ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ನಿರ್ವಹಣೆಗೆ ಮುಖ್ಯಮಂತ್ರಿ ಸೂಚನೆ

Last Updated 11 ಅಕ್ಟೋಬರ್ 2011, 8:40 IST
ಅಕ್ಷರ ಗಾತ್ರ

ಬೆಳಗಾವಿ: “ಜಿಲ್ಲೆಯಲ್ಲಿ ಬರದ ಛಾಯೆ ಕಾಣಿಸಿಕೊಂಡಿರುವ ನಾಲ್ಕೈದು ತಾಲ್ಲೂಕುಗಳಲ್ಲಿ ತಕ್ಷಣ ಪರಿಹಾರ ಕಾಮಗಾರಿ ಕೈಗೊಳ್ಳಬೇಕು. ಹಳ್ಳಿಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು” ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಬೆಳಗಾವಿ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, “ಜಿಲ್ಲೆಯಲ್ಲಿ ಈಗಾಗಲೇ ಅಥಣಿ ಹಾಗೂ ಸವದತ್ತಿ ತಾಲ್ಲೂಕುಗಳನ್ನು ಬರ ಪ್ರದೇಶಗಳೆಂದು ಘೋಷಿಸಲಾಗಿದೆ. ಅಗತ್ಯ ಬಿದ್ದರೆ ರಾಯಬಾಗ ಹಾಗೂ ಹುಕ್ಕೇರಿಯನ್ನೂ ಬರ ಪ್ರದೇಶವೆಂದು ಘೋಷಿಸಲಾಗುವುದು. ಬರ ನಿರ್ವಹಣೆಗೆ ಸರ್ಕಾರದ ಬಳಿ ಹಣದ ಕೊರತೆಯಿಲ್ಲ. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ನಿಧಿಯಡಿ ರೂ. 36.80 ಕೋಟಿ ಇದೆ. ಹೀಗಾಗಿ ಅಧಿಕಾರಿಗಳು ತುರ್ತು ಕೆಲಸಗಳನ್ನು ಕೈಗೊಳ್ಳಬೇಕು” ಎಂದು ಆದೇಶಿಸಿದರು.

“ಬದಲಿ ಬೆಳೆ ಬೆಳೆಯಲು ಸಾಧ್ಯತೆ ಇರುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಬೇಕು. ಬರವನ್ನು ಎದುರಿಸಲು ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಜನರಿಗೆ ಕೆಲಸ ನೀಡಬೇಕು” ಎಂದ ಮುಖ್ಯಮಂತ್ರಿಗಳು, “ಬರ ಹಾಗೂ ಅಭಿವೃದ್ಧಿ ವಿಷಯದಲ್ಲಿ ರಾಜಕೀಯಕ್ಕೆ ಅವಕಾಶ ನೀಡಬಾರದು. ಯಾವುದೇ ತಾಲ್ಲೂಕಿಗೆ ಅನ್ಯಾಯವಾದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ” ಎಂದು ಸಲಹೆ ನೀಡಿದರು.

ಶಾಸಕ ಪ್ರಕಾಶ ಹುಕ್ಕೇರಿ ಮಾತನಾಡಿ, “ವಾಡಿಕೆಯ ಮಳೆ ಮಾಪನ ತೀರಾ ಹಳೆಯದಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಅನಿುಮಿತ ಮಳೆಯಿಂದಾಗಿ ಬಹುತೇಕ ಎಲ್ಲ ತಾಲ್ಲೂಕು ಬರವನ್ನು ಎದುರಿಸುತ್ತಿದೆ. ಹೀಗಾಗಿ ಎಲ್ಲ 10 ತಾಲ್ಲೂಕುಗಳನ್ನು ಬರ ಪ್ರದೇಶಗಳೆಂದು ಘೋಷಿಸಬೇಕು” ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಸಭೆಗೆ ವಿವರ ನೀಡಿದ ಜಿಲ್ಲಾಧಿಕಾರಿ ಡಾ. ಏಕ್‌ರೂಪ್ ಕೌರ್, “ಜಿಲ್ಲೆಗೆ 26 ಲಕ್ಷ ಮೆಟ್ರಿಕ್ ಟನ್ ಮೇವು ಅಗತ್ಯವಿದೆ. ಸದ್ಯ ನಮ್ಮ ಬಳಿ 8 ಲಕ್ಷ ಟನ್ ದಾಸ್ತಾನು ಇದೆ. ಹೀಗಾಗಿ ಇನ್ನೂ ಮೂರು ತಿಂಗಳು ಮೇವನ್ನು ಜಿಲ್ಲೆಯಿಂದ ಹೊರಗಡೆ ಸಾಗಿಸಲು ನಿಷೇಧ ಹೇರಲಾಗಿದೆ. ಮುಂಗಾರು ಕಟಾವು ನಡೆದ ಬಳಿಕ ಇನ್ನಷ್ಟು ಮೇವು ಸಿಗಲಿದೆ” ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಹಕಾರಿ ಸಚಿವ ಲಕ್ಷ್ಮಣ ಸವದಿ, “ಸಕ್ಕರೆ ಕಾರ್ಖಾನೆಗಳು ಆರಂಭವಾಗಿದ್ದರಿಂದ ಇನ್ನು ನಾಲ್ಕು ತಿಂಗಳು ಜಾನುವಾರುಗಳಿಗೆ ಮೇವುಗಳು ಸಿಗಲಿವೆ. ಬರ ಬಿದ್ದಿರುವುದರಿಂದ ಮಾರ್ಚ್‌ನಿಂದ ನಾಲ್ಕು ತಿಂಗಳು ಮೇವಿನ ಸಮಸ್ಯೆ ಎದುರಾಗಲಿದೆ. ಹೀಗಾಗಿ ನೀರಾವರಿ ಪ್ರದೇಶಗಳಲ್ಲಿ ಮೇವಿನ ಬೆಳೆ ಬೆಳೆಯಲು ಕ್ರಮ ಕೈಗೊಳ್ಳಬೇಕು. ಅಗತ್ಯವಿರುವ ಕಡೆ ಗೋಶಾಲೆ ತೆರೆಯಬೇಕು. ಒಂದೆರಡು ಜಾನುವಾರು ಇರುವವರು ಇಲ್ಲಿಗೆ ಕರೆದುಕೊಂಡು ಬರಲಾಗದೇ ಇರುವುದರಿಂದ ಅಂಥವುಗಳಿಗೆ ನೇರವಾಗಿ ಮೇವನ್ನೇ ನೀಡುವ ವ್ಯವಸ್ಥೆ ಮಾಡಬೇಕು” ಎಂದು ಸಲಹೆ ನೀಡಿದರು.

“ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಬರ ತಾಲ್ಲೂಕುಗಳಲ್ಲಿ ಪ್ರವಾಸ ಕೈಗೊಳ್ಳಬೇಕು. ಅಗತ್ಯ ಮೇವಿನ ಪೂರೈಕೆಗೆ ಕ್ರಮ ಕೈಗೊಳ್ಳಬೇಕು” ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಕಡತ ವಿಲೇವಾರಿ: ಅಧಿಕಾರಿಗಳು ಕಡತಗಳನ್ನು 15 ದಿನಗಳಲ್ಲಿ ವಿಲೇವಾರಿ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳಿಗೆ ಕನಿಷ್ಠ ಒಂದು ಬಾರಿಯಾದರೂ ಜಿಲ್ಲೆಯ ಪ್ರಗತಿ ಪರಿಶೀಲನೆಯ ಸಮಗ್ರ ವರದಿಯನ್ನು ನನಗೆ ನೀಡಬೇಕು ಎಂದು ಸಿಎಂ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಸಚಿವ ಬಾಲಚಂದ್ರ ಜಾರಕಿಹೊಳಿ, ಸಿ.ಎಂ. ಉದಾಸಿ, ರಾಜ್ಯ ಸಭೆ ಸದಸ್ಯ ಪ್ರಭಾಕರ ಕೋರೆ, ಸಂಸದ ಸುರೇಶ ಅಂಗಡಿ ಮತ್ತಿತರರು ಹಾಜರಿದ್ದರು. 

ಅನರ್ಹ ಫಲಾನುಭವಿಗಳು: ತನಿಖೆಗೆ ಆಗ್ರಹ
“ವೃದ್ಧಾಪ್ಯವೇತನ, ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ಯೋಜನೆಗಳಲ್ಲಿ 1.16 ಲಕ್ಷ ಅನರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು” ಎಂದು ಶಾಸಕ ಪ್ರಕಾಶ ಹುಕ್ಕೇರಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

“ಜಿಲ್ಲೆಯಲ್ಲಿ 3.42 ಲಕ್ಷ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಇವುಗಳ ಪೈಕಿ 1.16 ಲಕ್ಷ ಅನರ್ಹ ಫಲಾನುಭವಿಗಳೆಂದು ಈಗ ಗುರುತಿಸಲಾಗಿದೆ. ಇದಕ್ಕೆ ಯಾರು ಹೊಣೆ? ಹೀಗಾಗಿ ಇದರಲ್ಲಿ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಉಪ ವಿಭಾಗಾಧಿಕಾರಿಗಳಿಂದ ತನಿಖೆ ನಡೆಸಬೇಕು.

ಫೆಬ್ರುವರಿ ತಿಂಗಳಿನಿಂದ ಬಿಡುಗಡೆಯಾಗದ ವೃದ್ಧಾಪ್ಯ- ಸಂಧ್ಯಾ ಸುರಕ್ಷಾ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸದಾನಂದ ಗೌಡ, “ಬರಿ ತನಿಖೆ ನಡೆಸುತ್ತಿದ್ದರೆ ಪ್ರಯೋಜನ ಇಲ್ಲ. ಇದನ್ನು ಸುಸ್ಥಿತಿಗೆ ಹೇಗೆ ತರಬಹುದು ಎಂಬ ಬಗ್ಗೆ ಕ್ರಮ ಕೈಗೊಳ್ಳೋಣ. ಮೊನ್ನೆಯಷ್ಟೇ ಸೆಪ್ಟೆಂಬರ್ ತಿಂಗಳವರೆಗಿನ ವೇತನವನ್ನು ಬಿಡುಗಡೆ ಮಾಡಿದ್ದೇವೆ” ಎಂದು ಹೇಳಿದರು.

ಕುಡಿಯುವ ನೀರು ಪೂರೈಕೆಗೆ ಆದೇಶ
“ರಾಜ್ಯದಲ್ಲಿನ ವಿದ್ಯುತ್ ಕೊರತೆಯು ಯಾವುದೇ ಕಾರಣಕ್ಕೂ ಜಿಲ್ಲೆಯ ಹಳ್ಳಿಗಳಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು” ಎಂದು ಮುಖ್ಯಮಂತ್ರಿ ಸದಾನಂದ ಗೌಡ ಹೆಸ್ಕಾಂ ಅಧಿಕಾರಿಗಳಿಗೆ ಆದೇಶಿಸಿದರು.

“ರಾಜ್ಯದಲ್ಲಿ ಇನ್ನೂ ಒಂದು ತಿಂಗಳ ಕಾಲ ವಿದ್ಯುತ್ ತೀವ್ರ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಿದ್ದರೂ ಸಹ ಇರುವ ವಿದ್ಯುತ್ತನ್ನು ಕುಡಿಯುವ ನೀರು ಪೂರೈಕೆಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು” ಎಂದು ಹೇಳಿದರು.

ರಾಯಬಾಗ ಶಾಸಕ ಶ್ಯಾಮ ಘಾಟಗೆ, “ರಾಯಬಾಗ ತಾಲ್ಲೂಕಿನಲ್ಲಿ 18 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಲೇ ತಲೆದೋರಿದೆ. ಹೀಗಾಗಿ ಹಳ್ಳಿಗಳಲ್ಲಿ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಈ ಭಾಗದಲ್ಲಿ ರೈತರು ಕೃಷ್ಣಾ ನದಿಯಿಂದ ಪಂಪ್‌ಸೆಟ್ ಮೂಲಕ ನೀರು ಪಡೆದುಕೊಳ್ಳುವುದರಿಂದ ಕನಿಷ್ಠ 6 ಗಂಟೆಯಾದರೂ ಮೂರು ಫೇಸ್ ವಿದ್ಯುತ್ ನೀಡಬೇಕು” ಎಂದು ಒತ್ತಾಯಿಸಿದರು.•

ಹಲವು ಗ್ರಾಮಗಳಲ್ಲಿ ವಿದ್ಯುತ್ ಬಿಲ್ ಪಾವತಿಸದೇ ಇರುವುದರಿಂದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಹೀಗಾಗಿ ಈ ಯೋಜನೆಯ ನಿರ್ವಹಣೆ ಹಾಗೂ ವಿದ್ಯುತ್ ಬಿಲ್ ಕಟ್ಟುವ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯಿತಿಗೆ ವಹಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳನ್ನು ಸಭೆಯಲ್ಲಿ ಒತ್ತಾಯಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT