ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲದಲ್ಲಿ ಕಂದಾಯದ ಬರೆ: ಜನತೆ ತತ್ತರ

Last Updated 21 ಜುಲೈ 2012, 9:20 IST
ಅಕ್ಷರ ಗಾತ್ರ

ಶಿರಾ: `ಈ ಅಕ್ಕಿ ಕಾರ್ಡ್ ಇರದಿದ್ದರೆ ಎಂದೋ ಊರು ಬಿಟ್ಟು ಹೋಗುತ್ತಿದ್ದೆ. ಇಲ್ಲಿದ್ದು ಈ ಬರದಲ್ಲಿ ತಿನ್ನೋದಾದರೂ ಏನಿದೆ? ಈ ಕಾರ್ಡ್ ಇರೋದ್ರಿಂದ ಬೇವಿನ ಬೀಜ ಆಯ್ದು ಮಾರಿ ಅಕ್ಕಿ ಕೊಂಡು ಜೀವನ ಮಾಡ್ತಿದ್ದೀವಿ. ಈಗ ಕಾರ್ಡ್‌ಗೆ ಪೊಟೋ ಹೊಡೆಸ್ರೀ ಇಲ್ಲಾಂದ್ರೆ ಅಕ್ಕಿ ಕೊಡಲ್ಲ ಅಂತಾರೆ. ಗ್ರಾಮ ಪಂಚಾಯಿತಿ ಹತ್ತಿರ ಪೊಟೋ ತೆಗೆಸಲಿಕ್ಕೆ ಹೋದ್ರೆ ನಿಮ್ಮ ಮನೆ ಕಂದಾಯ 2 ಸಾವಿರ ಇದೆ. ಕಟ್ಟು ಅಂತಾರೆ. ಎಲ್ಲಿಂದ ತಂದು ಕಟ್ಟಲಿ ಹೇಳಿ ಸ್ವಾಮಿ...~

-ಇದು ತಾಲ್ಲೂಕಿನ ಗೌಡಗೆರೆ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ರೇಷನ್ ಕಾರ್ಡ್‌ಗಾಗಿ ಫೋಟೋ ತೆಗಸಲು ಹೋಗಿದ್ದ ನಾಗರಾಜು  ಹೇಳಿಕೊಂಡ ಮಾತು.ಈ ಬರದಲ್ಲಿ ಅಕ್ಕಿ ತಗಳ್ಳಕ್ಕೆ ದುಡ್ಡಿಲ್ಲ. ಇನ್ನು ಕಂದಾಯ ಎಲ್ಲಿಂದ ಕಟ್ಟಲಿ? ಅಕ್ಕಿ ಕಾರ್ಡನ್ನೇ 2 ಸಾವಿರಕ್ಕೆ ಅಡ ಇಟ್ಟಿದ್ದೀನಿ. ಮನೆ ಅಡ ಇಟ್ಟು ಕಂದಾಯ ಕಟ್ಟಿ ಫೋಟೋ ತೆಗೆಸಿ ಊರು ಬಿಡುತ್ತೇನೆ... ಮುಂದೆ ಎಂದಾದರೂ ಬಂದು ಕಾರ್ಡ್ ಬಿಡಿಸಿಕೊಳ್ಳುತ್ತೇನೆ~ ಎಂದು ತಮ್ಮ ಜೀವನದ ದುರಂತವನ್ನು ಮಾತಿನಲ್ಲಿ ಹಿಡಿದಿಡಲು ಯತ್ನಿಸಿದರು.

ಗೌಡಗೆರೆ ಗ್ರಾಮ ಪಂಚಾಯಿತಿ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿದ್ದ `ಪ್ರಜಾವಾಣಿ~ಗೆ ಅಲ್ಲಿ ನಾಗರಾಜು ಅವರಂತೆಯೇ ಕಷ್ಟ ಅನುಭವಿಸುತ್ತಿದ್ದ ಹಲವರು ಕಂಡು ಬಂದರು.ಕಂದಾಯ ಕಟ್ಟಲಿಕ್ಕೆ ಆಗದೆ ಕಾರ್ಡ್‌ಗೆ ಫೋಟೋ ತೆಗೆಸಲಿಲ್ಲ ಎಂಬ ನೋವಿನಲ್ಲಿ ಉಗ್ರಪ್ಪ ಎಂಬುವವರು ಭಾರವಾದ ಹೆಜ್ಜೆ ಇಡುತ್ತಾ ಊರಿಗೆ ಹಿಂದಿರುಗುತ್ತಿದ್ದರು. ಜುಂಜಣ್ಣ ಎಂಬುವವರು ಕಂದಾಯ ಕಟ್ಟಲಿಕ್ಕಾಗಿ ಮನೆಯಲ್ಲಿದ್ದ ಚೂರುಪಾರು ಚಿನ್ನ ಅಡವಿಡುವ ಬಗ್ಗೆ ಆಲೋಚಿಸುತ್ತಿದ್ದರು.

ಪಂಚಾಯಿತಿ ಕಚೇರಿಯಲ್ಲಿದ್ದ ಕಾರ್ಯದರ್ಶಿ ಹಾಗೂ ಬಿಲ್‌ಕಲೆಕ್ಟರ್, `ಬರಗಾಲದಲ್ಲಿ ಕಂದಾಯ ವಸೂಲಿ ಮಾಡುವಂತೆ ಸರ್ಕಾರ ಸೂಚಿಸಿದೆಯೇ?~ ಎಂದು ಪ್ರಶ್ನಿಸಿದ್ದಕ್ಕೆ, `ಸರ್ಕಾರದ ಕತೆ ನಮಗೆ ಗೊತ್ತಿಲ್ಲ. ಪಿಡಿಓ ಹಾಗೂ ಅಧ್ಯಕ್ಷರು ಕಂದಾಯ ವಸೂಲು ಮಾಡುವಂತೆ ಹೇಳಿದ್ದಾರೆ~ ಎಂಬ ಪ್ರತಿಕ್ರಿಯೆ ಸಿಕ್ಕಿತು.

`ಆಹಾರ ಮತ್ತು ನಾಗರಿಕ ಇಲಾಖೆಯ ತಾಲ್ಲೂಕು ಆಧಿಕಾರಿ ರಂಗನಾಥಪ್ಪ ಅವರನ್ನು ಸಂಪರ್ಕಿಸಿದಾಗ, ಕಂದಾಯ ವಸೂಲಿಗೂ ಪಡಿತರ ಕಾರ್ಡ್ ಫೋಟೋಗೂ ಯಾವುದೇ ಸಂಬಂಧ ಇಲ್ಲ. ಆದರೂ ಗ್ರಾಮ ಪಂಚಾಯಿತಿಗಳಿಂದ ಕಂದಾಯ ವಸೂಲಿಗೆ ಕಾರ್ಡ್‌ಗಳನ್ನು ಬಳಸಿಕೊಳ್ಳುತ್ತಿರುವುದು ನಿಜ~ ಎಂದು ಸ್ಪಷ್ಟಪಡಿಸಿದರು. `ಸರ್ಕಾರ ಈಚೆಗೆ ಒಂದಿಲ್ಲೊಂದು ಕಾರ್ಡ್ ನೀಡುವ ಕಾರಣಕ್ಕೆ ಜನರಿಗೆ ಫೋಟೋ ತೆಗೆಸಲು ಸೂಚಿಸುತ್ತದೆ.

ಇಂಥ ಸಂದರ್ಭಗಳನ್ನೇ ಎದುರು ನೋಡುವ ಗ್ರಾಮ ಪಂಚಾಯಿತಿ ಸಿಬ್ಬಂದಿ ಫೋಟೋ ತೆಗಸಲು ಬಂದವರಿಂದ ಮನೆ ಕಂದಾಯದ ಹೆಸರಿನಲ್ಲಿ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಸನ್ನಿವೇಶದ ದುರ್ಲಾಭ ಪಡೆದು ಕಂದಾಯದ ಹೆಸರಿನಲ್ಲಿ ಹಣ ವಸೂಲಿಗೆ ಮುಂದಾಗುವ ಗ್ರಾಮ ಪಂಚಾಯಿತಿಗಳ ಕ್ರಮಕ್ಕೆ ಬರಗಾಲದಲ್ಲಾದರೂ ತಾಲ್ಲೂಕು ಆಡಳಿತ ಕಡಿವಾಣ ಹಾಕಬೇಕು~ ಎಂದು ಗ್ರಾಮಸ್ಥ ರಮೇಶ್‌ಗೌಡ ಆಗ್ರಹಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT