ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲ ನಿರ್ವಹಣೆ: ತುರ್ತು ಕ್ರಿಯಾಯೋಜನೆಗೆ ಮಾಹಿತಿ- ಮನವಿ

Last Updated 13 ಜುಲೈ 2012, 9:20 IST
ಅಕ್ಷರ ಗಾತ್ರ

ಕೋಲಾರ: ಕಳೆದ ಹಲವು ತಿಂಗಳ ಅವಧಿಯಲ್ಲಿ ರೈತರಿಂದ ಮತ್ತು ಟ್ಯಾಂಕರ್ ಮಾಲೀಕರಿಂದ ಪಡೆದಿರುವ ನೀರಿಗೆ ಇನ್ನೂ ಹಣ ನೀಡಿಲ್ಲ. ಹೀಗಾಗಿ ರೂ. 42 ಲಕ್ಷ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಭಟ್ ತಿಳಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತುರ್ತು ಸಭೆಯಲ್ಲಿ ಮಾತನಾಡಿ, ಕಳೆದ ಅಕ್ಟೋಬರ್‌ನಿಂದ ರೈತರಿಂದ ಮತ್ತು ಟ್ಯಾಂಕರ್ ಮಾಲೀಕರಿಂದ ನೀರು ಪಡೆದಿರುವುದಕ್ಕೆ ಹಣ ಪಾವತಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.ಪ್ರಸ್ತುತ ತಹಶೀಲ್ದಾರರಿಗೆ 5 ಲಕ್ಷ ರೂಪಾಯಿ ಬಿಡುಗಡೆ ಮಾಡಿರುವುದಾಗಿ ಡಿಸಿ ತಿಳಿಸಿದ್ದಾರೆ.

ತಹಶೀಲ್ದಾರರನ್ನು ಸಂಪರ್ಕಿಸಿ ಹಣ ಮಂಜೂರು ಮಾಡುವಂತೆ ಕೋರಲಾಗುವುದು. 1.37 ಲಕ್ಷ ತಾಲ್ಲೂಕು ಪಂಚಾಯಿತಿಯಲ್ಲಿ ಇದೆ ಎಂದರು.

ಬರಗಾಲ ನಿರ್ವಹಣೆಗೆ ತಾಲ್ಲೂಕು ಪಂಚಾಯಿತಿಗೆ ಬಿಡುಗಡೆಯಾಗಿರುವ 1 ಕೋಟಿ ರೂಪಾಯಿಗೆ ತುರ್ತಾಗಿ ಕ್ರಿಯಾಯೋಜನೆಯನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಿ ಅನುಮೋದನೆ ಪಡೆಯಬೇಕಾಗಿದ್ದು, ಸದಸ್ಯರು ಒಂದು ವಾರದೊಳಗೆ ಮಾಹಿತಿ ನೀಡಬೇಕು ಎಂದರು.

ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆಯದಿದ್ದರೆ ಅನುದಾನ ಬಳಸುವುದು ಕಷ್ಟವಾಗುತ್ತದೆ. ಹೀಗಾಗಿ ಸದಸ್ಯರು ತಮ್ಮ ಕ್ಷೇತ್ರದಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಸದಸ್ಯರು, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳನ್ನು ಕೊರೆದು ತಿಂಗಳಾದರೂ ಪಂಪ್, ಮೋಟರ್ ಅಳವಡಿಸಿಲ್ಲ. ಮೊದಲು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ತಾರತಮ್ಯ: ಕ್ರಿಯಾಯೋಜನೆ ತಯಾರಿಸಲು ಅಗತ್ಯವಿರುವ ಕಾಮಗಾರಿಗಳ ಬಗ್ಗೆ ನಾವು ಮಾಹಿತಿಯನ್ನೇನೋ ಕೊಡುತ್ತೇವೆ. ಆದರೆ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಅನುಮೋದನೆ ನೀಡಬೇಕು.
 
ಆ ಕೆಲಸ ತಾರತಮ್ಯವಿಲ್ಲದೆ ಪಕ್ಷಾತೀತವಾಗಿ ಆಗುತ್ತದೆಯೇ ಎಂದು ಸದಸ್ಯ ನಂಜೇಗೌಡ ಪ್ರಶ್ನಿಸಿದರು. ಕಾರ್ಯಪಡೆ ಅಧ್ಯಕ್ಷರುಶಾಸಕರೇ ಆಗಿರುವುದರಿಂದ ನಿರ್ಧಾರಪ್ರಶ್ನಿಸಲಾಗುವುದಿಲ್ಲ ಎಂದು ಭಟ್ ತಿಳಿಸಿದರು.
ಅಣ್ಣಿಹಳ್ಳಿ ಪಂಚಾಯಿತಿಯ ನೆನಮನಹಳ್ಳಿಗೆ ಕೊಳವೆಬಾವಿ ಅಗತ್ಯವಿದೆ. ಗರುಡನಹಳ್ಳಿಯಲ್ಲಿ ಕೊರೆದಿರುವ ಬಾವಿಗೆ ಪಂಪ್-ಮೋಟರ್ ಬೇಕು ಎಂದು ಸದಸ್ಯ ಆನಂದ್ ಆಗ್ರಹಿಸಿದರು.

ಹೊನ್ನೇನಹಳ್ಳಿಯ ಅಂಗನವಾಡಿಯಲ್ಲಿ ನೀರೇ ಇಲ್ಲ ಎಂದು ಕೃಷ್ಣಮೂರ್ತಿ ದೂರಿದರು.  ಮೇಡಿಹಾಳದಲ್ಲಿ ಕೊರೆದಿರುವ 2 ಬಾವಿಗಳಿಗೆ ಪಂಪ್-ಮೋಟರ್ ಅಗತ್ಯವಿದೆ ಎಂದು ನಾಗಮಣಿ ಕೋರಿದರು. ಮಾರ್ಜೇನಹಳ್ಳಿಯ ಹೊಸ ಬಾವಿಗೆ ಪಂಪ್-ಮೋಟರ್ ಅಳವಡಿಸಿ ಎಂದು ರಾಮಕೃಷ್ಣಪ್ಪ ಆಗ್ರಹಿಸಿದರು. ಬೆಳ್ಳೂರಿನಲ್ಲಿ ಬಾವಿ ಕೊರೆಸಿ ಎಂದು ಚಂದ್ರಪ್ಪ ಹೇಳಿದರು.

ಸಕ್ಕಿಂಗ್ ಯಂತ್ರ: ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಮಲದಗುಂಡಿ ಸ್ವಚ್ಛಗೊಳಿಸುವ ಯಂತ್ರವನ್ನೇ ಬಳಸಬೇಕು ಎಂಬ ಸೂಚನೆ ಹಿನ್ನೆಲೆಯಲ್ಲಿ ಅದನ್ನು ಖರೀದಿಸಲು 1 ಕೋಟಿ ಅನುದಾನದಲ್ಲಿ ಕೊಂಚ ಬಳಸಬಹುದು ಎಂಬ ಸಲಹೆಗೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿಯಲ್ಲಿ ಅನುದಾನದ ಕೊರತೆ ಇರುವುದರಿಂದ ಗ್ರಾಮ ಪಂಚಾಯಿತಿಗಳಿಂದಲೂ ಹಣ ಪಡೆಯುವುದು ಸೂಕ್ತ ಎಂದರು. ಆ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಿಂದ ತಲಾ 1 ಲಕ್ಷ, ಹೆಚ್ಚ ಆದಾಯವಿರುವ ಬೆಳ್ಳೂರು, ನರಸಾಪುರ, ವೇಮಗಲ್, ಕೊಂಡರಾಜನಜಳ್ಳಿ ಗ್ರಾಮ ಪಂಚಾಯಿತಿಗಳಿಂದ ತಲಾ 5 ಲಕ್ಷ ಪಡೆದು ಯಂತ್ರ ಖರೀದಿಸಲು ಸಭೆ ನಿರ್ಧರಿಸಿತು.

2012-13ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಸ್ಟಾಂಪ್ ಡ್ಯೂಟಿ ಯೋಜನೆ ಅಡಿ 14 ಲಕ್ಷಕ್ಕೆ ಕ್ರಿಯಾಯೋಜನೆ ಸಲ್ಲಿಸುವ ಕುರಿತು ಸಭೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಿಲ್ಲ. ಅಧ್ಯಕ್ಷೆ ಎನ್.ರಮಾದೇವಿ ಮತ್ತು ಉಪಾಧ್ಯಕ್ಷ ಮಂಜುನಾಥ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT