ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ: ರಾಜಕೀಯ ಬಣ್ಣ ಬೇಡ

Last Updated 8 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ: `ಕರ್ನಾಟಕದ ಬರಗಾಲ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರಕ್ಕೂ ಸಮಾನ ಆತಂಕವಿದ್ದು, ಅಂತರಸಚಿವಾಲಯ ತಂಡದ ವರದಿ ಬಂದ ತಕ್ಷಣ ಹಿರಿಯ ಸಚಿವರನ್ನೊಳಗೊಂಡ ಉನ್ನತಾಧಿಕಾರ ಸಮಿತಿ ನೆರವು ಬಿಡುಗಡೆ ಮಾಡುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಅನಗತ್ಯವಾಗಿ ಈ ವಿಷಯಕ್ಕೆ ರಾಜಕೀಯ ಬಣ್ಣ ಕೊಡುವುದು ಬೇಡ~ ಎಂದು ಕೃಷಿ ಖಾತೆ ರಾಜ್ಯ ಸಚಿವ ಹರೀಶ್ ರಾವತ್ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.

ಕೇಂದ್ರ ತಂಡ ಮೇ 13ರಿಂದ ರಾಜ್ಯದಲ್ಲಿ ಪ್ರವಾಸ ಮಾಡಲಿದೆ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ನೇತೃತ್ವದ ಸರ್ವಪಕ್ಷ ನಿಯೋಗ ಮನವಿ ಕೊಟ್ಟ ತಕ್ಷಣ ಅಂತರಸಚಿವಾಲಯ ತಂಡ ರಚಿಸುವ ಪ್ರಕ್ರಿಯೆ ನಡೆಯುತ್ತಿದೆ. ತಂಡ ರಚನೆಗೆ ಕೆಲವು ವಿಧಿವಿಧಾನಗಳಿರುವುದರಿಂದ ಸ್ವಲ್ಪ ಸಮಯ ಹಿಡಿದಿದೆ. ತಂಡ ಹಿಂತಿರುಗಿ ಬಂದ ತಕ್ಷಣ ವರದಿ ಕೊಡಲಿದೆ. ಈ ವರದಿ ಮೇಲೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾವತ್ ವಿವರಿಸಿದರು.

ರಾಜ್ಯ ಸರ್ಕಾರ 2011ರ ನವೆಂಬರ್ 28ರಂದು ಕೇಂದ್ರದಿಂದ 723.24 ಕೋಟಿ ನೆರವಿಗೆ ಮನವಿ ಸಲ್ಲಿಸಿತ್ತು. 23 ಜಿಲ್ಲೆಗಳಲ್ಲಿನ 99 ತಾಲೂಕುಗಳಲ್ಲಿ ಬರಗಾಲವಿದೆ ಎಂದು ಹೇಳಿತ್ತು. ಈ ಮನವಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಅಧಿಕಾರಿಗಳನ್ನು ಒಳಗೊಂಡ ತಂಡ ಡಿಸೆಂಬರ್ 15ರಿಂದ 18ರವರೆಗೆ ರಾಜ್ಯದಲ್ಲಿ ಪ್ರವಾಸ ಮಾಡಿ ವರದಿ ಸಲ್ಲಿಸಿತು.
 
ರಾಜ್ಯ ಸರ್ಕಾರವು ತಂಡಕ್ಕೆ ಪರಿಷ್ಕೃತ ಮನವಿ ಸಲ್ಲಿಸಿ 109 ತಾಲೂಕುಗಳಲ್ಲಿ ಬರಗಾಲವಿದ್ದು ರಾಷ್ಟ್ರೀಯ ವಿಕೋಪ ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಯಿಂದ 2605 ಕೋಟಿ ರೂಪಾಯಿ ಕೇಳಿತು.

ಆದರೆ, ಕೇಂದ್ರ ತಂಡ 296.58ಕೋಟಿಗೆ ಶಿಫಾರಸು ಮಾಡಿತು. ಅಂತಿಮವಾಗಿ ಕೇಂದ್ರ ಸರ್ಕಾರ 186.68ಕೋಟಿಗೆ ಅನುಮೋದನೆ ನೀಡಿ ತಕ್ಷಣ 70.23ಕೋಟಿ ಬಿಡುಗಡೆ ಮಾಡಿತು. ಉಳಿದ 116.45 ಕೋಟಿಯನ್ನು `ರಾಜ್ಯ ವಿಕೋಪ ಪರಿಹಾರ ನಿಧಿ~  (ಎಸ್‌ಡಿಆರ್‌ಎಫ್) ಗೆ ಹೊಂದಿಸಿತು. ಈಗ ಸರ್ಕಾರ ಎರಡನೇ ಮನವಿ ನೀಡಿದೆ. ಒಂದನೇ ಹಾಗೂ ಎರಡನೇ ಮನವಿ  ನಷ್ಟದ ಅಂದಾಜು ನಡುವೆ ಭಾರಿ ಅಂತರವಿರುವ ಹಿನ್ನೆಲೆಯಲ್ಲಿ ಹೊಸದಾಗಿ ಪರಿಸ್ಥಿತಿ ಅವಲೋಕನಕ್ಕೆ ಮತ್ತೊಂದು ತಂಡ ಕಳುಹಿಸಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲಿ ಅಂತರ್ಜಲ ಕುಸಿತ ಆತಂಕ ಹುಟ್ಟಿಸಿದೆ. ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಅಂತರ್ಜಲ ಮಂಡಳಿ ರಾಜ್ಯ ಅಂತರ್ಜಲ ಮಂಡಳಿ ಜತೆಗೂಡಿ ಕಾರ್ಯಕ್ರಮ ರೂಪಿಸಲಿವೆ ಎಂದು ಭರವಸೆ ನೀಡಿದರು.

ಪ್ರಕೃತಿ ವಿಕೋಪ ಪರಿಹಾರ ನಿಗದಿಗೆ ಸಂಬಂಧಿಸಿದ ನಿಯಮಾವಳಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಹಣಕಾಸು ಆಯೋಗದ ಶಿಫಾರಸುಗಳನ್ನು ಆಧರಿಸಿ ನಿಯಮಾವಳಿ ಸಮಿತಿಯು ಈ ನಿಯಮಾವಳಿ ರೂಪಿಸಿದೆ.

ಇದು 2015ರವರೆಗೆ ಜಾರಿಯಲ್ಲಿರುತ್ತದೆ ಎಂದು ರಾವತ್ ಖಚಿತಪಡಿಸಿದರು. ಕೇಂದ್ರ ಸರ್ಕಾರ ಇಡೀ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯಕ್ಕೆ ನೆರವು ನೀಡಲಿದೆ ಎಂದು ರಾವತ್ ಆಶ್ವಾಸನೆ ನೀಡಿದರು. ಸಚಿವರ ಈ ಉತ್ತರದಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT