲ ವಿಧಿವಿಧಾನಗಳನ್ನು ಅನುಸರಿಸಲಾಗಿತ್ತೋ ಅದೇ ಪ್ರಕ್ರಿಯೆಯನ್ನು ಅನುಸರಿಸಿ ಬನ್ನೂರಮಠ ಅವರ ಹೆಸರನ್ನು ಶಿಫಾರಸು ಮಾಡಿದ್ದೇನೆ. ಪಾಟೀಲರ ನೇಮಕಕ್ಕೆ ಅಂಕಿತ ಹಾಕುವಾಗ ನೀವು (ರಾಜ್ಯಪಾಲರು) ಯಾವುದೇ ಆಕ್ಷೇಪ ಎತ್ತಿರಲಿಲ್ಲ~.

`ಕಾಯ್ದೆ ಪ್ರಕಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ವಿಧಾನ ಪರಿಷತ್ತಿನ ಸಭಾಪತಿ, ವಿಧಾನಸಭಾಧ್ಯಕ್ಷ, ಉಭಯ ಸದನಗಳ ವಿರೋಧ ಪಕ್ಷದ ನಾಯಕರು- ಇವರೊಂದಿಗೆ ಮುಖ್ಯಮಂತ್ರಿ ಸಮಾಲೋಚಿಸಿ ಅಂತಿಮವಾಗಿ ಒಬ್ಬ ಹೆಸರನ್ನು ಸೂಚಿಸಬೇಕು. ಸಾಂವಿಧಾನಿಕ ಸಂಸ್ಥೆಗಳ ಪ್ರಮುಖರಾದ ಈ ಐವರು ಲೋಕಾಯುಕ್ತ ಹುದ್ದೆಗೆ ಅರ್ಹರಾದವರ ಹೆಸರಗಳನ್ನು ಸಲಹೆ ಮಾಡಬಹುದಷ್ಟೆ. ಈ ಐವರು ಶಿಫಾರಸು ಮಾಡದೇ ಇರುವ ವ್ಯಕ್ತಿಯನ್ನು ಆಯ್ಕೆ ಮಾಡುವ ವಿಶೇಷ ಅಧಿಕಾರ ಮುಖ್ಯಮಂತ್ರಿಗಿದೆ~.

`ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ರಾಜ್ಯಪಾಲರಿಗೆ ತಮ್ಮದೇ ಆದ ಯಾವುದೇ ಅಧಿಕಾರವಿಲ್ಲ. ಮುಖ್ಯಮಂತ್ರಿ ಸೂಚಿಸಿದ ಹೆಸರನ್ನು ರಾಜ್ಯಪಾಲರು ಅನುಮೋದಿಸಬೇಕು. ಇದು ಕಾನೂನಿನ ಸತ್ಸಂಪ್ರದಾಯವಾಗಿಯೂ ಬೆಳೆದು ಬಂದಿದೆ. ಈ ಬಗ್ಗೆ ಸಂದೇಹಕ್ಕೆ ಅವಕಾಶ ಇಲ್ಲ. ಸಂಸದರೂ ಕಾನೂನು ಸಚಿವರೂ ಆಗಿದ್ದ ಸುದೀರ್ಘ ಅನುಭವ ಹೊಂದಿರುವ ಪ್ರತಿಭಾಶಾಲಿ ನ್ಯಾಯವಾದಿಯಾದ ತಮಗೆ ಕಾನೂನಿನ ಆಯಾಮಗಳ ಬಗ್ಗೆ ಹೇಳಲು ನಾನು ಇಚ್ಛಿಸುವುದಿಲ್ಲ~.

`ನಿಜ. ಹೆಸರು ಸೂಚಿಸುವ ಮುನ್ನ ಮುಖ್ಯಮಂತ್ರಿ, ಮೇಲೆ ತಿಳಿಸಿದ ಐವರು ಸಾಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸುವ ಶಾಸನಾತ್ಮಕ ಕರ್ತವ್ಯ ಹೊಂದಿದ್ದಾರೆ.

ನಿಯಮದ ಪ್ರಕಾರ ಸಮಾಲೋಚನೆ ಪ್ರಕ್ರಿಯೆಯನ್ನು ಸೂಚಿಸಿಲ್ಲ. ಅಲ್ಲದೇ ಸಮಾಲೋಚನೆಗೆ ಸಹಮತ ಎಂಬ ಅರ್ಥವೂ ಇಲ್ಲ. ಆದರೂ ಲೋಕಾಯುಕ್ತರ ನೇಮಕ ಸಂದರ್ಭದಲ್ಲಿ ಈ ಹಿಂದೆ ಅನುಸರಿಸಲಾದ ಸಂಪ್ರದಾಯದಂತೆ ಸಮಾಲೋಚನೆಯನ್ನು ಒಂದು ಪ್ರಕ್ರಿಯೆ ಎಂಬ ಅರ್ಥದಲ್ಲಿಯೇ ಅನುಸರಿಸಿದ್ದೇನೆ~.

`ಮುಖ್ಯ ನ್ಯಾಯಮೂರ್ತಿ, ಸಭಾಪತಿ, ಸ್ಪೀಕರ್- ಈ ಮೂವರು ಬನ್ನೂರಮಠ ಅವರ ಹೆಸರನ್ನು ಸೂಚಿಸಿದ್ದಾರೆ.
ಉಭಯ ಸದನಗಳ ವಿರೋಧ ಪಕ್ಷದ ನಾಯಕರಿಬ್ಬರೂ ನ್ಯಾಯಮೂರ್ತಿ ರವೀಂದ್ರನ್ ಅವರ ಹೆಸರನ್ನು ಸೂಚಿಸಿದ್ದಾರೆಯೇ ಹೊರತು ಬನ್ನೂರಮಠ ಅವರ ಹೆಸರಿಗೆ ವಿರೋಧ ವ್ಯಕ್ತಪಡಿಸಿಲ್ಲ. ಅಂದರೆ ನನ್ನನ್ನು (ಸಿಎಂ) ಸೇರಿ ನಾಲ್ವರು ಬನ್ನೂರ ಮಠ ಅವರ ಹೆಸರಿಗೆ ಸಹಮತ ವ್ಯಕ್ತಪಡಿಸಿದ್ದೇವೆ. ಉಳಿದ ಇಬ್ಬರು ಬೇರೊಬ್ಬ ನ್ಯಾಯಮೂರ್ತಿಯವರ ಹೆಸರನ್ನು ಹೇಳಿದ್ದಾರೆ~.

`ಮುಖ್ಯ ನ್ಯಾಯಮೂರ್ತಿಯವರು ಸೂಚಿಸಿದ ಎರಡು ಹೆಸರುಗಳಲ್ಲಿ ಮೊದಲನೆಯದು ಬನ್ನೂರಮಠ ಅವರದ್ದಾಗಿತ್ತು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ವಿವಿಧ ತೀರ್ಪುಗಳ ಪ್ರಕಾರ ಉನ್ನತ ನ್ಯಾಯಾಂಗ ಹುದ್ದೆ ಅಥವಾ ತತ್ಸಮಾನ ಸ್ಥಾನಗಳಿಗೆ ನೇಮಕ ಮಾಡುವಾಗ ಮುಖ್ಯ ನ್ಯಾಯಮೂರ್ತಿಯವರ ಅಭಿಪ್ರಾಯಕ್ಕೆ ಮೊದಲ ಅದ್ಯತೆ ನೀಡಬೇಕಾಗುತ್ತದೆ. ಗುಜರಾತ್ ಲೋಕಾಯುಕ್ತರ ನೇಮಕಾತಿ ವಿಚಾರದಲ್ಲಿ ಇದೇ ವಾದವನ್ನು ಎತ್ತಿ ಹಿಡಿಯಲಾಗಿದೆ~.

`ಮುಖ್ಯ ನ್ಯಾಯಮೂರ್ತಿಯವರು ಸೂಚಿಸಿದ್ದ ಎರಡನೇ ಹೆಸರು ನ್ಯಾಯಮೂರ್ತಿ ಎನ್.ಕೆ.ಸೋಧಿ. ವಿಧಾನ ಸಭಾಧ್ಯಕ್ಷ ಬೋಪಯ್ಯ ಅವರು ಕಳುಹಿಸಿದ್ದ ಎರಡನೇ ಹೆಸರು ನ್ಯಾಯಮೂರ್ತಿ ವಿ.ಎಸ್.ಮಳೀಮಠ್~.
`ಬನ್ನೂರ ಮಠ ಅವರ ಹೆಸರನ್ನು ನಾನು ಸೇರಿದಂತೆ ನಾಲ್ವರು, ರವೀಂದ್ರನ್ ಅವರನ್ನು ಇಬ್ಬರು, ಸೋಧಿ ಮತ್ತು ಮಳೀಮಠ್ ಅವರನ್ನು ತಲಾ ಒಬ್ಬರು ಶಿಫಾರಸು ಮಾಡಿದ್ದರು. ಹೀಗಾಗಿ ಬಹುಮತದ ಆಯ್ಕೆಯಾದ ಬನ್ನೂರಮಠ ಅವರನ್ನೇ ನಾನು ಆಯ್ಕೆ ಮಾಡಿದೆ~.

`ಇನ್ನು ನಿವೇಶನ ವಿವಾದದ ವಿಚಾರ. ರವೀಂದ್ರನ್ ಅವರೇ ಘೋಷಿಸಿಕೊಂಡಿರುವ ಪ್ರಕಾರ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾಗುವ ಮೊದಲು ಬೆಂಗಳೂರಿನಲ್ಲಿ ಅವರಿಗೆ ಆರು ವಸತಿ ಆಸ್ತಿಗಳಿದ್ದವು. ಹೀಗಾಗಿ ನಾನು ರವೀಂದ್ರನ್ ಅವರ ಹೆಸರನ್ನು ಕೈಬಿಟ್ಟೆ. ಆದರೆ ಬನ್ನೂರಮಠ ಅವರಿಗೆ ನ್ಯಾಯಾಂಗ ಬಡಾವಣೆ ನಿವೇಶನ ಹಂಚಿಕೆಯಾಗುವ ಮೊದಲು ಬೆಂಗಳೂರಿನಲ್ಲಿ ಅವರಿಗೆ ಯಾವುದೇ ವಸತಿ ಆಸ್ತಿ ಇರಲಿಲ್ಲ~.

`ಸಾರ್ವಜನಿಕ/ ಸಮುದಾಯ ಬಳಕೆಗೆ ಮೀಸಲಿರಿಸಿದ ನಿವೇಶನದ ಒಂದು ಭಾಗವನ್ನು ಬನ್ನೂರಮಠ ಅವರು ಪಡೆದಿದ್ದಾರೆ ಎಂಬುದು ಮಾಧ್ಯಮಗಳಲ್ಲಿ ಬಂದ ಇನ್ನೊಂದು ಆರೋಪ. ತನಿಖೆ ನಂತರ ಈ ಆರೋಪಕ್ಕೆ ಯಾವುದೇ ಆಧಾರ ಇಲ್ಲ ಎಂಬುದು ಸ್ಪಷ್ಟವಾಗಿದೆ. 1992ರ ನವೆಂಬರ್ 16ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮಂಜೂರು ಮಾಡಿರುವ ಯೋಜನೆ ಪ್ರಕಾರ, ಬನ್ನೂರಮಠ ಅವರಿಗೆ ಹಂಚಿಕೆಯಾದ ನಿವೇಶನವು ಸಾರ್ವಜನಿಕ/ ಸಮುದಾಯ ಬಳಕೆಗೆ ಮೀಸಲಾದ ಜಾಗವಾಗಿರಲಿಲ್ಲ~.

`ನ್ಯಾಯಮೂರ್ತಿಗಳು ಸರ್ಕಾರದ ಸೇವಕರಲ್ಲದ ಕಾರಣ ನೌಕರರಿಗಾಗಿಯೇ ರಚಿಸಲಾದ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಪಡೆಯಲು ಅವರು ಅರ್ಹರಲ್ಲ ಎಂಬುದು ಮಾಧ್ಯಮಗಳ ಮತ್ತೊಂದು ಆರೋಪ. ಇದು ಸ್ಪಷ್ಟವಾಗಿ ತಪ್ಪು ಕಲ್ಪನೆ. ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಸರ್ಕಾರಿ ಸೇವಕರೆಂದೇ ಸುಪ್ರೀಂ ಕೋರ್ಟ್ ಪರಿಗಣಿಸಿದೆ. ಇದರ ಆಧಾರದಲ್ಲಿಯೇ ನ್ಯಾಯಮೂರ್ತಿಗಳಿಗೆ ನಿವೇಶನ ಹಂಚಿಕೆ ಮಾಡಿದ್ದನ್ನು ಪ್ರಶ್ನಿಸಿದ್ದ ಅರ್ಜಿಯೊಂದು (ಸುಬ್ರಮಣಿ ವರ್ಸಸ್ ಭಾರತ ಸರ್ಕಾರ) ವಜಾ ಆಗಿದೆ~.

`ನಿವೇಶನಗಳ ಹಂಚಿಕೆಯು ಕಾನೂನು ಬದ್ಧವೇ ಅಲ್ಲವೇ ಎಂಬುದು ಮಾಧ್ಯಮಗಳಿಂದ ನಿರ್ಧಾರ ಆಗುವಂತಹುದಲ್ಲ. ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ನ್ಯಾಯಮೂರ್ತಿ ರಾಜೇಂದ್ರಬಾಬು ಸೇರಿದಂತೆ 80 ನ್ಯಾಯಮೂರ್ತಿಗಳಿಗೆ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾಗಿದೆ~.

`ಬನ್ನೂರಮಠ ಅವರು ಉತ್ತಮ ಚಾರಿತ್ರ್ಯ ಮತ್ತು ಪ್ರಾಮಾಣಿಕತೆ ಹೊಂದಿರುವ ವ್ಯಕ್ತಿಯಾಗಿದ್ದಾರೆಂಬ ಬಗ್ಗೆ ನನಗೆ ತೃಪ್ತಿ ಇದೆ. ಅವರು ಪಕ್ಷಾತೀತ ಮತ್ತು ಜಾತ್ಯತೀತ ಗುಣವುಳ್ಳವರು. ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರು ಹಲವು ಮಾರ್ಗ ಪ್ರವರ್ತಕ ತೀರ್ಪುಗಳನ್ನು ನೀಡಿದ್ದಾರೆ. ಲೋಕಾಯುಕ್ತಕ್ಕೆ ಸರ್ಕಾರಿ ಪ್ರಕರಣಗಳನ್ನು ನಿರ್ವಹಿಸುವುದರಲ್ಲಿ ಉತ್ತಮ ಅನುಭವ ಇರುವ ನ್ಯಾಯಮೂರ್ತಿಯವರ ಅಗತ್ಯವಿದೆ.

ಬನ್ನೂರಮಠ ಅವರು 1990ರಿಂದ 97ರವರೆಗೆ ಸರ್ಕಾರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾಂಗ್ರೆಸ್ ಮತ್ತು ಜನತಾ ದಳ ಅಧಿಕಾರಾವಧಿಯಲ್ಲಿ ಎಸ್.ಬಂಗಾರಪ್ಪ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದರು~.

`ಕೇರಳ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬನ್ನೂರಮಠ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದರು ಎಂದು ನಿವೃತ್ತ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಮುಕ್ತಕಂಠದಿಂದ ಪ್ರಶಂಸಿಸಿದ್ದರು. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತಕ್ಕೆ ಬನ್ನೂರಮಠ ಅತ್ಯಂತ ಸಮರ್ಥ ಮತ್ತು ಸಮಂಜಸವಾದ ಆಯ್ಕೆಯಾಗಿದ್ದಾರೆ~.

`ಬನ್ನೂರಮಠ ಅವರ ಮೇಲೆ ಸುಳ್ಳು ಆರೋಪಗಳ ಪ್ರಚಾರಾಂದೋಳನವೇ ನಡೆದಿದೆ. ಇದನ್ನು ನೋಡಿ ನನಗೆ ತುಂಬಾ ನೋವಾಗಿದೆ. ಸತ್ಯಾಸತ್ಯತೆಗಳನ್ನು ಪರಿಶೀಲಿಸದೇ ಬನ್ನೂರಮಠ ಅವರ ವರ್ಚಸ್ಸಿಗೆ ಕಳಂಕ ತರುವ ಪ್ರಯತ್ನಗಳು ನಡೆದಿವೆ. ಅವರ ವಿರುದ್ಧದ ಸುಳ್ಳು ಪ್ರಚಾರದಿಂದ ಕರ್ನಾಟಕ ಬಹಳಷ್ಟು ಬಳಲಿದೆ~.

`ಬೇರೆ ಹೆಸರು ಸೂಚಿಸುವ ಪ್ರಶ್ನೆ ಇಲ್ಲ~
ಬೆಂಗಳೂರು: ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ಎಸ್. ಆರ್.   ಬನ್ನೂರಮಠ ಅವರನ್ನು ಹೊರತುಪಡಿಸಿ ಬೇರೊಬ್ಬರ ಹೆಸರು ಸೂಚಿಸುವುದಾಗಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಲ್ಲಿ ಹೇಳಿಲ್ಲ ಎಂದು ಮುಖ್ಯಮಂತ್ರಿ  ಡಿ.ವಿ. ಸದಾನಂದ ಗೌಡ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT