ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲದಲ್ಲಿ ಜಿ.ಪಂ. ಸದಸ್ಯರ ಪ್ರವಾಸ!

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಏಳು ತಾಲ್ಲೂಕುಗಳು ಬರ ಪೀಡಿತವಾಗಿವೆ. ಜನರು ಕುಡಿವ ನೀರಿಗಾಗಿ ಹಾಗೂ ಜಾನುವಾರುಗಳಿಗೆ ಮೇವು ಒದಗಿಸಲು ಪರದಾಡುತ್ತಿದ್ದಾರೆ. ಆದರೆ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ಅರ್ಧದಷ್ಟು ಸದಸ್ಯರು ಅಧ್ಯಯನದ ಹೆಸರಿನಲ್ಲಿ ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದಾರೆ !

ಜಿಲ್ಲಾ ಪಂಚಾಯಿತಿಯ 85 ಸದಸ್ಯರ ಪೈಕಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ 43 ಸದಸ್ಯರು ಪ್ರವಾಸಕ್ಕೆ ಹೋಗಿದ್ದಾರೆ. ಗೋವಾದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವ ಸದಸ್ಯರು ಮಂಗಳವಾರದಂದೇ ಹೋಗಿದ್ದಾರೆ. ಉಳಿದವರು ಬುಧವಾರ ಪ್ರವಾಸ ಆರಂಭಿಸಿದ್ದಾರೆ.

ಶೈಕ್ಷಣಿಕ ಅಧ್ಯಯನ ಹಾಗೂ ಗ್ರಾಮೀಣ ಅಭಿವೃದ್ಧಿಯಲ್ಲಿ ಆಗಿರುವ ಬದಲಾವಣೆ ಕುರಿತು ಅಭ್ಯಸಿಸಲು 10 ದಿನಗಳ ಪ್ರವಾಸವನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದೆ. 43 ಸದಸ್ಯರ ಜೊತೆಗೆ 31 ಮಂದಿ ಕುಟುಂಬದ ಸದಸ್ಯರೂ ತೆರಳಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ, ಮಾಹಿತಿ ನೀಡಲು ನಾಲ್ವರು ಅಧಿಕಾರಿಗಳೂ ಪ್ರವಾಸದಲ್ಲಿದ್ದಾರೆ.

ಆಡಳಿತಾರೂಢ ಬಿಜೆಪಿಯೊಂದಿಗೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರೂ ಈ ತಂಡದಲ್ಲಿದ್ದಾರೆ.

`ಎಲ್ಲ ಸದಸ್ಯರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಅರ್ಧದಷ್ಟು ಸದಸ್ಯರು ಬಂದಿಲ್ಲ. ಈಗ ಬಂದಿರುವ ಬಹುತೇಕ ಸದಸ್ಯರು ಅವರ ಕುಟುಂಬ ಸದಸ್ಯರನ್ನೂ ಕರೆತಂದಿದ್ದಾರೆ.

ಕುಟುಂಬದ ಸದಸ್ಯರ ವೆಚ್ಚವನ್ನು ತಾವೇ  ಭರಿಸುವುದಾಗಿ ಸದಸ್ಯರು ತಿಳಿಸಿದ್ದಾರೆ~ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು.

ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ, ನವದೆಹಲಿ, ರಾಜಸ್ತಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಇಲ್ಲಿಂದ ಬಸ್‌ನಲ್ಲಿ ಹೊರಟಿರುವ ಸದಸ್ಯರು, ಗೋವಾದಿಂದ ರೈಲು ಮೂಲಕ ಪ್ರಯಾಣ ಮುಂದುವರಿಸಲಿದ್ದಾರೆ.

`ಅಧ್ಯಯನ ದೃಷ್ಟಿಯಿಂದ ಪ್ರವಾಸ ಹಮ್ಮಿಕೊಂಡಿದ್ದೇವೆ. ಜೊತೆಗೆ ಕೆಲಸದ ಒತ್ತಡದಿಂದ ಒಂದಷ್ಟು ಬದಲಾವಣೆಯೂ ಇರಲಿ ಎಂಬ ಕಾರಣದಿಂದ ಹೋಗಲಾಗುತ್ತಿದೆ~ ಎಂದು ಜಿ.ಪಂ. ಉಪಾಧ್ಯಕ್ಷೆ ಸುನೀತಾ ಶಿರಗಾವಿ ಹೇಳಿದರು.

ಬೇಸಿಗೆ ಸಮಯವಾದ್ದರಿಂದ ರಸ್ತೆ ಕಾಮಗಾರಿಗಳನ್ನು ಮಾಡಲು ಸೂಕ್ತ ಕಾಲ. ಕ್ಷೇತ್ರದ ಕೆಲಸ ಮಾಡಿಸುತ್ತಿದ್ದೇನೆ. ಹೊಸದಾಗಿ ಆರಿಸಿ ಬಂದಿದ್ದೇವೆ. ಕ್ಷೇತ್ರದ ಜನರ ನಿರೀಕ್ಷೆಗಳು ಬಹಳಷ್ಟಿರುತ್ತವೆ. ಆದ್ದರಿಂದ ಪ್ರವಾಸಕ್ಕೆ ಹೋಗಿಲ್ಲ ಎನ್ನುತ್ತಾರೆ ಕೌಜಲಗಿ ಜಿ.ಪಂ. ಸದಸ್ಯ ಪರಮೇಶ್ವರ ಹೊಸಮನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT