ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲುಸೀಮೆ ಜಿಲ್ಲೆಯಲ್ಲಿ ರೈಲಿಗೂ ಬರ

Last Updated 22 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಭಿವೃದ್ಧಿಯಿಂದ ವಿಮುಖವಾಗಿರುವ ಬಯಲುಸೀಮೆಯ ಚಿತ್ರದುರ್ಗ ಜಿಲ್ಲೆಯಲ್ಲಿ ರೈಲು ಸಂಪರ್ಕವೂ ಅತ್ಯಲ್ಪ ಪ್ರಮಾಣದಲ್ಲಿ ಇದೆ.  ಎರಡು ಪ್ರಮುಖ ರೈಲು ಮಾರ್ಗಗಳಿಗೆ ಜನತೆ ಬಹುದಿನಗಳಿಂದ ಒತ್ತಾಯಿಸುತ್ತ್ದ್ದಿದರೂ ಇದುವರೆಗೂ ಬೇಡಿಕೆ ಈಡೇರಿಲ್ಲ.

ದಾವಣಗೆರೆ -ಚಿತ್ರದುರ್ಗ -ತುಮಕೂರು ಹಾಗೂ ಚಿತ್ರದುರ್ಗ -ಜಗಳೂರು -ಕೊಟ್ಟೂರು ರೈಲು ಮಾರ್ಗಗಳನ್ನು ಅನುಷ್ಠಾನಗೊಳಿಸುವಂತೆ ವರ್ಷಗಳಿಂದ ಜನತೆ ಹೋರಾಟ ನಡೆಸುತ್ತಲೇ ಬಂದಿದ್ದಾರೆ.

ದಾವಣಗೆರೆ -ಚಿತ್ರದುರ್ಗ - ತುಮಕೂರು ನಡುವಿನ 200 ಕಿಲೋಮೀಟರ್ ಉದ್ದದ ನೇರ ರೈಲು ಮಾರ್ಗ ಅನುಷ್ಠಾನಗೊಳಿಸುವಂತೆ ದಶಕಗಳಿಂದ ಇಲ್ಲಿನ ಜನತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ರೂ. 913 ಕೋಟಿ ಮೊತ್ತದ ಈ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಆಸಕ್ತಿ ವಹಿಸಿ ಅರ್ಧ ವೆಚ್ಚ ಭರಿಸಲು ಮುಂದಾಯಿತು. ಜತೆಗೆ, ರೈಲ್ವೆ ಇಲಾಖೆಗೆ ಬೇಕಾಗುವ ಜಾಗ ನೀಡುವುದಾಗಿಯೂ ಪ್ರಕಟಿಸಿತು.

ಪೂರ್ಣಗೊಂಡ ಸಮೀಕ್ಷೆ: ಇದರಿಂದಾಗಿ ಕೇಂದ್ರ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿ 2010ರಲ್ಲಿ ರೈಲ್ವೆ ಬಜೆಟ್‌ನಲ್ಲಿ ಸೇರಿಸಿತು. ರೈಲು ಮಾರ್ಗಕ್ಕೆ ಬೇಕಾಗುವ ಸ್ಥಳದ ಸಮೀಕ್ಷೆ ಕಾರ್ಯಕ್ಕೆ ಟೆಂಡರ್ ಕರೆಯಲಾಯಿತು. ರೂ.1 ಕೋಟಿ   ವೆಚ್ಚದಲ್ಲಿ ಕೈಗೊಂಡ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ರೈಲ್ವೆ ಇಲಾಖೆಗೆ ಸಂಪೂರ್ಣ ವರದಿ ನೀಡಲಾಗಿದೆ. ಇಲಾಖೆ ಈ ವರದಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಮುಂದಿನ ಕ್ರಮಗಳ ಕುರಿತು ಸೂಚನೆಗಳನ್ನು ನೀಡಿ, ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗಿದೆ.

ಸಮಯ, ವೆಚ್ಚ  ಹೆಚ್ಚಳ: ಸದ್ಯಕ್ಕೆ ಬೆಂಗಳೂರಿನಿಂದ ದಾವಣಗೆರೆ ಸಂಪರ್ಕಿಸುವ ರೈಲು ಮಾರ್ಗ ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ಚಿಕ್ಕಜಾಜೂರು ಮೂಲಕ ಹಾದು ಹೋಗುತ್ತಿದ್ದು, ಪ್ರಯಾಣದ ಸಮಯ ಮತ್ತು ವೆಚ್ಚ ಹೆಚ್ಚಾಗುತ್ತಿದೆ. ಇದರಿಂದ ಬೆಂಗಳೂರಿಗೆ ತೆರಳುವ ಬಹುತೇಕ ಪ್ರಯಾಣಿಕರು ಬಸ್‌ಗಳನ್ನೇ ಅವಲಂಬಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ-13 ಮತ್ತು *ರ ಸಂಗಮ ಸ್ಥಳ ಚಿತ್ರದುರ್ಗವಾಗಿದೆ.

ರಾಷ್ಟ್ರೀಯ ಹೆದ್ದಾರಿ 13ರ ಮೂಲಕ ಉತ್ತರ ಭಾರತದ ರಾಜ್ಯಗಳು, ಮಹಾರಾಷ್ಟ್ರದ ಕಡೆಗಿನ ಎಲ್ಲ ರಾಜ್ಯಗಳ ವಾಹನಗಳು ಚಿತ್ರದುರ್ಗದ ಮೂಲಕ ಸಂಚರಿಸುತ್ತವೆ. ಇದರಿಂದಾಗಿ ದಾವಣಗೆರೆ ಮತ್ತು ತುಮಕೂರು ನಡುವಿನ ಹೆದ್ದಾರಿಯಲ್ಲಿ ಸದಾ ವಾಹನ ಸಂಚಾರ ದಟ್ಟಣೆ ಇರುತ್ತದೆ. ಚತುಷ್ಪಥ ಮಾರ್ಗವಿದ್ದರೂ ಇಲ್ಲಿ ಸರಣಿ ಅಪಘಾತಗಳು ಸಾಮಾನ್ಯ. 

ಕಡಿಮೆಯಾಗುವ ಅಂತರ: ತುಮಕೂರಿನಿಂದ ಶಿರಾ, ಹಿರಿಯೂರು ಚಿತ್ರದುರ್ಗ ಮುಖಾಂತರ ದಾವಣಗೆರೆಗೆ ನೇರ ಸಂಪರ್ಕ ಕಲ್ಪಿಸಿದರೆ ಬೆಂಗಳೂರು- ಹುಬ್ಬಳ್ಳಿ- ಮುಂಬೈ ಮಧ್ಯೆ 120 ಕಿಲೋ ಮೀಟರ್ ಅಂತರ ಕಡಿಮೆಯಾಗುತ್ತದೆ.

2 ಗಂಟೆಗೂ ಹೆಚ್ಚು ಪ್ರಯಾಣದ ಅತ್ಯಮೂಲ್ಯ ಸಮಯವೂ ಉಳಿತಾಯವಾಗಲಿದೆ. ಜತೆಗೆ, ಇಂಧನ ಮತ್ತಿತರ ವೆಚ್ಚಗಳು ಸಹ ಕಡಿಮೆಯಾಗಲಿವೆ. ವಾಣಿಜ್ಯ-ವಹಿವಾಟು, ಕೃಷಿ ಉತ್ಪನ್ನಗಳ ಸಾಗಾಣಿಕೆ, ಪ್ರವಾಸೋದ್ಯಮ, ಅದಿರು ಸಾಗಾಣಿಕೆ ಮತ್ತು ಕೈಗಾರಿಕೆ ಬೆಳವಣಿಗೆಗೆ ಅನುಕೂಲವಾಗುವ ಈ ರೈಲು ಮಾರ್ಗ ಅನುಷ್ಠಾನಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒತ್ತಾಸೆಯಾಗಿ ನಿಲ್ಲಬೇಕು ಎನ್ನುವುದು ಇಲ್ಲಿನ ಜನರ ಆಗ್ರಹ. ಚಿತ್ರದುರ್ಗ -ಜಗಳೂರು -ಕೊಟ್ಟೂರು ರೈಲು ಮಾರ್ಗ ಪ್ರಸ್ತಾವ ಅನುಷ್ಠಾನಗೊಳಿಸುವ ಬಗ್ಗೆ ಜನರ ದನಿಯೂ ಕ್ಷೀಣವಾಗಿದೆ. ಹೀಗಾಗಿ, ಸರ್ಕಾರವೂ ಈ ಬಗ್ಗೆ ಗಮನಹರಿಸಿಲ್ಲ.

ಜಿಲ್ಲೆಯ ಪ್ರಮುಖ ಬೇಡಿಕೆಗಳು...

*ಚಿತ್ರದುರ್ಗ-ಬೆಂಗಳೂರು ಎಕ್ಸ್‌ಪ್ರೆಸ್ ರೈಲು
*ಚಿತ್ರದುರ್ಗ-ಅರಸೀಕೆರೆ-ಮೈಸೂರು ಮಾರ್ಗವಾಗಿ ವಿಜಯವಾಡ-ಮಂಗಳೂರು ರೈಲು
*ಹುಬ್ಬಳ್ಳಿ-ಚಿತ್ರದುರ್ಗ ರೈಲು ಸಂಪರ್ಕ ಪುನರಾರಂಭ
*ರೈಲ್ವೆ ಮಾರ್ಗಗಳಲ್ಲಿ ಮೇಲು ಸೇತುವೆ
*ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ ಸಂಪರ್ಕ ಕಲ್ಪಿಸುವ ಚಿತ್ರದುರ್ಗ-ಚಿಕ್ಕಜಾಜೂರು ಪುಷ್‌ಬ್ಯಾಕ್ ರೈಲು
*ಚಿತ್ರದುರ್ಗ ಮೂಲಕ ಮೈಸೂರು-ಶಿರಡಿ ರೈಲು 
*ಹೊಸಪೇಟೆ- ಬೆಂಗಳೂರು ರೈಲಿಗೆ ಎಸಿ ಕೋಚ್
*ಹೊಸಪೇಟೆ- ಬೆಂಗಳೂರು ಹಗಲು ರೈಲು
*ಹಳಿಯೂರು, ಅಮೃತಾಪುರ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ರೈಲು ನಿಲ್ದಾಣಗಳ ಅಭಿವೃದ್ಧಿ
*ಚಿತ್ರದುರ್ಗ ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ಗೂಡ್ಸ್ ರೈಲು ಮಾರ್ಗಗಳು
*ರೈಲು ಬಿಡಿಭಾಗಗಳ ಕಾರ್ಖಾನೆ ಅಥವಾ ಉದ್ಯೋಗ ಸೃಷ್ಟಿಸುವ ರೈಲ್ವೆಗೆ ಸಂಬಂಧಿಸಿದ ಕಾರ್ಖಾನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT