ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲಕ್ಕೂ ಸವಾಲೆಸೆದ ಕೆರೆ: 122 ವರ್ಷಗಳಾದರೂ ಬತ್ತದ ಕೆರೆ

Last Updated 13 ಜುಲೈ 2012, 9:40 IST
ಅಕ್ಷರ ಗಾತ್ರ

ಜಿಲ್ಲೆಯಲ್ಲಿ ವ್ಯಾಪಿಸಿರುವ ಬರಗಾಲದಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದ್ದು, ಕೆರೆಗಳು ಬತ್ತುತ್ತಿವೆ. ಬತ್ತಿರುವ ಕೆರೆಗಳ ಪ್ರದೇಶವು ಒತ್ತುವರಿಯಾಗುತ್ತಿದ್ದು, ಅಲ್ಲಿ ಮನೆಗಳನ್ನು ಮತ್ತು ಇತರ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.
 
ಕೆರೆಗಳು ಬತ್ತುವುದು ಹಿಗೆ ಮುಂದುವರೆದರೆ, ಮುಂದಿನ ದಿನಗಳಲ್ಲಿ ನೀರಿನ ಕೊರತೆ ಯಾವ ಸ್ವರೂಪದಲ್ಲಿ ಕಾಡಬಹುದು ಎಂಬ ಆತಂಕ ಪ್ರತಿಯೊಬ್ಬರಲ್ಲೂ ಕಾಡುತ್ತಿದೆ.

ಆದರೆ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ದೇವಗಾನಹಳ್ಳಿಯ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಮಸಮುದ್ರ ಇತರ ಎಲ್ಲ ಕೆರೆಗಳಿಗಿಂತ ತುಂಬ ಭಿನ್ನ. ಅಚ್ಚರಿಯ ಸಂಗತಿಯೆಂದರೆ, ಸರಿಸುಮಾರು 122 ವರ್ಷಗಳಾದರೂ ರಾಮಸಮುದ್ರ ಕೆರೆಯು ಒಮ್ಮೆಯೂ ಬತ್ತಿಲ್ಲ!!

122 ವರ್ಷಗಳಲ್ಲಿ ಹಲವಾರು ಮಳೆಗಾಲ, ಬೇಸಿಗೆಗಾಲ ಕಂಡಿರುವ ರಾಮಸಮುದ್ರ ಕೆರೆಗೆ ಇದುವರೆಗೆ ಬರಗಾಲದ ಬಾಧೆ ತಟ್ಟಿಲ್ಲ. ಕೆರೆಯ ಸುತ್ತಮುತ್ತಲಿನ ಸಣ್ಣಪುಟ್ಟ ಕೆರೆಗಳು ಬರಿದಾಗಿದ್ದರೂ ಮತ್ತು ಬಾವಿಗಳು ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಂಡಿದ್ದರೂ ಈ ಕೆರೆ ಮಾತ್ರ ನೀರು ತುಂಬಿಕೊಂಡೇ ಇದೆ.

ಮಳೆಯಾಗದಿದ್ದಾಗ ಮತ್ತು ಬಿಸಿಲಿನ ಪ್ರಕೋಪ ತೀವ್ರವಿದ್ದಾಗ, ನೀರಿನ ಪ್ರಮಾಣ ಕಡಿಮೆಯಾಗಿದೆ ಹೊರತು ಕೆರೆ ಅಂಗಳ ಒಮ್ಮೆಯು ಬರಿದಾಗಿಲ್ಲ. ಈ ಕಾರಣದಿಂದಲೇ ಸಾದಲಿ, ಎಸ್.ದೇವಗಾನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಕೆರೆಯನ್ನು ದೇವತೆಯೆಂದೇ ಪೂಜಿಸುತ್ತಾರೆ. `ಜಲಮಾತೆ~ ಇರುವವರೆಗೆ ತಮಗೆ ಯಾವುದೇ ರೀತಿಯ ಸಮಸ್ಯೆ ಕಾಡುವುದಿಲ್ಲ ಎಂಬ ಭಾವನೆ ಅವರಲ್ಲಿದೆ.

ವಿಶಿಷ್ಟವಾದ ಇತಿಹಾಸವನ್ನು ಹೊಂದಿರುವ ರಾಮಸಮುದ್ರ ಕೆರೆಯು ಅಸ್ತಿತ್ವಕ್ಕೆ ಬಂದಿದ್ದು, 1884-1889ರ ಅವಧಿಯಲ್ಲಿ. ಕೃಷಿ ನೀರಾವರಿಗೆಂದೇ ಆಗಿನ ಮೈಸೂರು ದಿವಾನರಾಗಿದ್ದ ಶೇಷಗಿರಿ ಅಯ್ಯರ್ ಮತ್ತು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಕೆರೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.

ಸುಮಾರು ಐದು ವರ್ಷಗಳ ಕಾಲ ಕಾಮಗಾರಿ ಪೂರ್ಣಗೊಂಡ ನಂತರ ಅಸ್ತಿತ್ವಕ್ಕೆ ಬಂದ ಈ ಕೆರೆಯು ಸಾದಲಿ ಸೇರಿದಂತೆ ಶಿಡ್ಲಘಟ್ಟ ತಾಲ್ಲೂಕಿನ ಜನರಿಗೆ ತುಂಬ ಉಪಯುಕ್ತವಾಯಿತು. ಮಳೆಯಾದಾಗಲೆಲ್ಲ ತುಂಬಿ ಹರಿಯುತ್ತಿದ್ದ ನೀರನ್ನು ಕಾಲುವೆ ಮೂಲಕ ಜಮೀನುಗಳಿಗೆ ಹರಿಸಲಾಗುತಿತ್ತು. ಕಾಲುವೆ ಮೂಲಕ ಹರಿಯುವ ನೀರಿನಿಂದ ಉತ್ತಮ ಬೆಳೆ ಕಾಣುತ್ತಿದ್ದ ರೈತರು ಸಂತೋಷದಿಂದಲೇ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದರು.

ಈ ಕೆರೆಯ ಒಟ್ಟು ಜಲಾವೃತ ಪ್ರದೇಶ 188 ಹೆಕ್ಟರ್ ಆಗಿದ್ದು, ಪ್ರಸ್ತುತ ಅಚ್ಚುಕಟ್ಟು ಪ್ರದೇಶ 382 ಹೆಕ್ಟರ್‌ಗಳಷ್ಟು ಇದೆ. ಕೆರೆಯ ಪ್ರದೇಶದ ಉದ್ದ 462 ಮೀಟರ್ ಆಗಿದ್ದು, ಇದರ ಗರಿಷ್ಠ 10 ಮೀಟರ್. ಬಲದಂಡೆಯ ಕಾಲುವೆ ಸುಮಾರು 9 ಸಾವಿರ ಮೀಟರ್‌ಗಳಷ್ಟು ಉದ್ದವಿದ್ದರೆ, ಎಡದಂಡೆಯ ಕಾಲುವೆ ಸುಮಾರು 7000 ಮೀಟರ್‌ಗಳಷ್ಟು ಉದ್ದವಿದೆ.

`ವರ್ಷಗಳು ಕಳೆದಂತೆ ಕೆರೆಗಳಿಗೆ ಸಂಬಂಧಿಸಿದಂತೆ ಕೆಲವಾರು ಬದಲಾವಣೆಗಳು ನಡೆದವು. ರಾಜ್ಯ ಸರ್ಕಾರದ ಜಲಸಂವರ್ಧನೆ ಯೋಜನೆಯಡಿ ಕೆರೆಯ ಸಂರಕ್ಷಣೆಗಾಗಿ ರಾಮಸಮುದ್ರ ಕೆರೆ ಬಳಕೆದಾರರ ಸಂಘವನ್ನು ರಚಿಸಲಾಯಿತು. ಕೆರೆ ನಿರ್ವಹಣೆ ಮತ್ತು ಬಳಕೆ ಜವಾಬ್ದಾರಿಯನ್ನು ಕೆರೆ ಬಳಕೆದಾರರ ಸಂಘಕ್ಕೆ ವಹಿಸಲಾಯಿತು.

ಮೀನುಗಾರಿಕೆ ಸೇರಿದಂತೆ ವಿವಿಧ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಯಿತು. ಇದಕ್ಕೆ ಸಂಬಂಧಿಸಿದಂತೆ ಗ್ರಾಮಪಂಚಾಯಿತಿ ಸದಸ್ಯರ ಮಟ್ಟದಲ್ಲಿ ಹಲವಾರು ಬಾರಿಯು ಚರ್ಚೆ ನಡೆಸಲಾಯಿತು. ಆದರೆ ಅನುದಾನದ ಕೊರತೆ ಮತ್ತು ಇನ್ನಿತರ ಕಾರಣಗಳಿಂದಾಗಿ ಕೆರೆಯ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಆಗಲಿಲ್ಲ~ ಎಂದು    ಗ್ರಾಮಸ್ಥರು ಹೇಳುತ್ತಾರೆ.

`ಕೆರೆ ಪ್ರದೇಶವನ್ನು ಸುಂದರ ಪ್ರವಾಸಿ ತಾಣವಾಗಿಸುವ ಉದ್ದೇಶ ಗ್ರಾಮಸ್ಥರಿಗಿದೆ. ಇದಕ್ಕೆಂದೇ ಹಲವಾರು ಬಾರಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಗಿದೆ. ಸಮರ್ಪಕ ರಸ್ತೆ ಸೇರಿದಂತೆ ಇತರ ಮೂಲಸೌಕರ್ಯಗಳು ಇರದ ಕಾರಣ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿಲ್ಲ.

ಈ ಕೆರೆಯನ್ನು ಅಭಿವೃದ್ಧಿಪಡಿಸಿದ್ದಲ್ಲಿ ಸುತ್ತಮುತ್ತಲ ಭಾಗಗಳಲ್ಲಿನ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು. ಕೃಷಿ ಚಟುವಟಿಕೆಗೆ ಮಾತ್ರವಲ್ಲದೇ ಕುಡಿಯುವ ನೀರಿಗೂ ಸಹ  ಈ ಕೆರೆಯನ್ನು ಬಳಸಬಹುದು~ ಎಂದು ಗ್ರಾಮಸ್ಥ ಡಿ.ವಿ.ಪ್ರಸಾದ್ ಎನ್ನುತ್ತಾರೆ.
 -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT