ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೂರುಮಠ ನೂತನ ಲೋಕಾಯುಕ್ತ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಮೂರ್ತಿ ಎಸ್.ಆರ್. ಬನ್ನೂರುಮಠ ಅವರನ್ನು ಹೊಸ ಲೋಕಾಯುಕ್ತರನ್ನಾಗಿ ನೇಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಕಚೇರಿಯಿಂದ ಈ ಕುರಿತ ಸೂಚನೆ ಮುಖ್ಯ ಕಾರ್ಯದರ್ಶಿ ಕಚೇರಿ ತಲುಪಿದೆ. ಕೇರಳ ಹೈಕೋರ್ಟ್ ಮುಖ್ಯ ನಾಯಮೂರ್ತಿಯಾಗಿ ಸೇವೆ ಸಲ್ಲಿಸಿರುವ ಬನ್ನೂರುಮಠ ಅವರು 2010ರ ಜನವರಿಯಲ್ಲಿ ನಿವೃತ್ತರಾದರು.

ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತರಾಗಿ ನಿವೃತ್ತಿಯಾದ ಸಂದರ್ಭದಲ್ಲೇ ಇವರ ಹೆಸರು ಆ ಸ್ಥಾನಕ್ಕೆ ಕೇಳಿಬಂದಿತ್ತು. ಆದರೆ, ಕೊನೆ ಕ್ಷಣದಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ನಿವೇಶನ ವಿವಾದದ ಹಿನ್ನೆಲೆಯಲ್ಲಿ ಪಾಟೀಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ಹೊಸ ಲೋಕಾಯುಕ್ತರ ಆಯ್ಕೆ ಪ್ರಕ್ರಿಯೆ ಚಾಲನೆ ಪಡೆಯಿತು.

ಮುಖ್ಯಮಂತ್ರಿಯವರ ಕೋರಿಕೆ ಮೇರೆಗೆ ವಿಧಾನ ಮಂಡಲದ ಪ್ರತಿಪಕ್ಷಗಳ ನಾಯಕರು ಸುಪ್ರೀಂ  ಕೋರ್ಟ್ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ರವೀಂದ್ರನ್ ಅವರು ಈ ತಿಂಗಳು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿಯಾಗಲಿದ್ದು, ಅವರನ್ನು ನೇಮಕ ಮಾಡುವಂತೆ ಕೋರಿ ಪತ್ರ ಬರೆದಿದ್ದರು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಅವರು ನ್ಯಾಯಮೂರ್ತಿ ಬನ್ನೂರುಮಠ ಮತ್ತು ರಾಜ್ಯ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ಕೆ.ಸೋಧಿ ಅವರ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಿದ್ದರು. ಇವೆಲ್ಲವನ್ನೂ ಪರಿಶೀಲಿಸಿದ ಮುಖ್ಯಮಂತ್ರಿಯವರು ಕೊನೆಗೆ ಬನ್ನೂರುಮಠ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ.

ಮುಖ್ಯ ಕಾರ್ಯದರ್ಶಿಯವರು ರಾಜ್ಯ ಸರ್ಕಾರದ ತೀರ್ಮಾನದ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆದು ತಿಳಿಸಿದ್ದು ಸದ್ಯದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಗೊತ್ತಾಗಿದೆ.

ರಾಜ್ಯಪಾಲರು ದೆಹಲಿಗೆ ತೆರಳಿದ್ದು, ನವೆಂಬರ್ 1ರಂದು ವಾಪಸಾಗಲಿದ್ದಾರೆ. ದೆಹಲಿಯಲ್ಲಿ ರಾಜ್ಯಪಾಲರ ಸಮ್ಮೇಳನ ನಡೆಯುತ್ತಿದ್ದು, ಅದರಲ್ಲಿ ಭಾಗವಹಿಸಲು ಅಲ್ಲಿಗೆ ತೆರಳಿದ್ದಾರೆ. ಅವರು ಬಂದ ನಂತರವೇ ಲೋಕಾಯುಕ್ತರ ನೇಮಕದ ಆದೇಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT