ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ, ರೋಗ: ರೂ 800 ಕೋಟಿಗೂ ಹೆಚ್ಚು ನಷ್ಟ

Last Updated 12 ಡಿಸೆಂಬರ್ 2013, 9:47 IST
ಅಕ್ಷರ ಗಾತ್ರ

ತುಮಕೂರು: ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ ಬೆಳೆಗಾರರ ಬ್ಯಾಂಕ್‌ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ನಿರಾಕರಿಸಿದ ಬೆನ್ನಲ್ಲೇ ರೈತರಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ.

ರಸ ಸೋರುವ ರೋಗ, ಕಾಂಡಕೊರಕ, ಕಪ್ಪುತಲೆ ಹುಳ ಮುಂತಾದ ರೋಗಗಳಿಗೆ ಜಿಲ್ಲೆಯ ತೆಂಗು ತುತ್ತಾಗಿದೆ. ರೋಗದಿಂದಷ್ಟೇ ಅಲ್ಲದೆ ಬರದಿಂದಲೂ ಹಾನಿಯಾಗಿದ್ದು, ಸಾವಿರಾರು ಹೆಕ್ಟೇರು ತೆಂಗು ಒಣಗಿ ನಿಂತಿದೆ.
ಕೇಂದ್ರ ಅಧ್ಯಯನ ತಂಡ ತೆಂಗು ಬೆಳೆಯ ಪ್ರದೇಶಕ್ಕೆ ಭೇಟಿ ನೀಡಿ ತೆರಳಿದ್ದರೂ ಈವರೆಗೂ ಪರಿಹಾರ ಪ್ಯಾಕೇಜ್‌ ಬಂದಿಲ್ಲ. ಪರಿಹಾರದ ಹಣ ಕೂಡ ಅತ್ಯಲ್ಪವಾಗಿರುವ ಕಾರಣ ಇದರಿಂದ ಹೆಚ್ಚಿನ ಪ್ರಯೋಜನವಾಗದು ಎಂದು ವಿಶ್ಲೇಷಿಸಲಾಗುತ್ತಿದೆ.

ಈ ವರ್ಷವೂ ಬರ ತನ್ನ ಆರ್ಭಟ ತೋರಿದ್ದು ಬೇಸಿಗೆಗೆ ಮುನ್ನವೇ ಗುಬ್ಬಿ, ತುರುವೇಕೆರೆ ಚಿಕ್ಕನಾಯಕನಹಳ್ಳಿ, ತಿಪಟೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ ತೆಂಗು, ಅಡಿಕೆ ತೋಟಗಳು ಒಣಗುತ್ತಿರುವುದು ಕಾಣುತ್ತಿದೆ. ಅಂತರ್ಜಲ ಕುಸಿಯುತ್ತಿದ್ದು ಕೊಳವೆಬಾವಿ ರೈತರ ಪಾಲಿಗೆ ಉರುಳಾಗಿ ಪರಿಣಮಿಸ ತೊಡಗಿವೆ ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಜಿಲ್ಲೆಯಲ್ಲಿ ಆಗಸ್ಟ್ ತಿಂಗಳ ಕೊನೆ ವೇಳೆಗೆ 41,314 ಹೆಕ್ಟೇರ್‌ ವಿಸ್ತೀರ್ಣದಲ್ಲಿ ತೆಂಗು  ಒಣಗಿದೆ. ಇದರಿಂದ  75,788 ಕುಟುಂಬಗಳ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ.

ಒಂದು ಹೆಕ್ಟೇರ್‌ಗೆ 20 ಸಾವಿರ ತೆಂಗಿನಕಾಯಿಯಂತೆ ಲೆಕ್ಕ ಹಾಕಿದರೂ ನಾಶವಾಗಿರುವ 41314 ಹೆಕ್ಟೇರ್‌ ತೆಂಗಿನ ತೋಟದಿಂದ ಸುಮಾರು ರೂ. 800 ಕೋಟಿ ನಷ್ಟವುಂಟಾಗಿದೆ.

ಜಿಲ್ಲೆಯಲ್ಲಿ ಹೆಕ್ಟೇರ್‌ಗೆ 20 ಸಾವಿರಕ್ಕೂ ಹೆಚ್ಚು ಇಳುವರಿ ಬರುವುದರಿಂದ ನಷ್ಟದ ಪ್ರಮಾಣ ಇನ್ನೂ ಅಧಿಕ ಎಂದು ಅಂದಾಜಿಸಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ನಷ್ಟವನ್ನು ರೈತರು ತಡೆದುಕೊಳ್ಳುವುದು ಕಷ್ಟಕರವಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ­ಯೊಬ್ಬರು ತಿಳಿಸಿದರು.

ವಾರ್ಷಿಕ ಸುಮಾರು ರೂ. 4,000 ಸಾವಿರ ಕೋಟಿ ವಹಿವಾಟಿನ ಅಡಿಕೆ ಬೆಳೆಗಾರರಲ್ಲೂ ಕೇಂದ್ರ ಸರ್ಕಾರದ ನಿರ್ಧಾರ ಆಘಾತ ತಂದಿದೆ. ಬರದಿಂದಾಗಿ 8,696 ಹೆಕ್ಟೇರ್‌ನಷ್ಟು ಅಡಿಕೆ ತೋಟ ಒಣಗಿದೆ ಎಂದು ತೋಟಗಾರಿಕಾ ಇಲಾಖೆಯೇ ಅಂದಾಜು ಮಾಡಿದೆ.

ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಳದಿ ರೋಗಕ್ಕೆ ಅಡಿಕೆ ನಾಶವಾಗಿದೆ. ಈ ಜಿಲ್ಲೆಗಳಲ್ಲಿ ಅಡಿಕೆ ಬೆಳೆಗಾರರ ನೆರವಿಗೆ ಬರಲು ಕೇಂದ್ರ ಸರ್ಕಾರ ಗೋರಕ್‌ ಸಿಂಗ್ ಸಮಿತಿ ನೇಮಕ ಮಾಡಿತ್ತು. ಆದರೆ ಬಯಲುಸೀಮೆ ಚಿತ್ರಣ, ಪರಿಸ್ಥಿತಿಯೇ ಬೇರೆಯಿದ್ದು ರೋಗಕ್ಕಿಂತಲೂ ಬರದಿಂದಾಗಿ ತೋಟ ಒಣಗತೊಡಗಿವೆ. ಆದರೂ ಜಿಲ್ಲೆಯ ಬೆಳೆಗಾರರಿಗೆ ನೆರವಿನ ಹಸ್ತ ಚಾಚುತ್ತಿಲ್ಲವೆಂಬ ಅಸಮಾಧಾನ, ಆಕ್ರೋಶ ರೈತರಲ್ಲಿ ವ್ಯಕ್ತವಾಗಿದೆ.

ತೆಂಗು, ಅಡಿಕೆ ಜತೆಗೆ ಉಪ ಬೆಳೆಯಾದ ಬಾಳೆ ಕೂಡ ರೈತರ ಬದುಕನ್ನು  ಬಂಗಾರ ಮಾಡಿಲ್ಲ. ಜಿಲ್ಲೆಯಲ್ಲಿ ಬರದಿಂದಾಗಿ 1812 ಹೆಕ್ಟೇರ್‌ನಷ್ಟು ಬಾಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.

ಜಿಲ್ಲೆಯ ಆರ್ಥಿಕತೆಯು ಬದುಕು ತೆಂಗು, ಅಡಿಕೆ ಮೇಲೆ ನಿಂತಿದೆ. ಬರದಿಂದಾಗಿ ಪ್ರತಿ ಬೆಳೆಗಾರ ಹೆಚ್ಚುವರಿಯಾಗಿ ಕೊಳವೆಬಾವಿ ಕೊರೆಸಲು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾರೆ. ಬ್ಯಾಂಕ್‌ನಲ್ಲಿ ಸಾಲದ ಪ್ರಮಾಣವೂ ಹೆಚ್ಚಿರುವುದು ಕಂಡುಬಂದಿದೆ.

ಬ್ಯಾಂಕ್‌ ಸಾಲ ಮಾತ್ರವಲ್ಲದೇ ಚಿನ್ನಾಭರಣ ಅಡವಿಟ್ಟು ಕೊಳವೆಬಾವಿಗೆ ಹಣ ಸುರಿದಿದ್ದಾರೆ. ಕೇಂದ್ರ ಅಥವಾ ರಾಜ್ಯ ಸರ್ಕಾರ ಬ್ಯಾಂಕ್‌ ಸಾಲ ಮನ್ನಾ ಮಾಡದಿದ್ದಲ್ಲಿ ಆತ್ಮಹತ್ಯೆ ಸರಣಿ ಹೆಚ್ಚಬಹುದು. ಅಷ್ಟು ಮಾತ್ರವಲ್ಲ ಮಕ್ಕಳ ಶಿಕ್ಷಣದ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಹಾಗೂ ತೆಂಗು ಬೆಳೆಗಾರರಾದ ಸಿಂಗದಹಳ್ಳಿ ರಾಜ್‌ಕುಮಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಈ ವರ್ಷ ಬೇಸಿಗೆಗೆ ಮುನ್ನವೇ ತೋಟಗಳು ಒಣಗ ತೊಡಗಿದ್ದು ಕಳೆದ ವರ್ಷದ ಕೊಳವೆಬಾವಿ ಸಾಲವೇ ತೀರಿಲ್ಲ. ಸರ್ಕಾರ ಸಾಲ ಮನ್ನಾ ಮಾಡದಿದ್ದರೆ ಜನತೆ ಊರು ಬಿಡಬೇಕಾಗುವ ಪರಿಸ್ಥಿತಿ ಬರಲಿದೆ ಎಂದು ಅಮ್ಮನಘಟ್ಟ ರೈತ ಸಿದ್ದಪ್ಪ ಆತಂಕ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT