ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ: ಸಿಂಹಗಳಿಗೆ ಪ್ರತ್ಯೇಕ ತಾಣ

Last Updated 11 ಡಿಸೆಂಬರ್ 2013, 19:34 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬನ್ನೇರುಘಟ್ಟ ಜೈವಿಕ ಉದ್ಯಾನದ ಪರಿಶೀಲನೆಗಾಗಿ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ತಂಡ ಈ ತಿಂಗಳ ಮೂರನೇ ವಾರದಲ್ಲಿ ಬರಲಿದ್ದು, ಅದಕ್ಕಾಗಿ ಬನ್ನೇರುಘಟ್ಟ ಉದ್ಯಾನ  ಸನ್ನದ್ಧಗೊಳ್ಳುತ್ತಿದೆ.

ರಾಜ್ಯದ ವಿವಿಧ ಕಡೆಗಳಲ್ಲಿ ಸಂರಕ್ಷಿಸಿದ ಸಿಂಹಗಳು ಮತ್ತು ಸಫಾರಿ ಸಿಂಹಗಳಿಗೆ ಒಂದೇ ಕಡೆಗೆ ಸೂರಿನ ವ್ಯವಸ್ಥೆ ಕಲ್ಪಿಸಿದ್ದಕ್ಕೆ ಹಿಂದೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಆಕ್ಷೇಪ ವ್ಯಕ್ತ­ಪಡಿಸಿದ್ದರು. ಅಂತಹ ಸನ್ನಿವೇಶ ಮತ್ತೆ ಎದುರಾಗ­ಬಾರದು ಎನ್ನುವ ಉದ್ದೇಶ­ದಿಂದ ಉದ್ಯಾನದ ಸಿಬ್ಬಂದಿ ಬುಧವಾರ ಸಿಂಹಗಳಿಗೆ ಪ್ರತ್ಯೇಕ ತಾಣಗಳನ್ನು ಒದಗಿಸಿದರು.

ಆರು ಸಫಾರಿ ಸಿಂಹಗಳಿಗೆ ಒಂದಾದ ಮೇಲೆ ಒಂದರಂತೆ ಪ್ರಜ್ಞೆ ತಪ್ಪುವ ಚುಚ್ಚುಮದ್ದು ನೀಡಿ, ಅವುಗಳನ್ನು ಪ್ರತ್ಯೇಕ ಸೂರುಗಳ ಕಡೆಗೆ ಕರೆದೊಯ್ಯ­­ಲಾಯಿತು. ಸ್ಥಳಾಂತರದ ಅಂತರ ಸಣ್ಣದಾಗಿದ್ದರೂ ಸುಮಾರು 200 ಕೆಜಿಯಷ್ಟು ಭಾರವಾಗಿದ್ದ ಸಿಂಹಗಳನ್ನು ಬೇರೆಡೆ ಸಾಗಿಸುವುದು ಸಿಬ್ಬಂದಿ ಪಾಲಿಗೆ ಸವಾಲಿನ ಕೆಲಸವಾಗಿತ್ತು.

‘ರಾಜ್ಯದ ವಿವಿಧ ಭಾಗಗಳಿಂದ ಸಂರಕ್ಷಿಸಿದ ಸಿಂಹಗಳನ್ನು ಸಾಗಿಸುವು­ದಕ್ಕಿಂತ ಸಫಾರಿ ಸಿಂಹಗಳನ್ನು ಸ್ಥಳಾಂತರ ಮಾಡುವುದು ಕಷ್ಟದ ಕೆಲಸ. ಸಂರಕ್ಷಿತ ಸಿಂಹಗಳು ಹೆಚ್ಚಾಗಿ ಸರ್ಕಸ್‌ ಕಂಪೆನಿ­ಗಳಿಂದ ವಶಪಡಿಸಿಕೊಂಡು ತಂದಂಥವು. ಅವುಗಳು ಆದೇಶಗಳನ್ನು ಪಾಲನೆ ಮಾಡುತ್ತವೆ. ಯಾವುದೇ ತಕರಾರಿಲ್ಲದೆ ಪಂಜರದೊಳಗೆ ಹೋಗಿ ನಿಲ್ಲುವುದ­ರಿಂದ ಅವುಗಳನ್ನು ಸಾಗಿಸುವುದು ಸುಲಭ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಸಫಾರಿ ಪ್ರಾಣಿಗಳು ಹೆಚ್ಚು–ಕಡಿಮೆ ಕಾಡಿನ ಸ್ವಭಾವವನ್ನೇ ಹೊಂದಿರುತ್ತವೆ. ಅಲ್ಲದೆ, ಸಂರಕ್ಷಿಸಿದ ಪ್ರಾಣಿಗಳಿಗಿಂತ ಹೆಚ್ಚು ಸದೃಢವಾ­ಗಿರುತ್ತವೆ. ಹೀಗಾಗಿ ಅವುಗಳನ್ನು ಸ್ಥಳಾಂತರಿಸು­ವುದು ಸುಲಭ­ವಲ್ಲ’ ಎಂದು ಹೇಳಿದರು.

ಉದ್ಯಾನದ ಸಿಬ್ಬಂದಿ ತಾಳ್ಮೆಯನ್ನು ಹಾಗೇ ಬುಧವಾರ ಪರೀಕ್ಷಿಸಿದ್ದು ‘ನರಸಿಂಹ’ ಎಂಬ ಸಿಂಹ. ಪ್ರಜ್ಞೆ ತಪ್ಪುವ ಚುಚ್ಚುಮದ್ದು ನೀಡಿದರೂ ‘ನರಸಿಂಹ’ ಸುಲಭವಾಗಿ ಬಗ್ಗಲಿಲ್ಲ. ಸುಮಾರು ಎರಡು ಗಂಟೆಗಳ ಕಾಲ ಸಿಕ್ಕಾಪಟ್ಟೆ ಗಲಾಟೆ ಮಾಡಿದ ಈತ, ಅಕ್ಕ–ಪಕ್ಕದ ತಾಣಗಳಲ್ಲಿದ್ದ ಸಿಂಹಗಳಿಗೂ ಸಂದೇಶ ರವಾನಿಸುತ್ತಿದ್ದ.

ಚುಚ್ಚುಮದ್ದು ನೀಡಿ ಒಂದು ಗಂಟೆಯ ಬಳಿಕ, ಆತ ಪ್ರಜ್ಞೆ ತಪ್ಪಿರು­ವನೋ ಹೇಗೋ ಎಂಬುದನ್ನು ಪರೀಕ್ಷಿ­ಸಲು ಪ್ರಾಣಿ ಪರಿಪಾಲಕನೊಬ್ಬ ಬಾಗಿಲು ತೆಗೆದು ಒಳಹೋಗಲು ಹೆಜ್ಜೆ ಇಡುತ್ತಿದ್ದಂತೆ ‘ನರಸಿಂಹ’ ಎದ್ದುನಿಂತ. ತಕ್ಷಣ ಹೊರಬಂದ ಆ ಪ್ರಾಣಿ ಪರಿ­ಪಾಲಕ ಪಂಜರದ ಬಾಗಿಲು ಹಾಕಿ­ಕೊಂಡ. ಕೊನೆಗೆ ಸಿಂಹ ಹೊಟ್ಟೆಗೆ ಹಗ್ಗ ಕಟ್ಟಿ ಪಂಜರದೊಳಗೆ ಎಳೆದು ತರಲಾ­ಯಿತು. ಅಲ್ಲಿಂದ ಅದನ್ನು ಸ್ಥಳಾಂತರ ಮಾಡಲಾಯಿತು.

ಸಂತಾನವೃದ್ಧಿಗೆ ಯಾವುದೇ ನಿರ್ಬಂಧ ವಿಧಿಸದ ಕಾರಣ ಉದ್ಯಾನ­ದಲ್ಲಿ ಸಫಾರಿ ಸಿಂಹಗಳ ಸಂತತಿ ಹೆಚ್ಚು­ತ್ತಿದೆ. ಅವುಗಳಲ್ಲಿ ಕೆಲವನ್ನು ಲಖನೌ ಮೃಗಾಲಯಕ್ಕೆ ಸಾಗಿಸಬೇಕಿತ್ತು. ಆದರೆ, ಕಡತ ವಿನಿಮಯದಲ್ಲಿ ಆಗಿರುವ ವಿಳಂಬ­ದಿಂದ ಸಿಂಹಗಳ ಸಾಗಾಟ ಇನ್ನೂ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದರು.

ಹೆಣ್ಣು ಹುಲಿ ಸಾವು
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ‘ಯಶೋಧಾ’ ಎಂಬ 17 ವರ್ಷದ ಹೆಣ್ಣು ಹುಲಿ ಬುಧವಾರ ಸಾವನ್ನಪ್ಪಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಹುಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದೆ ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT